...

5 views

ಲೇಖನ : ಮಾತೇ ಬಂಡವಾಳ
ಮಾತೇ ಬಂಡವಾಳ


"ಮಾತು ಬೆಳ್ಳಿ, ಮೌನ ಬಂಗಾರ" , "ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು", "ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ"  "ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು", "ಮಾತು ಹೃದಯ ಗೆಲ್ಲುವ ಸವಿ ಬೆಲ್ಲವಾಗಲಿ"...ಅಬ್ಬಬ್ಬಾ... ಮಾತಿನ ಬಗೆಗೆ ಎಷ್ಟೊಂದು ಯುಕ್ತಿಗಳು, ನಾಣ್ನುಡಿಗಳು. ನಾವಾಡುವ ಮಾತಿನಿಂದಲೇ ನಮ್ಮ ‌ಘನತೆ‌-ಗೌರವ ಹೆಚ್ಚುವುದು. ನಾವು ಏನನ್ನು ಯೋಚಿಸುತ್ತೇವೋ ಅದನ್ನೇ ಮಾತಾಗಿಸುತ್ತೇವೆ. ನಿಜ ತಾನೆ?? ಹೊಟ್ಟೆಯಲ್ಲಿ ಉರಿ, ನಂಜು ತುಂಬಿಕೊಂಡು ಹೊರಗಡೆ ಸವಿ ಮಾತನಾಡಿದರೆ ನಾಟಕವೆನಿಸುವುದು. ಮಾತು ಮನಸ್ಸಿಗೆ ಹಿಡಿದ ಕನ್ನಡಿ ಎನ್ನುವರು. ಮಾತನ್ನೇ ಬಂಡವಾಳ ಮಾಡಿಕೊಂಡವರು ನಮ್ಮ‌ ನಡುವೆ‌ ಇದ್ದಾರೆ.

ಕೆಲವರು ಮಾತನಾಡಲು ಶುರುಮಾಡಿದರೆಂದರೆ ನಿಲ್ಲಿಸುವುದೇ ಇಲ್ಲ. ಕೆಲವರ ‌ಮಾತಿಗೆ ತಲೆ-ಬುಡವಿರುಬುದಿಲ್ಲ. ಅಸಲಿಗೆ ಅರ್ಥವಾಗುವುದು ಇಲ್ಲ. ಹೌದು ಹೌದು ಎನ್ನುವ ಭರದಲ್ಲಿ ನಮ್ಮ ‌ಕತ್ತು ಅಲ್ಲಾಡಿಸಿ ಕಳಚಿ ಬೀಳಬಹುದೋ ಎನಿಸಿಬಿಡುತ್ತದೆ. ಅವರಿಗೆ ನಮ್ಮ ಪ್ರತ್ಯುತ್ತರದ ಚಿಂತೆಯಿಲ್ಲ. ತಮ್ಮ ‌ಮನಸ್ಸಿನಲ್ಲಿ ಏನೇನಿದೆಯೋ ಅದನ್ನೆಲ್ಲ ಹೊರಹಾಕಬೇಕಷ್ಟೇ.. ಆಗಲೇ ಅವರಿಗೊಂದು ನಿರಾಳತೆಯ ಭಾವ. ಕೆಲವರಿಗೆ ಮಾತನ್ನು ಮುಚ್ಚಿಟ್ಟುಕೊಳ್ಳಲು ಬರುವುದಿಲ್ಲ. ಎಲ್ಲಿ ಏನಾದರೂ ಕಂಡರೆ, ಯಾರಾದರೂ ಏನಾದರೂ ಹೇಳಿದರೆ ಅದನ್ನು ಇನ್ನೊಬ್ಬರ ಕಿವಿಗೆ ಊದದೇ ಹೋದರೆ ನಿದ್ದೆಯೇ ಬರುವುದಿಲ್ಲ. ಒಂತರಾ ಕಕ್ಕುವುದು ಎನ್ನಬಹುದು. ಕೆಲವರಂತೂ ಮನಸ್ಸಲ್ಲಿ ಗಾಯವಾಗಿ ಹೋಗಿರುವ ಹಳೆಯ ಕಹಿ ನೆನಪುಗಳನ್ನೇ ಮತ್ತೆ ‌ಮತ್ತೆ‌ ಮೆಲುಕು ಹಾಕುತ್ತಾ ನಾಲ್ಕು ಹನಿ ಕಣ್ಣೀರು ಸುರಿಸುವುದು. ಹೌದು. ಮಾತನಾಡುವಾಗ ಭಾವುಕರಾಗುವವರಿದ್ದಾರೆ. ಹಳೆಯ ನೆನಪುಗಳ ಮರೆಯಲೂ ಕಷ್ಟಪಡುತ್ತಾರೆ.  ಕೆಲವರಂತೂ ಅಲ್ಲಿಂದ ಇಲ್ಲಿಂದ ತಂದಿಡುವ ಬುದ್ಧಿ. ಅತೀಯಾದ ಮಾತಿನಿಂದಲೇ ‌ಸಂಬಂಧಗಳು ಕೆಡುವುದು. ಜಗಳ ವೈಮನಸ್ಸು ಮನಸ್ತಾಪ ಏರ್ಪಡುವುದು.

ಟೆಲಿ ಮಾರ್ಕೆಟಿಂಕ್, ವ್ಯಾಪಾರಿಗಳಿಗೆ ಮಾತೇ ‌ಬಂಡವಾಳ.  ಬಣ್ಣ ಬಣ್ಣದ ಮಾತುಗಳಿಂದ‌ ವರ್ಣಿಸುತ ಗ್ರಾಹಕರ ತಮ್ಮತ್ತ ಆಕರ್ಷಿಸಿ ವಸ್ತುಗಳ ಮಾರಾಟ‌ ಮಾಡುವುದು ಒಂದು ಕಲೆ. ಒಂದು ಖರೀದಿಸಿದರೆ ಇನ್ನೊಂದು ಉಚಿತ, ಹರಿಯದು ಮುರಿಯದು ಬಣ್ಣ ಮಾಸದು, ಎಸೆಯಿರಿ, ಉಜ್ಜಿಯಿ ಬಿಸಿನೀರಿಗೆ ಅದ್ದಿರಿ... ‌ನೋಡಿ ಹೇಗೆ ಪಳಪಳ‌ ಹೊಳೆಯುತ್ತಿದೆ.. ಎನ್ನುತ ಗ್ರಾಹಕರ ತಮ್ಮತ್ತ ಸೆಳೆದುಕೊಳ್ಳುವರು. ಈ ರಸ್ತೆ ಬದಿಯ ವ್ಯಾಪಾರಿಗಳ ನೀವು ಗಮನಿಸಿರಿ.‌ಅವರ ಮುಖ್ಯ ಗುರಿ‌ ‌ಮಕ್ಕಳು ಮತ್ತು ಮಹಿಳೆಯರು. ಮಕ್ಕಳನ್ನಂತು ತಮ್ಮಲ್ಲಿರುವ ಆಟಿಕೆಗಳಿಂದ ಆಕರ್ಷಿಸುವರು. ಮಹಿಳೆಯರು ತಮ್ಮ ‌ನೆಚ್ಚಿನ ಸೀರೆ ಬಳೆ ಜುಮುಕಿ ಕಂಡೊಡನೆ ಅತ್ತ ಕಡೆ ಧಾವಿಸುವರು. ಹಣ್ಣಿನ ವ್ಯಾಪಾರಿಗಳಾಗಲಿ, ಸೊಪ್ಪು ತರಕಾರಿ ವ್ಯಾಪಾರಿಗಳಾಗಲಿ ಅವರ ಮಾತಿಗೆ ದಾಟಿಯೇ ಬೇರೆ. ಮೊತ್ತ ಆಚೆ ಈಚೆ ಮಾಡಿ ತಮಗೂ ನಷ್ಟವಾಗದೇ ಗ್ರಾಹಕರಿಗೂ  ಮೋಸವಾಗದಂತೆ ಬಹಳ ಜಾಣ್ಮೆಯಿಂದ ವ್ಯಾಪಾರ ನಡೆಸುತ್ತಾರೆ. ಇನ್ನು ಸೇಲ್ಸ್ ಮ್ಯಾನ್ ಗಳು,  ಜೀವವಿಮೆ‌ ಪಾಲಿಸಿ ಮಾಡಿ ಕೊಡುವವರ ಕತೆ‌ ಕೇಳುವುದೇ‌ ಬೇಡ. ಒಬ್ಬರ ಮೊಬೈಲ್‌‌ ಸಂಖ್ಯೆ‌ ಸಿಕ್ಕಿದರೆ ಪಾಲಿಸಿ ಮಾಡಿಸಿ ಎಂದು ದುಂಬಾಲು  ಬೀಳುವರು. ಕಾಲಿಗಡ್ಡವ ಕಟ್ಟಿ ಪಾಲಿಸಿ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗುವರು. ಅದರಲ್ಲಿನ ಸೌಲಭ್ಯ, ಅವರು ನೀಡುವ ಸೇವೆಯ ಬಗ್ಗೆ ಮಾಹಿತಿಯನ್ನು ನೀಡಿ ಗ್ರಾಹಕರಿಗೆ ನಂಬಿಕೆ ಬರುವಲ್ಲಿ ಯಶಸ್ವಿಯಾಗಬೇಕು. ಅವರಿಗೆ ಪಾಯಿಂಟ್ ರೂಪದಲ್ಲಿ ಸಂಬಳ ಕೊಡುವಾಗ ಅನಿವಾರ್ಯವಾಗಿ ಗ್ರಾಹಕರಿಗೆ ಕಿರಿಕಿರಿ ಎನಿಸಿದರೂ ತಮ್ಮ ‌ಕೆಲಸ ಮಾಡಲೇ ಬೇಕಾಗುತ್ತದೆ. ಬೈದರೂ ಕೋಪದಲ್ಲಿ ನೂಕಿದರೂ ಪರಿಗಣಿಸದೇ ತಮ್ಮ‌ಕೆಲಸದಲ್ಲಿ ಮುಂದುವರಿಯುವರು. ಆದರೂ ಅದೊಂದು ಕಷ್ಟವೇ ಸರಿ

ನಮ್ಮ ಪುಟ್ಟ ಹಳ್ಳಿಯಲ್ಲಿ ಒಂದು ಕನ್ನಡ ಮಾಧ್ಯಮ ಶಾಲೆಯಿತ್ತು. ಒಂದಷ್ಟು ಯುವಕರು ಇಲ್ಲಿ‌ ಆಂಗ್ಲಮಾಧ್ಯಮ‌ ಶಾಲೆ ತಲೆ ಎತ್ತಿದರೆ ಹೇಗೆ ಎಂದು ಕನಸ ಕಂಡರು. ಅವರೆಲ್ಲರೂ ಎಮ್.ಎ ಮಾಡಿದ‌ ಪದವೀಧರರು. ಯಾವುದಕ್ಕೂ ಅಂಜದೇ ಮನೆ‌ಮನೆಗೆ ತಿರುಗಿ‌ ಮಕ್ಕಳ‌ ಹೆತ್ತವರನ್ನು ಪ್ರೇರೆಪಿಸಿ ತಮ್ಮ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿಕೊಳ್ಳಲು ಸಫಲರಾದರು. ವಾರ್ಷಿಕ ಫಲಿತಾಂಶ ನೂರಕ್ಕೆ‌ ನೂರು ಬಂದಿತು. ಚಂದದ ಸಮವಸ್ತ್ರ, ಹೋಗಿ ಬರಲು ವಾಹನ ವ್ಯವಸ್ಥೆ, ಮಧ್ಯಾಹ್ನ ಊಟದ ವ್ಯವಸ್ಥೆ, ಅತ್ಯಂತ ದೊಡ್ಡದಾದ ಆಟದ ಮೈದಾನ ಹೀಗೆ ಊರಿನ ಗಣ್ಯರಿಂದ ಧನಸಹಾಯ ಪಡೆದು ಯಶಸ್ವೀಯಾದರು. ಹಾಗಾಗಿ ಮೂರು ಗಂಟೆ ದೂರ ಕ್ರಮಿಸಬೇಕಾದವರು ಸಹ ಮನೆ ತನಕ ‌ಬಸ್ಸು ಬರುತ್ತದೆ ಎಂದು ಅದೇ ಆಂಗ್ಲ‌ಮಾಧ್ಯಮ ಶಾಲೆಗೆ ಕಳುಹಿಸಿದರು. ಕನ್ನಡ ಮಾಧ್ಯಮದ ಮಕ್ಕಳು ತಮ್ಮ ಕಾಲ ಸಮೀಪವಿರುವ ಶಾಲೆಗೆ ಹೋಗಲು ನಿರಾಕರಿಸಿ ಈ ಶಾಲೆಯನ್ನು ಸೇರಿಕೊಂಡರು. ಇದೆಲ್ಲವೂ ಸಾಧ್ಯವಾದುದು ಆ ಶಾಲೆ ನೀಡಿದ ಸೌಲಭ್ಯ ಹಾಗೂ ಯುವ ಅಧ್ಯಾಪಕರ ಭರವಸೆಯ ಮಾತುಗಳು. ಇದಕ್ಕೆ ತಾನೇ ಮಾತೇ ಬಂಡವಾಳ ಎನ್ನುವುದು.

ಸಿಂಧು ಭಾರ್ಗವ ಬೆಂಗಳೂರು.




© Writer Sindhu Bhargava