...

7 views

ಯೋಧನ ಮನದಾಳ


ಹೌದು ನಾನೊಬ್ಬ ಯೋಧ
ನಿಂತಿರುವೆನಿಲ್ಲಿ ನನ್ನವರ ತೊರೆದು
ದೇಶಸೇವೆಗೆ ಬದ್ಧನಾಗಿ
ಮಾತೃಭುವಿಯ ರಕ್ಷಣೆಗೆಂದು

ಆದರೊಂದು ನೋವಿದೆ ಮನದೊಳೆನಗೆ
ಇಂದೇಕೋ ಹೇಳಬೇಕನಿಸಿದೆ ಎನಗೆ
ಕಷ್ಟಗಳ ಸಹಿಸಿ ನಾವು ನಿಂತಿರುವೆವು ಗಡಿಯೊಳು
ಭಾರತಾಂಬೆಯ ಮಕ್ಕಳೆಲ್ಲ ಒಗ್ಗಟ್ಟಾಗಿ

ಆದರೇಕೆ ಹೊಡೆದಾಡಿ ಬಡಿದಾಡುವಿರಿ
ಕಚ್ಚಾಡುವಿರಿ ಅವ ನಮ್ಮವ ಇವ ನಿಮ್ಮವನೆಂದು
ಹಗಲೆನ್ನದೆ ಇರುಳೆನ್ನದೆ ಪಾಪಿಗಳಂತೇಕೆ ವರ್ತಿಸುವಿರಿ
ನಾವೆಲ್ಲ ಒಂದೇ ತಾಯಮಕ್ಕಳೆಂದು ಮರೆತಿರೇನು

ಬಿಸಿಲ ಬೇಗೆಯೊಳು ಬೆಂದು
ಕೊರೆವ ಚಳಿಯನ್ನು ತಾಳಲಾರದೆ
ಮಳೆಯ ಅಲೆಗೆ ಸಿಕ್ಕು ಪರದಾಡಿದರೂ
ದೇಶದ ಸೇವೆಯ ನೆನೆದು ಧೈರ್ಯದಿ ನಿಂತೆವು
ನಮ್ಮ ರಾಷ್ಟ್ರಕ್ಕೆ ಏನಾಗದಿರಲೆಂದು

ಯಾವಾಗ ಎಲ್ಲಿ ಗುಂಡು,ಸಿಡಿಮದ್ದುಗಳ
ಹೊಡೆತಕ್ಕೆ ಸಿಕ್ಕೆಮ್ಮ ಮರಣವಾರ್ತೆಯು
ಬಂದೊದಗುವುದೋ ನಾವರಿಯೇವು
ದೇಶದೊಳಿತಿಗಾಗಿ ನಗುನಗುತ್ತಾ ಪ್ರಾಣತೆತ್ತಲು
ಸಂತಸದಿ ಎದೆಯೊಡ್ಡಿ ನಿಂತಿಹೆವು

ನಮಗೆಂದೂ ಕಾಡುವ ಪ್ರಶ್ನೆಗಳೊಂದೇ
ನೀವುಗಳೆಲ್ಲಾ ಏಕೆ ಇಷ್ಟೊಂದು ಅಮಾನವೀಯವಾಗಿ ವರ್ತಿಸುವಿರಿ ಈ ಭರತ ಖಂಡದೊಳಗೆ
ನಿಮಗಾಗಿಯೇ ಕಾದು ಕುಳಿತ ಸೈನಿಕರವ ಮರೆತಿರೆ

ಒಂದು ಬಾರಿ ಯೋಚಿಸ ಬಾರದೇ
ಸೈನಿಕರಿಲ್ಲದ ದೇಶದೊಳೇನಾದೀತು ಎಂದು
ಗಡಿಯ ಕಾಯದಿದ್ದರೇನಾದೀತು ಎಂದು
ಅನ್ಯ ದೇಶದ ಭಯೋತ್ಪಾದಕರ ಸೆದೆಬಡಿಯದಿದ್ದರೇನಾದೀತು ಎಂದು
ಒಂದು ಬಾರಿ ಯೋಚಿಸ ಬಾರದೇ

ಯಾವ ಯೋಧತಾನೆ ನಾ ಆ ಜಾತಿಯವ
ಇವ ಈ ಜಾತಿ ಪಂಗಡದವನೆಂದು ಬೊಬ್ಬಿಟ್ಟಿಹನೇ
ದೇಶ ಸೇವೆಯೇ ನನ್ನ ಧ್ಯೇಯವೆಂದು
ಭಯೋತ್ಪಾದಕರ ವಿರುದ್ಧ ಹೋರಾಡಿ
ವೀರಮರಣವ ಪಡೆದಿಹನಲ್ಲವೇ

ಮರೆಯದಿರಿ ದೇಶ ಕಾಯುತ್ತಿರುವ ಯೋಧನ
ನಮಗಾಗಿ ಪಾಣದ ಹಂಗುತೊರೆದು ಕಾವಲಿಹನು
ದೇಶದೊಳಗೆ ಮೊಂಡುತನ ಗೈವ ಮುನ್ನ ನೆನಪಿಸಿಕೋ
ಸೈನಿಕರಿಲ್ಲದೆ ನಾವಿಲ್ಲ ಈ ಭೂಮಂಡಲದೊಳೆಂದು

ಸುಮನ.ಜಿ.ಕಾರಂತ್
ಮೂಡಬಿದ್ರೆ