...

3 views

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ



******************************

ಯಜ್ಞದ ಫಲವಾಗಿ ನೀ ಜನಿಸಿದೆ ರಾಮ
ದಶರಥನ ನೋವನ್ನು ನೀಗಿಸಿದೆ ರಾಮ
ಕೌಸಲ್ಯೆಯ ಮಡಿಲನ್ನು ತುಂಬಿದೆ ರಾಮ
ಗುರುವಿಗೆ ಸಹಾಯಹಸ್ತ ನೀಡಿದೆ ರಾಮ

ಸ್ವಯಂವರದಿ ಶಿವಧನಸ್ಸು ಮುರಿದೆ ರಾಮ
ಜನಕನ ಕುವರಿಯ ಹೃದಯವ ಗೆದ್ದೆ ರಾಮ
ಮಂಥರೆಯ ಮತ್ಸರಕ್ಕೆ ಗುರಿಯಾದೆ ರಾಮ
ಕೈಕೇಯಿಯ ಬಯಕೆಯ ಪೂರೈಸಿದೆ ರಾಮ

ಹದಿನಾಲ್ಕು ವರುಷ ವನವಾಸಗೈದೆ ರಾಮ
ಸೀತಾ ಲಕ್ಷಣ ನಿನ್ನ ಅನುಸರಿಸಿದರು ರಾಮ
ಸೋದರ ಭರತನ ಪ್ರೀತಿಗೆ ಶರಣಾದೆ ರಾಮ
ನಿನ್ನ ಪಾದರಕ್ಷೆಗಳನ್ನಿಟ್ಟು ಆಳಿದನು ರಾಮ

ಶೂರ್ಪನಖಿ ಅವಮಾನ ರಾವಣನಿಗೆ ರಾಮ
ದ್ವೇಷದ ಕಿಡಿಯು ಹತ್ತಿತು ಅವನಲ್ಲಿ ರಾಮ
ಮಾಯಾ ಜಿಂಕೆ ಜಾನಕಿ ಮನ ಗೆದ್ದಿತು ರಾಮ
ಸತಿ ಬಯಕೆ ಪೂರೈಸಲು ಬೆನ್ನ ಹತ್ತಿದೆ ರಾಮ

ಆಕ್ರಂದನ ಕೂಗು ವೈದೇಹಿಯ ಕಾಡಿತು ರಾಮ
ಲಕ್ಷ್ಮಣನೂ ನಿನ್ನ ಅರಸುತ್ತಲೇ ಬಂದನು ರಾಮ
ಸನ್ಯಾಸಿ ರೂಪದಲ್ಲಂದು ಸೀತಾಪಹರಣ ರಾಮ
ರಾವಣನ ಸಂಹರಿಸಿ ಜಾನಕಿಯ ಕರೆತಂದೆ ರಾಮ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ರಾಮ
ಮತ್ತಷ್ಟು ಹರಸೆನ್ನ ಜೀವಕ್ಕೆ ರಾಮ ರಾಮ
ನಿನ್ನಷ್ಟು ಕರುನಾಳು ಯಾರಿಲ್ಲ ರಾಮ ರಾಮ
ನೀ ಕೊಟ್ಟಷ್ಟೇ ಸಾಕೆನೆಗೆ ಓ ನನ್ನ ರಾಮ ರಾಮ

✍️ ಸೂಗಮ್ಮ ಡಿ ಪಾಟೀಲ್
ಉತ್ನಾಳ್