ಗಜಲ್
ಸಲ್ಲದ ಕಾಡು ಹರಟೆಗಿಂತ ಸಿಹಿಯಾಗಿದೆ ಮೌನ
ನೋವು ಕೊಟ್ಟ ಮಾತಿಗಿಂತ ಹಿತವಾಗಿದೆ ಮೌನ
ಒಬ್ಬರ ಕಂಡು ಒಬ್ಬರು ಕರಬುವುದೆ ನಿತ್ಯವಾಗಿದೆ
ತನ್ನತನ ಅರಿತು ನಡೆಯಲು ಬೆಳಕಾಗಿದೆ ಮೌನ
ಒಲವ ಭಾವನೆ ತೋರಿದರೆ ಬಳಸಿ ಎಸೆಯುವರು
ಏಕಾಂತದ ಹೊಸ ಹಾದಿಯಲ್ಲಿ ಬೆರೆತಾಗಿದೆ ಮೌನ
ಭಾವನಾತ್ಮಕ ಬಂಧಗಳು ಬಿಡಿಸಲಾಗದ ಕಗ್ಗಂಟು
ನೆನಪು ಮರೆತು ಜೀವಿಸಲು ಉಸಿರಾಗಿದೆ ಮೌನ
ಇಚ್ಛಾ ಮರಣ ದೇವತೆಗಳ ಪಾಲಿಗಷ್ಟೆ ಮೀಸಲು
ಮುಂದೆ ಸುಮ ವಿಕಸಿಸಲು ಹುರುಪಾಗಿದೆ ಮೌನ