...

7 views

ಬಿಸಿಯೂಟ
ಬಲ್ಲವರು ಬಡಿಸಿದರು ಬಿಸಿಯೂಟವ,
ಬಳಲಿ ಬಂದವರಿಗೆ ಬಹುಧಾನ್ಯವ.

ಬಲವಂತವಿಲ್ಲ, ಬಲೆ ಬೀಸಲಿಲ್ಲ,
ಬಳಿಗೆ ಬಂದವರನು ಬೇಡೆನ್ನಲಿಲ್ಲ.
ಬಡಿಸಿದರು, ಬೆಳಸಿದರು ಬೇಧವಿಲ್ಲದವರು,
ಬಳಸಿದರೂ, ಬಿಟ್ಟರೂ ಬಾಧೆಗೊಳಗಾಗರು.

ಬಡಕಲಾದರೂ ಬಡಿವಾರವೆಮಗೆ,
ಬರಡು ಬದುಕಿನಲೂ ಬಣ್ಣವಾತುಗಳು.
ಬಟ್ಟಲಲಿ ಭಕ್ಷ್ಯವನಿತ್ತರೂ ಬಯಸದೆ,
ಬಣವೆಯಲಿ ಬಂಕವನರಸುವೆವು.

ಬದಲಾಗಬೇಕಿದೆ ಬಾಳು ಬಂಗಾರವಾಗಲು,
ಬಂಜರು ಬಾಳಿಗೆ ಬಾಂದೊರೆಯನೀಯಲು.
ಬೆಳೆದು, ಬಲಿತು ಬಾಧ್ಯಸ್ಥರಾಗಲು,
ಬಳಲಿ ಬಂದವರಿಗೆ ಬಿಸಿಯೂಟ ಬಡಿಸಲು.

ಬಡಿವಾರ - ಒಣಜಂಬ
ಬಣ್ಣವಾತು - ತೋರಿಕೆಯ ನುಡಿ
ಬಂಕ - ಸಿಪ್ಪೆ
ಬಾಂದೊರೆ - ದೇವಗಂಗೆ
© ಕೃಷ್ಣಕವಿ
#ಕೃಷ್ಣಕವಿ #ಏಕಾಕ್ಷರ_ಕವನ #ಊಟ