...

7 views

ಕತೆ : ಅರ್ಧ ಬಿಡಿಸಿದ ರಂಗೋಲಿ
"ಸುಮಾ ಸುಮಾ..." ಎಂದು ಅತ್ತೆ ಕರೆಯುತ್ತಿದ್ದರು. ಸುಮ ಮನೆಯ ಹೊಸಿಲಿನ ಹೊರಗೆ ಒದ್ದೆ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿ ರಂಗೋಲಿ ‌ಬಿಡಿಸಲು ಚುಕ್ಕಿಗಳ ಇರಿಸಿದ್ದಳಷ್ಟೇ.. ಅದಕ್ಕೆ ಬೇಕಾದ ಬಣ್ಣಗಳು, ಅರಸಿನ ಕುಂಕುಮ, ಹೂವುಗಳು ಪಕ್ಕದ ತಟ್ಟೆಯಲ್ಲಿತ್ತು.

ಅತ್ತೆಯ ಸ್ವರ ಕೇಳಿ ಓಡೋಡಿ ಹೋದ ಸುಮ, ಏನತ್ತೆ.? ಏನು ಬೇಕು ಕೇಳಿದರು. ಬಿಸಿಬಿಸಿ ಕಾಫಿ ತರಲು ಹೇಳಿದ ಅತ್ತೆ ಮೆಂತೆಹುಡಿಯನ್ನು ತಿಂದರು. ನೀರು ಕುಡಿದರು. ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುತ್ತಿದ್ದರು. ಸ್ನಾನಕ್ಕೆ ನೀರು ರೇಡಿಮಾಡು ಎಂದು ಹೇಳಿದರು. ಬಿಸಿಬಿಸಿ ಕಾಫಿ ಮಾಡಿ ಕೊಟ್ಟ ಸುಮಾ.. ಆಯ್ತು... ಎಂದು ಮತ್ತೆ ರಂಗೋಲಿ ಬಿಡಿಸಲು ಹೊರಟಳು.

ಅಂದು ಶುಕ್ರವಾರ. ಸುಮ ಬೆಳ್ಳಿಗ್ಗೆ ಬೇಗನೆ ಮಿಂದು ಮಡಿಯುಟ್ಟು ಲಕ್ಷ್ಮಿ ಪೂಜೆ ಮಾಡಲು ಅಣಿಯಾಗುತ್ತಿದ್ದಳು. ಅತ್ತೆ ಕಾಫಿ ಹೀರಿ ಸ್ನಾನ ಮಾಡಲು ಹೊರಡುವಾಗಲೇ ಬಾತ್ ರೂಮಿನ ಬಾಗಿಲು ಮುಚ್ಚಿತ್ತು . ಅತ್ತೆ ಮತ್ತೊಮ್ಮೆ ಸುಮಾಳನ್ನು ಕರೆದರು.

"ಸುಮಾ... ಮಾವ ಎಲ್ಲಿ? ಸ್ನಾನಕ್ಕೆ ಹೋಗಿದ್ದಾರಾ?? ಇನ್ನೂ ಹೊರಗೆ ಬರಲಿಲ್ಲ. ಇಲ್ಲಿ ಬಾರಮ್ಮಾ.. ನೋಡು ಸ್ವಲ್ಪ." ಸುಮ ಮತ್ತೆ ಅರ್ಧಕ್ಕೆ ನಿಲ್ಲಿಸಿ ಎದ್ದು ಹೊರಟಳು.
ರಂಗೋಲಿ ಅರ್ಧವೇ ಉಳಿಯಿತು. ನಂತರ ಬಾಗಿಲು ಬಡಿದರೆ ಮಾವ ತೆಗೆಯಲೇ ಇಲ್ಲ.
ಸುಮ ಜೋರಾಗಿ ಬಾಗಿಲು ಬಡಿದು ನಂತರ ಒಡೆದು ನೋಡಿದರೆ ಬಿಸಿ ನೀರಿನ ಹೊಗೆ ಮೈಮೇಲೆ ಆವರಿಸಿತ್ತು.
ಮಾವ ಉಸಿರುಗಟ್ಟಿ ಮೂರ್ಛೆ ಹೋಗಿ ಬಿದ್ದಿದ್ದರು. ನಳದಲ್ಲಿ ನೀರು ಸುರಿಯುತ್ತಲೇ ಇತ್ತು.

ಅತ್ತೆಯ ಮುಖ ನೋಡಲಾಗಲಿಲ್ಲ. ಸುಮ ಮಾವನ ಎಬ್ಬಿಸಿದಳು. ಕೆನ್ನೆಗೆ ತಟ್ಟಿ ಮಾವ ಮಾವ... ಎಂದು ಕರೆದರೂ ಏಳಲೇ ಇಲ್ಲ. ಆಗಲೆ ಪ್ರಾಣಪಕ್ಷಿ ಹಾರಿ ಹೋಗಿದೆ.. ಎಂದು ಮನೆಗೆ ಕರೆಸಿದ ವೈದ್ಯರು ಪರೀಕ್ಷಿಸಿ ನುಡಿದರು.

ಮನೆಯೊಳಗೆ‌ ನೀರವ ಮೌನ.

ಸಿಂಧು ಭಾರ್ಗವ ಬೆಂಗಳೂರು

© Sindhu_Bhargava