...

5 views

*ಅವರೆಲ್ಲೂ ಹೋಗಿಲ್ಲ ಇಲ್ಲೆ ಅದಾರಲ್ಲ*
ಸೆಪ್ಟೆಂಬರ್ 5 1940 ರಂದು ಬಿಜ್ಜರಗಿ
ಗ್ರಾಮದೊಳು ಉದಯವಾಯಿತೊಂದು ನಕ್ಷತ್ರ
ಭೂಮಂಡಲದ ಅಜ್ಞಾನ ತೊಲಗಿಸಿ,
ಜ್ಞಾನ ಉಣಬಡಿಸಲು ಭಾವ್ಯಕ್ಯತೆ ಸಾರಲು,.

ಬಾಲ್ಯದಲ್ಲೇ ಬೆಳೆದು ಬಂದ ಚುರುಕುತ‌ನ
ಗುರುವರ್ಯರ ಕಣ್ಣಿಗೆ ಬೀಳಲು ತಡವಾಗಲಿಲ್ಲ
ಮಲ್ಲಿಕಾರ್ಜುನ ಸ್ವಾಮಿಗಳ, ನೆಚ್ಚಿನ ಶಿಷ್ಯರಾಗಿ
ಅವರಾಶ್ರಯದಲ್ಲಿ ಬೆಳೆದು ಲೋಕ ಕಲ್ಯಾಣಕ್ಕೆ
ಮೊದಲ ಮುನ್ನಡಿ ಬರೆದರು,ಬೆಳೆಯುವ ಸಿರಿ ಮೊಳಕೆಯಲ್ಲಿ ಕಂಡಂತೆ..

ಕಲ್ಯಾಣವಾಯಿತು ವಿಜಯಪುರ
ನಡೆದಾಡುವ ದೇವರು ಕಂಡು
ಸಮಾಜೋದ್ದಾರಕೆ ಉದಯಿಸಿತು ರವಿ ತೇಜವಂದು
ಮುಗಿಲೆತ್ತರಕೇರಿಸಿದರು ಯೋಗಾಶ್ರಮದ ಕೀರ್ತಿ
ಸಾದು ಸಾಂತರಿಗೆ ಅಂದು ಇಂದು ಎಂದೆಂದೂ ಸ್ಪೂರ್ತಿ..

ಪ್ರಶಸ್ತಿ ಅರಸಿದವರಲ್ಲ
ಪ್ರಾಮುಖ್ಯತೆ ಬೇಡಿದವರಲ್ಲ
ಪ್ರಖರ ಜ್ಞಾನದಿಂದ ಶಿಖರವೇರಿದರು
ಪ್ರಚಾರದಿಂದ ಬಹುದೂರ ಸರಿದವರು..
ಪ್ರತಿ ಮನೆಯ ಭಕ್ತ ಜಪಿಸುವ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು.

ಕೈ ಚಾಚಿ ಬೇಡಲಿಲ್ಲ,ಕರೆಯದೇ ಬಂದುದ್ದನ್ನ
ವಿನಮ್ರವಾಗಿ ಒಪ್ಪಿಸಿಬಿಟ್ಟರಲ್ಲ
ಖಾವಿ ತೊಡಲಿಲ್ಲ,ಕಾರು ಇಡಲಿಲ್ಲ
ಸರಳ ಸಂತನಾಗಿ,ಭಕ್ತ ಗಣದ ನಡೆದಾಡುವ ದೇವರು
ದೇವರಾಗಿಯೇ ಉಳಿದವರಲ್ಲ..

ಮೀಸಲಾತಿಯೆಂದು ಎಂದೂ ಮೂಗುದಾರ ಹಾಕಲಿಲ್ಲ
ಜಾತಿ ಜಾತಿಯೆಂದು ಜಾತ್ರಿ ಮಾಡಲಿಲ್ಲ
ಕಾಯಕದೊಳಗೆ ನಿರತರಾಗಿ, ದಿವ್ಯಜ್ಯೋತಿಯಾಗಿ
ಭಕ್ತ ಮನದೊಳಗೆ ನಿತ್ಯ ಬೆಳಗುತಿರುವರಲ್ಲ.

ಅವರೆಲ್ಲೂ ಹೋಗಿಲ್ಲ,ಇಲ್ಲೆ ಇದ್ದಾರಲ್ಲ,
ಎಲ್ಲೆಲ್ಲೂ ಇದ್ದಾರಲ್ಲ
ಹೂವಾಗಿ, ಗಿಡದ ಎಲೆಯಾಗಿ,
ಕಾಯಿಯಾಗಿ,ಅದರ ಫಲವಾಗಿ
ನಮ್ಮೊಳಗ ಅದಾರಲ್ಲ,..
ಗಿಡ ,ಮರ,ಪಕ್ಷಿಗಳಲ್ಲಿ ನನ್ನ ಕಾಣಿರಿ ಎಂದಾರಲ್ಲ
ಅವರೆಲ್ಲೂ ಹೋಗಿಲ್ಲ ಇಲ್ಲೆ ಅದಾರಲ್ಲ..

*ರಮೇಶ್ ಹಡಪದ*