...

11 views

ಲೇಖನ ಬರೆಯುವುದು ಹೇಗೆ?
ಬರವಣಿಗೆ ಒಂದು ಕಲೆ. ಸಮಾಜಕ್ಕೆ ಸಹಕಾರಿ ಆಗುವಂತಹ ಸಂಗತಿಗಳನ್ನು ಪ್ರಬಲ ಮಾಧ್ಯಮವಾದ ಪತ್ರಿಕೆ ಅಥವಾ ನಿಯತಕಾಲಿಕಗಳು ಈಗ ಹೆಚ್ಚಾಗಿ ಚಾಲ್ತಿಯಲ್ಲಿರುವ ಸೋಶಿಯಲ್ ಮೀಡಿಯಾ ಮೂಲಕ ಸಹೃದಯರಿಗೆ ತಲುಪಿಸಿದಾಗ ಸಿಗುವ ತೃಪ್ತಿ ಅವರ್ಣನೀಯ, ಅವಿಸ್ಮರಣೀಯ.
ಇಂದಿನ ಯಾಂತ್ರಿಕ ಬದುಕಿನಲ್ಲಿ ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಆಸಕ್ತಿ ಕುಂಠಿತ ಆಗಿರುವುದಕ್ಕೆ ಅನೇಕ ಕಾರಣಗಳಿವೆ. ಆದರೂ `ಲೇಖನ' ಬರೆಯುವುದು ಹವ್ಯಾಸವಾಗಿ ಮಾರ್ಪಟ್ಟರೆ ಭವಿಷ್ಯದಲ್ಲಿ ಅವರಿಗೆ ಬಹಳ ಉಪಯೋಗವಿದೆ. ಬರೆಯುವುದು ಮತ್ತು ಓದುವುದು ಶೂನ್ಯ ಸಮಯವನ್ನು ಸದುಪಯೋಗಪಡಿಸಲು ಕೂಡ ಸಹಕಾರಿ.


ಪ್ರತಿ ಮಗುವಿನಲ್ಲೂ ಯಾವುದಾದರೊಂದು ರೀತಿಯ `ಪ್ರತಿಭೆ' ಖಂಡಿತಾ ಮನೆ ಮಾಡಿರುತ್ತದೆ. ಪಟ್ಟಣದಲ್ಲಿ ಸಾಮಾನ್ಯವಾಗಿ ಶಿಕ್ಷಿತ ಕುಟುಂಬ ವರ್ಗ ಹೆಚ್ಚಾಗಿರುವುದರಿಂದ ಅವರು ತಮ್ಮ ಮಕ್ಕಳಿಗೆ ಬೇಕಾದ ಮಾರ್ಗದರ್ಶನ ನೀಡಿ ಅವರ ಪ್ರತಿಭೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡುತ್ತಾರೆ. ಆದರೆ ಗ್ರಾಮೀಣ ಮಕ್ಕಳಿಗೆ ಪ್ರತಿಭೆ, ಆಸೆ, ಆಕಾಂಕ್ಷೆಗಳಿದ್ದರೂ.. ಸರಿಯಾಗಿ ಗುರುತಿಸುವವರಿಲ್ಲದೆ, ಸರಿಯಾದ ಸಹಕಾರವಿಲ್ಲದೆ ಅವರೆಲ್ಲರೂ ಎಲೆ ಮರೆಯ ಕಾಯಿಯಂತೆ ಮರೆಯಾಗಿ ಬಿಡುತ್ತಾರೆ.

ಅವರಿಗೆ ಸೂಕ್ತ ಅವಕಾಶ, ಸಹಾಕರ ಮತ್ತು ನಿಖರವಾದ ಮಾಹಿತಿ ಲಭ್ಯವಾದಲ್ಲಿ ಮುಂದೆ ಗ್ರಾಮೀಣ ಪ್ರದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯುತ್ತಮ ಲೇಖಕರು, ಅಂಕಣಕಾರರು, ವಿಮರ್ಶಕರು ನಮ್ಮ ಸಮಾಜಕ್ಕೆ ಸಿಗಬಹುದು ಎಂಬುದು ಶುದ್ಧ ಮನಸ್ಸಿಗರ ಅಭಿಲಾಷೆ.

ಹೀಗೆ ಲೇಖನ ಬರೆಯಲು ಆಸಕ್ತಿ ಇರುವವರು ಅನುಸರಿಸಬೇಕಾದ ಕೆಲವು ಸರಳ ಮಾರ್ಗಗಳು ಇಲ್ಲಿವೆ:


ವಿಷಯದ ಆಯ್ಕೆ:
       ಮೊದಲನೆಯದಾಗಿ ಲೇಖನ ಬರೆಯಲು ಸರಿಯಾದ ವಸ್ತು ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಸಮಾಜಕ್ಕೆ ಸದುಪಯೋಗ ಆಗುವಂತಹ, ಸಂದೇಶ ನೀಡುವಂತಹ ವಿಷಯಗಳಾಗಿದ್ದರೆ ಉತ್ತಮ. ನಮ್ಮ ಆಯ್ಕೆಯ ವಿಷಯದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಗುರುಹಿರಿಯರಿಂದ, ಪುಸ್ತಕಗಳಿಂದ ಈಗಿನ ಹೆಚ್ಚಿನ ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್ ಇರುವುದರಿಂದ ಗೂಗಲ್ ಮೂಲಕವೂ ಅದರ ಬಗೆ ಮಾಹಿತಿಯನ್ನು ಪಡೆಯಬಹುದಾಗಿದೆ.

ಭಾಷೆ:
       ಭಾಷೆಯ ಮೇಲೆ ಸಂಪೂರ್ಣ ಹಿಡಿತವಿರಲಿ, ಗುಣಮಟ್ಟ ಅತ್ತ್ಯುತ್ತಮವಾಗಿರಲಿ. ಮೌಲ್ಯಾಧಾರಿತ ಶಬ್ಧಗಳನ್ನು ಬಳಸಿ ವಾಕ್ಯಗಳನ್ನು ರಚಿಸಬೇಕು. ಶಬ್ದಗಳಿಗೆ ಅರ್ಥ ಬೇಕಾದರೆ ನಿಘಂಟಿನ ಸಹಾಯ ಪಡೆಯಬಹುದು. ಲೇಖನ ಯಾವಾಗಲೂ ಸ್ವಾರಸ್ಯಕರವಾಗಿರುವಂತೆ ನೋಡಿಕೊಳ್ಳಬೇಕು.


ರೂಪ:
       ಪ್ರಬಂಧಗಳಿಗಿರುವಂತೆ ಲೇಖನಗಳಿಗೆ ಖಡ್ಡಾಯ ನಿಯಮಗಳೇನೂ ಇಲ್ಲ. ಓದುಗರಿಗಾಗಿ, ಬರಹದ ಸೌಂದರ್ಯಕ್ಕಾಗಿ ಲೇಖನ ಬರೆಯುವಾಗ ಕೆಲವು ನಿಯಮಗಳನ್ನು ಪಾಲಿಸಿದರೆ ಉತ್ತಮ. ಬರೆಯುವ ಮೊದಲು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಂಡರೆ ಒಳ್ಳೆಯದು.
1. ವಿಷಯದ ಬಗ್ಗೆ ಪೀಠಿಕೆ
2. ವಿಷಯದ ವಿವರಣೆ
3. ಬರಹದ ಉದ್ದೇಶ, ಆಕಾಂಕ್ಷೆ ಹಾಗೂ ತೀರ್ಮಾನವನ್ನು ಕೇವಲ ಮೂರ್ನಾಲ್ಕು ವಾಕ್ಯಗಳಿರುವಂತೆ ಸಂಕ್ಷಿಪ್ತಗೊಳಿಸಬೇಕು.
4. ಮೊದಲ ಪ್ರತಿ ಓದಿ, ತಿದ್ದುಪಡಿ ಬೇಕಿದ್ದರೆ ಮಾಡಿಕೊಂಡು, ಪುಟದ ಒಂದೇ ಬದಿಯಲ್ಲಿ ಸ್ಪಷ್ಟವಾಗಿ, ಸುಂದರವಾಗಿ ತಪ್ಪಿಲ್ಲದೇ `ಮೂಲ ಪ್ರತಿ' ಸಿದ್ಧಪಡಿಸಿ ಸೂಕ್ತವಾದ ಒಂದು `ಶೀರ್ಷಿಕೆ'ಯನ್ನು ನೀಡಬೇಕು.


ಸ್ಫೂರ್ತಿ:
       ಒಂದು ಪಾತ್ರ, ವ್ಯಕ್ತಿ, ಸಾಹಿತ್ಯ ಅಥವಾ ಪ್ರಕೃತಿಯನ್ನೇ `ಸ್ಫೂರ್ತಿ'ಯಾಗಿ ಮನದಲ್ಲಿ ಸ್ಥಾಪಿಸಿಕೊಂಡರೆ, ಅದೇ ಸ್ಫೂರ್ತಿಯ ಚಿಲುಮೆಗಳು ಮನಸಿನೊಡನೆ ಮಾತನಾಡುತ್ತಾ ಮೆದುಳಿಗೆ ಸಂದೇಶ ನೀಡಿ ನಮ್ಮ ಬರವಣಿಗೆಗೆ ಸಹಾಯಕವಾಗುತ್ತದೆ.

ಹೀಗೆ ಅಚ್ಚುಕಟ್ಟಾಗಿ ಲೇಖನವನ್ನು ಸಿದ್ಧಪಡಿಸಿಕೊಂಡ ನಂತರ ಅದನ್ನು ಯಾವ ಪತ್ರಿಕೆಗೆ, ಅಥವಾ ಯಾವ ವಿಭಾಗಕ್ಕೆ ಕಳುಹಿಸಬೇಕೆಂದು ಸರಿಯಾಗಿ ತೀರ್ಮಾನಿಸಿಕೊಳ್ಳಬೇಕು.

ಇದನ್ನೆಲ್ಲಾ ಪಾಲಿಸಿದರೆ ನಿಮ್ಮಿಂದಲೂ ಒಂದು ಉತ್ತಮ ಲೇಖನ ಖಂಡಿತಾ ಬರೆಯಲು ಸಾಧ್ಯವಿದೆ. ಒಂದು ಬಾರಿ ಪ್ರಯತ್ನಿಸಿ..


...✍️Shamna

© ಹೃದಯ ಸ್ಪರ್ಶಿ