...

0 views

ಮಕ್ಕಳ ಸಾಹಿತ್ಯ : ಅಂಶುಪುಟ್ಟ ಕತೆ
ಅಂಶು ಪುಟ್ಟ ಪ್ರತಿದಿನ ಶಾಲೆಗೆ ಹೋಗಲು ಹಟ ಮಾಡುತ್ತಿದ್ದ. ಅವನ ಹೆತ್ತವರು ಇಬ್ಬರೂ ಉದ್ಯೋಗಕ್ಕೆ ಹೋಗುತ್ತಿದ್ದ ಕಾರಣ ಅಜ್ಜ‌ನಿಗೆ ಅವನ ಜವಾಬ್ದಾರಿ ವಹಿಸಿದ್ದರು. ಪ್ರತಿದಿನ ಶಾಲೆಗೆ ಕರೆದುಕೊಂಡು ಹೋಗುವುದು, ಸಂಜೆ ಮನೆಗೆ ಕರೆದುಕೊಂಡು ಬರುವುದು. ಅಂಶುಪುಟ್ಟನ ಶಾಲೆ ಎದುರಿಗೆ ವಿಶಾಲವಾದ ಆಲದ ಮರವಿತ್ತು. ಸುತ್ತಲೂ ಕಟ್ಟೆಯನ್ನು ಕಟ್ಟಿದ್ದರು. ಅಲ್ಲಿ ಒಂದಷ್ಟು ಹಿರಿಯರು ಸಂಜೆ ಸಮಯಕ್ಕೆ ಸೇರುತ್ತಿದ್ದರು. ಹರಟೆ ಮಾತುಕತೆ ನಡೆಸುತ್ತಿದ್ದರು. ಅವರವರ ಅನುಭವಗಳನ್ನು ಹಂಚಿಕೊಂಡು ತಮಾಷೆ ಚಟಾಕಿ ಹಾರಿಸುತ್ತಿದ್ದರು. ದಿನಕಳೆದಂತೆ ಒಬ್ಬೊಬ್ಬರ ಸಂಖ್ಯೆ ಕಡಿಮೆಯಾಗುತ್ತಿತ್ತು.

ಹೀಗೆ ಪ್ರತಿಸಂಜೆ ಅಂಶುಪುಟ್ಟನ ಕರೆದುಕೊಂಡು ಬರುವಾಗ ಲೂನಾ ತರುತ್ತಿದ್ದರು. ಒಮ್ಮೆ ಅಂಶುಪುಟ್ಟನ ಗೆಳೆಯ ರಸ್ತೆಯಲ್ಲಿ ತನ್ನ ಅಜ್ಜನ ಜೊತೆಗೆ ನಡೆದುಕೊಂಡು ಹೋಗುವುದನ್ನು ನೋಡಿದ. ಅಜ್ಜ.ಅಜ್ಜ... ಈ ಲೂನಾ ಬೇಡ. ನಾವೂ  ನಡೆದುಕೊಂಡು ಹೋಗುವ ಎಂದ. ಅಯ್ಯೋ  ಪುಟ್ಟ ನಮ್ಮ‌ ಮನೆ ತುಂಬಾ ದೂರವಿದೆ. ನಡೆದರೆ ಕಾಲು ನೋವು ಬರುತ್ತದೆ ಎಂದರು.  ಅಂಶುಪುಟ್ಟನಿಗೆ ಮುಖ ಸಣ್ಣಗಾಯಿತು. ಅಜ್ಜನಿಗೆ ಅವನ ಬೇಸರ ಅರ್ಥವಾಗಿ ಮನಸ್ಸು ಬದಲಾಯಿಸಬೇಕೆಂದು ಯೋಚಿಸಿದರು.

ಸರಿ ಈಗ ನಾನು  ಕೆಲವು ಪ್ರಶ್ನೆ ಕೇಳುವೆ. ನೀನು ಉತ್ತರಿಸಬೇಕು ಎಂದರು. ಅಂಶುಪುಟ್ಟ "ಇಲ್ಲ ನಾನು ಉತ್ತರಿಸುವುದಿಲ್ಲ" ಎಂದು ಕೋಪಿಸಿಕೊಂಡ. ನೀನು ಉತ್ತರಿಸಿದರೆ ಚಾಕಲೇಟು ಕೊಡುವೆ. ‌ನಾಳೆ ನಾವು ನಡೆದುಕೊಂಡು ಹೋಗುವ ಎಂದರು. ಅಂಶುಪುಟ್ಟನಿಗೆ ಖುಷಿಯಾಯಿತು. ದಾರಿಯಲ್ಲಿ ಬಲೂನು ಮಾರುತ್ತ ನಿಂತಿದ್ದ ಹುಡುಗನ ನೋಡಿ ನನಗೂ ಬೇಕು ಎಂದು ಹಟ ಮಾಡಿದನು. ಅಜ್ಜ ಎರಡು ಬಲೂನನ್ನು ತೆಗೆಸಿಕೊಟ್ಟರು. ಅಜ್ಜ ಮತ್ತೆ ಮೊಮ್ಮಗನನ್ನು ಲೂನಾದಲ್ಲಿ ಕೂರಿಸಿ ಮನೆಕಡೆಗೆ ಹೊರಟರು. ಅಂಶುಪುಟ್ಟ ಅಜ್ಜನ ಹೊಟ್ಟೆಯನ್ನು ತನ್ನ ಪುಟಾಣಿ ಕೈಗಳಿಂದ ಸುತ್ತಿಕೊಂಡನು.

ಅಜ್ಜ ಅಜ್ಜ ಬೇಗಬೇಗನೆ ಪ್ರಶ್ನೆ ಕೇಳು. ನಾನು ಉತ್ತರಿಸುವೆ ಎಂದನು. ಸರಿ ಎಂದು ಅಜ್ಜ ಪ್ರಶ್ನೆ ಕೇಳಿದರು. "ಬಿಳಿ ಕುದುರೆಗೆ ಹಸಿರು ಬಾಲ?" ಏನು ಹೇಳು ನೋಡೋಣ. ಕುದುರೆ ಬಿಳಿ ಇರುತ್ತದೆ ಅಜ್ಜ.. ಬಾಲ ಹೇಗೆ ಹಸಿರಾಗಿ ಇರುತ್ತದೆ‌. ಕಪ್ಪು ಬಾಲವೇ ಇರುವುದು.ಅಂಶುಪುಟ್ಟನ ಉತ್ತರಕ್ಕೆ ಅಜ್ಜನಿಗೆ ನಗು ಬಂದಿತು‌‌. "ಅದು ಒಗಟು ಕಣೋ. ಸರಿಯಾಗಿ ಉತ್ತರಿಸು. ಇಲ್ಲದಿದ್ದರೆ ನಿನ್ನ ಅಮ್ಮನನ್ನು ಕೇಳು.." ಎಂದರು. "ಹ್ಮ.. ನನಗೆ ಗೊತ್ತಿಲ್ಲ...ಅಮ್ಮನನ್ನೇ ಕೇಳುವೆ.." ಎಂದನು. ಅಷ್ಟರಲ್ಲಿ ಮನೆಯ ‌ಸಮೀಪ ‌ಬಂದಿದ್ದರು. ಲೂನಾದಿಂದ ಇಳಿದು ಮನೆ ಕಡೆಗೆ ಓಡೋಡಿ ಹೋದನು. ಮನೆಯಲ್ಲಿ ಅಮ್ಮ ಬಂದಿದ್ದರು. "ಅಮ್ಮ ಅಮ್ಮಾ... ಕುದುರೆಗೆ ಹಸಿರು ಬಾಲ ಇರುತ್ತದೇ.." ಎಂದು ಕೇಳಿದನು. "ಯಾರು ಹೇಳಿ ಕೊಟ್ಟರು? ನಿಮ್ಮ ಅಜ್ಜನಾ.. ಅವರಿಗೆ ತಲೆ ಕೆಟ್ಟಿದೆಯಾ?? ಅವರ ಮಾತನ್ನು ನಂಬಬೇಡ.." ಎಂದು ಗದರಿಸಿದರು. ಇದನ್ನು ಕೇಳಿಸಿಕೊಂಡ ಅಜ್ಜನಿಗೆ ಬೇಸರವಾಯಿತು. ಅಂಶುಮಾನ್ ತಂದೆ ಆಫೀಸು ಮುಗಿಸಿ ಬಂದರು. ಆಗ ಆ ಪ್ರಶ್ನೆಯನ್ನು ಅವರ ಮುಂದಿಟ್ಟನು. "ಪುಟ್ಟ ಇದು ಒಗಟು ತಾನೆ. ಅಜ್ಜನನ್ನೆ ಕೇಳು, ಅವರಿಗೆ ಇದೆಲ್ಲ ಚೆನ್ನಾಗಿ ಗೊತ್ತಿದೆ.." ಎಂದರು. "ಇಲ್ಲಪ್ಪಾ... ಅಜ್ಜನೇ ಈ ಪ್ರಶ್ನೆ ಕೇಳಿದ್ದು. ಉತ್ತರಿಸಿದರೆ ಚಾಕಲೇಟು ಕೊಡ್ತೇನೆ ಎಂದಿದ್ದಾರೆ.." ಎಂದನು.

ಮಗನು ನೇರವಾಗಿ ತಂದೆಯ ಹತ್ತಿರ ಬಂದು "ಅವನಿಗೆ ಚಾಕಲೇಟು ಏಕೆ ಕೊಡಿಸ್ತೀರಿ? ದಿನವೂ ಚಾಕಲೇಟು ಕೊಡಿಸ್ತೀರಾ?"ಎಂದು ಜೋರಾಗಿ ಕೇಳಿದನು. ಮಗನಿಗೆ‌ ಕೋಪ ಬಂದಿರುವುದು ಕಾಣಿಸಿತು. ಹೀಗೆ ಪ್ರತಿದಿನ ನಡೆಯುತ್ತಿತ್ತು. ಅಜ್ಜ ಏನು ಮಾಡಿದರೂ ತಪ್ಪಾಗಿ ಕಾಣಿಸುತ್ತಿತ್ತು. ಅವರಲ್ಲಿನ ಪ್ರೀತಿ ಅಜ್ಜ ಮೊಮ್ಮಗನ ಬಾಂಧವ್ಯ ಕಾಣಿಸುತ್ತಿರಲಿಲ್ಲ. ಒಂದು ಸಂಜೆ ಮೊಮ್ಮಗನ ಶಾಲೆಯಿಂದ ಕರೆದುಕೊಂಡು ಹೋಗಲು ಬಂದಿದ್ದರು. ಆಗ ಅಂಶುಪುಟ್ಟನ ಗೆಳೆಯ ಅಭಿ ಗೇಟಿನ ಬಳಿ ಕಾಯುತಲಿದ್ದ. ಅವನ ಅಜ್ಜ ಬಂದಿರಲಿಲ್ಲ. ಅಭಿಯನ್ನು ಕರೆದುಕೊಂಡು ಹೋಗಲು ತಾಯಿ ‌ಬಂದಿದ್ದರು. ಅಜ್ಜ ಏಕೆ ಬರಲಿಲ್ಲ ಎಂದು ಕೇಳಿದಾಗ ಅಂಶುವಿಗೆ ಅರ್ಥವಾಗಬಾರದು ಎಂದು ದೊಡ್ಡ‌ಮನೆಗೆ (ವೃದ್ಧಾಶ್ರಮಕ್ಕೆ) ಬಿಟ್ಟು ಬಂದಿದ್ದಾರೆ ಎಂದು‌ ಹೇಳಿದರು. ಒಂದು ತಿಂಗಳು ಕಳೆದ ‌ಮೇಲೆ ಒಂದು ಸಂಜೆ ಅಂಶುಪುಟ್ಟನ ಕರೆದುಕೊಂಡು ಹೋಗಲು ಅಜ್ಜ ಬಂದಿರಲಿಲ್ಲ. ಅಪ್ಪನ ಕಾರಿನೊಳಗೆ ಕುಳಿತ ಅಂಶು ಕೇಳಿದ. "ಅಪ್ಪ.. ಅಪ್ಪ... ಅಜ್ಜ ಏಕೆ‌ ಬರಲಿಲ್ಲ.?! ಅದಕ್ಕೆ ತಂದೆ ಹೇಳಿದರು "ಅಜ್ಜನಿಗೆ ನಮ್ಮ‌ಮನೆ ಇಷ್ಟವಿಲ್ಲವಂತೆ ಅದಕ್ಕೆ ದೊಡ್ಡ ಮನೆಗೆ ಹೋಗಿದ್ದಾರೆ" ಎಂದರು.
ಪುಟ್ಟನಿಗೆ ಅವನ ಗೆಳೆಯನ ತಾಯಿಯ ಮಾತು ನೆನಪಾಯಿತು. ಆತನ ಅಜ್ಜ ಕೂಡ ದೊಡ್ಡ ಮನೆಗೆ ಹೋಗಿದ್ದರು. ಅಂಶುಪುಟ್ಟನಿಗೆ ತನ್ನ ಅಜ್ಜ ಇನ್ನು ಬರುವುದಿಲ್ಲವೆಂಬುದು ಖಾತ್ರಿಯಾಯಿತು. ಮನಸ್ಸು ಮೌನಕ್ಕೆ ಶರಣಾಗಿತ್ತು. ಆಗಸದ ಕಡೆಗೆ ದಿಟ್ಟಿ ನೆಟ್ಟನು.

ಸಿಂಧು ಭಾರ್ಗವ ಬೆಂಗಳೂರು.

© Writer Sindhu Bhargava