...

0 views

ದೋಸೆ ದೋಸೆ ನಿನ ಮ್ಯಾಲೇಕೋ ಆಸೆ
ಇಂದು ದೋಸೆ ದಿನವಂತೆ. ಅದಕ್ಕಾಗಿ ಲೇಖಿಕಾ ಪತ್ರಿಕೆಯ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದವದೋಸೆಯ ಬಗೆಗಿನ ಪ್ರಬಂಧ ಮತ್ತು ನಾ ಮಾಡಿದ ಕೆಲ ಬಗೆಯ ದೋಸೆ ಫೋಟೋಗಳು ನಿಮಗಾಗಿ. ಮಾಡಿ ಫೋಟೋ ತೆಗೆಯೋದು ಇನ್ನೂ ಬಹಳಷ್ಟಿದೆ.

ದೋಸೆ ದೋಸೆ ನಿನ್ನ ಮ್ಯಾಲ್ಯಾಕೋ ಆಸೆ

ಚುಮುಚುಮು ಚಳಿ ಇನ್ನೊಂದು ಸ್ವಲ್ಪ ಹೊತ್ತು ಮಲಗುವ ಆಸೆ. ಆದರೆ ಬೆಳಿಗ್ಗೆ 7ಗಂಟೆಗೆ ಹೊರಡುವ ಅಪ್ಪನಿಗಾಗಿ ಅಮ್ಮ ತಯಾರಿಸುತ್ತಿದ್ದ ದೋಸೆಯ ಚುಂಯ್ ಚುಂಯ್ ಸದ್ದು,ಉದ್ದು ಮತ್ತು ಮೆಂತ್ಯ ಬೆರೆತ ಆ ನರುಗಂಪಿನ ಸುವಾಸನೆ ನಾಸಿಕಾಘ್ರಗಳಿಗೆ ಬಡಿದಾಗ ಮತ್ತೆ ಮಲಗುವರುಂಟೆ ? ತಟಕ್ಕನೆ
ಎಬ್ಬಿಸಿ ಬಿಡುತ್ತಿತ್ತು . ಹೌದು ದೋಸೆ ಎಂದರೆ ಹಾಗೇ... ಸಾಮಾನ್ಯ ಇಷ್ಟ ಇಲ್ಲ ಎನ್ನುವಂತಹವರು ಯಾರೂ ಇಲ್ಲ . ಉಪ್ಪಿಟ್ಟು ಇಡ್ಲಿ ಅಥವಾ ಬೇರೆ ತಿಂಡಿಗಳು ಇಷ್ಟ ಇಲ್ಲ ಎಂದು ಹೇಳುವರನ್ನು ಕೇಳಿದ್ದೇನೆ. ಆದರೆ ದೋಸೆ ಅಂದರೆ ಎಲ್ಲರಿಗೂ ಆಸೆಯೇ ……..
ಇನ್ನೂ ಹೋಟೆಲಿಗೆ ಹೋದರಂತೂ ಸರಿಯೇ ಸರಿ! ಇಷ್ಟುದ್ದ ಮೆನು ಕಾರ್ಡ್ ಎಲ್ಲಾ ನೋಡಿದ ಮೇಲೂ ಮಾಣಿಯನ್ನು ಕೇಳುವುದು ಯಾವ ದೋಸೆ ಇದೆ ಎಂದೇ……..ಸಾದಾ ಪ್ಲೇನು ಸೆಟ್ಟು ಸೆಟ್ ಮಸಾಲ ಈರುಳ್ಳಿ ರವಾ ಮಸಾಲೆ ಉದ್ದಕ್ಕೂ ಹೇಳುತ್ತಲೇ ಹೋಗುತ್ತಾನೆ . ಕಡೆಗೆ ಆರ್ಡರ್ ಕೊಡುವುದು ಮಸಾಲೆ ದೋಸೆಗೇ…..ಗರಿಗರಿಯಾದ ಬಿಸಿಬಿಸಿ ದೋಸೆ 1 ತುದಿಯಿಂದ ಮುರಿದು ಮಧ್ಯದ ಪಲ್ಯಕ್ಕೆ ಸ್ವಲ್ಪ ಜಾಗ ಮಾಡಿ ಚೂರುಚೂರೇ ಪಲ್ಯ ತೆಗೆದುಕೊಂಡು ಚಟ್ನಿಯಲ್ಲಿ ಮುಳುಗಿಸಿ ಬಾಯಿಗಿಟ್ಟರೆ ಆಹಾ! ಸ್ವರ್ಗವೇ ಧರೆಗಿಳಿದಂತೆ…..
ದಕ್ಷಿಣ ಭಾರತದ ಜನಪ್ರಿಯ ತಿಂಡಿಗಳಲ್ಲಿ ದೋಸೆಯೂ ಸಹ ಒಂದು. ತಮಿಳುನಾಡಿನಲ್ಲಿ ಸಾದಾ ಖಾಲಿ ದೋಸೆ, ಆಂಧ್ರದ ಪೆಸರೊಟ್ಟು, ಕೇರಳದ ಆಪ್ಪಂ ಹಾಗೂ ಕರ್ನಾಟಕದ ಮಸಾಲೆ ದೋಸೆ . ಈ ಮಸಾಲೆ ದೋಸೆಯನ್ನು ಕಂಡುಹಿಡಿದವರು ಉಡುಪಿಯ ಹೋಟೆಲಿನವರು. ಇಂದು ಪ್ರಪಂಚದಾದ್ಯಂತ ಮಸಾಲೆದೋಸೆ ಎಂದರೆ ಕರ್ನಾಟಕದ್ದೇ ಟ್ರೇಡ್ ಮಾರ್ಕ್ .
ಅಕ್ಕಿ ಹಾಗೂ ಉದ್ದಿನ ಬೇಳೆ ಇದರ ಮುಖ್ಯ ಪದಾರ್ಥಗಳು ಮೆಂತ್ಯ ಹಾಗೂ ಬೇರೆ ಬೇಳೆಗಳನ್ನು ಸಮಯಾನುಸಾರವಾಗಿ ಹೆಚ್ಚು ಕಡಿಮೆ ಮಾಡಿಕೊಂಡು 8 ಗಂಟೆಗಳ ಕಾಲ ನೆನೆಸಿಟ್ಟುಕೊಂಡು ಹುದುಗು ಬರಿಸಿ ನಂತರ ಕಾವಲಿಯ ಮೇಲೆ ಹೊಯ್ದು ಮೊಗಚುವ ಕೈ ಯಿಂದ ಎಬ್ಬಿಸಿ ಎರಡೂ ಕಡೆ ಬೇಯಿಸಿದರೆ ದೋಸೆ ರೆಡಿ. ಇದಕ್ಕೆ ಚಟ್ನಿ ಮುಖ್ಯ ನೆಂಚಿಕೆ. ಈರುಳ್ಳಿ ಬೆಳ್ಳುಳ್ಳಿ ಖಾರದ ಕೆಂಪು ಚಟ್ನಿಯನ್ನು ಒಳಗೆ ಸವರಿ ಆಲೂಗೆಡ್ಡೆ ಈರುಳ್ಳಿ ಹಾಕಿದ ಪಲ್ಯವನ್ನು ಮದ್ಯ ಇಟ್ಟರೆ ಮಸಾಲೆ ದೋಸೆ ರೆಡಿ.
ಪಲ್ಯ ಹಾಗೂ ಚಟ್ನಿ ಬೇರೆ ಬೇರೆಯೇ ಇದ್ದರೆ ಅದನ್ನು ಮಸಾಲೆ ದೋಸೆ ಎನ್ನಲು ಮನಸ್ಸು ಒಪ್ಪುವುದೇ ಇಲ್ಲ .

ಹೊಂಬಣ್ಣದ ಗರಿಗರಿ ದೋಸೆಯ ಮತ್ತೊಂದು ಬಿಳಿ ಭಾಗದ ಮೇಲೆ ಕೆಂಪುಬಣ್ಣದ ಚಟ್ನಿಯ ಲೇಪನ ಹಳದಿ ಆಲೂಗೆಡ್ಡೆ ಪಲ್ಯ ಅದರ ಮೇಲಿಟ್ಟು ಬೇರೆ ಬೇರೆ ರೀತಿಯಲ್ಲಿ ಮಡಚಿದರೆ ಅದೊಂದು ಅಪೂರ್ವ ಕಲಾಕೃತಿಯೇ ಸೈ.

ಮೊದಲೆಲ್ಲಾ ಮನೆಯಲ್ಲಿ ಹತ್ತು ಹದಿನೈದು ಜನಗಳಿದ್ದ ಕಾಲದಲ್ಲಿ ರುಬ್ಬುವ ಕಲ್ಲಿನಲ್ಲಿ ಅಷ್ಟೊಂದು ಜನಕ್ಕೆ ಸಾಧ್ಯವಾಗುವಷ್ಟು ದೋಸೆ ರುಬ್ಬುವುದು ಪ್ರತಿಯೊಬ್ಬರಿಗೂ ಹೊಯ್ದು ಕೊಡುವುದು ನಿಜಕ್ಕೂ ಪ್ರಯಾಸದ ಕೆಲಸವೇ! ದೋಸೆ ಸಮಾರಾಧನೆ ಅಂದರೂ ಅಡ್ಡಿಯಿಲ್ಲ…
ಹಾಗಾಗಿ ಸ್ವಲ್ಪ ಅಪರೂಪದ ತಿಂಡಿಯೇ ಅದು ದೋಸೆ ಮಾಡಿದರೆ ಹಬ್ಬ ಎನ್ನುವ ಹಾಗೆ ಆಗುತ್ತಿತ್ತು. ನಂತರದ ೪ _ ೫ ಜನದ ಚಿಕ್ಕ ಕುಟುಂಬಗಳಾದ ಮೇಲೆ ದೋಸೆ ದಿನನಿತ್ಯದ ತಿಂಡಿಯ ಪಟ್ಟಿಗೆ ಸೇರಿಕೊಂಡಿತು . ದೋಸೆ ಎಂದರೆ ಚಿಂತಾಮಣಿಯ ನಮ್ಮಜ್ಜಿಯ ಮನೆಯ ದೋಸೆ ಕಾರ್ಯಕ್ರಮ ನೆನಪಿಗೆ ಬರುತ್ತದೆ. ಹಿಂದಿನ ದಿನ ಮಧ್ಯಾಹ್ನ 3 ಗಂಟೆಯಿಂದಲೇ 3 4 ಒಬ್ಬೆಗಳಲ್ಲಿ ದೋಸೆ ಹಿಟ್ಟು ರುಬ್ಬಿ ತಯಾರಾಗಿರುತ್ತಿತ್ತು . ಬೆಳಿಗ್ಗೆ ಚಟ್ನಿಯೇ 1ದೊಡ್ಡ ಕೊಳದಪ್ಪಲೆಯ ತುಂಬಾ. ಸ್ನಾನ ಮಾಡಿ ಬಂದು ದೋಸೆ ಹುಯ್ಯಲು ಉಳಿತರೆ ದೊಡ್ಡದೊಡ್ಡ ಬೇಸನ್ಗಳ ತುಂಬಾ ಮಾಡಿಡುತ್ತಿದ್ದರು. ಒಬ್ಬೊಬ್ಬರಾಗಿ ಸ್ನಾನ ಮುಗಿಸಿ ಬಂದ ನಂತರ ಪಂಕ್ತಿಗಳಲ್ಲಿ ಹಾಕಿದರೆ ಕ್ಷಣಾರ್ಧದಲ್ಲಿ ಮಾಯ . ಮುಂದೆ ಎಂದಾದರೂ "ಬಿಸಿಬಿಸಿ ದೋಸೆಯಂತೆ ಖರ್ಚಾಯಿತು" ಎಂಬ ನುಡಿಗಟ್ಟು ನೋಡಿದಾಗಲೆಲ್ಲಾ ನನ್ನ ಕಣ್ಣ ಮುಂದೆ ಅಂದಿನ ದೋಸೆಯ ಚಿತ್ರಣವೇ ಮೂಡಿಬರುತ್ತದೆ. 5 ಜನರಿದ್ದ ನಮ್ಮ ಮನೆಯಲ್ಲಿ ದೋಸೆ ಎಂದರೆ ಭಾನುವಾರದ ಕಾರ್ಯಕ್ರಮ . ಶನಿವಾರ ಮಧ್ಯಾಹ್ನ ಶಾಲೆಯಿಂದ ಬಂದ ಮೇಲೆ ಹಿಟ್ಟು ರುಬ್ಬಿ ಕೊಡುವುದು ನನ್ನ ಕೆಲಸ . ಆಗೆಲ್ಲಾ ಕೆಂಪುಚಟ್ನಿ ಅಭ್ಯಾಸ ಇರಲಿಲ್ಲ ದೋಸೆ ಪಲ್ಯ ಚಟ್ನಿ ಪ್ರತ್ಯೇಕ ಹಾಕಿಕೊಂಡು ತಿನ್ನುವುದು . ಮತ್ತೆ ಸಂಜೆಯೂ ಸಹ ದೋಸೆಯ ಕಾರ್ಯಕ್ರಮ . ಆಗೆಲ್ಲಾ ಫ್ರಿಡ್ಜ್ ಇರದಿದ್ದುದರಿಂದ ಹಿಟ್ಟು ಅಂದೇ ಖಾಲಿ ಮಾಡಬೇಕಿತ್ತು ಅಥವಾ ಮಾರನೆಯ ದಿನ ಹುಳಿ ಬಂದ ಹಿಟ್ಟಿಗೆ ಈರುಳ್ಳಿ ಕ್ಯಾರೆಟ್ ತುರಿ ಎಲ್ಲ ಹಾಕಿದ ದೋಸೆ. ಅದೂ ಒಂದು ತರಹ ಚೆನ್ನಾಗಿರುತ್ತಿತ್ತು . ಕೆಲವರಿಗೆ ಒಂದೇ ಬಾರಿ ಮಾಡಿಟ್ಟು ಪೇರಿಸಿಟ್ಟು ಕೊಟ್ಟರೆ ಸರಿ ಎಲೆ ಮುಂದೆ ಕಾಯಲು ಆಗುವುದಿಲ್ಲ ಮತ್ತೆ ಕೆಲವರಿಗೆ ಕಾವಲಿಯಿಂದ ನೇರ ತಟ್ಟೆಗೆ ಬೀಳಬೇಕು . ದೋಸೆಯ ವಿಷಯ ಬಂದಾಗಲೆಲ್ಲ ನನ್ನ ಈ ಅನುಭವವನ್ನು ಹೇಳಲೇ ಬೇಕು ನಾನು ಮೊದಲ ಬಾರಿಗೆ ಕೆಲಸಕ್ಕೆ ಚಿಕ್ಕಬಳ್ಳಾಪುರದಲ್ಲಿ ಸೇರಿದಾಗ ಭಾನುವಾರ ದೋಸೆಯ ಕಾರ್ಯಕ್ರಮ ಇದ್ದೇ ಇರುತ್ತಿತ್ತು . 3ಹೊತ್ತೂ ದೋಸೆಯನ್ನೇ ತಿನ್ನುತ್ತಿದ್ದೆ ನನ್ನ ದೋಸೆಬಾಕತನವನ್ನು ಎಲ್ಲರೂ ಹಾಸ್ಯಮಾಡಿ ನಗುತ್ತಿದ್ದರು . ಬೆಳಿಗ್ಗೆ ಚಟ್ನಿ ಪಲ್ಯ ಮಾಡಿ ತಿಂದರೆ ಮಧ್ಯಾಹ್ನಕ್ಕೂ ಅದೇ . ಸಂಜೆಯ ವೇಳೆಗೆ ಚಟ್ನಿ ಚೆನ್ನಾಗಿರುತ್ತಿರಲಿಲ್ಲ ಆದ್ದರಿಂದ ಚಟ್ನಿಪುಡಿ ಪಲ್ಯ . ಅಂತೂ ಮೂರು ಹೊತ್ತೂ ದೋಸೆಮಯ.

ಈ ದೋಸೆ ತಟ್ಟೆಗೆ ಹಾಕಿದರೆ 1ತರಹ ಬಾಳೆಲೆಯ ಮೇಲೆ ಹಾಕಿದರೆ ಮತ್ತೊಂದು ವಿಶೇಷತೆ ಬಂದುಬಿಡುತ್ತದೆ. ಅದಕ್ಕೆ ಏನೋ ಹೋಟೆಲಿನವರು ಬಾಳೆಲೆಯ ಮೇಲೆ ದೋಸೆ ಹಾಕಿಕೊಡುವುದು.

ದೋಸೆಯ ತಯಾರಿಕೆ ನಮ್ಮ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೇ ಇತ್ತು ಎನ್ನುವುದಕ್ಕೆ ಆಧಾರವಾಗಿ ಖ್ಯಾತ ಆಹಾರ ಇತಿಹಾಸಕಾರ ಕೆ ಟಿ ಆಚಾರ್ಯ ಅವರು ತಮ್ಮ ಪುಸ್ತಕ "ದಿ ಹಿಸ್ಟರಿ ಆಫ್ ಅವರ್ ಫುಡ್" ನಲ್ಲಿ ಮೊದಲನೆಯ ಶತಮಾನದಲ್ಲಿ ದೋಸೆಯ ಅಸ್ತಿತ್ವ ಇತ್ತು. ತಮಿಳು ಸಂಗಂ ಸಾಹಿತ್ಯ ಸಂಪತ್ತಿನಲ್ಲಿ ಆರನೇ ಶತಮಾನದಲ್ಲೇ ದೋಸೆ ಇದ್ದ ಬಗ್ಗೆ ಉಲ್ಲೇಖಗಳಿವೆ. ದೋಸೆಯ ಜೊತೆಗೆ ಅಪ್ಪಂ ಇಡಿಯಪ್ಪಂ ಅಡೈ ಇವುಗಳು ಸಹ ಅಂದಿನ ಕಾಲದವರಿಗೆ ಪರಿಚಯವಿತ್ತು " ಎಂಬ ಸಂಗತಿಯನ್ನು ತಿಳಿಸಿದ್ದಾರೆ.೧೦೫೪ ರಲ್ಲಿ ಪಶ್ಚಿಮ ಚಾಲುಕ್ಯ ರಾಜ ಮೂರನೇ ಸೋಮೇಶ್ವರನ ಕಾಲದಲ್ಲಿ ದೋಸೆಯ ಉಲ್ಲೇಖವಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ . ಅಂತೆಯೇ ಆಂಗ್ಲ ಲೇಖಕ ವ್ಯಾಟ್ ಚಾಪ್ ಮನ್ ಮತ್ತು ಲೀಸಾ ರೇನರ್ ಹಾಗೂ ಭಾರತದ ತಂಗಪ್ಪನ್ ನಾಯರ್ ಅವರುಗಳು ತಮ್ಮ ಲೇಖನಗಳಲ್ಲಿ ದೋಸೆಯ ಮೂಲ ಕರ್ನಾಟಕದ ಅಂದಿನ ದಕ್ಷಿಣ ಕನ್ನಡದ ಉಡುಪಿ ಎಂದು ದಾಖಲಿಸಿರುತ್ತಾರೆ . ಹೀಗಾಗಿ ದೋಸೆಯ ತವರುಮನೆ ಕನ್ನಡ ನಾಡು ಎಂದು ನಿಸ್ಸಂದೇಹವಾಗಿ ಹೇಳಬಹುದು.

ಹುಟ್ಟಿದ ಮಗುವಿನಿಂದ ಹಿಡಿದು ಹಲ್ಲಿಲ್ಲದ ಮುದುಕರವರೆಗೂ ತಿನ್ನಲು, ಅರಗಿಸಿಕೊಳ್ಳಲು ಸುಲಭವಾಗಿರುವ ದೋಸೆ ಗೃಹಿಣಿಯರಿಗೂ ಆಪದ್ಬಾಂಧವನೇ ಈಗಂತೂ ತಂಗಳು ಪೆಟ್ಟಿಗೆ ಇರುವುದರಿಂದ ವಾರಕ್ಕೊಮ್ಮೆ ಹಿಟ್ಟು ತಯಾರಿಸಿಟ್ಟುಕೊಂಡರೆ ಬೇಕೆಂದಾಗಲೆಲ್ಲ ದೋಸೆ ತಯಾರು ಮಾಡಬಹುದು . ಅಲ್ಲದೆ ರೆಡಿ ಫುಡ್ ಗಳಲ್ಲಿಯೂ ಸಹ ದೋಸೆ ಹಿಟ್ಟು ಸಿಕ್ಕು ಬಿಡುವುದರಿಂದ ದೋಸೆ ತಯಾರಿಕೆ ಅಂತಹ ಕಷ್ಟದ ಕೆಲಸವೇ ಅಲ್ಲ ಈಗ . ಕಬ್ಬಿಣದ ಕಾವಲಿಯಲ್ಲಿ ಏಳಿಸಲಾದರೂ ಸ್ವಲ್ಪ ಕಷ್ಟವಾಗುತ್ತದೆ. ಈಗ ಬಂದಿರುವ ನಾನ್ ಸ್ಟಿಕ್ ತವಾಗಳಲ್ಲಿ ಆ ಪ್ರಯಾಸವೂ ಇಲ್ಲ ಎಲ್ಲವೂ ಸರಳ ಸುರಳೀತ . ಅಲ್ಲದೆ ಒಬ್ಬೊಬ್ಬರು ಒಂದೊಂದು ಸಮಯದಲ್ಲಿ ತಿಂಡಿ ತಿಂದರೂ ಅವರಿಗೆ ಬೇಕಾದಾಗ ಬೇಕಾದ ಹಾಗೆ ಮಾಡಿ ಕೊಡುವ ಸಾಧ್ಯತೆ ಇರುವ ಇದು ಗೃಹಿಣಿಯರ ಆಪ್ತಮಿತ್ರ ಅನ್ನಿಸಿಕೊಳ್ಳಲು ತುಂಬಾ ಸೂಕ್ತ .
ದಿಢೀರಾಗಿ ಅತಿಥಿಗಳು ಬಂದರೆ ತಲೆನೋವಿಲ್ಲ ಚಟ್ನಿಯೊಂದು ಚರ್ ಅನ್ನಿಸಿದರೆ ಫ್ರಿಜ್ಜಿಂದ ಹಿಟ್ಟು ತೆಗೆದು ತಿಂಡಿ ಕತೆ ಮುಗಿಸಿಬಿಡಬಹುದು.

ಅಲ್ಲದೆ ಇದೊಂದು ತರಹ ಯಾವ ಸಮಯದಲ್ಲಾದರೂ ತಿನ್ನಬಹುದಾದಂತಹ ತಿನಿಸಾದ್ದರಿಂದ ಬೆಳಗಿನ ಉಪಾಹಾರಕ್ಕಾದರೂ ಸೈ ಮಧ್ಯಾಹ್ನದ ಊಟದಂತೆಯಾದರೂ ಸರಿ ರಾತ್ರಿಯ ತಿಂಡಿಗಾದರೂ ಜೈ. ಎಲ್ಲ ಸಮಯಕ್ಕೂ ಆಗಿ ಬರುವಂತಹದ್ದು. ಅಕ್ಕಿಯಿಂದ ತಯಾರಿಸಿದ್ದರಿಂದ ಪಿಷ್ಟ ಇರುವುದರಿಂದ ಬೆಳಗ್ಗಿನ ತಿಂಡಿಯಲ್ಲಿ ಚೈತನ್ಯ ಶಕ್ತಿ ಸಿಗುತ್ತದೆ ಇದರಲ್ಲಿ ಕ್ಯಾಲೋರಿಗಳು ಸಹ ಬಹಳ ಕಡಿಮೆ . ಎಣ್ಣೆ ಹೆಚ್ಚು ಉಪಯೋಗಿಸದಿದ್ದರೆ ಮತ್ತು ಜೊತೆಯಲ್ಲಿ ಹಂಚಿಕೊಳ್ಳುವ ಪದಾರ್ಥಗಳು ಆರೋಗ್ಯಕ್ಕೆಆಗಿ ಬರುವಂತಹದ್ದಾದರಂತೂ ಇದು ಚೇತರಿಸಿಕೊಳ್ಳುತ್ತಿರುವ ರೋಗಿಗಳಿಗೆ ಆಗಲಿ ಮಧುಮೇಹಿಗಳಿಗಾಗಲೀ, ಡಯಟ್ ನಲ್ಲಿ ಇರುವಂಥವರಿಗೆ ಆಗಲಿ ಹೇಳಿ ಮಾಡಿಸಿದಂತಹುದು. ಬಾಣಂತಿಯರಿಗೆ ಸಹ ಉದ್ದಿನ ಬದಲು ಮೆಂತ್ಯೆ ಹಾಕಿ ದೋಸೆ ಮಾಡಿಕೊಡುತ್ತಾರೆ ಪಚನಕ್ಕೆ ಸುಲಭವೆಂದು.
ಹುದುಗು ಬರಿಸುವ ಪ್ರಕ್ರಿಯೆಯಲ್ಲಿ ಒಳ್ಳೆಯ ಈಸ್ಟ್ ಉತ್ಪಾದನೆಯಾಗುವುದರಿಂದ ದೋಸೆ ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಹೇಳುತ್ತಾರೆ.

ಮಸಾಲೆದೋಸೆಗಾದರೆ ಆಲೂಗಡ್ಡೆ ಪಲ್ಯ ವೆಂದರೂ ಮನೆಯಲ್ಲಿ ಸಾಮಾನ್ಯ ಮಾಡುವ ದೋಸೆಗೆ ಎಷ್ಟು ತರಹ ನೆಂಚಿಕೆಗಳನ್ನು ಉಪಯೋಗಿಸಬಹುದು ಅದು ನಮ್ಮ ನಮ್ಮ ಕಲ್ಪನೆಗೆ ಅಭಿರುಚಿಗೆ ಬಿಟ್ಟಿದ್ದು. ಕೆಲವರಿಗೆ ಜೋನಿ ಬೆಲ್ಲ ತುಪ್ಪ ಸಾಕಾಗುತ್ತದೆ ಜೇನು ತಿನ್ನಬಹುದು ಸಕ್ಕರೆ ತುಪ್ಪದ ಕಾಂಬಿನೇಷನ್ ಸಹ ಚೆನ್ನಾಗಿರುತ್ತದೆ. ಆಪದ್ಬಾಂಧವರಾದ ತೊಕ್ಕು ಉಪ್ಪಿನಕಾಯಿ ರಸ ಚಟ್ನಿಪುಡಿಗಳು ಸಹ ದೋಸೆಯ ಸಂಗಾತಿಗಳಾಗುತ್ತವೆ. ಹಲಬಗೆಯ ಗೊಜ್ಜುಗಳು ಕರ್ರಿಗಳು ದೋಸೆಗೆ ಒಳ್ಳೆಯ ಸಾಥ್ . ಸೆಟ್ ದೋಸೆಗಂತೂ ಮಾಮೂಲಿ ಸಾಗು ಕೂರ್ಮಾ ಮುರುಗನ್ ಹೋಟೆಲಿನಲ್ಲಿ ಮಾಡುವ ಬಿಳಿ ಕೂರ್ಮಾ ಇವೆಲ್ಲಾ ಒಳ್ಳೆಯ ಜತೆ . ಏನಿಲ್ಲದಿದ್ದರೂ ಹುಳಿ ಸಾರು ಗಳು ಸಹ ಸಮಯಕ್ಕೆ ದೋಸೆಯೊಂದಿಗೆ ಒದಗಿಬರುತ್ತವೆ . ಇನ್ನು ನಾನ್ ವೆಜ್ ಅಡಿಗೆಗಳು ಸಹ ದೋಸೆಯ ಜತೆ ನೆಂಚಿಕೆಗೆ ಬರುತ್ತವೆ.

ಇಂಥ ಜನಪ್ರಿಯ ದೋಸೆಯ ಬಗ್ಗೆ ಒಗಟುಗಳು ಗಾದೆಗಳು ಏನು ಕಡಿಮೆಯೇ? "ಬಿಳಿ ಅಜ್ಜನಿಗೆ ಮೈಯೆಲ್ಲ ಕಣ್ಣು" ಎಂಬ ಗಾದೆಯ ಉತ್ತರ ದೋಸೇನೇ ತಾನೆ ? ಚಿಕ್ಕವರಿರುವಾಗ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದ ಒಗಟು ಇದು.
ನಮ್ಮ ಸೋದರಮಾವ "ಎಲ್ಲಿ ನಿನಗೆ ಲೆಕ್ಕ ಚೆನ್ನಾಗಿ ಮಾಡಲಿಕ್ಕೆ ಬರುತ್ತಲ್ವಾ .ಇದಕ್ಕೆ ಉತ್ತರ ಹೇಳು" ಅಂತ "ದೋಸೆ ಕಾವಲಿಗೆ ಹತ್ತು ದೋಸೆ ಕಾವಲಿಯಿಂದ ಏಳು ದೋಸೆ ಬಾಳೆಎಲೆಯಲಿ ಆರು ದೋಸೆ ಒಟ್ಟು ಎಷ್ಟು ದೋಸೆ " ಅಂತ ಕೇಳ್ತಿದ್ರೆ ಮೊದಮೊದಲು ಪೆದ್ದುಪೆದ್ದಾಗಿ ಒಂದಕ್ಕೊಂದು ಕೂಡಿಸಿ ಹೇಳಲು ಹೋಗಿ ನಗೆಗೀಡಾಗಿದ್ದೆ. ಭಾಷೆಯ ವಿಶೇಷ ಬಳಕೆಯ ಪ್ರಯೋಗವಿದು . "ಎಲ್ಲರ ಮನೆ ದೋಸೆ ತೂತು ಆದರೆ ಕೆಲವರ ಮನೆಯ ಕಾವಲೀನೇ ತೂತು "
ಎಂಬ ಗಾದೆ, ಸಮಸ್ಯೆಗಳು ಎಲ್ಲರ ಮನೆಯಲ್ಲೂ ಇರುತ್ತದೆ ಆದರೆ ಅವುಗಳ ಪ್ರಮಾಣ ಪರಿಣಾಮ ಬೇರೆ ಬೇರೆ ಎನ್ನುವ ಅರ್ಥ ಹೇಳುತ್ತದೆ. "6 ದೋಸೆ ಕೊಟ್ರೆ ಅತ್ತೆ ಕಡೆ 3 ದೋಸೆ ಕೊಟ್ರೆ ಸೊಸೆ ಕಡೆ" ಎಂಬ ಗಾದೆಯೂ ಸಹ ಸಮಯಕ್ಕೆ ತಕ್ಕಂತೆ ವರ್ತಿಸುವ ಜನಗಳ ಮನೋಭಾವನೆಗೆ ಕನ್ನಡಿ ಹಿಡಿಯುತ್ತದೆ . ಮತ್ತೆ ನಮ್ಮಮ್ಮ ಒಂದು ಮಾತು ಹೇಳ್ತಿದ್ರು ಇದು ಕಲಿಗಾಲ ಸ್ವರ್ಗ ನರಕ ಏನೂ ಇಲ್ಲ ದೋಸೆ ಮಗುಚಿ ಹಾಕಿದ ಹಾಗೆ ಇಲ್ಲಿಯೇ ನಮ್ಮ ಕೃತ್ಯಗಳಿಗೆ ಪ್ರತಿಫಲ ಸಿಗುತ್ತದೆ ಅಂತ.

ಮೊದಲೇ ಪ್ಲಾನ್ ಮಾಡಿ ಅಕ್ಕಿ ನೆನೆ ಹಾಕಿ ರುಬ್ಬಿ ಹುದುಗು ಬರಿಸಿದ ದೋಸೆಗಳು ಹಲವಾದರೆ ಧಿಡೀರ್ ಅಂತ ಆಗಲೇ ಮಾಡುವಂತಹ ದೋಸೆಗಳೂ ಅನೇಕ . ಹಿಟ್ಟು ಕದರಿದ ದೋಸೆ ರವೆ ದೋಸೆ ನೀರುದೋಸೆಗಳು ಈ ಕ್ಯಾಟಗರಿಗೆ ಸೇರಿದವು. ಸಾಂಪ್ರದಾಯಿಕ ಉದ್ದು ಅಕ್ಕಿ ದೋಸೆ ಮಾತ್ರವಲ್ಲದೆ ಬ್ರೆಡ್ ದೋಸೆ, ಬೆಂಡೆಕಾಯಿ ದೋಸೆ, ಬಾಳೆದಿಂಡಿನ ದೋಸೆ, ಪಾಲಕ್ ದೋಸೆ ಒಂದೇ ಎರಡೇ . ಈಗ ಆರೋಗ್ಯದ ಕಾಳಜಿ ಇರುವವರು ಓಟ್ಸ್ ದೋಸೆ ಸಿರಿಧಾನ್ಯಗಳ ದೋಸೆ, ವಿವಿಧ ತರಕಾರಿ ಸೊಪ್ಪುಗಳ ದೋಸೆ ರಾಗಿ ದೋಸೆಯನ್ನು ಸಹ ಮಾಡುತ್ತಾರೆ ..
ಬರೆಯುತ್ತಾ ಹೋದರೆ ಅಷ್ಟೋತ್ತರವೇ ಆಗಿಬಿಡಬಹುದು ಅಷ್ಟೊಂದು ವಿಧ ಅಷ್ಟೊಂದು ಬಗೆಗಳಿವೆ .ತಿಂಗಳಿಡೀ ಒಂದಲ್ಲ 1ರೀತಿಯ ದೋಸೆಯನ್ನು ಮಾಡಿದರೂ ಮುಗಿಯದ ಪಟ್ಟಿ .

ತಳ್ಳುವ ಗಾಡಿಯಲ್ಲಿ ಮಾರುವವರಿಂದ ಹಿಡಿದು ಪಂಚತಾರಾ ಹೋಟೆಲಿನವರೆಗೂ ದೋಸೆಯ ವ್ಯಾಪ್ತಿ ಹಬ್ಬಿದೆ .ಬೆಂಗಳೂರು ನಗರ ಒಂದರಲ್ಲೇ 2 ಲಕ್ಷಕ್ಕಿಂತ ಹೆಚ್ಚು ದೋಸೆಗಳು ಮಾರಾಟವಾಗುತ್ತದಂತೆ. ಬೆಂಗಳೂರಿನ ವಿದ್ಯಾರ್ಥಿ ಭವನ್ ದೋಸೆ ಹಾಗೂ ಎಂಟಿಆರ್ ದೋಸೆಗಳು ವಿಶ್ವವಿಖ್ಯಾತವಾಗಿದೆ . ಹಾಗೆಯೇ ಮೈಸೂರಿನಲ್ಲಿ ನಜರ್ ಬಾದ್ ನ ಮೈಲಾರಿ ಹೋಟೆಲ್ನ ದೋಸೆ ಪ್ರಸಿದ್ದ. ನಾವು ಚಿಕ್ಕವರಿರುವಾಗ ಮೈಸೂರಿನ ಗಾಯತ್ರಿ ಟಿಫಿನ್ ರೂಂ ನ ಹಾಗೂ ರಮ್ಯಾ ಹೋಟೆಲ್ ಗಳ ದೋಸೆ ತುಂಬಾ ಜನಪ್ರಿಯವಾಗಿದ್ದವು ಅಂತೆಯೇ ಪ್ರಸಾದ್ ಲಂಚ್ ಹೋಮ್ ನ ಸೆಟ್ ಮಸಾಲೆಯೂ ಸಹ ..ಶಿವಮೊಗ್ಗದ ಗೋಪಿ ಹೋಟೆಲ್ ಸತ್ಕಾರ್ ಹೊಟೇಲ್ ಹಾಗೂ ಮೀನಾಕ್ಷಿ ಭವನ್ 1ಕಾಲದಲ್ಲಿ ದೋಸೆಗಾಗಿ ಬಹಳ ಪ್ರಸಿದ್ಧಿ ಪಡೆದ ಹೋಟೆಲ್ ಗಳಾಗಿದ್ದವು .
ಚಿತ್ರದುರ್ಗದ ಲಕ್ಷ್ಮೀ ಭವನ ಹಾಗೂ ದಾವಣಗೆರೆಯ ಬೆಣ್ಣೆ ದೋಸೆ ಗಳು ತುಂಬಾನೇ ವಿಖ್ಯಾತಿ. ಈ ಸಾಲಿನಲ್ಲಿ ಮುಳುಬಾಗಿಲಿನ ದೋಸೆಯೂ ಸಹ ಸೇರಿಕೊಳ್ಳುತ್ತದೆ ಇಲ್ಲಿನ ವಿಶೇಷವೆಂದರೆ ದೋಸೆಗೆ ಆಲೂಗಡ್ಡೆ ಪಲ್ಯದ ಬದಲು ಶಾವಿಗೆ ಉಪ್ಪಿಟ್ಟನ್ನು ಹಾಕುತ್ತಾರೆ. ಹಾಗೆಯೇ ಆಂಧ್ರಪ್ರದೇಶದಲ್ಲಿ ಪೆಸರಟ್ಟುವಿನಲ್ಲಿ ತುಂಬಲು ಉಪ್ಪಿಟ್ಟು ಬಳಸುತ್ತಾರೆ.

ಮೊದಲು ಹೋಟೆಲು ಅಥವಾ ಮನೆಗಳಲ್ಲಿ ಮಾತ್ರ ತನ್ನ ಸ್ಥಾನ ಗಿಟ್ಟಿಸಿದ್ದ ದೋಸೆ ಈಗ ಸಮಾರಂಭಗಳ ಊಟಗಳಲ್ಲಿ ಬಫೆ ಊಟಗಳಲ್ಲೂ ಸ್ಥಾನ ಪಡೆದಿರುವುದು ಖುಷಿ ಎನಿಸುತ್ತದೆ ಅದರಲ್ಲೂ ಮಸಾಲೆದೋಸೆ ಕೌಂಟರ್ ನ ಮುಂದೆ ಇರುವ ಉದ್ದನೆ ಕ್ಯೂ ನೋಡಿದಾಗಲೆಲ್ಲ ನಮ್ಮ ದೋಸೆಯ ಬಗ್ಗೆ ಹೆಮ್ಮೆಯಾಗುತ್ತದೆ .

ಇನ್ನು ದೋಸೆ ಹಾಗೂ ಹಿರಿಯರ ಆತ್ಮಗಳಿಗೆ ಏನೋ 1 ರೀತಿಯ ಸಂಬಂಧವಿದೆ ಎಂದು ಅನ್ನಿಸುತ್ತದೆ. ಏಕೆಂದರೆ ಮೈಸೂರು ಹಾಗೂ ಸುತ್ತಮುತ್ತಲ ಕೆಲ ಪ್ರದೇಶಗಳಲ್ಲಿ ಹಿರಿಯರ ಕಾರ್ಯ ಮಾಡುವಾಗ ಎಡೆಗೆ ಇಡಲು ದೋಸೆ ಬೇಕೇ ಬೇಕು. ಅಲ್ಲದೆ ನಾಂದಿ, ದೇವರ ಸಮಾರಾಧನೆ ಈ ರೀತಿ ಕಾರ್ಯಕ್ರಮಗಳಲ್ಲಿ ಹಿರಿಯರ ಆತ್ಮಗಳನ್ನು ನೆನೆಸಿ ಪೂಜೆ ಮಾಡಿರುವುದರಿಂದ ಶುಭ ಸಮಾರಂಭಗಳು ಮುಗಿದ ಮೇಲೆ 1ದಿನ ಎಣ್ಣೆನೀರು ಹಾಕಿಕೊಂಡು ಮನೆಯಲ್ಲಿ ದೋಸೆ ಮಾಡಿ ತಿನ್ನಬೇಕು. ಆಗಲೇ ಕಾರ್ಯಗಳ ವಿದ್ಯುಕ್ತ ಮುಕ್ತಾಯ ಎಂಬ ನಂಬಿಕೆ.
ಇದರ ಹಿಂದಿರುವ ಉದ್ದೇಶ ನನಗೆ ಗೊತ್ತಿಲ್ಲ. ಆಚರಣೆ ರೂಢಿಯ ಬಗ್ಗೆ ಹೇಳಿದೆ ಅಷ್ಟೆ .

ನಾವು ಚಿಕ್ಕವರಿದ್ದಾಗಲೆಲ್ಲ ಏನಾದರೂ ಪಣ ಕಟ್ಟಿಕೊಂಡರೆ ಅಥವಾ ಪಾರ್ಟಿ ಕೊಡುವುದೆಂದರೆ S K C ಅಂದರೆ ಸಿಹಿ ಖಾರ ಕಾಫಿ. ಸಿಹಿಯೆಂದರೆ ಜಾಮೂನು ಖಾರ ಎಂದರೆ ಮಸಾಲೆ ದೋಸೆ ಮತ್ತು ಕಾಫಿ . ಈಗಲೂ ಗೆಳತಿಯರು ಹೋಟೆಲಿಗೆ ಹೋದರೆ ದೋಸೆಯನ್ನೇ ಆರ್ಡರ್ ಮಾಡುವುದು. ನಮ್ಮ ವಯಸ್ಸಿನ ಮಹಿಳೆಯರ ಈ ದೋಸೆಪ್ರಿಯತೆಯ ಬಗ್ಗೆ ನಿಜಕ್ಕೂ ಮನಶಾಸ್ತ್ರಜ್ಞರು 1 ಸಂಶೋಧನೆ ಮಾಡಬಹುದು ಅನ್ನಿಸುತ್ತೆ ನನಗೆ . ಈಗ ತೊಂಭತ್ತರ ದಶಕದಿಂದೀಚೆಗೆ ಉತ್ತರ ಭಾರತೀಯ ತಿನಿಸುಗಳು ಪ್ರವೇಶ ಆಗಿರುವುದು ಕರ್ನಾಟಕದಲ್ಲಿ . ಅದಕ್ಕೆ ಮುಂಚೆ ಹೋಟೆಲೆಂದರೆ ದೋಸೆ ಮತ್ತು ಮಸಾಲೆದೋಸೆ ಮಾತ್ರ . ಆದರೆ ಈಗಿನ ಹೋಟೆಲುಗಳಲ್ಲಿ ಸದಾಕಾಲ ದೋಸೆ ಸಿಗದಿರುವುದು ಮಾತ್ರ ಕೆಲವೊಮ್ಮೆ ತುಂಬಾ ಬೇಸರ ತರಿಸುತ್ತದೆ .ಉತ್ತರ ಭಾರತದ ತಿನಿಸುಗಳು ಸದಾ ಲಭ್ಯವಿದ್ದರೂ ದೋಸೆಗೆ ಮಾತ್ರ ಸಮಯ ನಿಗದಿ ಮಾಡಿರುತ್ತಾರೆ. ಇಂದಿನ ಯುವಜನಾಂಗವೂ ಅಷ್ಟೇ ಪಿಜ್ಜಾ ಬರ್ಗರ್ ಎಂದೆಲ್ಲಾ ವಿದೇಶೀ ತಿನಿಸುಗಳ ಭರಾಟೆಯಲ್ಲಿ ನಮ್ಮ ಆರೋಗ್ಯಕರ ದೋಸೆಯನ್ನೇ ಮರೆತುಬಿಡುತ್ತಿದ್ದಾರೆ ಅಥವಾ ದೋಸೆ ತಿನ್ನುವುದೆಂದರೆ ಸ್ಟೇಟಸ್ ಗೆ ಕಡಿಮೆ ಎನ್ನುವಂತೆ ವರ್ತಿಸುತ್ತಿದ್ದಾರೆ . ನಿಜಕ್ಕೂ ಬೇಸರದ ಸಂಗತಿ ಇದು. ಕಿಸೆಗೂ ಆರೋಗ್ಯಕ್ಕೂ ಹಿತಕಾರಿಯಾಗಿರುವ ನಮ್ಮ ದೋಸೆಯ ಬಗೆಗಿನ ನಿರ್ಲಕ್ಷ್ಯ ಖಂಡಿತ ಸಲ್ಲದು.

ಮದುವೆ ನಿಶ್ಚಯವಾದ ಮೇಲೆ ಅಥವಾ ಪ್ರಿಯಕರನೊಡನೆ ಅಥವಾ ಪತಿಯೊಡನೆ ಮೊದಲ ಬಾರಿ ಹೋಟೆಲಿಗೆ ಹೋಗಿ ಮಸಾಲೆ ದೋಸೆ ತಿಂದ ನೆನಪು ಇಲ್ಲದ ಹುಡುಗಿಯರುಂಟೇ? ಓದುವಾಗಲೇ ತುಟಿಯಂಚಿನಲ್ಲಿ ನಸುನಗೆ ಮೂಡುತ್ತದೆಯಲ್ಲವೇ? ಅದೇ ನಮ್ಮ ದೋಸೆಯ ಗಮ್ಮತ್ತು ಕರಾಮತ್ತು!

ಎಷ್ಟು ಹೇಳಿದರೂ ದೋಸೆಯ ಪುರಾಣ ಮುಗಿಯುವುದಿಲ್ಲ ಸದ್ಯಕ್ಕೆ ಸಮಾಪ್ತಿ .ಏಕೆಂದರೆ ಮಸಾಲೆದೋಸೆ ಕೊಡಿಸುತ್ತೇನೆ ಬಾ ಅಂತ ಕರೀತಿದಾರೆ ಪತಿದೇವರು . ಬಿಟ್ಟವರುಂಟೇ? ಬರಲೇ ಬಾಯ್ ಬಾಯ್…...

ಸುಜಾತಾ ರವೀಶ್