...

4 views

# ಕವಿತೆ#

ನಾಡು, ನುಡಿ,ಪ್ರಕೃತಿ
ಸಿರಿಗಂಧದ ಸಂಕ್ಷಿಪ್ತ  ದೀಪ್ತಿ
ಹೊನ್ನ ನುಡಿಯ
ಜೊನ್ನ ಬಾಂಧವ್ಯ ಕವಿತೆ

ಅನುದಿನದ ಕಥನದ  ಜಾಡನು
ಬಂಧಿಸುವ  ಜಾಲವದು ಕವಿತೆ
ಭರಿಸಲಾರದ ಭಾವಗಳನು
ವಿವರಿಸುವ  ಹೊತ್ತಿಗೆ ಯದು ಕವಿತೆ

ಸಪ್ತಸ್ವರಗಳಲಿ ಅಡಗಿರುವ
ಅಂತರಂಗದ ನಾದ ಕವಿತೆ
ತನು ಮನಗಳ ತಂಪಾಗಿಸುವ
ತಲ್ಲಣಗಳಡಗಿರುವ ತಾಣ ಕವಿತೆ

ಮಸ್ತಕದ ತೊದಲು ತೆರವುಗೊಳಿಸುವ
ಸುಪ್ತ ಚೇತನ  ರೂಪ ಕವಿತೆ
ರಸನೆಯ ಸಂಧಿಸುವ  ರಸಭಾವ
ತೋರಿಕೆಯ ಬಂಧ ಕವಿತೆ

ಅರ್ಥವಾಗಿಯೂ ಅರ್ಥವಾಗದಂತಿರುವ
ಅರ್ಥವಾಗದಿದ್ದರೂ ಅರ್ಥವಾದಂತಿರುವ
ಹೇಳಿಯೂ ಹೇಳದಂತಿರುವ
ಮನೋಜ್ಞ ಓಘವೀ ಕವಿತೆ

ಅಂಡಲೆಯುವ ಮನದ
ಚಂದದ ರೂಪುರೇಷೆ ಕವಿತೆ
ಶ್ರೀ ಶಕ್ತಿಯ ಒಲವು ಪಸರಿಸಿದ
ಸಂಮೋಹನಮತಿ ಕವಿತೆ
✍️ ರಶ್ಮಿ ಭಟ್.