...

0 views

ನಮ್ಮನೆ ಅವರೆ ಮೇಳ
ನಮ್ಮನೆಯ ಅವರೆ ಮೇಳ

ಸವಿ ಬಾಯಿಗೊಪ್ಪುವುದು ಮತ ಮನಸಿಗೊಪ್ಪುವುದು
ಅವರವರ ಶುಚಿ ರುಚಿಗಳವರವರ ದಾರಿ ಬವರವೇತಕಿಲ್ಲಿ ಶಿವಗುಡಿಯ ಮಾರ್ಗದಲಿ ವಿವಿಧ ಮನ ವಿವಿಧ ಮತ ಮರುಳ ಮುನಿಯ

ಡಿವಿಜಿ ಯವರು ಹೇಳಿದಂತೆ ಬಾಯಿಗೆ ರುಚಿ ಹತ್ತುವುದು ಅವರವರ ಅಭಿರುಚಿಗೆ ತಕ್ಕಂತೆ. ಅಲ್ಲದೆ ಗಾದೆಯೇ ಇದೆ "ಊಟ ತನ್ನಿಷ್ಟ ನೋಟ ಪರರಿಷ್ಟ" ಅಂತ .ದಾಸರು ಹೇಳಿಬಿಟ್ಟಿದ್ದಾರೆ "ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ". ಹಾಗಂತ ಹೊಟ್ಟೆಗೆ ಮೋಸ ಮಾಡದೆ ಮನಸ್ಸಿಗೆ ಖುಷಿ ಬಾಯಿಗೆ ರುಚಿಯಾಗುವಂತೆ ತಿನ್ನುವುದು ಬದುಕಿನ ರಸಿಕತೆಯ ದ್ಯೋತಕ; ಜೀವನಕಲೆಯ ವಿಧಾನ. ಅಷ್ಟಲ್ಲದೆ ಈಗ ಆಹಾರ ಉದ್ಯಮ ಏನೆಲ್ಲಾ ಎತ್ತರಕ್ಕೆ ಏರಿರುವುದು ಸಾಮಾನ್ಯ ವಿಷಯವಂತೂ ಅಲ್ಲ .

ಬಾಲ್ಯ ಅಂದರೆ ಆಟಪಾಟಗಳ ಜೊತೆ ಊಟ ಅವಿಭಾಜ್ಯ ಅಂಗ. ನಾವು ಚಿಕ್ಕಂದಿನಲ್ಲಿ ಚಪ್ಪರಿಸಿದ ತಿಂಡಿಗಳೇ ಈಗಲೂ ನಮಗೆ ಅತ್ಯಂತ ಪ್ರಿಯವಾಗುವುದು .ಸಾಂಪ್ರದಾಯಿಕ ಅಡುಗೆ ತಿಂಡಿ ಸೇವಿಸಿ ಬೆಳೆದ ನಮಗೆ ಮಾಡಲೂ ತಿನ್ನಲೂ ಅದೇ ಸೊಗ ಅದುವೇ ಜಗ.

ದೀಪಾವಳಿ ಕಳೆದು ಚುಮುಚುಮು ಚಳಿ ಕಾಲಿರಿಸುತ್ತಿದ್ದಂತೆ ಶುರು ಅವರೆಕಾಯಿಯ ಕಾಲ. ನಾನು ಹೇಳುತ್ತಿರುವುದು ನಲ್ವತ್ತು ನಲ್ವತ್ತೈದು ವರ್ಷಗಳ ಹಿಂದಿನ ಮಾತು .ಈಗ ಬಿಡಿ ಯಾವುದಕ್ಕೂ ಸೀಸನ್ ಇಲ್ಲ. ಇಡೀ ವರ್ಷ ಎಲ್ಲ ಸಿಗುತ್ತವೆ. ಹಳೆ ಮೈಸೂರು ಪ್ರಾಂತ್ಯ ಎಂದು ಕರೆಸಿಕೊಳ್ಳುವ ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಕೋಲಾರ ತುಮಕೂರು ಜಿಲ್ಲೆಗಳಲ್ಲಿ ನವೆಂಬರ್ ಮಧ್ಯದಿಂದ ಸಂಕ್ರಾಂತಿಯ ವರೆಗಿನ 3ತಿಂಗಳು ಬರೀ ಅವರೆಯದೇ ಗಮಗಮ ಸೊಗಡು .ರಾಶಿ ರಾಶಿ ಬೀದಿಯಲ್ಲಿ ಸುರುವಿಕೊಂಡು ಮಾರುವ ಸಮಯ. ರಸ್ತೆಯೆಲ್ಲಾ ಅವರೆಯ ಪರಿಮಳ ಮಯ. ಈ ಕಾಲದಲ್ಲಿ ಅವರೇಯೊಂದಿಗೆ ಹೊಂದುವ ತರಕಾರಿ ಬಿಟ್ಟರೆ ಬೇರೇನೂ ರುಚಿಸಲ್ಲ; ಬೇಳೆಯಂತೂ ಒಳಗೆ ಇಳಿಯುವುದಿಲ್ಲ. ತಿಂಡಿ ಅಡಿಗೆ ಎಲ್ಲದರಲ್ಲೂ ಅವರೆಯ ವಿಧವಿಧ ರೂಪಗಳೇ . ಮೂರೂ ಹೊತ್ತು ಅವರೇಕಾಯಿ ಉಪಯೋಗಿಸುತ್ತಿದ್ದುದು ನಮ್ಮ ಮನೆಯಲ್ಲಷ್ಟೇ ಅಲ್ಲ ಆಗಲೂ ಈಗಲೂ ಸುಮಾರು ಜನರಿಗೆ ಅವರೇ ಎಂದರೆ ಅಚ್ಚುಮೆಚ್ಚು. ನಾನಂತೂ ಈಗಲೂ ನಮ್ಮ ಅಮ್ಮನ ಪದ್ದತಿಯೇ….. ಗ್ಯಾಸ್ಟ್ರಿಕ್ ಆಗಲ್ವಾ ಅಂತ ಕೆಲವರ ಪ್ರಶ್ನೆ. ಜೀರಿಗೆ ಮೆಣಸು ಇಂಗು ಶುಂಠಿ (ಈಗೀಗ ಕೆಲವಕ್ಕೆ ಬೆಳ್ಳುಳ್ಳಿ) ಜೊತೆ ಉಪಯೋಗಿಸುವುದರಿಂದ ಸಮಸ್ಯೆ ಆಗಿಲ್ಲ .

ಆಗೆಲ್ಲಾ ಕೆಜಿಗಳ ಲೆಕ್ಕವಿಲ್ಲ ಹಳ್ಳಿಗಳ ಕಡೆಯಿಂದ ಮೂಟೆ...