...

1 views

ನೀವೇನಂತೀರಿ
ಭಾವ ವರ್ಷ

ಬಿಂದು ~ ೮

ನೀವೇನಂತೀರಿ?

ಇತಿಹಾಸದ ಅವಲೋಕನ
ವರ್ತಮಾನಕ್ಕೆ ಹಿಡಿದ ದರ್ಪಣ
ಕಲ್ಪನೆಗಳ ಸಿಹಿಕಹಿ ಅನಾವರಣ
ತಿಟ್ಹತ್ತಿ ತಿರುಗಿ ನೋಡಿದ ಹಾಗೆ

ಭೂತದ ನೆರಳುಗಳ ಕುಣಿದಾಟ
ಗತದ ದೃಶ್ಯಗಳ ಪುನರ್ ನೋಟ
ಕೃತ್ಯಕ್ಕೆ ಹೊಸ ಅರ್ಥ ಹಚ್ಚುವಾಟ
ನಮ್ನಮ್ಮ ಮೂಗಿನ ನೇರಕ್ಕೇ ನೋಟ

ಘಟನೆ ನಡೆಯಿತೋ ಇಲ್ಲವೋ
ನಡೆದುದೆಲ್ಲ ಚರಿತ್ರೆಯೇ ಆಯಿತೋ
ಒಟ್ಟಲ್ಲಿ ಹಿರಿಯರ ಕಥೆ ಕೇಳುವಾಟ
ಅಭಿಪ್ರಾಯ ಕಂತೆಗಳ ಹೇರಾಟ

ಮೆರೆದು ಮಣ್ಣಾದವರೇ ಇರಲಿ
ಸರಿದು ಹೆಸರಾದವರೇ ಆಗಲಿ
ಹೇಳುವುದು ಒಂದೇ ಒಂದು ಪಾಠ
ಕಾಲ ಚಲನಶೀಲ ನಿಲ್ಲದ ಓಟ

ಕೇಳಿದ್ದು ಅಲ್ಲೇ ಗಾಳಿಗೆ ತೂರಿದರೆ
ಓದಿದ್ದು ಹಾಗೇ ಮರೆತುಬಿಟ್ಟರೆ
ಏನ ಮಾಡಿದರೂ ಬಿಡದಿರೆ ಸ್ವಾರ್ಥ
ಇತಿಹಾಸದ ಮನನಕ್ಕಿದೆಯೇ ಅರ್ಥ

ಸುಜಾತಾ ರವೀಶ್
ಮೈಸೂರು
೧೮.೧೧.೨೦೨೨