...

7 views

ಮಾತೆಂದರೆ...‌‌
"#ಮಾತು," ಮುತ್ತಾಗಿ ಇರಬೇಕಂತೆ..ಹೃದಯದಾಳದಿಂದ ಹೊರ ಹೊಮ್ಮಿ ಬರಬೇಕಂತೆ...ತೋರಿಕೆಗೋ,ಕಾಟಾಚಾರಕ್ಕೋ ಮಾತಾಡಿದರೆ,ಅದು ಅಷ್ಟು ಇಂಪಾಗಿ, ಹಿತವಾಗಿರದು..ಹೌದು ಇವತ್ತಿನ ಕಾಲಘಟ್ಟದಲ್ಲಿ ಈ "ಮಾತು "ತುಂಬಾ ತುಟ್ಟಿ ಆಗ್ತಿದೆ...ಮಾತಾಡಲೂ ಒಂದು ಲೇವಲ್ ನೋಡೋ ಪರಿಸ್ಥಿತಿ ಬಂದೆರಗಿರೋದು ದುಃಖದ ಸಂಗತಿ..‌ಪರಿಚಯ, ಬಂಧು,ಬಳಗ ,ರಕ್ತ ಸಂಬಂಧ ಎಲ್ಲದರೊಳಗೂ ,ಅವರವರ ಸ್ಟೇಟಸ್ ಗೆ ತಕ್ಕ ಮಾತುಕತೆಗೆ ಮಾತ್ರ ಆಸ್ಪದವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ...ಹಾಗಾದರೆ, ಹಣಕ್ಕೆ ಇರುವ ಮೌಲ್ಯ ಮನಸ್ಸಿಗೆ ಇಲ್ವೇ ಇಲ್ವಾ?ಹಣವೇ ಎಲ್ಲವೂನಾ?ಜೀವ, ಭಾವ ತುಂಬಿದ ಮನುಷ್ಯ, ಮನಸ್ಸು ಗಳಿಗೆ ಬೆಲೆ ಇಲ್ಲ ಅಂದ್ರೆ,ಭಾವವೇ ಇಲ್ಲದ ನಿರ್ಜೀವ ವಸ್ತುವಿಗೆ ಎಷ್ಟೊಂದು ಬೆಲೆ... ಅಚ್ಚರಿ, ಕೌತುಕ ಒಟ್ಟೊಟ್ಟಿಗೆ... ಅವರವರ ಬಳಿ ಇರುವ, ಆಸ್ತಿ, ಸಂಪತ್ತು ಅವರವರದೇ...ಹಣ ಇರುವವರ ಜೊತೆಯಲ್ಲಿ, ಸಿರಿವಂತ ಎನಿಸಿದ ಮಾತ್ರಕ್ಕೆ ಮಾತಾಡಿದರೆ,ಮಾತಾಡಿದವರಿಗೇನಿದೆ ಲಾಭ?😂
ನಿಜಕ್ಕೂ ಮಾತು ಎಂಬ ಕಲೆ ಅರಿತವಗೆ ಎಲ್ಲೂ ಅವಮಾನವಿಲ್ಲ..ಅರಿತುಕೊಂಡವರಿಗೇ ಗೊತ್ತು ಅದರ ಮಹಿಮೆ..‌"ಬಾಯಿ,ಇದ್ದರೆ ತಾಯಿ ಇದ್ದಂತೆ ".ಎನ್ನುವ ಗಾದೆ ಮಾತಿದೆ...ಒಳ್ಳೆಯ ಮಾತಿನ ಮೂಲಕ ಇಡೀ ಪ್ರಪಂಚವನ್ನು ಕೂಡ ಸುತ್ತಿ ಬರಬಹುದು...ಇದರ ಸತ್ಯ ದರ್ಶನ ತುಂಬಾ ಚೆನ್ನಾಗೇ ಇದೆ.ಹೌದು,ನಾನು ,ಅಕ್ಷರಶಃ ಮಾತಿನ ಮಲ್ಲಿ😂ಆದರೆ ಹೇಗೇಗೋ ಮಾತಾಡಿ ಅಭ್ಯಾಸ ಇಲ್ಲ.😬... ದಿನ ನಿತ್ಯ ಅಂಗಡಿಗೆ ಬರುವ ನೂರಾರು ಗ್ರಾಹಕ ದೇವರೊಂದಿಗೆ ವಿವಿಧ ಪ್ರಾಕಾರ ಮಾತುಕತೆ ನಡೆಯುತ್ತದೆ.. ಎಷ್ಟೋ ಜನರು,ಮನೆಯ ಅಕ್ಕ ತಂಗಿಯರಲ್ಲಿ ಹಂಚಿಕೊಂಡಂತೆ, ತಮ್ಮ ಕಷ್ಟ, ಸುಖಗಳನ್ನು ಹಂಚಿಕೊಳ್ತಾರೆ.ಇನ್ನೂ ಎಷ್ಟೋ ಜನರು ತಮ್ಮ ಆರೋಗ್ಯ ಸಮಸ್ಯೆ ಹೇಳಿಕೊಳ್ತಾರೆ.ಹೀಗೇ ಹತ್ತಾರು ಮನಗಳ ವೈವಿಧ್ಯಮಯ ಪರಿಸ್ಥಿತಿಗಳ ಪರಿಚಯ ನಮಗೆ ಆಗ್ತಾನೆ ಇರ್ತವೆ...ಇಷ್ಟೇ ಅಲ್ಲ.. ಸಾಮಾನ್ಯವಾಗಿ ,ನಾವಿಬ್ಬರೂ ಗಂಡ ಹೆಂಡತಿ ನಗುನಗುತ್ತಾ ವ್ಯಾಪಾರ ಮಾಡ್ತೀವಿ..ಮುಖದಲ್ಲಿ ಸ್ವಲ್ಪ ನಗೆ ಮಾಸಿದರೂ,ಕೂಡ ಏನಾಯ್ತು ?ಹುಷಾರಿಲ್ವಾ?ಬೇಜಾರಲ್ಲಿ ಇದೀರಾ ಅಂತ ಕಂಡು ಹಿಡಿದು, ಒಂದೆರಡು ಹಿತ ನುಡಿ ನುಡಿಯುವಷ್ಟು ಸೂಕ್ಷ್ಮತೆ ನಮ್ಮ ಗ್ರಾಹಕ ದೇವರುಗಳಲ್ಲಿ...ನಮ್ಮ, ಅವರ ನಡುವೆ ಕೇವಲ ವ್ಯಾಪಾರೀಕರಣ ಮಾತ್ರ... ಅವರು ಹಣ ನೀಡ್ತಾರೆ.ನಾವು ಸಾಮಗ್ರಿಗಳನ್ನು ಕೊಡ್ತೀವಿ.ಅದರ ಹೊರತಾಗಿ ಯಾವ ಬಂಧ,ಸಂಬಂಧ ಕೂಡ ಇರದು ..ಆದರೂ ಒಂದು ಭಾವ ತುಂಬಿದ ಮನಸ್ಸು ಇರುತ್ತದೆ ಅಲ್ವಾ?ಇದು ನಮ್ಮ ಅಂಗಡಿ,ಅನ್ನೋ ಭಾವ ಆ ಗ್ರಾಹಕರಿಗೆ ಇರುತ್ತದಲ್ಲ..ಆ ಜೀವಂತ ಭಾವವೇ ನಮ್ಮ ಕುಶಲೋಪರಿ ವಿಚಾರಿಸುವಂತೆ ಪ್ರೇರೇಪಿಸುತ್ತದೆ...ಮೊದಲೇ ಹೇಳಿದಂತೆ ಭಾವ ಇಲ್ಲದೇ ಏನೂ ನಡೆಯದು...ಭಾವನೆಗಳು ಮನುಜನ ಬದುಕಿನಲ್ಲಿ ಅತೀ ಪ್ರಮುಖ ಪಾತ್ರ ವಹಿಸುತ್ತದೆ....
ಮೊನ್ನೆ, ಮೊನ್ನೆ,ಒಂದು ತಿಂಗಳು ತುಂಬಾ ಹುಷಾರಿಲ್ಲದೇ ನಾನು ಮಲಗಿದ್ದ ವೇಳೆ...ತುಂಬಾ ಹೊತ್ತು ಅಂಗಡಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.ಯಜಮಾನರಿಗೆ ರೆಸ್ಟ್ ಕೊಡುವ ವೇಳೆ ಮಾತ್ರ ಅಂಗಡಿಯಲ್ಲಿ ಇರುತ್ತಾ ಇದ್ದೆ...ನಾನಿಲ್ಲದ ವೇಳೆ ,ಇವರನ್ನು ಎಷ್ಟೋ ಜನರು ವಿಚಾರಿಸಿಕೊಂಡರು..ಅನೇಕ ಸಲಹೆ ನೀಡಿದರು.ಕೆಲವೊಂದು ಮೆಡಿಸಿನ್ ಬಗ್ಗೆ ತಿಳಿಸಿದರು...ನಾನು ಅಂಗಡಿಯಲ್ಲಿ ಕೂತ ವೇಳೆ ನನ್ನ ನೋಡಿದವರು,ಅಕ್ಕ, ತುಂಬಾ ಇಳಿದು ಹೋಗಿದೀರಾ ರೆಸ್ಟ್ ಮಾಡಿ..ಅಮ್ಮ ,ನಿಮ್ಮ ನೋಡೋಕೇ ಆಗ್ತಾ ಇಲ್ಲ. ಯಾವಾಗಲೂ ನಗ್ತಾ ಇರೋವ್ರು,ಈಗ ಸಪ್ಪೆ ಮುಖದಲ್ಲಿ ಇದೀರಾ.ದಯವಿಟ್ಟು ರೆಸ್ಟ್ ಮಾಡಿ ಅಂತ ಕಳಕಳಿಯಿಂದ ಹೇಳೋರು...
ಹೀಗೇ,ಒಂದು ಗೌರವಪೂರ್ವಕವಾದ ಮಾತು,ಮನಸ್ಸಿಗೆ ನೆಮ್ಮದಿ ಕೊಡುತ್ತದೆ...ಹೌದು ,ನಿಜ..ನಾವು ಶೂನ್ಯದಿಂದ ಬದುಕು ಕಟ್ಟಿ ಕೊಳ್ಳಲು ಹರಸಾಹಸ ಪಟ್ಟವರು..ಈಗೊಂದು ಹಂತಕ್ಕೆ ತಲುಪುವಷ್ಟರಲ್ಲಿ ,ಬಂಧು,ಬಳಗ ಎಲ್ಲಾ ಮರೆತೇ ಹೋಗಿದೆ ಎಂದರೆ ತಪ್ಪಾಗಲಾರದು.ಯಾಕೆಂದರೆ, ಮಹಾನಗರದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಏನೇನೂ ಆಧಾರ ಇಲ್ಲದೇ..ಬಂಧು,ಬಳಗ ಎಂದು ಊರು ಸುತ್ತುವ ಕೆಲಸ ಮಾಡಿದರೆ,ನಮ್ಮ ಅನ್ನಕ್ಕೆ ನಾವು ಕಲ್ಲು ಹಾಕಿ ಕೂತಂತೆ...ಕಷ್ಟ, ಪರಿಶ್ರಮ, ಛಲದಿಂದ ಬದುಕಿ ಒಂದು ಹಂತ ಕಂಡಿದೀವಿ ಅನ್ನೋ ಕಾಲಕ್ಕೆ ಹಿಂತಿರುಗಿ ನೋಡಿದಾಗ ,ನಮ್ಮ ಹಿಂದೆ ಏನೇನೂ ಉಳಿದಿರೋದಿಲ್ಲ.... ಎಲ್ಲೋ ಬೆರಳೆಣಿಕೆಯಷ್ಟು ಆಪ್ತ ಜೀವಗಳಷ್ಟೇ..‌ಇಂತಹ ಪರಿಸ್ಥಿತಿಯಲ್ಲಿ ,ಬರುವ ಗ್ರಾಹಕರೇ ನಮ್ಮ ಬಂಧು ಬಳಗ ಎಲ್ಲಾ...ಅವರ ಕಷ್ಟ ಸುಖ ನಮ್ಮದೆನ್ನುವ ಹಾಗೇ ಕುಶಲೋಪರಿ ನಾವು ವಿಚಾರಿಸಿದರೆ,ಅವರೂ ಕೂಡ ಅಷ್ಟೇ ಮುತುವರ್ಜಿ ವಹಿಸಿ ಕೇಳುತ್ತಾರೆ...ಹಬ್ಬ ಹರಿದಿನಗಳಲ್ಲಿ, ತವರಿನವರು ಆದರಿಸುವಂತೆ,ಸಿಹಿ, ಒಬ್ಬಟ್ಟಿನ ಊಟ ಮನೆಗೆ ಬರುತ್ತದೆ.. ಇಲ್ಲಿ ಯಾವ ಲೇವಲ್ ಆಗಲೀ,ಯಾವ ಅಂತಸ್ತಿನ ಅಡೆತಡೆಗಳೂ ಅಡ್ಡ ಬರದು..ಕೇವಲ ಗುಣ,ನಡತೆ, ಮಾತಿನ ಬಂಧ ಅಷ್ಟೇ...... ಪ್ರೀತಿಯಿಂದ ಅಮ್ಮ ಎನ್ನುವ ಮನಸಿದೆ...ಅಕ್ಕ ಎನ್ನುವ ಮನಸಿದೆ...ಮಗಳು ಎನ್ನುವ ಮನಸಿದೆ...ಜಾಗಟೆ ಹೊಡೆವ ದಾಸಯ್ಯನಿಂದ ಹಿಡಿದು, ಹೂ..ತರಕಾರಿ ಮಾರುವ ವರ್ತಕರಿಂದ ಹಿಡಿದು , ಕಾರಲ್ಲಿ ಬರುವ ಸಿರಿವಂತ ಮನಸುಗಳಿಂದ ಹಿಡಿದು ಗೌರವದ ಆಪ್ತ ಮಾತುಗಳೇ ನಮ್ಮ ಮತ್ತೆ ಗ್ರಾಹಕರ ನಡುವೆ ಆಪ್ತತೆ ಬೆಸೆದು ಸೇತುಬಂಧವಾಗಿವೆ ...ಕೊನೆಯಲ್ಲಿ ಒಂದು ಮಾತು..... ನೊಂದ ಮನಸ್ಸಿಗೆ ಚೂರು ಸಾಂತ್ವನ, ಕೊರಗಿ ಕೂತ ಮನಸ್ಸಿಗೆ ಚೂರು ಹಿತ ನುಡಿ,ದೂರದಲ್ಲಿ ಎಲ್ಲೆಲ್ಲೊ ಇರುವ ಮನಸ್ಸಿಗೆ ಚೂರು ಕ್ಷೇಮ ಚಿಂತನೆ, ಕೇಳುವ ಮನವಿದ್ದರೆ,ಒಂದೆರಡು ಹಿತನುಡಿ...ಹೀಗೇ ಇರುವ ಸಮಯದಲ್ಲೇ, ಮಾತು, ಮುತ್ತಾಗಿ ಬಂದರೆ...ಎಷ್ಟೋ ಮನಸ್ಸಿಗೆ ಸಾಂತ್ವನದ ಮಮತೆ ಸಿಕ್ಕಂತೆ ಆಗುತ್ತದೆ...ಮಾತಿಗೆ, ಯಾವ ಅಡೆತಡೆಯ ಹಂಗೂ ಇರದು.ಶುದ್ಧ ಭಾವ ಬೇಕು... ನಿಶ್ಕಲ್ಮಶ ಮನಸ್ಸು ಬೇಕು... ಏನೇ ಹಣ,ಅಂತಸ್ತು, ಆಸ್ತಿ, ಪಾಸ್ತಿ ಸಂಪಾದನೆ ಮಾಡಿದರೂ,ಕೊನೆಯಲ್ಲಿ ನೂಲೆಳೆಯೂ ಇಲ್ಲದೆಯೇ ಸೇರುವುದು ಅದೇ ಮೂರಡಿ ಮಣ್ಣಿನ ಗೋರಿಯನ್ನು...ಆದರೆ ಮಾತಿನ ಮೂಲಕ ಮನಸ್ಸುಗಳನ್ನೇಕ ತಟ್ಟಿದರೆ..ಗೋರಿ ಸೇರುವ ಮುನ್ನ, ನಾಲ್ಕು ಹನಿ ಕಣ್ಣೀರ ಧಾರೆ ಭುವಿಯನ್ನು ಒದ್ದೆ ಮಾಡಬಹುದು....
✍️ಪೂರ್ವವಾಹಿನಿ.