...

4 views

ಬಾಳನೌಕೆ
ಉಕ್ಕಿ ಬರುವ ಭಾವದಲೆಗೆ,
ನಲುಗಿದೆ ಮನದ ತೀರ...!
ಗಾಳಿಗೆ ಆರಿದಾ ದೀಪವೇ ಹೇಳಿದೆ,
ಪೂರ್ತಿ ಬದುಕ ಸಾರ...!

ಬರುವ ನಾಳೆಗಳೆಂಬ ಪುಟ,
ಹೇಗಿದೆಯೆಂದೂ ನನಗೆ ಗೊತ್ತಿಲ್ಲ...
ಕಳೆದ ನಿನ್ನೆಗಳೆಂಬ ಅಧ್ಯಾಯ,
ನನಗಿನ್ನೂ ಮರೆತಿಲ್ಲ...
ವರ್ತಮಾನವೆಂಬ ಹಾಳೆ ಇನ್ನೂ ಖಾಲಿ ಇದೆ,
ಏನು ಗೀಚಬೇಕೋ ತೋಚದಾಗಿದೆ...

ಪ್ರಶ್ನೆಗಳ ಮೂಟೆ ಹೊತ್ತು
ಭವಿಷ್ಯದಾ ಮಾರ್ಗ ಹಿಡಿದು ಹೊರಟಿರುವೆ,
ಮನ ಹೇಳಿದಂತೆ...
ಭರವಸೆಯೆಂಬ ಚಿಮಣಿ ದೀಪ,
ಯಾವ ಬಿರುಗಾಳಿಗಾರುವುದೋ...?
ಗುರಿಯಿನ್ನೂ ಓಡುತಿದೆ ಮರೀಚಿಕೆಯಂತೆ..!!!

ಹಾದಿಯ ತಿರುವಲ್ಲಿ,
ಕಳೆದುಹೋದ ನೆನಪುಗಳೆಷ್ಟೋ..!!?
ಬದುಕ ಇಳಿಜಾರಲ್ಲಿ,
ಉರುಳಿಹೋದ ಹಸಿ ಕನಸುಗಳೆಷ್ಟೋ...!!?
ಲೆಕ್ಕವೇ ತಪ್ಪಿಹೋಗಿದೆ,
ಸರಣಿ ಸೋಲುಗಳ ಗಣಿತದಲ್ಲಿ...!!!

ಬದುಕ ಬಂಡಿಯ ಪಯಣ
ಯಾವ ನಿಲ್ದಾಣದವರೆಗೋ,
ತಿಳಿಯದು ನನಗೇನೇ...
ಬೇಸರದ ಬಿಸಿಲಲ್ಲೂ,
ನಿರಾಸೆಯ ಕರಾಳ ಛಾಯೆಯಲೂ,
ಬರಬಹುದೇ ಸಾಂತ್ವನದ ಸೋನೆ...!?

ಬಾಳೇ ಮುಗಿಯಿತೆನ್ನುವಾಗ,
ಮೊಂಬತ್ತಿಯ ಬೆಳಕೂ ನೀಡಬಲ್ಲದು ಸ್ಫೂರ್ತಿ...
ಆದರೆ ಗುರಿಯ ಹುಡುಕಾಟದಲ್ಲಿ,
ಮುಳುಗಡೆಯಾಗಿದೆ ಬದುಕು ಪೂರ್ತಿ...!
ನನ್ನದು ನಿಲುಗಡೆಯೇ ಸಿಗದಂಥ ಯಾನ...!
ಸ್ವರಕ್ಕೂ ನಿಲುಕದ ಮೌನಗಾನ...!!!

ಕೈಯ ತುಂಬೆಲ್ಲ,
ಸೋಲುಗಳ ರಸೀತಿಯೇ ಜಾಸ್ತಿ ಇದೆ...!
ಗೆಲುವಿನಾ ಪ್ರಮಾಣಪತ್ರದ ನಿರೀಕ್ಷೆ,
ಮನಸಲ್ಲಿ ಹಾಗೇ ಇದೆ...
ಸಿಗಬಹುದೇ ಗೆಲುವಿನಾ ನಗೆ,
ಜೀವನದಲ್ಲಿ ಒಮ್ಮೆಯಾದರೂ ನನಗೆ...!!?

ಸಾಗರದ ನಡುವಿನಾ
ತೆಪ್ಪದಂತಾಗಿದೆ, ನನ್ನೀ ಜೀವನ...
ತೆಪ್ಪಗಿದ್ದರೂ, ಕೂಗಿಕೊಂಡರೂ,
ಕೈಜಾರಿ ಹೋಗಿದೆ ವರ್ತಮಾನ...!

ಪ್ರತಿ ಅಲೆ ಬಂದಾಗಲೂ ಅನಿಸುವುದು,
ಬದುಕಾಯಿತು ಮುಳುಗಡೆ...!
ಎಲ್ಲೋ ದೂರದ ತೀರ ಕಂಡಾಗ,
ಸಿಕ್ಕಂತಾಗುವುದು ಮನಸ್ಸಿಗೆ ಬಿಡುಗಡೆ..!!
ಬಹುಶಃ ಆ ತೀರವೇ ನನ್ನ,
ಬಾಳ ಗಮ್ಯದ ನಿಲುಗಡೆ...!!!

© Anand Hegde

#Kannada #lifelesson #lifestyle #poem #poetrycommunity