...

6 views

ತಂದೆಯನ್ನು ನೆನೆದು - ಕವನ
ತಂದೆಯನ್ನು ನೆನೆದು - ಕವನ

ತಂದೆಯನ್ನು ನೆನೆದು ಕಣ್ಣಹನಿಯು ಜಾರಿಹೋಗಿದೆ
ಸಂಜೆ ಸೂರ್ಯ ಏಕೆ ಎಂದು ಕೇಳುವಂತಾಗಿದೆ??
ಹೆತ್ತ ತಾಯಿ ಹೊತ್ತ ತಂದೆಯ ಹೇಗೆ ತಾನೆ‌ ಮರೆವಿರಿ
ಹೆಣ್ಣು ಮಗಳಿಗಂತು ತಂದೆ ನಾಯಕನಂತೆ ಅಲ್ಲವೇ..

ಕಷ್ಟಪಟ್ಟು ಛಲವ ತೊಟ್ಟು ಬೆವರು ಸುರಿಸಿ ದುಡಿದರು
ಹೆಸರು ಕೀರ್ತಿ ಗಳಿಸುತ ಧನಿಕರಾಗಿ ನಿಂತರು..
ಮೂರು ಮುತ್ತಿನ ಮಣಿಗಳು‌, ಪ್ರಾಣಸಖಿಯ ಒಲುಮೆಯು
ತುಂಬಿತು ಇನ್ನಷ್ಟು ಶಕ್ತಿಯು ಸಾಧಿಸುವ ಯುಕ್ತಿಯು

ಕಷ್ಟ ಎಂದು ಮುಂದೆ ನಿಂತ ಜನರ ಬಳಿಗೆ‌ ಕರೆಯುತ
ಕೇಳಿದಷ್ಟು ಹಣವ ನೀಡಿ ಮನಸು ತುಂಬಿ ‌ಹರಸುತ
ಹಗಲು ರಾತ್ರಿ ಒಂದು ಮಾಡಿ ಊಟ ನಿದಿರೆ‌ ಮರೆತರು
ಇಳಿಯ ಸಂಜೆಗೆ ಹೆದರುತ ತಾರುಣ್ಯವ ಸವೆಸಿದರು

ಮುದ್ದಿನ ಮೊಮ್ಮಕ್ಕಳ ಆಟಪಾಠ ಕಂಡರು
ಆಸೆಯಿಂದ ಬರಸೆಳೆದು ಅಪ್ಪಿ ಮುದ್ದಾಡಿದರು
ವರುಷಕ್ಕೊಮ್ಮೆ ಬರುವ ಮಕ್ಕಳು ಜೊತೆಗೆ ಅಳಿಯನು
ಜೀವನವ ಕಟ್ಟಿಕೊಳ್ಳುವ ಭರದಲ್ಲಿ ತಲ್ಲಿನರು

***
ಇಳಿಸಂಜೆ ಬಂದೇ ಬಿಟ್ಟಿತು ನಿದಿರೆ ಬಾರದು ಏತಕೊ
ಕಾಡುವ ಆರೋಗ್ಯ ಸಮಸ್ಯೆ ಕೋಣೆ ತುಂಬಾ ಮಾತ್ರೆಯು
ನೋವಿ‌ನೆಣ್ಣೆ , ಪಥ್ಯಗಳು ಇನ್ಸುಲಿನ್ ಇಂಜೆಕ್ಷನು
ಹೃದಯ ಕಿಡ್ನಿ, ಶ್ವಾಸಕೋಶ ಒಂದು ಬಿಡದ ಕಾಯಿಲೆಯು

ಕೂಡಿಟ್ಟ ಹಣವೆಲ್ಲಿ ಖಾಲಿಯಾಗುವ ಭಯವು
ಮಕ್ಕಳ ಕೈಯನು ಹೇಗೆ ನೋಡುವುದೆಂಬ ಆತ್ಮಾಭಿಮಾನವು
ಸಮಯವೇ ‌ಕಳೆಯುತಿಲ್ಲ ಮಾತನಾಡಲು ಗೆಳೆಯರಿಲ್ಲ
ಟಿವಿ ಮೊಬೈಲ್ ಎಷ್ಟೆಂದು ನೋಡಿದರೂ ರುಚಿಸುವುದಿಲ್ಲ

ಇಳಿಸಂಜೆ ಎಂಬುದು‌ ಒಳಿತೋ‌ ಕೆಡುಕೋ
ನಿವೃತ್ತಿ ಜೀವನವು ಸಾಗಿಸುವುದೇ ಕಠಿಣವು
ಹೊತ್ತು ಹೊತ್ತಿಗೆ ಅನ್ನ ಮಾತ್ರೆಯ ನೀಡುವ ಮಡದಿಯು
ಅವಳೇನು ತರುಣಿಯೇ, ಬಂಧಿಸಿದ ಆರೋಗ್ಯ ಸಮಸ್ಯೆಯು

ನನಗೆ ನೀನು ನಿನಗೆ ನಾನು ಇದುವೆ ಬಾಳ ಬೆಸುಗೆಯು
ಮದುವೆಯೆಂಬ ಸಂಬಂಧಕೆ ಮಕ್ಕಳು ಮೊಮ್ಮಕ್ಕಳೇ ಉಡುಗೊರೆಯು
ಇನ್ನಷ್ಟು ಆಯುರ್ ಆರೋಗ್ಯ ಹೆಚ್ಚಲಿ
ತಮ್ಮ ಇಳಿವಯಸ್ಸಿನಲ್ಲಿ ‌ನೆಮ್ಮದಿಯ ಕಾಣಲಿ..
..

ಸಿಂಧು ಭಾರ್ಗವ ಬೆಂಗಳೂರು

© Writer Sindhu Bhargava
#unconditionallove #dadslove #dadanddaughter #kannada