...

8 views

ಮರೆಯಾದೆ ಏಕೆ

ಎದೆಗೂಡ ಸೇರಿ ಮಳೆಬಿಲ್ಲು ತರಿಸಿ
ಮರೆಯಾದೆ ಏಕೆ ಹೀಗೆ
ಮಧುಪಾನ ಮಾಡಿ ಬರಿದಾದ ಹೂವ
ತೊರೆವ ಚೆಟ್ಟೆಯ ಹಾಗೆ||

ತೂಗುಮಂಚಕೆ ಕರೆದು ನಲ್ಮೆಯಲಿ
ದೂರವಿಟ್ಟಿರುವೆ ಆಸೆಗಳ ಕೊರೆದು
ಸಾಗುವ ಹಾದಿಯಲಿ ಸವಿತುತ್ತ ಬುತ್ತಿ
ಕೊಟ್ಟಿರುವೆ ಮೆಲುಕುವಂತೆ ಪೊರೆದು||

ಶರಧಿಯಂತೆ ಕಲರವವ ಗೈದಿರುವ
ಭಾವದೊಡಲು ಬರಿದಾಯಿತೇನು ಇಂದು
ನೆರಳಂತೆ ಕಾಡಿದವ ಮೌನವನು ತಬ್ಬಿಹನು
ಉರುಳುತಿದೆ ಕಂಬನಿಯ ಬಿಂದು||

ತಡರಾತ್ರಿಯಲ್ಲಿ ಮೂಡಿರುವ ಶಶಿಯು
ತುಸು ತಂಪು ತಂದನೆನುತ ನಗಲೇ
ಹುಡುಗಾಟಕೆ ತಾ ಕದವನ್ನು ತಟ್ಟಿ
ನಡುನೀರಲಿ ಕೈಬಿಟ್ಟನೆಂದು ಅಳಲೇ||

*ಸೌಮ್ಯಾ ಭಟ್ ಅಂಗ್ರಾಜೆ*