...

6 views

ಗೃಹಿಣಿಯರ ದಿನಾಚರಣೆ
ಇದೊಂದು ಹೊಸ ಆಚರಣೆ.‌ ಯಾಕೆ ಬೇಕು? ಗೃಹಿಣಿಯರಿಗೂ ಒಂದು ದಿನ ಅಂತ ಇದೆಯಾ? ಎಂದು ಕೇಳುವವರೇ ಜಾಸ್ತಿ. ಗೃಹಿಣಿ ಮನೆಯನ್ನು ಮನೆಯವರನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುವವಳು. ಅವರ ಬೇಕು ಬೇಡಗಳ‌ ಕೇಳಿ ಪೂರೈಸುವವಳು. ಅವಳಿಗೆ ತಾಳ್ಮೆ ಜಾಸ್ತಿ ಇರಬೇಕು. ಅವಳಲ್ಲಿ ತ್ಯಾಗ ಮನೋಭಾವ ತುಂಬಿರಬೇಕು. ಸಿಡಿಮಿಡಿಗೊಳ್ಳದೇ ಮುಖವನ್ನು ಸಿಂಡರಿಸಿಕೊಳ್ಳದೇ ನಗುನಗುತ್ತಿರಬೇಕು.

ಮನೆಗೆ ಬಂದವರ ಬರಿಗೈಲಿ ವಾಪಾಸು ಕಳುಹಿಸಿದೇ ಉಪಚಾರ ಮಾಡುವ ಗುಣವಿರಬೇಕು. ತಮ್ಮ ಮನೆಯ ಸೊಸೆಯಾಗಿ ಬರುವವಳಿಗೆ ಹಾಗಿರಬೇಕು ಹೀಗಿರಬೇಕು ಎಂದು ಪಟ್ಟಿ ಮಾಡಿಕೊಂಡೇ ಮಗನಿಗೆ ಮದುವೆ ಮಾಡಿಸಿ ಪಟ್ಟು ಹಿಡಿದಾದರೂ ಅವಳನ್ನು ಬಗ್ಗಿಸಿ ತಮ್ಮ ಮನೆಗೆ ಹೊಂದಿಕೊಳ್ಳುವಂತೆ ಮಾಡುವವರೇ ಜಾಸ್ತಿ.

ನಿಜವಾದ ಗೃಹಿಣಿ ಕೂಡ ಹೀಗೆಯೇ ಇರಬೇಕು ಎಂಬುದು ಎಲ್ಲರ ಆಶಯ. ಹಾಗಿದ್ದರೇನೆ ಮನೆ ನಂದನವನವಾಗಲು ಸಾಧ್ಯ. ನಗುಮುಖ, ಎಲ್ಲರನ್ನೂ ಪ್ರೀತಿಸುವ ಗುಣ, ಕಾಳಜಿ‌ ಮಮತೆ ತೋರುವವರು ಯಾರಿಗೆ ಬೇಡ ಹೇಳಿ? ಹೊತ್ತೊತ್ತಿಗೆ ಊಟೋಪಷಾರ ಮಾಡುವವಳು, ಆರೋಗ್ಯ ಹದಗೆಟ್ಟಿತೆಂದರೆ ಆರೈಕೆ ಮಾಡುವವರು, ಎಲ್ಲದಕ್ಕಿಂತ ಮನಸ್ಸನ್ನು ಅರ್ಥಮಾಡಿಕೊಂಡು ಗಂಡನ ಕಷ್ಟನಷ್ಟಗಳಲ್ಲಿ ಸಹಭಾಗಿಯಾಗಿ ಹೊಂದಿಕೊಂಡು ಹೋಗುವವಳು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ..?!

ಹ್ಮ. ಅವಳನ್ನು ನಿಮಗೆ ಬೇಕಾದ ಹಾಗೆ ಬದಲಾಯಿಸುವ ಕಲೆ ನಿಮ್ಮಲ್ಲಿದೆ. ಮೆಚ್ಚುವಂತದ್ದೆ. ಆದರೆ ಅವಳ ಆಸೆ ಕ‌ಸುಗಳು ಅವಳ ಬೇಕು ಬೇಡಗಳನ್ನು ಕೇಳಬೇಕಲ್ಲವೇ?

ಕೊರತೆಗಳನ್ನು ಹಂಗಿಸಿ ಚುಚ್ಚುಮಾತನಾಡದೇ ತಿಳಿಹೇಳಿ ಸಕಾರಾತ್ಮಕವಾಗಿ ಸ್ಪಂದಿಸಬಹುದಲ್ಲವೇ?!
ಗೃಹಿಣಿ ಎಂದರೆ ಈಗ ಮನೆಯಲ್ಲೇ ಇರುವವಳು ಎಂದರೂ ತಪ್ಪಾಗುವುದು. ಹಣದುಬ್ಬರದ ಪರಿಣಾಮದಿಂದ ಶೈಕ್ಷಣಿಕವಾಗಿ ಎಲ್ಲರೂ ಮುಂದಿರುವ ಕಾರಣ ಹೆಣ್ಮಕ್ಕಳು ಉದ್ಯೋಗಕ್ಕೆ ಹೋಗಿ ಸ್ವಾವಲಂಬಿಯಾಗಿ ಬದುಕುವುದನ್ನು ನಾವು ನೋಡಬಹುದು. ಮನೆಯ ಆರ್ಥಿಕ ಪರಿಸ್ಥಿತಿ ಹೆಚ್ಚಿದಂತೆ ಅದು ನೇರವಾಗಿ ಸಾಮಾಜಿಕವಾಗಿ ಪರಿಣಾಮ ಬೀರುವುದು ಸುಳ್ಳಲ್ಲ.

ಹಾಗಾಗಿ ಮನೆ ಮತ್ತು ಉದ್ಯೋಗ ಎರಡೂ ಕಡೆ ನಿಭಾಯಿಸಿಕೊಂಡು ಹೋಗಲು ಅವಳಿಗೆ ಕಷ್ಟವೇ ಸರಿ. ಮನೆಯವರ ಸಹಕಾರ ಅಗತ್ಯವಾಗಿದೆ. ಎಲ್ಲರೂ ಸಹಕರಿಸಿ ಅವಳಿಗೂ ಈ ಸಮಾಜದಲ್ಲಿ ಸ್ಥಾನಮಾನವನ್ನು ದೊರಕುವಂತೆ ಮಾಡಿರಿ.

ಗೃಹಿಣಿಯರ ದಿನಾಚರಣೆ ಎಂದಾಗ ಮನೆಯಲ್ಲೇ ಇರುವ ಉದ್ಯೋಗಕ್ಕೆ ಹೋಗದೇ ಇರುವ ಮಹಿಳೆಯರಿಗೆ ಯಾವಾಗಲೂ ಅಭದ್ರತೆ ಕಾಡುವುದು, ಮಾನಸಿಕವಾಗಿ ಕೊರಗುವುದು, ಕುಗ್ಗಿ ಹೋಗುವುದು, ಹಣದ ಸಮಸ್ಯೆ ಬಂದಾಗ ಚಿಂತೆಗೊಳಗಾಗುವುದನ್ನು ನಾವು ನೋಡಬಹುದು. ಆಗ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು. ಅಗತ್ಯಬಿದ್ದರೆ ಕೆಲಸಕ್ಕೆ ಹೋಉ ತಯಾರಿರಬೇಕು.

ಹೆದರಬಾರದು. ನಿಮ್ಮದೇ ಎಂದು ಒಂದಷ್ಟು ಗಳಿಕೆ, ಉಳಿತಾಯ ಎಂದಿರಲಿ. ಬ್ಯಾಂಕು, ಪೋಸ್ಟ್ ಆಫೀಸಯ, ಎ.ಟಿ.ಎಮ್ ಗೆ ಹೋಗಿ ಹಣ ತೆಗೆಯುವುದು ಸಣ್ಣ ಪುಟ್ಟ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಿರಿ. ಯಾವಾಗಲೂ ಇನ್ನಿಬ್ಬರಿಗೆ ಅವಲಂಬಿತವಾಗಿರದೆ ಬದುಕುವುದನ್ನು ಕಲಿಯಬೇಕು.

ನಿಮ್ಮ ಆಸಕ್ತಿ ಅಭಿರುಚಿ ಗಳಿಗೆ ಕಲೆ ಕರಕುಶಲ ವಸ್ತುಗಳ ಉತ್ಪಾದನೆ, ಅಡುಗೆ ಮನೆಗೆ ಬೇಕಾಗುವ ಉತ್ಪನ್ನಗಳು ಉಪ್ಪಿನಲಾಯಿ, ಚಟ್ನಿಪುಡಿ, ಸಾಂಬಾರುಪುಡಿ ಹೀಗೆ ಸಣ್ಣ ಪ್ರಮಾಣದ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಹಣ ಸಂಪಾದನೆ ಮಾಡಬಹುದು.

ಸಿಂಧು ಭಾರ್ಗವ ಬೆಂಗಳೂರು

© Writer Sindhu Bhargava