...

2 views

ತುಂಟ ಆನೆಮರಿ
ಮಕ್ಕಳ ಕಥೆ : ತುಂಟ ಆನೆಮರಿ

ಒಂದು ಕಾಡಿನಲ್ಲಿ ತುಂಟ ಆನೆ ಮರಿ ಓಡಾಡುತ್ತ ಇತ್ತು. ಅದು ಯಾವಾಗಲೂ ಉಳಿದೆಲ್ಲ ಪ್ರಾಣಿಗಳಿಗೂ ಕೀಟಲೆ ಕೊಡುತ್ತಲೇ ಇರುತ್ತಿತ್ತು. ಯಾವ ಪ್ರಾಣಿಯಾದರೂ ಗದರಿಸಲು ಬಂದರೆ ಅಮ್ಮನ ಹತ್ತಿರ ಹೋಗಿ ದೂರು ನೀಡುತಲಿತ್ತು‌. ಆಗ ಅದರ ಅಮ್ಮ ದೊಡ್ಡ ಆನೆ ಬಂದು ಆ ಪ್ರಾಣಿಗೆ ಹೆದರಿಸಿ ಓಡಿಸಿಬಿಡುತ್ತಾ ಇತ್ತು. ಆ ದೊಡ್ಡ ಆನೆಯ ದೊಡ್ಡದೊಡ್ಡ ಕಾಲ್ಗಳು, ಮೊರದಗಲ ಕಿವಿಯಲ್ಲಿ ಪಟಪಟನೇ ಬೀಸಿದರೆ ಅದರ ಗಾಳಿಗೆ ಚಿಕ್ಕ ಪುಟ್ಟ ಮೊಲ ಹೆಗ್ಗಣಗಳೆಲ್ಲ ಗಾಳಿಯಲ್ಲಿ ತೇಲಿ ಹೋಗುತ್ತಲಿದ್ದವು. ದಪ್ಪ ದಪ್ಪ ಕಂಬದಂತಹ ಕಾಲಿನಿಂದ ತುಳಿದರೆ ಸಾಧಾರಣ ಜಾತಿಯ ಪ್ರಾಣಿಗಳೆಲ್ಲ ಸತ್ತೇ ಹೋಗುತ್ತಿದ್ದವು. ಅದಕ್ಕೆ ಆ ಮರಿಆನೆಗೆ "ನನ್ನ ಅಮ್ಮ ಇದ್ದಾಳೆ.." ಎಂಬ ಧೈರ್ಯವಿತ್ತು. ಅದಕ್ಕಾಗಿಯೇ ತುಂಟತನ ಮಾಡುತ್ತಿತ್ತು. ಎಲ್ಲರನ್ನೂ ಪೇಚಿಗೆ ಸಿಲುಕಿಸುತ್ತಾ ಇತ್ತು.

ಇದರಿಂದ ಬೇಸತ್ತ ಉಳಿದ ಪ್ರಾಣಿಗಳು ಆ ಮರಿಆನೆಗೆ ತಕ್ಕ ಪಾಠ ಕಲಿಸಬೇಕು ಎಂದು ಎಲ್ಲರೂ ಸಭೆ ಸೇರಿದರು. ಆಗ ಚಾಣಾಕ್ಷ ನರಿಯು ಒಂದು ಉಪಾಯ ನೀಡಿತು. "ತಿನ್ನುವುದರಲ್ಲಿ ತುಂಬಾ ಇಷ್ಟವಿರುವ ಆನೆಮರಿಗೆ ಅದರಿಂದಲೇ ಪಾಠ ಕಲಿಸುವ.." ಎಂದಿತು. ಉಳಿದೆಲ್ಲ ಪ್ರಾಣಿಗಳು ಆಯಿತು ಎಂದು ಒಪ್ಪಿಕೊ‌ಡವು. "ಆನೆಮರಿಯನ್ನು ಖೆಡ್ಡದಲ್ಲಿ ಬೀಳಿಸಲು ಯಾರು ಮುಂದೆ ಬರುತ್ತೀರಿ?" ಎಂದು ಕೇಳಿತು‌ .ಆಗ "ಮೊಲವು ನಾನು... ಆ ಕೆಲಸ ಮಾಡುವೆ.." ಎಂದು ಒಪ್ಪಿಕೊಂಡಿತು. ಇನ್ನೊಮ್ಮೆ ನರಿ ಕೇಳಿತು "ಖೆಡ್ಡ ತೋಡಲು ಯಾರು ಮುಂದೆ ಬರುವಿರಿ..?" ಎಂದು. ಆಗ ಹೆಗ್ಗಣಗಳ ತಂಡವು ಮುಂದೆ ಬಂದು "ನಾವು ರೆಡಿ.." ಎಂದವು.
ರಾತ್ರಿಯಾಗುತ್ತಿದ್ದಂತೆಯೇ ಹೆಗ್ಗಣಗಳ ತಂಡಕ್ಕೆ ಹೇಳಿ ದೊಡ್ಡ ಗುಂಡಿ ತೋಡಿಸಿದವು. ಅದರ ಮೇಲೆ ಸೊಪ್ಪು ಮುಚ್ಚಿ ಯಾರಿಗೂ ಕಾಣದಂತೆ ಮಾಡಿದವು. ಎಲ್ಲವೂ ತಮ್ ತಮ್ಮ ಗೂಡಿಗೆ ವಾಪಾಸ್ಸಾದವು. ಬೆಳಿಗ್ಗೆ ಆಗುತ್ತಿದ್ದಂತೆ ಮರಿಆನೆ ಎಂದಿನಂತೆ ಚೇಷ್ಟೆ ಮಾಡಿ, ಬೇರೆ ಪ್ರಾಣಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಖುಷಿ ಪಡೆಯಲು ಬಂದಿತ್ತು. ಕುಣಿಯುತ್ತ ಬರುತ್ತಿರುವ ಆನೆಮರಿಯನ್ನು ತಡೆದು ಚಾಣಾಕ್ಷ ಮೊಲವು "ಆನೆಮರಿ ಆನೆಮರಿ , ನಿನಗೆ ಸೊಪ್ಪು ಹಣ್ಣುಹಂಪಲು ಎಂದರೆ ತುಂಬಾ ಇಷ್ಟ ತಾನೆ.? ನಾವೆಲ್ಲರೂ ಸ್ನೇಹಿತರಲ್ಲವೇ.. ಹಾಗಾಗಿ ನಿನಗೆ ರಾಶಿರಾಶಿ ಹಣ್ಣು ಸೊಪ್ಪು ಕೊಡಬೇಕೆಂದುಕೊಂಡಿದ್ದೇವೆ. ನೀನು‌ ಬರಲೇಬೇಕು ಎಂದಿತು. ಆಗ ತಿನ್ನುವ ಆಸೆಗೆ ಬಿದ್ದು ಆನೆಮರಿ ಒಪ್ಪಿಕೊಂಡಿತು‌. ಕಾಡಿನಿಂದ ಬಹುದೂರವಿರುವ ಆ ಖೆಡ್ಡಾದ ಹತ್ತಿರ ಮೊಲವು ಕರೆದುಕೊಂಡು ಹೋಯಿತು. ಸ್ವಲ್ಪ ದೂರದಲ್ಲಿ ಇರುವಾಗಲೇ ಮೊಲವು ಆನೆಮರಿಗೆ ಹೇಳಿತು. "ಅಗೋ ನೋಡು ನಿನಗೆ ಬೇಕಾದ ಸೊಪ್ಪು ಹಣ್ಣುಹಂಪಲುಗಳಿವೆ. ಓಡಿಹೋಗಿ ತಿನ್ನು .." ಎಂದು.
ಇವರ ಮೋಸವರಿಯದ ಆನೆಮರಿ ಬಾಯಲ್ಲಿ ನೀರು ಸುರಿಸುತ್ತಾ ಓಡಿಓಡಿ ಸೊಪ್ಪು ತಿನ್ನಲು ಮುಂದಾಯಿತು. ಹಾಗೆ ತಿನ್ನುತ್ತಾ ತಿನ್ನುತ್ತಾ ಖೆಡ್ಡದೊಳಗೆ ದುಪಕ್ಕನೆ ಬಿದ್ದಿತು. ಉಳಿದ ಎಲ್ಲ ಪ್ರಾಣಿಗಳು "ಗೊಳ್" ಎಂದು ನಕ್ಕವು.

ನೀತಿ: ಇನ್ನೊಬ್ಬರನ್ನು ಪೇಚಿಗೆ ಸಿಲುಕಿಸಿ ಸಂತೋಷ ಪಡಬಾರದು. ಇಂದು ಅವರದಾದರೆ ನಾಳೆ ನಮ್ಮ ಸರದಿ ಬರುತ್ತದೆ.

ಸಿಂಧು ಭಾರ್ಗವ್ .
ಬೆಂಗಳೂರು-೨೧
© Writer Sindhu Bhargava