...

1 views

ಒಲವೇ ನೀನೀರಲು ಜೊತೆಯಲಿ
ಹಲೋ ಮುದ್ದಮ್ಮ ಹೇಗೋ ಇದ್ಯಾ..??...ಒಲವಿನ ಜೇನಿನಂತ ನುಡಿ ಅವನದು.

    ರೀ.... ರೀ...ನೋವಲ್ಲಿ ಬೆಂದು ಮಾತನಾಡಲಾಗದಿದ್ದರೂ ತಡವರಿಸುತ್ತಲೇ ತನ್ನವನ ಮಾತಿಗೆ ಪ್ರತಿಸ್ಪಂದಿಸುವ ಕನವರಿಕೆ ಅವಳದು..

   ಹೇಳಮ್ಮಾ, ನಿನ್ನನ್ನು ನೋಡದೆ ಚಡಪಡಿಸಿ ಹೋಗ್ತಿದಿನಿ ಕಣೋ ಬಂಗಾರ...

   ರೀ,ಏನಿದು ಹುಚ್ಚಾಟ..!!! ನೀವು ಇಲ್ಲಿಂದ ಹೋಗಿ ಒನ್ ಹವರ್ ಆಗಿದೆಯಷ್ಟೇ ರೀ... ಯಾರಾದ್ರು ಕೇಳಿದ್ರೆ ನಗ್ತಾರೆ....ನೋವಿನ ನಡುವೆಯೂ ಜೋರು ನಗು ಅವಳಿಗೆ ತನ್ನವನ ಒದ್ದಾಟ ಕಂಡು..

   ಏನಮ್ಮಾ ಮಾಡೋದು..?? ಪ್ರತಿ ಕ್ಷಣ ನಿನ್ನೊಂದಿಗೆ ಕಳೆಯುವಾಸೆ ಈ ಹುಚ್ಚು ಮನಸ್ಸಿಗೆ.. ಆದರೆ...ಆದರೆ......

   ಮಾತು ಮುಂದುವರೆಸಲಾಗದೇ ಕಣ್ಣಂಚು ಒದ್ದೆಯಾಗಿ , ಗಂಟಲು ಸೆರೆ ಉಬ್ಬಿ ಮೌನವಹಿಸಿಬಿಟ್ಟ ಹುಡುಗ...

    ತನ್ನವನ ಮೌನ ಕ್ಷಣವೂ ಸಹಿಸಲಾರಳು ಅವಳು...ಯಾಕ್ರೀ ಮಾತು ನಿಲ್ಲಿಸಿಬಿಟ್ರಿ...??.. ನೀವು ನನ್ನೊಂದಿಗೆ ಕಳೆಯುವ ಕ್ಷಣಗಳಿಗೆಲ್ಲ ಅಡ್ಡಿಪಡಿಸಿರುವುದು ನಾನೇ ಅಲ್ಲವೇ...!! ನನ್ನ ಕೆಟ್ಟ ಗ್ರಹಚಾರ ಕಾರಣವಲ್ಲವೇ...!!..

   ಸಾಕು...ಅವಳು ಮಾತು ಮುಂದುವರೆಸದಂತೆ ಸಣ್ಣ ಮುನಿಸಿನಲ್ಲೇ ಗದರಿದ ಹುಡುಗ..

   ನಿರಾಸೆಯ ನಗು ನಕ್ಕವಳು ಮಾತು ಮುಂದುವರೆಸಿದಳು ಅವನ ಹೃದಯದರಸಿ... ರೀ, ನೀವು ನನ್ನ ಮಾತು ತಡೆದರೆ ಯಾವುದು ಸುಳ್ಳಾಗಲ್ಲ ಅಲ್ವಾ..?? ಆಸ್ಪತ್ರೆಯಲ್ಲಿ ಕೊನೆಯುಸಿರಿಗೆ ಕ್ಷಣಗಳ ಲೆಕ್ಕಾಚಾರದಲ್ಲಿ ತೊಡಗಿರುವವಳು ನಾನು..ನನ್ನನ್ನುಳಿಸಿಕೊಳ್ಳಲೇಬೇಕೆಂಬ ಹುಚ್ಚು ಸಾಹಸ ನಿಮ್ಮದು... ಅಷ್ಟರಲ್ಲಿ ಮಾತುಗಳು  ಗಂಟಲುಬ್ಬಿ ಬಂದು ಕಣ್ಣೀರ ಅಶ್ರುಬಿಂದುಗಳು ಅವಳ ಸುಕೋಮಲ ಕದಪುಗಳನ್ನು ಸೋಕಿದವು.
 
    ಸ್ಟಾಪಿಟ್ ..!!!! ಸ್ಟುಪಿಡ್ ತಂದು...ಇನ್ನೊಂದು ಮಾತನಾಡಿದ್ರೆ ಎರಡು ಬಾರಿಸ್ತೀನಿ ನೋಡು..ಸಾಕು ಪೋನಿಡು...ಎಂದವನೇ ರಭಸದಲ್ಲಿ ರಿಸೀವರ್ ಕುಕ್ಕಿ ಒಳ ಹೋದ...

   ತನ್ನವಳ ಮಾತು ಕೇಳಿ ಮನಸ್ಸು            ಕಹಿಯಾಯಿತು. ಮುಂದೆ ಬರುವ ಭವಿಷ್ಯದ ಕ್ಷಣಗಳನ್ನು ಮರೆತು ವರ್ತಮಾನದ ತೂಗುಯ್ಯಲೆಯಲ್ಲಿ  ಪ್ರತಿ ಕ್ಷಣವನ್ನು ತನ್ನವಳಿಗಾಗಿ ಬದುಕುತ್ತಿರುವನು ಆದರೆ ಮನದರಸಿಯ ಮಾತು ಭವಿಷ್ಯವೆನ್ನುವ ಬಾಗಿಲನ್ನು ತಟ್ಟಿ ತೆಗೆದಂತೆ ಭಾಸವಾಗಿ ಅವನು ಕಣ್ಣೀರಾದ.
 
  
    ಫೋನಿನಲ್ಲಿ ತನ್ನವನ ಕೋಪದ ನುಡಿಗಳಲ್ಲೂ ಅಡಗಿದ ಒಲವನ್ನು ಕಂಡವಳ ಹೃದಯ ಚಿಟ್ಟೆಯಾಗಿತ್ತು... ಸಾವಿನ ಬಾಗಿಲಲ್ಲಿ ನಿಂತವಳಿಗೂ ಬದುಕಲೇಬೇಕು...ತನ್ನವನ ಪ್ರೀತಿಯ ಸುಧೆಯನ್ನ ಸವಿಯಲೇ ಬೇಕೆಂಬ ಹುಚ್ಚು ಹಠ ಅರಿವಿರದೇ ಅವಳ ಮನವನ್ನಾವರಿಸಿ ನೆಮ್ಮದಿಯ ನಿದಿರೆಯನ್ನ ಆಹ್ವಾನಿಸಿತ್ತು ಅವಳ ಬಟ್ಟಲು ಕಂಗಳು...

******** ******* ********

    ಅವಳು ಗಾನವಿ...ಹುಟ್ಟು ಶ್ರೀಮಂತೆ, ಯಾವುದರಲ್ಲಿ ಶ್ರೀಮಂತೆ..??? ಹಣದಲ್ಲಿ ಮಾತ್ರ...ಪ್ರೀತಿಯಲ್ಲಿ ಅಪಾರ ಕೊರತೆ ಅವಳಿಗೆ....ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡವಳು..ತಂದೆ ಬೇರೊಬ್ಬಳನ್ನ ಮದುವೆಯಾದ ನಂತರವಂತೂ ಒಂಟಿತನ ಆವರಿಸಿ ಸೆರೆಮನೆಯಂತಾಗಿತ್ತು ಅವಳ ಏಕಾಂಗಿ ಬಾಳು...

    ಒಂಟಿತನದ ಕೊರಗನ್ನು ನಿವಾರಿಸಲು ಜಂಟಿಯಾದವನೇ ಶಶಿಧರ್....ಕಾಲೇಜು ಸಮಯದಲ್ಲಿ ಪರಿಚಯವಾಗಿ ಸದಾ ಮಂಕಾಗಿರುತ್ತಿದ್ದವಳನ್ನ ತನ್ನ ಸ್ನೇಹದ ಹಸ್ತ ಚಾಚಿ ಸ್ನೇಹದ ಪರಿಧಿಯೊಳಗೆ ಸೇರಿಸಿಕೊಂಡು ಖುಷಿಯಾಗಿರುವಂತೆ ಮಾಡುತ್ತಿದ್ದ..
  
   ಪ್ರೀತಿಯ ಕೊರತೆಯಲ್ಲಿ ಬೆಳೆದವಳಿಗೆ ಹುಣ್ಣಿಮೆಯ ಬೆಳಕಾಗಿದ್ದ ಶಶಿ.. ಅವನೊಡನಿದ್ದರೆ ನವೋಲ್ಲಾಸದ  ಚಿಲುಮೆಯಂತಿರುತ್ತಿದ್ದಳು ಗಾನವಿ..
  
    ಸ್ನೇಹ ಪ್ರೀತಿಯಾಗಿತ್ತು..ವಿಷಯ ತಿಳಿದ ಗಾನವಿ ತಂದೆ ಕೆಂಡಾಮಂಡಲವಾಗಿದ್ದರು...ಅನಾಥಾಶ್ರಮದಲ್ಲಿ ಬೆಳೆದು ಬದುಕು ಕಟ್ಟಿಕೊಂಡವನನ್ನ ಒಂದೇ ಮಾತಿನಲ್ಲಿ ತಳ್ಳಿಹಾಕಿದ್ದರು..

   ತಂದೆಯ ವಿರೋಧದ ನಡುವೆಯೂ, ಸ್ನೇಹಿತರ ಸಹಾಯದೊಂದಿಗೆ ಶಶಿಯೊಡನೆ ಮದುವೆಯಾಗಿದ್ದಳು ಗಾನವಿ..

   ಪುಟ್ಟ ಮನೆಯಲ್ಲಿ ಜೋಡಿಹಕ್ಕಿಗಳ ಹೊಸಬದುಕೊಂದು ಶುರುವಾಗಿತ್ತು..ಸಣ್ಣ ಕಂಪನಿ ಉದ್ಯೋಗಿಯಾದರೂ ಒಲವ ಸುಧೆಯಲ್ಲೇ ಮಿಂದೇಳುವಂತೆ ಮಾಡುತ್ತಿದ್ದ ಶಶಿಧರ್.... ವರ್ಷ ಕಳೆಯುವದರೊಳಗೆ ಪುಟ್ಟ ಕಂದಮ್ಮನು ಮಡಿಲು ತುಂಬಿ ಸಂತಸ ಹೇಳತೀರದು...

   ಜೀವನವೆಂದರೆ ಏಳುಬೀಳುಗಳ ಸಂತೆ...ಸುಖವೇ ಜೀವನ ಎಂದುಕೊಂಡರೆ ಯಾವುದೋ ಮಾರ್ಗದಿಂದ ಕಡಲ ಅಲೆಯಂತೆ ಅಪ್ಪಳಿಸಿರುತ್ತದೆ ನೋವು...ಹಾಲು ಜೇನಿನಂತೆ ಸಾಗುತ್ತಿದ್ದ ಬಾಳಿನಲ್ಲಿ ಬರಸಿಡಿಲು ಬಡಿದಿತ್ತು...ಆಗಾಗ ಹೊಟ್ಟೆನೋವಿನಿಂದ ಬಳಲುತ್ತಿದ್ದ ಗಾನವಿ ಒಂದೊಮ್ಮೆ ಡಾಕ್ಟರ್ ಬಳಿ ತೆರಳಿದಾಗಲೇ ಒಪ್ಪಿಕೊಳ್ಳಲಾಗದ ಸತ್ಯವೊಂದು ಕಣ್ಣೆದುರು ನಿಂತಿತ್ತು.. ಗರ್ಭದಲ್ಲಿ ಗಡ್ಡೆಯಂತಾಗಿ ಮೊದಮೊದಲು ಸಣ್ಣ ನೋವಿನಿಂದ ಬಳಲುತ್ತಿದ್ದವಳು ಅದೇ ನೋವು ವಿಪರೀತವಾಗಿ ಖಾಯಂ ಆಸ್ಪತ್ರೆ ಅತಿಥಿಯಾಗಿದ್ದಳು..

  ಹೃದಯದೊಡತಿ ನೋವು ಕಂಡು ಮಮ್ಮುಲ ಮರುಗಿದ್ದ ಶಶಿ...ಒಂದೆಡೆ ಅಸಾಧ್ಯ ನೋವಿನಿಂದ ನರಳುತ್ತಿದ್ದ ಮಡದಿ, ಇನ್ನೊಂದೆಡೆ ಒಂದು ವರ್ಷದ ಪುಟ್ಟ ಕಂದ.. ಮಡದಿಯನ್ನ ಆಸ್ಪತ್ರೆ ಸೇರಿಸಿದ ಮೇಲೆ ಮಗು ನೋಡಿಕೊಳ್ಳುವುದು ದುಸ್ತರವಾಗಿ ಪರದಾಡುತ್ತಿದ್ದವನಿಗೆ ಆಸರೆಯಾಗಿದ್ದು ,ಅವನಿಗೆ ಆಶ್ರಯವಾಗಿ ಬದುಕು ಕಟ್ಟಿಕೊಳ್ಳಲು ದಾರಿಯಾದ ಅದೇ 'ಚೈತನ್ಯ ಆಶ್ರಮ' .
  
    ಗಾನವಿ ಆರೋಗ್ಯ ಸುಧಾರಿಸಿದ ನಂತರ ಮಗು ಕರೆದುಕೊಂಡು ಹೋಗುವಂತೆ ತಿಳಿಸಿ, ಅಲ್ಲಿವರೆಗೂ ಮಗು ಜವಾಬ್ದಾರಿ ತಮ್ಮದೆಂದು ತಾಕೀತು ಮಾಡಿ ಮಗುವನ್ನ ಕರೆದೊಯ್ದಿದ್ದರು...ಕರುಳ ಕುಡಿಯನ್ನ ಅಗಲಿರಲಾರದೇ ಹೃದಯ ವಿಲವಿಲ ಒದ್ದಾಡಿದರೂ ಭಾರವಾದ ಹೃದಯದಿಂದಲೇ ಒಪ್ಪಿಗೆಯನ್ನಿತ್ತ.. ಪರಿಸ್ಥಿತಿ ಅವನನ್ನ ಅಸಹಾಯಕ ಸ್ಥಿತಿಯಲ್ಲಿ ತಂದು ನಿಲ್ಲಿಸಿತ್ತು...

   ಜೀವನದಲ್ಲಿ ಅಂದುಕೊಂಡಂತೆ ಏನು ನಡೆಯದು...!! ಬದುಕಿನ ಕುರಿತು ನಮ್ಮದೇ ಆದ ಸಾವಿರಾರು ಕನಸು ಹೆಣೆದು.. ಏನೇನೋ ಎಣಿಸಿ ಜೀವನ ಚಕ್ರ ಉರುಳಿಸುತ್ತಿದ್ದರೆ.... ಮೇಲೆ ಕುಳಿತ ಭಗವಂತ ನಮಗಿಂತ ಒಂದೆಜ್ಜೆ ಮುಂದೆ ಸರಿದು ತನ್ನ ಎಣಿಕೆಯಂತೆ ಜೀವನ ಚಕ್ರ ಉರುಳಿಸಿಬಿಡುವ... ನಮ್ಮ ಕೈ ಜಾರಿದ ಲಗಾಮಿನಂತೆ...!! ಜೀವನ ಎಂಬ ಕುದುರೆ ತನ್ನ ಓಟ ಆರಂಭಿಸಿ ಬಿಡುತ್ತದೆ ಭಗವಂತನ ಅಣತಿಯಂತೆ.. ನಾವಾಗ ನಿಲ್ಲಲಾಗದು.. ಅದರೊಂದಿಗೆ ಏಳುವುದೋ..!! ಬೀಳುವುದೋ..!! ಓಡಲೇಬೇಕು....ಮುಂದೊಮ್ಮೆ ಲಗಾಮು ನಮ್ಮ ಕೈಸೇರಬಹುದೇನೋ ಎಂಬ ಕುರುಡು ನಂಬಿಕೆಯಿಂದ...!!

   ಶಶಿಧರ್, ಗಾನವಿ ಜೀವನವೂ ಅಂತಹುದೇ ದಾರಿಯಲ್ಲಿ ಸಾಗುತ್ತಿತ್ತು...

   ಶಸ್ತ್ರಚಿಕಿತ್ಸೆ ಮಾಡಿದರೂ ಜೀವ ಉಳಿಯುವ ಖಾತರಿ ಇರದೇ ಕಂಗೆಡುತ್ತಿದ್ದವರಿಗೆ ಗಾನವಿ ಮನೋಬಲ ತುಸು ಧೈರ್ಯ ತುಂಬಿತ್ತು...ಏನಾದರಾಗಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವೆ ಎಂದಾಗ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆಯನ್ನಿತ್ತ ಶಶಿ...

   ಶಸ್ತ್ರಚಿಕಿತ್ಸೆಗೆ ತಗಲುವ ಹಣ ಹೊಂದಿಸುವುದೇ ದೊಡ್ಡ ಸವಾಲು...ಹಗಲಿರುಳು ದುಡಿದು ಹಣ ಹೊಂದಿಸುವಲ್ಲಿ ನಿರತನಾಗಿದ್ದ ಶಶಿಧರ್...

   ಆಸ್ಪತ್ರೆಯಲ್ಲಿ ಪ್ರತಿದಿನದ ಚಿಕಿತ್ಸೆಗೆಂದು ಒಂದು ಸುಸಜ್ಜಿತ ಕೋಣೆಯ ವ್ಯವಸ್ಥೆಯಾಗಿತ್ತು...ಆಸ್ಪತ್ರೆ ತುಸು ಸನಿಹವೇ ಕೆಲಸ ಮಾಡುವ ಕಂಪೆನಿಯಾದದ್ದರಿಂದ ಸ್ವಲ್ಪ ಸಮಯ ಸಿಕ್ಕರೂ ಮಡದಿಯನ್ನು ಕಾಣಲು ಓಡಿಬರುತ್ತಿದ್ದ ಶಶಿಧರ್..

    ಸಂಜೆ ಆರರ ಸಮಯ...ಕೆಲಸ ತುಸು ಕಡಿಮೆಯಂದೇನಿಸಿ ಮಡದಿಯನ್ನು ಕಾಣುವ ಅತೀವ ಹಂಬಲದಿಂದ ಆಸ್ಪತ್ರೆಯತ್ತ ನಡೆದಿದ್ದ ಶಶಿಧರ್..

   ಆಗ ತಾನೇ ನಿದ್ದೆಯಿಂದ ಎಚ್ಚರಗೊಂಡು ಕಣ್ಣುಜ್ಜುತ್ತ ಸುಸ್ತಿನಿಂದ ಏಳಲಾಗದೇ ಏಳುತ್ತಿದ್ದವಳನ್ನು ಓಡುವ ನಡಿಗೆಯಲ್ಲಿ ಬಂದು ಆಸರೆಯಾಗಿದ್ದ..
 
   ಆಯಾಸದಿಂದ ಬಳಲಿದ ತನ್ನೊಡತಿ ಮುಖ ಕಂಡವನ ಕಣ್ಣಿನಿಂದ ಫಳಕ್ಕನೇ ಕಂಬನಿಯೊಂದು ಉರುಳಿದಾಗ ಅವಳಿಗೆ ಕಾಣದಂತೆ ಕಂಬನಿ ತೊಡೆದು ತನ್ನೆದೆಗೂಡಿಗೆ ಒರಗಿಸಿಕೊಂಡು ಒಲವನ್ನೇ ಬೆರೆಸಿದ ಸಿಹಿಮುತ್ತೊಂದನ್ನು ನೆತ್ತಿಗೆ ಒತ್ತಿದ್ದ... ತನ್ನವನ ಬೆಚ್ಚನೆಯ ಮುತ್ತಿಗೆ ನೋವಿನಲ್ಲೂ ಸ್ವಲ್ಪವೇ ತುಟಿಯರಳಿಸಿದಳು.

   ತನ್ನ ನೋವನ್ನೆಲ್ಲ ತನ್ನಲ್ಲೇ ನುಂಗಿಕೊಂಡವಳು ತನ್ನವನ ಒಲವನ್ನು ಕೊಂಚವೂ ಅತ್ತಿತ್ತ ಸರಿಯದಂತೆ ತನ್ನಲ್ಲೇ ಸೇರಿಸಿಕೊಂಡು ಪ್ರೀತಿಯಿಂದ ಅವನತ್ತ ನಗುಮುಖ ಹೊತ್ತು ಹೊರಳಿದ್ದಳು..

  ತನ್ನವಳ ಕಂಗಳಲ್ಲಿ ನೋವಲ್ಲೂ ಹೊಮ್ಮುತ್ತಿದ್ದ ಒಲವಿನ ಪರಿಗೆ ಸೋತವನು ಕಂಗಳಿಗೆ ಭರವಸೆಯ ಮುತ್ತೊಂದನಿತ್ತಿದ್ದ..

   ಅಪ್ಯಾಯಮಾನವಾಗಿ ತನ್ನವನ ಕೈಗಳನ್ನ ತನ್ನ ಕೈಗಳೆರಡರಲ್ಲಿ ಬೆಸೆದವಳು ರೀ....ಎಂದಿದ್ದಳು ಒಲವನ್ನೇ ಬೆರೆಸಿ..

   ಏನಮ್ಮಾ ಬಂಗಾರಿ...?? ಕಂಗಳಲ್ಲಿ ದೃಷ್ಟಿನೆಟ್ಟು  ಪ್ರಶ್ನಿಸಿದ್ದನವನು..

   ಆಪರೇಷನ್ ಮಾಡಿಸಿಕೊಳ್ಳುವೆ ಎಂದೇನೋ ಹೇಳಿದೆ...ಆದರೆ ಅದಕ್ಕಾಗಿ ನೀವು ದುಡ್ಡು ಹೊಂದಿಸಲು ಪಡುತ್ತಿರುವ ಪಾಡು ನನ್ನಿಂದ ನೋಡಲಾಗುತ್ತಿಲ್ಲ.. ಆಪರೇಷನ್ ಮಾಡಿಸಿದರೂ ಜೀವ ಉಳಿಯುವ ಯಾವ ಭರವಸೆಯೂ ಇಲ್ಲ...ಈ ಆಸ್ಪತ್ರೆ ಸಹವಾಸ ಸಾಕು ರೀ...ನಮ್ಮ ಪುಟ್ಟ ಪ್ರೀತಿಯ ಅರಮನೆಗೆ ಕರೆದುಕೊಂಡು ಹೋಗಿ.. ಇರುವಷ್ಟು ದಿನ ನಿಮ್ಮ ಪ್ರೀತಿ ಅನುಭವಿಸುತ್ತಾ,ನಮ್ಮ ಪುಟ್ಟ ಕಂದಮ್ಮನೋಡನೆ ಜೀವಿಸಿಬಿಡುವೆ...ನಿಮ್ಮ ಮಡಿಲಲ್ಲಿಯೇ ನನ್ನ ಪ್ರಾಣ ಹೋದರೂ... 

    ಮಾತು ಮುಂದುವರೆಯದಂತೆ ಅವಳ ತುಟಿಗಳ ಮೇಲೆ ಅವನ ಕೈಯನ್ನಿಟ್ಟಿದ್ದ...
  
   ಹಾಗೆಲ್ಲ ಮಾತನಾಡಬೇಡವೇ ಹುಡುಗಿ...ಬರಡಾಗಿದ್ದ ಬದುಕಿಗೆ ಪ್ರೀತಿಯ ಹೊನಲನ್ನೇ ಹೊತ್ತು ತಂದವಳು ನೀನು...ಈ ದೇಹಕ್ಕೆ ಉಸಿರೇ ನೀನು..ನನ್ನ ಪ್ರಾಣವನ್ನ ಒತ್ತೆಯಿಟ್ಟಾದರೂ ನಿನ್ನನ್ನು ಉಳಿಸಿಕೊಳ್ಳುವೆ...ನೀನಿರದ ಜೀವನ ಊಹಿಸಲು ಅಶಕ್ತ ನಾನು... ಎಂದವನು ತಾನಿರುವುದು ಆಸ್ಪತ್ರೆ ಎಂಬುದನ್ನು ಮರೆತು ಬಿಗಿಯಪ್ಪುಗೆಯಲ್ಲಿ ಬಂಧಿಸಿದ್ದ ತನ್ನವಳನ್ನ...ಇಬ್ಬರ ಕಣ್ಣಂಚು ಒದ್ದೆ.. ಕಾಣದ ಪ್ರೀತಿಯ ಬಲೆಯಲ್ಲಿ ಸಿಲುಕಿ ಆ ಕ್ಷಣ ನೋವು ಮರೆಯಾದರೂ ಇಬ್ಬರ ಮನಸು ನೋವಿನ ಸೆಲೆಯಲ್ಲಿ ಸಿಕ್ಕಿ ಒದ್ದಾಡುವುದು ಇಬ್ಬರಿಗೂ ಗೊತ್ತು.


    ಬಾಗಿಲ ಬಳಿಯಿದ್ದ ಡಾಕ್ಟರ್ ಕಣ್ಣಂಚು ಒದ್ದೆ ಇವರ ಪ್ರೀತಿಯ ಪರಿ ಕಂಡು...
  
ತನ್ನವಳನ್ನ ತುಸು ಜರುಗಿಸಿ ಮೊಗವನ್ನ ಬೊಗಸೆಯಲ್ಲಿಡಿದು, ತುಂಬಾ ಆಯಾಸ ಇದೆಯೇನೋ ಬಂಗಾರ ಎಂದ. ತನ್ನೊಳಗೆ ಎಷ್ಟೇ ನೋವಿದ್ದರೂ ತೋರಿಸಲಾರ ಅವಳಿಗೆ.

   ಗಂಟಲಲ್ಲಿಯೇ ಹುದುಗಿಸಿಕೊಂಡಿದ್ದ ನೋವಿಗೆ ಮಾತನಾಡಲು ಧ್ವನಿ ಏಕೋ ಸಹಕರಿಸಲೇ ಇಲ್ಲ ಅವಳಿಗೆ..ಇಲ್ಲವೆಂಬಂತೆ ಅಡ್ಡಡ್ಡ ತಲೆಯಲ್ಲಾಡಿಸಿದ್ದಳಷ್ಟೇ..

   ಅಷ್ಟರಲ್ಲಿಯೇ ಒಳಬಂದ ಡಾಕ್ಟರನನ್ನು ಕಂಡು ತುಸು ದೂರ ಸರಿದು ನಿಂತ ಶಶಿಧರ್.... ಗಾನವಿಯ ಚೆಕಪ್ ಮಾಡಿ ಶಶಿಧರನತ್ತ ಹೊರಳಿದ ಡಾಕ್ಟರ್, ಮಾರನೇ ದಿನವೇ ಆಪರೇಷನ್ ಮಾಡುವುದಾಗಿ ತಿಳಿಸಿದಾಗ ಒಂದರೆಕ್ಷಣ ಹೃದಯ ಬಡಿತ ಸ್ತಬ್ಧವಾದ ಅನುಭವ ಇಬ್ಬರಿಗೂ..

   ಬೇಗ ಚೇತರಿಸಿಕೊಂಡ ಶಶಿಧರ್ , ಸರಿ ಡಾಕ್ಟರ್ ,ನೀವೆಲ್ಲಾ ತಯಾರಿ ಮಾಡಿಕೊಳ್ಳಿ ನಾಳೆ ಸಂಜೆ ಅಷ್ಟೋತ್ತಿಗೆ ಉಳಿದ ದುಡ್ದನ್ನೆಲ್ಲ ಕಟ್ಟಿಬಿಡ್ತೀನಿ...ಅವನ ಮಾತಿಗೆ ಡಾಕ್ಟರ್ ಸಮ್ಮತಿ ಎಂಬಂತೆ ಮೃದುವಾಗಿ ಕೈ ಅದುಮಿ ಕಣ್ಣಲ್ಲಿಯೇ ಧೈರ್ಯ ಹೇಳಿ ಅಲ್ಲಿಂದ ಹೊರಹೋದರು...

    ಶಿಲೆಯಂತೆ ಕುಳಿತವಳ ಭುಜದ ಮೇಲೆ ಕೈಯಿಟ್ಟಿದ್ದೆ ಅವನನ್ನ ತಬ್ಬಿ ಹಿಡಿದವಳ ಅಳು ಕಲ್ಲು ಕರಗುವಂತಿತ್ತು..ಶಶಿಧರ್ ಜಂಘಾಬಲವೇ ಉಡುಗಿದಂತಾಗಿ ಕುಸಿದು ಬೀಳುವ ಹಂತ ತಲುಪಿಬಿಟ್ಟಿದ್ದ..

     ತನ್ನವಳ ಕಣ್ಣೀರು, ಮುಂದೇನಾಗುವುದೋ ಎಂಬ ಆತಂಕದ ಮಧ್ಯ ಇಷ್ಟೂ ದಿನ ತಡೆಹಿಡಿದಿದ್ದ ಕಂಬನಿ ಎಲ್ಲ ಒಮ್ಮೆಲೇ ಆಣೆಕಟ್ಟು ಒಡೆದಂತೆ ಧುಮ್ಮಿಕ್ಕಿ ಹರಿದಿತ್ತು ಅವನ ಕಂಗಳಿಂದ.

  ನಿನ್ನೆ ಹೇಗೋ ಕಳೆಯಿತು...ಇಂದು ನೋವೇ ಸಂಗಾತಿ.. ನಾಳೆ ಇನ್ನೇನೋ..!!! ಇಷ್ಟೇನಾ ಜೀವನ.??.. ಬದುಕಿನುದ್ದಕ್ಕೂ ಎರಡು ದೇಹ ಒಂದೇ ಪ್ರಾಣ ಎಂಬಂತೆ ಬದುಕೋಣ ಎಂಬ ಸಾವಿರ ಕನಸು ಕಟ್ಟಿಕೊಂಡ ಜೀವಗಳೆರಡು ಕಣ್ಣೀರಿನ ಊಟ ಮಾಡುವಂತಾಗಿದೆ ವಿಧಿಯ ಆಟಕ್ಕೆ ಬಲಿಯಾಗಿ..

   ತನ್ನವನನಿಂದ ತುಸು ಜರುಗಿ, ರೀ ನಂಗೊಂದು ಮಾತು ಕೊಡಿ ಎಂದು ಬಲಗೈ ಮುಂದೆ ಚಾಚಿದ್ದಳು ಗಾನವಿ.

   ನಿಡಿದಾದ ಉಸಿರೆಳೆದು ಹೊರದಬ್ಬಿದ ಶಶಿಧರ ಏನು ಹೇಳಮ್ಮ ಬಂಗಾರ..?? ಎಂದಿದ್ದ ಸಪ್ಪೆಯಾದ ಸ್ವರದಲ್ಲಿ..

   ನಾಳೆ ಆಪರೇಷನಲ್ಲಿ ನಾನು ಏನಾದ್ರು..  ತನ್ನವಳ ಮಾತು ಮುಂದುವರೆಯದಂತೆ ಬಾಯಿಗೆ ಕೈ ಅಡ್ಡ ಇಟ್ಟವನು ಬೇಡವೆಂಬಂತೆ ತಲೆಯಲ್ಲಾಡಿಸಿ, ಬೇಡವೋ ಬಂಗಾರ ನಾಳೆ ದಿನದ ಭಯದ ನೆರಳಲ್ಲಿ ಇಂದಿನ ಸಂತಸ ಹಾಳು ಮಾಡಿಕೊಳ್ಳೋದು ಬೇಡ ನಾಳೆ ಹೇಗೋ, ನಾಡಿದ್ದು ಏನೋ ಬಲ್ಲವರಾರು..?? ಇಂದಿನ ಈ ಕ್ಷಣ ಮಾತ್ರ ನಮ್ಮದು...ಖುಷಿಯಿಂದ ಅನುಭವಿಸೋಣ.. ನಾನು ಹೋಗಿ ಡಾಕ್ಟರ್ ಪರ್ಮಿಶನ್ ತಗೊಂಡ ಬರ್ತಿನಿ ನಮ್ಮ ಪುಟ್ಟ ಪ್ರೀತಿಯ ಮಹಲಿನಲ್ಲಿ ಇಂದಿನ ರಾತ್ರಿ ಕಳೆಯೋಣ.. ಸರೀನಾ ಮುದ್ದಮ್ಮ...ಎಂದಾಗ ಪುಟ್ಟ ಹುಡುಗಿಯಂತೆ ಸಂಭ್ರಮಿಸಿದ್ದಳು ಗಾನವಿ...

   ಡಾಕ್ಟರ್ ಸಮ್ಮತಿ ಪಡೆದು ನಗುವಿನರಮನೆಗೆ ಕಾಲಿಟ್ಟಾಗ ಕಾಣದ ನೆಮ್ಮದಿ ಇಬ್ಬರನ್ನು ಆವರಿಸಿ ಮದುವೆಯಾದ ಹೊಸದಿನದ ನೆನಪುಗಳೆಲ್ಲ ಮರುಕಳಿಸಿ ಮನ ಆನಂದದ ಗೂಡಾಗಿತ್ತು...

    ಬಾಲ್ಕನಿಯಲ್ಲಿರುವ ತೂಗುಮಂಚದ ಮೇಲೆ ಕುಳಿತು ತನ್ನವಳಿಗೆ ಮೈ ತುಂಬ ಶಾಲು ಹೊದಿಸಿ ತನ್ನ ಮಡಿಲಲ್ಲಿ ಮಲಗಿಸಿಕೊಂಡಾಗ ಪುಟ್ಟ ಮಗುವಾಗಿದ್ದಳು ಗಾನವಿ. ಮಡಿಲಲ್ಲಿ ಮಲಗಿದ್ದ ಅವಳ ತಲೆ ನೆರೆವೇರಿಸುತ್ತ ಬಾನಿನಲ್ಲಿ ಇರುವ ಚಂದ್ರನ ಕಡೆ ಮುಖ ಮಾಡಿದ. ಬಾನಲ್ಲಿ ಹುಣ್ಣಿಮೆ ಚಂದ್ರನ ಹೊಳಪು ಕಮ್ಮಿಯಾದಂತೆ ಭಾಸ ಇವರ ನೋವಿಗೆ. 

   ಜೀವನದ ಪ್ರತಿ ಸಂತಸದ ಕ್ಷಣಗಳನ್ನೆಲ್ಲ ಮೆಲುಕು ಹಾಕುತ್ತಲೇ ನಿದ್ದೆಗೆ ಜಾರಿದ್ದಳು..

   ಚಂದದರಮನೆ ಒಡತಿ ನೀನು..
   ಬರುಡಾಗಿದ್ದ ಬಾಳಿಗೆ ಸಿಹಿಸಿಂಚನವಾದವಳು ನೀನು..

  ಮುದ್ದು ನಿನ್ನನ್ನಗಲಿ ಹೇಗೆ ಬದುಕಲಿ ನಾನು...!!!!!

     ಮಡಿಲಲ್ಲಿ ಮಲಗಿ ತನ್ನವನ ಕೈಯನ್ನು ಪುಟ್ಟ ಮಗುವಂತೆ ಹಿಡಿದು ನಿದ್ರಿಸುತ್ತಿದ್ದವಳನ್ನ ಕಂಡವನ ಹೃದಯ ದ್ರವಿಸುತ್ತಿತ್ತು...ಮನಸ್ಸು ಚೀರಿ ಚೀರಿ ಅಳುತ್ತಿತ್ತು..ಕಂಬನಿ ಸದ್ದಿಲ್ಲದೆ ಕಂಗಳ ದಾಟಿ ಕೆನ್ನೆ ಸೋಕಿ ಅವನುಟ್ಟ ಆಕಾಶ ನೀಲಿ ಬಣ್ಣದ ಅಂಗಿಯಲ್ಲಿ ಇಂಗಿಹೋಗುತ್ತಿತ್ತು...

   ನಿನ್ನಗಲಿ ಹೇಗೆ ಬದುಕಲಿ ನಾನು...!!!! ಹೇಗೆ ಬದುಕಲಿ...!!! ಹೃದಯ ಒಡೆದು ಹೋಗುವಂತೆ ಕಿರುಚಿದ್ದ.....ಮನಸ್ಸೊಳಗೆ..!!!! ಹೊರಗೆ ಮಾತ್ರ ನಿಶ್ಯಬ್ದ...

    ಅದ್ಯಾವ ಘಳಿಗೆಯಲ್ಲಿ ನಿದ್ದೆಯಾವರಿಸಿತೋ..!!! ಅವನಿಗೂ ಅರಿವಿದ್ದಂತಿಲ್ಲ...ತಡರಾತ್ರಿವರೆಗೂ ಕಣ್ತೆರೆದೆ ಕೂತಿದ್ದನವನು...

   ಮಾರನೇ ದಿನದ ಮುಂಜಾವು ಕಣ್ತೆರೆದೆವಳ ಗಮನ ತನ್ನೊಡೆಯನತ್ತ ಸರಿದಿತ್ತು... ಮೊಗ ತುಸು ಕಳಾಹೀನವಾಗಿದ್ದರೂ ಅದೇನೋ ಹೊಸ ಹೊಳಪು ಕಂಡಿತ್ತವಳಿಗೆ ತನ್ನವನ ಮೊಗದಲ್ಲಿ...ಚದುರಿದ ದಟ್ಟ ಗುಂಗುರು ಕೂದಲು, ಅಸ್ತವ್ಯಸ್ತವಾದ ಅಂಗಿಯ ಗುಂಡಿ ತೆರೆದು ಎದೆ ಮೇಲೆ ಸೊಂಪಾಗಿ ಬೆಳೆದ ಕೂದಲು ಅವನಿಗೊಂದು ಚೆಲುವು ತಂದು ಕೊಟ್ಟಿತ್ತು...ಐ ಲವ್ ಯು ಶಶಿ ಎಂದು ನುಡಿಯುತ್ತಾ ಮೃದುವಾಗಿ ಕೂದಲಲ್ಲಿ ಕೈಯಾಡಿಸಿದ್ದಳಷ್ಟೇ....

     ತನ್ನವಳ ಸ್ಪರ್ಶ ಅವನನ್ನ ಕಣ್ತೆರೆಯುವಂತೆ ಮಾಡಿತ್ತು..ಅತ್ತು ಅತ್ತು ಕಂಗಳೆಲ್ಲ ಸೋತು ಹೋಗಿದ್ದವೇನೋ..!! ಕಣ್ತೆರೆಯಲು ಪ್ರಯಾಸಪಟ್ಟನವನು..

   ಪ್ರಯಾಸದಿಂದಲೇ ಕಣ್ತೆರೆದವನನ್ನ ಹೃದಯದೊಡತಿ ಚಂದದ ಮುಗುಳ್ನುಗು ಸೂಸುತ್ತಿದ್ದ ಅಂದದ ಮೊಗ ಸೆಳೆದಿತ್ತು...ನೋವಲ್ಲೂ ಅದೇನೋ ತಂಪು ತಂಪು ಅವನ ಮನವೀಗ....

    ಆಗ್ಲೇ ಎದ್ದುಬಿಟ್ಯಾ ಮುದ್ದು...??? ಎಂದಿದ್ದನವನು ಅವಳ ಮುಂಗುರುಳ ಸರಿಸುತ್ತ....

    ಹೂ ರೀ..... ಆಗ್ಲೇ ಎಚ್ಚರವಾಯ್ತು...ನನ್ನದೊಂದು ಚಿಕ್ಕ ಆಸೆ...ಎಂದಿದ್ದಳು ಮುದ್ದಾಗಿ...

    ಹೇಳು ಬಂಗಾರಿ...ಆಸೆ ಚಿಕ್ಕದೋ, ದೊಡ್ಡದೋ...ನನ್ನಿಂದಾಗುವುದಾದರೆ ಈ ಜೀವವನ್ನಾದರೂ ಪಣಕ್ಕೀಡುವೆ...ಎಂದಿದ್ದ.

   ಆಪರೇಷನ್ ತೆರಳುವ ಮೊದಲು ನನ್ನೊಡಲ ಕುಡಿಯನ್ನೊಮ್ಮೆ ಕಣ್ತುಂಬಿಕೊಳ್ಳುವ ತವಕ...ಎದೆಗಪ್ಪಿ ಮುದ್ದಾಡುವ ಬಯಕೆ ಪುಟಿಪುಟಿದೇಳುತ್ತಿದೆ.. ನನ್ನ ಮಗುವನ್ನ ನನ್ನ ಮಡಿಲಲ್ಲಿ ಮಲಗಿಸಿಕೊಳ್ಳಲು ಅವಕಾಶವನ್ನೀಯುವಿರಾ...????..ಹಾಲುಡಿಸಿದ ಎದೆ ಮೇಲೆ ಕೈಯನ್ನಿಟ್ಟು, ಭಾರವಾದ ಧ್ವನಿಯಲ್ಲಿ ನುಡಿದಿದ್ದಳು ಮುಖ ಚಿಕ್ಕದಾಗಿಸಿ ..

   ಯಾರಾದ್ರೂ ನನ್ನ ಕತ್ತು ಹಿಸುಕಿ ಸಾಯಿಸಬಾರದೇ...???..ವಿಷದೂಟವನ್ನಾದರೂ ಬಡಿಸಬಾರದೇ..?? ಅಯ್ಯೋ ಆಗ್ತಿಲ್ಲ ಕಣೇ..ನಿನ್ನೊಡಲ ಕಂದನನ್ನಪ್ಪಿಕೊಳ್ಳಲು ಬೇರೆಯವರ ಅಪ್ಪಣೆ ಪಡೆಯಬೇಕೆ...??. ನಮ್ಮ ಮಗುವಿನ ತೊದಲು ನುಡಿಯನ್ನಾಲಿಸುತ್ತಾ, ತಪ್ಪೆಜ್ಜೆ ಇಡುವದ ನೋಡುತ್ತಾ , ಭವಿಷ್ಯದ ಬದುಕಿನ ಸಾವಿರಾರು ಕನಸು ಹೆಣೆಯುತ್ತಾ...ಏನೇನೋ..!! ಇನ್ನು ಏನೇನೋ...!!! ಅದೆಷ್ಟೋ ಕನಸು ಕಟ್ಟಿದ್ದೆವೆಲ್ಲ....ಅದೆಲ್ಲಾ ಇಂದು ನುಚ್ಚು ನೂರು...

  ಮೂಕರೋಧನೆ ಅನುಭವಿಸುತ್ತಿದ್ದವನ ಕಿರಚಾಟ, ಅರಚಾಟ ಯಾರಿಗೂ ಕಾಣಲೇ ಇಲ್ಲ....ಕಣ್ಣೀರೆಲ್ಲ ಹೆಪ್ಪುಗಟ್ಟಿಬಿಟ್ಟಿತ್ತೇನೋ...!! ಒಂದೇ ಒಂದು ಕಂಬನಿಯೂ ಕಂಗಳ ದಾಟಲಿಲ್ಲ...ಶೂನ್ಯದತ್ತ ದೃಷ್ಟಿ ನೆಟ್ಟು ಕೂತವನ ಮುಂದೆ ಕೈಯಾಡಿಸಿ..ರೀ.... ಏನಾಯ್ತು...?? ನಾನು ಮಗು ನೋಡುವುದು ಬೇಡವಾ..?? ನಿಮಗಿಷ್ಟವಾಗದಿದ್ದರೆ ಬೇಡ ರೀ.. ಬಲವಂತ ಇಲ್ಲ.. ಏನೋ ಆಪರೇಷನ್ ಮುಗಿದು ಜೀವಂತ ಬದುಕುಳಿಯುವೇನೋ..!! ಇಲ್ಲವೋ..!! ಕೊನೆಗೊಂದು ಬಾರಿ ನನ್ನೊಡಲ ಕಂದನನ್ನ ನೋಡಲೇಬೇಕೆಂಬ ಹುಚ್ಚಾಸೆ ಈ ಮನಕ್ಕೆ...ಬಾಯ್ತಪ್ಪಿ ಕೇಳಿಬಿಟ್ಟೆ..

   ನಿರಾಸೆ ನಗು ನಕ್ಕಿ,ಎದ್ದು ನಿಂತವಳು ಬನ್ನಿ ಆಸ್ಪತ್ರೆಗೆ ಹೋಗೋಣ...ಎಂದು ಮರುತ್ತರಕ್ಕೆ ಕಾಯದೇ ಬಚ್ಚಲಿನತ್ತ ನಡೆದುಬಿಟ್ಟಿದ್ದಳು..

   ಅವಳತ್ತ ಹೋಗಿದ್ದೆ ಹಣೆ ಹಣೆ ಜಜ್ಜಿಕೊಂಡು ಕಂಬನಿಗೈದಿದ್ದ ಶಶಿಧರ್...

   ಅವಳು ಸ್ನಾನ ಮುಗಿಸಿ ಹೊರಬರುವ ವೇಳೆಗೆ ಕರೆಗಂಟೆ ಸದ್ದಾಗಿ ಒದ್ದೆಯಾದ ತಲೆಗೂದಲು ಟವೆಲಿನಿಂದ ಒರೆಸುತ್ತಲೇ ಬಾಗಿಲು ತೆರೆದವಳ ಒಡಲು ಖುಷಿಯಿಂದ ಕುಣಿದಾಡಿಬಿಟ್ಟಿತ್ತು...ತನ್ನ ಕರುಳು ಹಂಚಿಕೊಂಡು ಹುಟ್ಟಿದ ಕಂದಮ್ಮ ಬಾಗಿಲಲ್ಲಿ ನಿಂತವಳ ಕೈಯಲ್ಲಿ....

    ಕೈಯಿಂದ ಕಸಿದುಕೊಂಡಳೆನೋ ಎಂಬಂತಿತ್ತು ಅವಳ ನಡೆ...!!! ಮಗುವನ್ನ ಬಾಚಿ ಬರಸೆಳೆದು ಎದೆಗವಚಿ ಹಿಡಿದು ಮುದ್ದಾಡಿದ್ದಳು...ಮುತ್ತಿನ ಮಳೆಯೇ ಸುರಿದಂತಿತ್ತು....ಅಮ್ಮನ ಹಿತ ಸ್ಪರ್ಶದಿಂದ ದೂರವಿದ್ದು  ಮಂಕಾದಂತಾಗಿದ್ದ ಕಂದಮ್ಮ ಕಿಲಕಿಲನೆ ನಕ್ಕು ಸೀರೆಯನ್ನು ತನ್ನ ಪುಟ್ಟ ಕೈಗಳಲ್ಲಿ ಹಿಡಿದು ಇನ್ನಷ್ಟು ಹತ್ತಿರವಾಗಿತ್ತು  ಅಮ್ಮನಿಗೆ...

   ಅಮ್ಮನ ಮಡಿಲಿಗಿಂತ ಮತ್ತೊಂದು ಸ್ವರ್ಗ ಉಂಟೆ...!!!!
ಹಿತ ಭಾವ, ಸುರಕ್ಷತೆಯ ಕವಚದಂತ ಮಡಿಲು...ತಾಯಿ ಮಕ್ಕಳ ಸಂಬಂಧ ಎಂಬುದು ಬಿಡಿಸಲಾರದ ಕರುಳ ಬಳ್ಳಿಯ ನಂಟು....

   ಬಾಗಿಲಲ್ಲಿದ್ದವಳು ಅನಾಥಾಶ್ರಮದವಳು..ಇಂದು ಆಪರೇಶನ್ ಎಂದು ತಿಳಿದು ಮಗುವನ್ನ ಅವರೇ ಮನೆಯವರೆಗೂ ಕರೆತಂದಿದ್ದರು...ಮಗು ತಲುಪಿಸಿದವಳೇ ಅಲ್ಲಿಂದ ನಿರ್ಗಮಿಸಿದ್ದಳವಳು..

   ಇತ್ತ ಅತ್ತು ಅತ್ತು ಮಡದಿ ನೆನಪಾಗಿ ಸೋತ ಹೆಜ್ಜೆ ಇಡುತ್ತಲೇ ಹೊರಬಂದ ಶಶಿಧರನಿಗೆ ಮಗುವನ್ನ ಮುದ್ದಾಡುತ್ತಿರುವ ದೃಶ್ಯ ಕಂಡು ಹೃದಯ ತುಂಬಿ ಬಂದಿತ್ತು...ಖುಷಿಗೂ ಆಗಮಿಸಿದ್ದು ಕಣ್ಣೀರೆ..!! ಕಣ್ಣೀರು ಎಲ್ಲದಕ್ಕೂ ಸಂಗಾತಿಯೇನೋ...???

   ನಗುವಿಗೆ ಎಷ್ಟು ಆಯಸ್ಸು...??.. ಮತ್ತೊಂದು ಕಣ್ಣೀರು ಆಗಮನವಾಗುವವರೆಗೆ...???..ಹೌದಲ್ವಾ..!! ಅಳು ಬಂದರೆ ನಗು ತಂತಾನೇ ನಿರ್ಗಮನ..
 
  ನಗು, ಅಳು ಒಟ್ಟೊಟ್ಟಿಗೆ ಎಂದು ಬರದೇನೋ..??.

ಖುಷಿಗೂ ಕಣ್ಣೀರು ಬರುವುದಂತೆ ಒಮ್ಮೊಮ್ಮೆ...ಖುಷಿಗೂ ಕಣ್ಣೀರು ಬರುವದಂತೆ ಒಮ್ಮೊಮ್ಮೆ..ಅದ ಪಡೆದವನೇ ಭಾಗ್ಯವಂತನಂತೆ ಈ ಭುವಿಯಲ್ಲಿ...!!!

   ಮುಂದೆ ಒದಗಬಹುದಾದ ಸಂಕಷ್ಟ ಇನ್ನಷ್ಟು ಕುಸಿಯುವಂತೆ ಮಾಡಿ ಕುಸಿದು ಕುಳಿತುಬಿಟ್ಟಿದ್ದ..

   ರೀ, ರೀ... ನ...ಮ್ಮ ಪುಟ್ಟು....ನ...ಮ್ಮ ಪುಟ್ಟ....

    ಮಗುವಂತೆ ತೊದಲುತ್ತಲೇ ಗಂಡನ ಮುಂದೋಡಿ ಬಂದವಳು... ಮಗುವನ್ನ ಮುದ್ದಿಸುತ್ತಲೇ ಇದ್ದಳು..

   ಬಾಯಿಯಿಂದ ಒಂದಕ್ಷರ ಹೊರಬರಲು ಲೆಕ್ಕಾಚಾರ ಹಾಕುತ್ತಿದೆ ಅವನ ಧ್ವನಿಪೆಟ್ಟಿಗೆ..

   ತುಸು ಸಮಯ ಕಳೆದು ,ಮಡದಿ ಮಗುವಿನೊಟ್ಟಿಗೆ ಬಾಚಿ ತಬ್ಬಿದವನು ಮನಸೋ ಇಚ್ಛೆ ಅತ್ತುಬಿಟ್ಟಿದ್ದ... ಹೆತ್ತವರೊಂದಿಗೆ ಮಗುವಿನ ಕಣ್ಣಂಚು ಒದ್ದೆ...ಎಷ್ಟಾದರೂ  ಒಡಲ ಕುಡಿಯಲ್ಲವೇ...!! ಅವರ ನೋವು ಹಸುಗೂಸಿಗೂ ತಲುಪಿತೇನೋ..!!!

   ಆ ದೃಶ್ಯ ಕಂಡರೆ ಕಲ್ಲು ಕರಗುತ್ತಿತ್ತೇನೋ...!!! ಹೊರಗೆ ಅಷ್ಟೋತ್ತು ಇರದ ಯಮಭಯಂಕರನಂತ ಸಿಡಿಲು ಗುಡುಗು ಒಡಗೂಡಿದ ಮಳೆ ಸುರಿಯುತ್ತಿತ್ತು...ಇವರ ಅಳುವಿಗೆ ಮುಗಿಲು ಕಣ್ಣೀರು ಸುರಿಸುತ್ತಿತ್ತೇನೋ..!! ಎಂಬಂತೆ ಭಾಸವಾಗುತ್ತಿತ್ತು...

   ಅಳುತ್ತಾ ಕುಳಿತವರನ್ನ ಎಚ್ಚರಿಸಿದ್ದು ಭಯಂಕರ ಸಿಡಿಲು..

    ಬೇಗ ಚೇತರಿಸಿಕೊಂಡವಳು ಗಾನವಿಯೇ...ಅಳುವಿನ ಕುರುಹು ಸಿಗಲಾರದೇನೋ ಎಂಬಂತೆ ಮಗುವನ್ನ ಎದೆಗವಚಿಯೇ ಹಿಡಿದು ಎದ್ದು ಬಚ್ಚಲಿಗೆ ತೆರಳಿ ಮುಖ ತೊಳೆದು ಗಂಡನನ್ನ ಎಬ್ಬಿಸಿ ಸ್ನಾನ ಮಾಡುವಂತೆ ತಿಳಿಸಿ ತಾನು ಪುನಃ ಮಗುವನ್ನ ಮುದ್ದಿಸಲು ಶುರುವಿಟ್ಟಿದ್ದಳು.

   ನೋವಲ್ಲಿಯೂ ನಗುತ್ತಿದ್ದ ಮಡದಿಯ ಮುಖವನ್ನೇ ಕಣ್ತುಂಬಿಕೊಳ್ಳುತ್ತಿದ್ದ....ಅವಳಿಷ್ಟದ ಅವರೆಕಾಳು ಉಪ್ಪಿಟ್ಟನ್ನು ಶಶಿಧರನೇ ಮಾಡಿ ಒಬ್ಬರಿಗೊಬ್ಬರು ಕೈತುತ್ತು ತಿನ್ನಿಸಿದ್ದರು..ಇದೆ ಖುಷಿಯ ಕೊನೆಯ ದಿನವೇನೋ ಎಂಬಂತಿತ್ತು...ಇವರ ಸಂತೋಷ ಕಂಡು ವಿಧಿ ಗಹಗಹಿಸಿ ನಗುತ್ತಿತ್ತು...

   ಮನೆಯಿಂದ ಹೊರಟವರು ತಲುಪಿದ್ದು ಚೈತನ್ಯ ಆಶ್ರಮ....ಮಗುವನ್ನ ಅಲ್ಲಿದ್ದವರ ಕೈಗೊಪ್ಪಿಸುವಾಗ ನಿನ್ನನ್ನಗಲಿ ನಾನು ಹೋಗಲಾರೆನಮ್ಮ ಎಂಬಂತೆ ಅಳುತ್ತಲೇ ಪುಟ್ಟ ಕೈಗಳಲ್ಲಿ ಅಮ್ಮನ ಸೀರೆಯನ್ನ ಬಿಗಿಯಾಗಿ ಬಂಧಿಸಿಬಿಟ್ಟಿತ್ತು ಪುಟ್ಟ ಕಂದ..

   ಮಗುವಿನ ಅಳು ಕಂಡು ತಾಯಿಕರುಳು ಯಾರೋ ಬಲವಂತವಾಗಿ ಕಿತ್ತೆಸೆದಂತ ಭಾವ...ಮಗುವನ್ನಪ್ಪಿ ಮತ್ತೊಮ್ಮೆ ಕಂಬನಿಗೈದಿತ್ತು ಮಾತೃಹೃದಯ...

  ಶಶಿಧರನಿಗೆ ಅಂತೂ ಕಣ್ಣೀರೆ ಬತ್ತಿ ಹೋಗಿತ್ತೇನೋ...!!! ನಿಲ್ಲಲು ಅಶಕ್ತನೆಂಬಂತೆ ಬಾಗಿಲಿಗೆ ಒರಗಿಬಿಟ್ಟಿದ್ದ... ಆಶ್ರಮದವರೆಲ್ಲ ಬಾಯಿಗೆ ಕೈ ಅಡ್ಡಯಿಟ್ಟು ಕಂಬನಿ ಸುರಿಸುತ್ತಲೇ ಇದ್ದರು..

  ಪುಟ್ಟ, ಬೇಗ ಬಂದುಬಿಡ್ತಿನೋ...ನನ್ನ ಬಂಗಾರ ಅಲ್ವ...ಈ ಅಮ್ಮನ ಮಾತು ಕೇಳ್ಬೇಕು...ಜಾಣ ಮರಿ ನೀನು...

   ಏನು ಅರಿಯದ ಕಂದ...ಆ ಮಗುವಿನ ದೃಷ್ಟಿಯಲ್ಲಿ ದಡ್ಡನೆಂದರೆ ಯಾರೋ..??? ಜಾಣನೆಂದರೆ ಯಾರೋ..??...ಎಲ್ಲರೂ ಒಂದೇ ಎಂಬ ಭಾವ ತುಂಬಿದ  ನಿಸ್ಕಲ್ಮಷ ಮನಸಿನ ಎಳೆಗೂಸು ಅದು...ಅಮ್ಮನ ಮಾತಿಗೆ ಸಮ್ಮತಿ ಎಂಬಂತೆ ಸೀರೆ ಕೈಬಿಟ್ಟು ಮುಂದಿದ್ದವರ ಕೈ ಸೇರಿತ್ತು....ಪುಟ್ಟ ಕಂಗಳು ಮಾತ್ರ ಅಮ್ಮನಿಂದ ದೂರಸರಿದಿರಲಿಲ್ಲ...

  ಕ್ಷಣಕ್ಕೊಮ್ಮೆ ಹಿಂದಿರುಗಿ ನೋಡುತ್ತಲೇ ಭಾರವಾದ ಉಸಿರನ್ನ ಹೊರದಬ್ಬುತ್ತ, ಆಸ್ಪತ್ರೆಯತ್ತ ನಡೆದಾಗ ಇಬ್ಬರ ಮನಗಳಿಗೂ ದಟ್ಟ ಕಾರ್ಮೋಡ ಆವರಿಸಿದ ಭಾವ.. ಕ್ಷಣ ಕ್ಷಣಕ್ಕೂ ಏರುಪೇರಾಗುತ್ತಿದ್ದ ಹೃದಯ ಬಡಿತ..ಬದಲಾಗುತ್ತಿದ್ದ ಮುಖಭಾವ.

  ಆಸ್ಪತ್ರೆ ತಲುಪಿ ಪ್ರೊಸಿಜರ್ ಎಲ್ಲ ಮುಗಿಸಿ, ಶಸ್ತ್ರಚಿಕಿತ್ಸಾ ಕೊಠಢಿಯಲ್ಲಿ ನಿಶ್ಚಲ ಗೊಂಬೆಯಂತೆ ಮಲಗಿದವಳನ್ನು ಕಂಡು ಕಣ್ತುಂಬಿ ಬಂದರೂ ಸಾವರಿಸಿಕೊಂಡು ಹಣೆಗೊಂದು ಚುಂಬಿಸಿ ಹೊರಬರುತ್ತಿದ್ದವನನ್ನ ಕೈ ಹಿಡಿದಿದ್ದಳವನ ಒಲವು....

    ಕಣ್ತುಂಬಿಕೊಂಡೇ ಹಿಂದಿರುಗಿ ಏನೆಂಬಂತೆ ಪ್ರಶ್ನಿಸಿದಾಗ ಹತ್ತಿರ ಬರುವಂತೆ ಕಣ್ಸನ್ನೆ ಮಾಡಿ ಸನಿಹ ಬಂದವನನ್ನ ಎಂದೆಂದೂ ಅಚ್ಚಳಿಯದ ಚಿತ್ರದಂತೆ ತನ್ನ ಕಣ್ಣಲ್ಲಿ ಶೇಖರಿಸಿಕೊಂಡು ಹಣೆಗೊಂದು ಮುತ್ತನಿತ್ತು, ರೀ ನನಗೊಂದು ಮಾತು ಕೊಡಿ ಎಂದವಳು, ಅವನೊಪ್ಪಿಗೆಗೆ ಕಾಯದೇ ಅವನ ಕೈಯನ್ನ ತನ್ನ ತಲೆ ಮೇಲಿಟ್ಟುಕೊಂಡಿದ್ದಳು..

ಕೈಯಿಟ್ಟಷ್ಟೇ ವೇಗದಲ್ಲಿ ಹಿಂದೆಳೆದಿದ್ದ ತನ್ನ ಕೈಯನ್ನು..

    ರೀ , ಪ್ಲೀಸ್ ಮಾತು ಕೊಡಲೇಬೇಕು..ನಾನೇನಾದ್ರು ಆಪರೇಶನಲ್ಲಿ ಬದುಕುಳಿದರೆ ನಾನು,ನೀವು,ನಮ್ಮ ಕಂದ ನಮ್ಮದೇ ಒಂದು ಪುಟ್ಟ ಸಂಸಾರ...ಚಂದವಾಗಿ ಬದುಕೋಣ... ನಮ್ಮ ಮಗುನಾ ಚನ್ನಾಗಿ ಓದಿಸೋಣ... ಎಂದು  ನುಡಿಯುತ್ತಿದ್ದವಳ ಕಂಗಳು ತುಂಬೆಲ್ಲ ಭವಿಷ್ಯದ ಕನಸುಗಳೇ...

    ಅಕಸ್ಮಾತ್ ನಾನೇನಾದರೂ ಸತ್ತರೆ ಮಗುನಾ ಚನ್ನಾಗಿ ನೋಡಿಕೊಳ್ಳಿ, ನಮ್ಮ ಕನಸು ಯಾವುದು ಕನಸಾಗೆ ಉಳಿಯಬಾರದು, ನಮ್ಮಿಬ್ಬರ ಪ್ರೀತಿ ಸಂಕೇತವದು..ನನ್ನ ಮಗು ಹೆತ್ತವರ ಪ್ರೀತಿವಂಚಿತವಾಗಬಾರದು, ನೀವೇ ಇಬ್ಬರ ಪ್ರೀತಿ ಕೊಡಿ.. ಇದೊಂದು ಮಾತು ನಡೆಸಿಕೊಡಿ.... ನುಡಿಯುವಾಗ ಸ್ವರದಲ್ಲಿ ಸತ್ವವೇ ಇರಲಿಲ್ಲ...ಧ್ವನಿ ಕಂಪಿಸುತ್ತಿತ್ತು...

    ಶಶಿಧರ್ ಕಣ್ಮುಚ್ಚಿಯೇ ಅವಳ ತಲೆ ಮೇಲೆ ಕೈಯನ್ನಟ್ಟಿದ್ದ...
  
  ★★★★★★★★★★★★★★★★★★★★

     ಪಪ್ಪಾ, ಪಪ್ಪಾ...ಏನು ಮಾಡ್ತಿದ್ಯಾ...?? ಬೇಗ ಆಚೆ ಬಾರಪ್ಪಾ ನಿನಗೊಂದು ಗುಡ್ ನ್ಯೂಸ್ ಇದೆ...ಬಾಗಿಲಾಚೆ ನಿಂತು ತಂದೆಯನ್ನ ಕೂಗುತ್ತಲಿದ್ದಳು ಶಶಿಧರ್ , ಗಾನವಿ ಒಡಲ ಕೂಸು ಶಿವಾನಿ....

    ಬಂದೆ ಪುಟ್ಟಾ ಎಂದು ಸಣ್ಣದಾಗಿ ನುಡಿಯುತ್ತಲೇ ಗೋಡೆಯ ಮೇಲಾಕಿದ್ದ ಪಟವನ್ನ ಟವೇಲಿನಿಂದ ಫಳ ಫಳ ಹೊಳೆಯುವ ಕನ್ನಡಿಯಂತೆ ಶುಭ್ರಗೊಳಿಸುವಲ್ಲಿ ಮಗ್ನ ಶಶಿಧರ್...

   ಅದೆಷ್ಟು ಬಾರಿ ಕರೆದರೂ ಹೊರಬಾರದಿರುವ ತಂದೆಯ ಮೇಲಿನ ಪುಟ್ಟ ಮುನಿಸನ್ನ ಹೊತ್ತೇ ಒಳಬಂದಿದ್ದಳು ಶಿವಾನಿ...

   ಮಡದಿ ಪಟವನ್ನ ಕಣ್ತುಂಬಿಕೊಳ್ಳುತ್ತಾ ನಿಂತವನಿಗೆ ತನ್ನರವಿಗೆ ಬಾರದಂತೆ ನಯನಧ್ವಯಗಳು ಕಂಬನಿ ಮಿಡಿಯುತ್ತಿದ್ದವು...ಮನಸ್ಸು ಗತಕಾಲದ ಸರಿದಿತ್ತು...

          ★★★★★★★★★★★

    ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಮಡದಿಯ ಮಾತಿಗೆ ಸಮ್ಮತಿಯೆಂಬಂತೆ ತಲೆಮೇಲೆ ಕೈಯಿಟ್ಟು ಭಾರವಾದ ಹೆಜ್ಜೆಯಿನ್ನಿಡುತ್ತಲೇ ಹೊರಬಂದವನು ಬಾಗಿಲು ದಾಟಿದ್ದೇ  ದೊಪ್ಪೆಂದು ಕುಸಿದಿದ್ದ ಬರಿ ನೆಲ ಎಂಬ ಅರಿವಿರದೇ.. ಅಶಕ್ತನೆಂಬಂತೆ ಪೂರ್ತಿ ದೇಹ ಗೋಡೆಯಾಸರಿಸಿತ್ತು....

   ಹುಣ್ಣಿಮೆ ಶಶಿಯಂತೆ ಮಿನುಗುತ್ತಿದ್ದವನ ಮೊಗವಿಂದು ಅಮವಾಸ್ಯೆ ದಿನದಂತೆ ಕಪ್ಪು ಮೋಡ ಮುಸುಗಿದಂತಾಗಿತ್ತು.. ಕಣ್ತೆರೆದೇ ಕುಳಿತವನ ದೃಷ್ಟಿ ಶೂನ್ಯದತ್ತ...

   ಅದೆಷ್ಟೋ ದಿನಗಳ ನಂತರ ಮಗಳ ಅನಾರೋಗ್ಯ ವಿಚಾರಿಸಲು ಆಸ್ಪತ್ರೆಗೆ ದೌಡಾಯಿಸಿದ್ದರು ಗಾನವಿ ತಂದೆ.. ಶಶಿಧರನತ್ತ ಹರಿದ ಕಣ್ಣುಗಳ ದೃಷ್ಟಿ ಬೆಂಕಿ ಉಗುಳುತ್ತಿದ್ದವು.. ಮಗಳ ನೋವಿಗಿಂದು ಕಾರಣ ಶಶಿಯೇ ಎಂಬುದು ಅವರನ್ನ ಇನ್ನಷ್ಟು ಕ್ರೋಧಾವಿಷ್ಟರನ್ನಾಗಿಸಿತ್ತು.

    ಆಪರೇಷನ್ ಮುಗಿಸಿದ ವೈದ್ಯರು ಹೊರಬಂದಾಗ ದಪ್ಪ ದಪ್ಪ ಹೆಜ್ಜೆ ಇಡುತ್ತಾ ಅವರತ್ತ ನಡೆದು, ಡಾಕ್ಟರ್ ನನ್ನ ಮಗಳು ಹೇಗಿದ್ದಾಳೆ...?? ನೋಡಬಹುದಾ..?? ಎಂದು ಪ್ರಶ್ನಿಸುತ್ತಿದ್ದವರ ಮಾತಿನಲ್ಲಿದ್ದುದ್ದು ಮಗಳ ಮೇಲಿನ ಮಮಕಾರ ಅಲ್ಲವೇ ಅಲ್ಲ..!!!! ಒಣ ದರ್ಪ..ಶಶಿಧರ್ ಮೇಲಿನ ಕೋಪ..

  ಸಾರಿ ಸರ್...ಗಾನವಿ ಅವರನ್ನ ಬದುಕಿಸಲು ನಾವು ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾದಂತಾಯಿತು... ಕೈಮುಗಿಯುತ್ತಾ ನುಡಿದವರೇ ಅಲ್ಲಿ ನಿಲ್ಲಲಾಗದೇ ತಮ್ಮ ಕೋಣೆಗೆ ನಡೆದುಬಿಟ್ಟಿದ್ದರು..

   ಕಣ್ತೆರೆದೇ ಕುಳಿತವನ ಕಣ್ಣುಗಳು ಅನಾಯಾಸವಾಗಿ ಮುಚ್ಚಿದ್ದವು...ಕಂಬನಿ ಹೊರದಾಟುತ್ತಿತ್ತಷ್ಟೇ....!!!

   ಮಗಳ ಸಾವಿನಿಂದ ಇನ್ನಷ್ಟು ಕೋಪಗೊಂಡವರು ಜೇಬಿನಲ್ಲಿಟ್ಟಿದ್ದ ಬಂದೂಕನ್ನ ಹೊರತಗೆದು ಶಶಿಧರನತ್ತ ತಿರುಗಿಸಿದ್ದರಷ್ಟೇ....ಕ್ಷಣಾರ್ಧದಲ್ಲಿ ಶಶಿಧರನ ದೇಹದಲ್ಲಿ ಜಾಗ ಪಡೆದಿತ್ತು ಬುಲೆಟ್...ಮೊದಲೇ ಸೋತ ದೇಹ ಇನ್ನಷ್ಟು ಬಸವಳಿದು ಭೂತಾಯಿ ಒಡಲತ್ತ ಜಾರಿತ್ತು...

    ಇನ್ನೊಂದು ಬುಲೆಟ್ ಬಂದೂಕಿನಿಂದ ಹೊರದಾಟುವ ಮುನ್ನ ಬಂದೂಕು ಹಿಡಿದ ಕೈಗೆ ಬೇಡಿ ಬಿದ್ದಿತ್ತು... ಅನಾಥಾಶ್ರಮದವರೆಲ್ಲ ಸೇರಿ ಪೊಲೀಸರಿಗೆ ವಿಷಯ ತಲುಪಿಸಿ ಪೊಲೀಸರ ಅಥಿತಿಯಾಗುವಂತೆ ಮಾಡಿದ್ದರು..

   ಕೆಳಬಿದ್ದಿದ್ದ ಶಶಿಧರನನ್ನ ಆತುರಾತುರವಾಗಿ ಶಸ್ತ್ರಚಿಕಿತ್ಸಾ ಕೊಠಡಿಗೆ ಸಾಗಿಸಿ ಒಳಹೊಕ್ಕ ಬುಲೆಟ್ ಹೊರತಗೆದು ಜೀವಾಪಾಯದಿಂದ ಪಾರು ಮಾಡಿದ್ದರು ವೈದ್ಯರು...

   ಜೀವ ಉಳಿದರೂ ಪ್ರಜ್ಞೆ ಬಂದು ಮೊದಲಿನಂತಾಗಿದ್ದು ಬರೋಬ್ಬರಿ ಎರಡು ವರ್ಷಗಳ ಬಳಿಕವೇ...!!!!! ಆದಕಾರಣ ,ಗಾನವಿ ಶವ ಸಂಸ್ಕಾರ ಆಶ್ರಮದವರ ನೇತೃತ್ವದಲ್ಲಿಯೇ ಮುಗಿದಿತ್ತು...

   ಜೀವಶ್ಚವದಂತಿದ್ದವನಲ್ಲಿ ಜೀವನೋತ್ಸಾಹ ತುಂಬಿದ್ದು ಮಗಳು ಶಿವಾನಿ...ಆಶ್ರಮದವರ ಮಮತೆಭರಿತ ವಾತ್ಸಲ್ಯ....ಮಡದಿಯನ್ನ ಅಗಲಿದವನು ಪುಟ್ಟಮನೆಯನ್ನು ತೊರೆದು ಆಶ್ರಮ ಸೇರಿದ್ದ. 

  ತುಸು ಚೇತರಿಸಿಕೊಂಡವನು ಪುನಃ ಉದ್ಯೋಗ ಹುಡುಕಿಕೊಂಡು ಪುಟ್ಟ ಬಾಡಿಗೆ ಮನೆಯೊಂದನ್ನ ಖರೀದಿಸಿ ಮಗಳೊಡನೆ ವಾಸ್ತವ್ಯ ಹೂಡಿದ್ದ...ಮಡದಿ ನೆನಪು ಕಾಡಿದಾಗಲೆಲ್ಲ ಪಟವನ್ನ ಎದೆಗವಚಿ ಹಿಡಿದು ಮನಸ್ಸು ಹಿಡಿತಕ್ಕೆ ಸಿಗುವವರೆಗೂ ಕಂಬನಿ ಮಿಡಿದು ಪುನಃ ವಾಸ್ತವಕ್ಕೆ ಮರಳಿ ಖುಷಿಯಾಗಿರುವಂತೆ ಇರುತ್ತಿದ್ದ..

   ಕಾಲ ಉರುಳಿದಂತೆ ಶಿವಾನಿಯೊಂದಿಗಿನ ಸುಮಧುರ ಕ್ಷಣಗಳೆಲ್ಲ ಬದುಕಿನ ಬಗೆಗಿನ ಅವನ ಉದಾಸೀನತೆ ಮರೆಸಿ ಉತ್ಸಾಹ ತುಂಬಿತ್ತು...
  
   ಈಗ ಮಗಳು ಶಿವಾನಿ 24 ವರ್ಷದ ಹುಡುಗಿ..ಪದವಿ ಓದು ಮುಗಿಸಿ ಹೆತ್ತವರಾಸೆಯಂತೆ ಯು.ಪಿ.ಎಸ್.ಸಿ ಪರೀಕ್ಷೆ ಕಟ್ಟಿ ಯಶಸ್ವಿಯಾಗಿದ್ದಳು...ತರಬೇತಿ ಕೊಟ್ಟ ಶಿಕ್ಷಕರು ಮನೆಯವರೆಗೂ ಬಂದು ವಿಷಯ ತಿಳಿಸಿದಾಗ ಅದನ್ನ ಅಪ್ಪನಿಗೆ ತಿಳಿಸಲು ಉತ್ಸಾಹಭರಿತಳಾಗಿದ್ದಳು..

  ಹೊರನಿಂತು ಕೂಗುತ್ತಿದ್ದವಳು ಅಪ್ಪನನ್ನರಸಿ ಒಳಬಂದಿದ್ದಳು..

   ಕಣ್ತುಂಬಿಕೊಂಡು ನಿಂತ ಅಪ್ಪನನ್ನ ಕಂಡು ಮನವನ್ನರಿತವಳು ಓಡುವ ನಡಿಗೆಯಲ್ಲಿ ಬಂದು ಅಪ್ಪನಿಗೆ ತೆಕ್ಕೆಹಾಕಿದ್ದಳು..

   ಪ... .ಪ್ಪಾ, ಪ...ಪ್ಪಾ...ನಾನು ಎಕ್ಸಾಮ್ ಅಲ್ಲಿ ಪಾಸ್ ಆಗಿದಿನಿ ಪಾ..ಎಂದು ತೊದಲುತ್ತಲೇ ನುಡಿಯುತ್ತಿದ್ದವಳ ಮಾತು ಕರ್ಣನಾಳಕ್ಕೆ ಸೋಕಿದ್ದೆ ಮಗಳನ್ನ ಜರುಗಿಸಿ ಪುಟ್ಟಾ, ಪುಟ್ಟ......ನಿಜ ಹೇಳ್ತಿದಿಯೇನೋ... !!!! ಖುಷಿಯಲ್ಲಿ ಮಾತು ಹೊರಬಾರಲಾರದೇ ಪುನಃ ಪುನಃ ಮಗಳನ್ನ ಆಲಂಗಿಸಿ ಸಂಭ್ರಮಿಸುತ್ತಿದ್ದರು.ಇಷ್ಟೋತ್ತು ನೋವಿಗೆ ಮಿಡಿದ ಕಂಬನಿ ಈಗ ಸಂತೋಷಕ್ಕೆ ಆನಂದಭಾಷ್ಪವಾಗಿ ಪರಿವರ್ತನೆಗೊಂಡಿತ್ತು.

   ಅಪ್ಪನ ಸಂತೋಷ ಕಂಡ ಶಿವಾನಿ ಹೃದಯ ತುಂಬಿ ಬಂದರೆ , ಹೊರನಿಂತ ಶಿಕ್ಷಕರಿಗೂ ತಂದೆ ಮಗಳ ಬಾಂಧವ್ಯ ಕಂಡು ಆನಂದವಾಗಿತ್ತು..

   ಮಡದಿ ಪಟ ಎದೆಗವಚಿ ಹಿಡಿದು...ಗಾ....ನು, ಗಾ....ನು...ನೋಡೇ ಇಲ್ಲಿ...ನಮ್ಮ ಮಗಳು...ನಮ್ಮ ಪ್ರೀತಿ ಕೂಸು...ಜಿಲ್ಲೆ ಜಿಲ್ಲಾಧಿಕಾರಿ ಕಣೇ..ಈ ಸಂತೋಷನೆಲ್ಲ ನೋಡಬೇಕಂತ ಅದೆಷ್ಟು ಕನಸು ಕಟ್ಟಿದ್ವಿ....ಆ....ದ....ರೆ....ಆ....ದ..ರೆ...ಮುಂದೆ ಮಾತನಾಡಲು ಧ್ವನಿಪೆಟ್ಟಿಗೆ ಅಶಕ್ತ...

   ಸಂಭ್ರಮ ಪಡುವ ಘಳಿಗೆಯಲ್ಲಿ ನೋವೇತಕೆ....???? ನನಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಕ್ಕೆ ಥ್ಯಾಂಕ್ಯೂ ರೀ....ಲವ್ ಯು...ನಿಮ್ಮ ಕೊನೆಯುಸಿರಿನ ತನಕ ನಿಮ್ಮ ಉಸಿರಲ್ಲಿ ನಾನು ಶಾಶ್ವತವಾಗಿರುವೆ..

   ಕಣ್ಣ ಮುಂದಿರದ ಮಡದಿ ಕಿವಿಯಲ್ಲಿ ಗುನುಗಿದಂತೆ ಭಾಸವಾಗಿತ್ತವನಿಗೆ..ನಿನ್ನ ಪ್ರೀತಿಯೊಂದಿರಲು ಎಂದಿತ್ತವನ ಮನ.

   ಕಂಬನಿ ತೊಡೆದು ಮಗಳೊಡನೆ ಸಂಭ್ರಮಿಸಿದ್ದ ಶಶಿಧರ್..

         ★★★★★★★★★★★★★

     ಪ್ರೀತಿಸಿದವರು ಜೊತೆಯಿರದಿದ್ದರೂ ಪ್ರೀತಿ ಎಂದಿಗೂ ಶಾಶ್ವತವಂತೆ...!!!!!!

   ಪ್ರೀತಿಯೇ ಶಕ್ತಿ.....!!!!

  ಪ್ರೀತಿಯೇ ದೌರ್ಬಲ್ಯ...!!!!

   ಆಯ್ಕೆ ನಮ್ಮದೇ....

  ಪ್ರೀತಿಸುವ ಜೀವ ಜೊತೆಗಿದ್ದಾಗ ಜಗತ್ತನ್ನೇ ಗೆಲ್ಲುವ ಧೈರ್ಯ ಬಂದರೆ, ಅದೇ ಪ್ರೀತಿ ಸರ್ವಸ್ವವನ್ನು ಕಳೆದುಕೊಳ್ಳುವ ದೌರ್ಬಲ್ಯವೂ ಆಗಬಹುದೇನೋ...!!!

  

      ★★★★★★ಮುಕ್ತಾಯ★★★★★★


© All Rights Reserved