...

6 views

ನತದೃಷ್ಟ ಪ್ರೀತಿಗಿಲ್ಲಿ ನಾನೇ ಮೊದಲಿಗಳು
!!!!....ನತದೃಷ್ಟ ಪ್ರೀತಿಗಿಲ್ಲಿ ಮೊದಲಿಗಳು....!!!!

ಫಳ್....‌!!!
ಹೃದಯ ಒಡೆದಿತ್ತು...;ಕಲ್ಲಾದ ಹೃದಯವೂ ಕೂಡ ಮತ್ತೊಮ್ಮೆ ಒಡೆಯುತ್ತದೆ,ಭಾಗ್ಯವೆನ್ನಲ್ಲೇ ಇದಕ್ಕೆ ಏನೆನ್ನಲಿ ಕೂಡಿಸಿಟ್ಟ ಪ್ರೀತಿಯೆಲ್ಲಾ ಒಮ್ಮೆಲೇ ಚೆಲ್ಲಿ ಚದುರಿತ್ತು.ಹಿಡಿಯಷ್ಟಾದರು ಅವನ ಪಾದ ನೆನಸಿದ್ದರೇ ಒಂದು ಅರ್ಥವಿತ್ತೇನೊ...?? ಅವನೋ ಪ್ರೀತಿಯ ಸಾಗರ ನನ್ನ ಪುಟ್ಟ ಹನಿ ಪ್ರೀತಿ ಆ ಸಾಗರದಲ್ಲಿ ಎಲ್ಲಿಯೂ ಕಾಣದು.ಚೂರಾದ ಚೂರನೆಲ್ಲಾ ಬೊಗಸೆ ತುಂಬಿ ಹಿಡಿದು ನಕ್ಕು ಬಿಟ್ಟಿದ್ದೆ ನಾ‌‌....!! ಹುಚ್ಚೆನಿಸಬಹುದು ನಿಮಗೆ ಆದರೆ
ಮತ್ತೆ ಮತ್ತೆ ಒಡೆದ ಹೃದಯವ ಸಂತೈಸುವವರಾರು..??? ಈಗಲೂ ಹಿಡಿದ ಬೊಗಸೆಯಿಂದ ಪ್ರೀತಿ ಹನಿ ತೊಟ್ಟಿಕ್ಕುತ್ತಿತ್ತು...



ಅಷ್ಟ ಐಶ್ವರ್ಯ ಗಳ ಹಂಗಾದರು ಯಾರಿಗೆ ಬೇಕು ಕ್ಷಣಕ್ಕಾದರು ತುಂಬು ಒಲವು ಸಿಗಬೇಕು ಇಲ್ಲಾ ಒಂದು ಕ್ಷಣದ ತುಂಬು ಪ್ರೀತಿಯ ನೆನಪಾದರು ಉಳಿದು ಹೋಗಬೇಕು..,ನನ್ನದೊಂತರ ಅರ್ಥವಿಲ್ಲದ ಹುಚ್ಚು ಒಮ್ಮುಕ ಪ್ರೀತಿಯದು ಕಡಲ ಸೇರುವ ಧಾವಂತವಿಲ್ಲ ನಡುವಲ್ಲೇ ಬೃಹದಾಕಾರದ ತಡೆಗೋಡೆಯಂತಹದೇನೊ ಇದೇ ಮಂದಗಾಮಿನಿಯಾಗಿ ಹರಿದು ದಾರಿಯಲ್ಲೆಲ್ಲೋ ಆವಿಯಾಗಿ ಹೋಗುವುದು ಅದು. ನೋಡುವವರಿಗೆ ಸಾಗರ ಸೇರಿದಂತಯೇ ಕಾಣುವುದು ನಡುವಲ್ಲಿ ಆವಿಯಾಗಿ ಹೋಗುವ ಯಾತನೆಯ ಕಬರಿಲ್ಲ ಅವರಿಗೆ ನನ್ನ ಬದುಕ ಯಾತನೆಯ ಅರಿವಿಲ್ಲ ಅವರಿಗೆ ಮೇಲ್ನೋಟಕ್ಕೆ ನಾನು ತುಂಬಾ ಅದೃಷವಂತೆ ಜಗದ್ದೊದ್ದಾರಕನ ಕೈ ಹಿಡಿದವಳಲ್ಲವೇ ಜಗತ್ತನ್ನೇ ಉದ್ದರಿಸುವವನ ಮಡದಿಗೇನು ನೋವು ಅಲ್ಲವೇ..????
ನನ್ನ ಈ ಬದುಕಿನ ಅರ್ಥವೇ ಕೆಲವೊಮ್ಮೆ ನನಗೆ ತಿಳಿಯದು ಧರ್ಮ ಯುದ್ದಕ್ಕೆ ನಿಂತ ನನ್ನ ಗಂಡ ಅದಮ್ಯ ಪ್ರೇಮ ಮೂರ್ತಿ .ಪ್ರೀತಿ ಪಾಠವ ಜಗತ್ತಿಗೆ ಪರಿಚಯಿಸಲು ಜನ್ಮವೆತ್ತಿ ಬಂದವನು.ಅದಮ್ಯ ಒಲವ ಖನಿಯೇ ಆತನ ಹೃದಯದೊಳಗಿದೆ ಹಾ..!! ಆ ಹೃದಯದ ಒಡತಿಯಾಗೋ ಅದೃಷ್ಟ ನನಗಿಲ್ಲಾ ಆದರೆ ಅವನ ಪಟ್ಟದರಸಿ..., ಅವನ ಆ ವೈಭೋಗದ ಜೀವನ ನನಗೆಂದಿಗೂ ಪ್ರೀತಿಯ ಹಂಚಲೇ ಇಲ್ಲಾ.
"ರಾಧಾ" ಅತ್ಯದ್ಭುತ ಪ್ರೇಮಿಯವಳು ಅವಳಂತವಳು ಮತ್ತೆಲ್ಲಿಯೂ ಸಿಗಲಾರರು ನನ್ನ ಗಂಡನ ಹೃದಯದರಸಿಯವಳು ಹಾಗಂತ ನನಗೇನು ಬೇಸರವಿಲ್ಲಾ.ಅದೆಂತಹ ಪ್ರೇಮ ಅವರದು ನಿಜಕ್ಕೂ ಅದ್ಬುತ ನಾನು ಒಮ್ಮೊಮ್ಮೆ ಮಾರು ಹೋಗಿ ಅಭಿಮಾನಿಯಾಗಿ ಬಿಡುತ್ತನೆ ಅವರ ಪ್ರೇಮದ ಆ ಪರಿಗೆ
ಎಲ್ಲಿಯದೋ ಕೊಳಲು ಇನ್ನೆಲ್ಲಿಯೋ ರಾಧೆ..,ಯಮುನಾ ಗೋವು ನವಿಲುಗರಿಯೆಲ್ಲಾ ಅವರ ಪ್ರೀತಿಗೆ ಸಾಕ್ಷಿ..,ತುಂಬು ಬೃಂದಾವನ ಅಮರ ಪ್ರೇಮದ ಪ್ರತೀಕ. ಕೃಷ್ಣನ ಪ್ರತಿ ಮಿಡಿತವೇ ಅವಳು ಉಸಿರಾಟದ ಸದ್ದಲ್ಲಯೇ ಅರಿಯುವ ಪ್ರೇಮ ಅವರದು ಆದರೆ ವಿಧಿಯಾಟದ ಮುಂದೆ ಎಲ್ಲವೂ ಗೌಣವೇ..ಜಗತ್ತೆಲ್ಲಾ ಪ್ರೇಯಸಿಯೊಂದಿಗೆ ಕೃಷ್ಣನ ಪೂಜಿಸಿದರು. ಅವಳೊಂದಿಗೆಯೇ ಬೆರೆತು ಹೋದರು..,ಮಡದಿಯಾದ ನಾನು ಹೆಸರಾಗಷ್ಟೇ ಉಳಿದು ಹೋದೆ
ನಿಮಗೇನಾದರು ಹೀಗಾದರೆ ನೀವು ಸಹಿಸ ಬಲ್ಲಿರಾ.., ನೋಡಿ ನಾನು ನಗುತ್ತಲೇ ಸಹನೆಯ ಪ್ರತಿರೂಪವಾಗಿ ಹೋದೆ.ಆದರು ಅದನ್ನು ಬಲ್ಲವರಿಲ್ಲಿ ಯಾರಿಲ್ಲಾ. ಕೈ ಹಿಡಿದು ನಡೆಯಲಿಲ್ಲಾ, ಏಕಾಂತದಿ ಪ್ರೇಮದಿ ಒಂದೆರಡು ಮಾತಾಡಲಿಲ್ಲಾ,ಕೃಷ್ಣನ ಪ್ರೀತಿಯ ದ್ಯೋತಕವಾದ ಯಮುನೆಯ ಸೆರಗು ನನಗೇ ಬಿಕ್ಕಲು ಕೂಡ ಸಿಗಲಿಲ್ಲ
ಅವರು ಸಾವಿರ ಹೆಜ್ಜೆಯ ಜೊತೆ ನಡೆದರು ಆದರೆ ಸಪ್ತಪದಿಗಳಿಗೆ ಜೊತೆಯಾಗಲಿಲ್ಲಾ..,ನಾನು ಸಪ್ತಪದಿಗೆ ಜೊತೆಯಾಗಿ ಬದುಕಿನುದ್ದದ ಸಾವಿರ ಹೆಜ್ಜೆಗಳಿಗೂ ಹೀಗೆ ಅಪರಿಚಿತಳಾಗೇ ಉಳಿದು ಬಿಟ್ಟೇ...!!



ರಾಧೆಗೆ ಕೃಷ್ಣನ ತುಂಬು ಒಲವಾದರು ದಕ್ಕಿತ್ತು ಎರಡು ಹೃದಯಗಳ ಮಿಳಿತವಾಗಿತ್ತು‌ ಆದರೆ ನನಗೆ...???ಕೃಷ್ಮನೇನೊ ಸಿಕ್ಕಿ ಬಿಟ್ಟ ಜೊತೆಗೆ ಹೆಂಡತಿಯೆಂಬ ಪಟ್ಟವೂ ಆದರೆ ಅವನ ಹೃದಯದರಮನೆಗೆ ಪ್ರವೇಶವೇ ಸಿಗಲಿಲ್ಲ ಅಲ್ಲಿ ನಾನ್ಯಾರೋ ಪರಕೀಯಳು..ಕೊನೆಗೂ ದಾಸಿಯಾಗಿಯೇ ಬಾಗಿಲಲ್ಲೇ ಕುಳಿತು ಬಿಟ್ಟೆ.ಸತ್ಯಭಾಮೆಯಾದರು ಪ್ರೀತಿಗಾಗಿ ಹಂಬಲಿಸಿದಳು ಮುನಿಸು ತೋರಿದಳು ,ನನ್ನೊಟ್ಟಿಗೂ ಜಗಳ ಕಾಯ್ದಳು ಆದರೆ ನನಗೆಂದಿಗೂ ಹಾಗೇ ಮಾಡಬೇಕೆಂದು ಅನಿಸಲೇ ಇಲ್ಲಾ ಕೃಷ್ಣ ಮನದಲ್ಲಿ ರಾಧೆಯ ತುಂಬಿಕೊಂಡಂತೆ ನನ್ನ ಮನದಲ್ಲೂ ನಾ ಆತನನ್ನೇ ತುಂಬಿ ಕೊಂಡಿದ್ದೆ ಯಾಕೋ ನಿರ್ಲಿಪ್ತತವಾದ ಈ ಬದುಕಿಗೆ ಅಷ್ಟೇ ಸಾಕೆನಿಸಿತು.ಸಿಗದಿರುವ ಒಲವ ನೋವೇ ಹೃದಯಕ್ಕೆ ಹಿತವೆನಿಸತೊಡಗಿತು.., ಪಾಲಿಗೆ ಸಿಕ್ಕಿದಷ್ಟೇ ಪಂಚಾಮೃತವಲ್ಲವೇ ಅದು ಒಲವಾದರು ಏನಾದರೂ ಸರಿಯೇ...!!
ಸಿಗದಿರುವ ಪ್ರೀತಿಗಿಂತ ಸಿಕ್ಕು ಸಿಗದಂತಿರುವ ಪ್ರೀತಿಯ ನೋವೇ ಹೆಚ್ಚು ಇಲ್ಲಿ.ಸಿಗದವರು ನೆನಪಿನಲ್ಲಿಯಾದರು ಬದುಕ ಸವೆಸಿ ಬಿಡುತ್ತಾರೆ. ಸಿಕ್ಕು ಸಿಗದಿರುವವರಿಗೆ ಕನ್ನಡಿಯೊಳಗಣ ಗಂಟಿನಂತೆ ಪ್ರೀತಿ..,ಎದುರಿರುತ್ತದೆ ಆದರು ಅದು ದಕ್ಕದ್ದು.ಅದರ ಯಾತನಯೇ ಬಲ್ಲಿರೇನು...?? ನೀವು ರಾಧೆಯ ವಿರಹ ,ಕಣ್ಣೀರು,ಯಾತನೆಯ ಎಲ್ಲವನ್ನೂ ಬಲ್ಲವರು
ಆದರೆ ಇವೆಲ್ಲವನ್ನು ನಾನು ಕೂಡ ಅಜ್ಞಾತವಾಗಿಯೇ ಸಹಿಸುತ್ತಾ ಮೌನದಿಯೇ ಉಳಿದು ಬಿಟ್ಟೇ.ನನಗೂ ಒಮ್ಮೊಮ್ಮೆ ನಾನು ರಾಧೆಯಂತೆಯೇ ಉಳಿದು ಬಿಡಬೇಕಿತ್ತು ಅನಿಸುತ್ತದೆ.,ಪ್ರೀತಿಗೆ ಮದುವೆ ಬಂಧಗಳೆಂಬ ಬಂಧನದ ಗೊಡವೆಗಳಿಲ್ಲದೇ..,ರಾಧೆಗೆ ನಾನಾಗುವಾಸೆ ಆದರೆ ನನಗೆ ಅವಳಂತಾಗಿ ಬದುಕುವಾಸೆ ಹಣೆಯಲ್ಲಿ ಬರೆಯದ ಪ್ರೀತಿ ಮನದಲ್ಲಿದ್ದರು ಬದುಕಿ ಬಿಡಬಹುದು ಹಣೆಯಲ್ಲಿ ಬರೆದು ಮನದಲ್ಲಿ ಇರದಿದ್ದರೆ ಅದೊಂದು ಅಕ್ಷರಶಃ ಯಾತನೆ ನೋಡಿ.ನಿಜ ರಾಧೆ ನಿಮ್ಮನೆಲ್ಲಾ ಕಾಡಿದಷ್ಟು ನಾನಾರಿಗೂ ಕಾಡಿರಲಾರೆ ಯಾಕೆಂದರೆ ನಾನವನ ಅಧಿಕೃತ ಮಡದಿ ರಾಧೇಯ ನೋವ ಇಲ್ಲಿ ಎಲ್ಲರೂ ಬಲ್ಲಿರಿ ಆದರೆ ನನ್ನ ಅಂತರಾಳಕ್ಕೆ ಇಳಿದವರೆಷ್ಟು.....????
ಹಾ...!!! ನಾನ್ಯಾರೋ ಹೇಳಲಿಲ್ಲ ಅಲ್ಲವೇ ನನ್ನ ಹೆಸರು ರುಕ್ಮಿಣಿ ನತದೃಷ್ಟ ಪ್ರೀತಿಯ ಸಾಲಿಗಿಲ್ಲಿ ಮೊದಲ ಹೆಸರು ನನ್ನದೇ...🙃

-ಮೌನ ಹೃದಯ