...

9 views

ಆತ್ಮ ತೃಪ್ತಿ
ಮುಳುಗುವ ಸೂರ್ಯನನ್ನು ಎವೆಯಿಕ್ಕದೆ ನೋಡುತ್ತಿದ್ದ ಕಂಗಳಿಂದ ಅರಿವಿಲ್ಲದೆ ಕಂಬನಿ ಜಾರಿದಾಗ ವಾಸ್ತವಕ್ಕೆ ಬಂದಳು ರಾಧಾ. ಅದೇಕೋ ವರ್ಷಗಳಿಂದ ಅಂತರ್ಗರ್ಭದಲ್ಲಿ ಹುದುಗಿ ಹೋಗಿದ್ದ ನೋವುಗಳೆಲ್ಲ ಪದೇ ಪದೇ ಕಾಡತೊಡಗಿದವು. ಪುರುಷ ಪ್ರಧಾನ ಸಮಾಜದಲ್ಲಿ ಅದೇಗೆ ಎಲ್ಲರ ಕೈ ಗೊಂಬೆಯಾಗಿ ಬಿಟ್ಟೆ ಎಂದು ಅವಳ ಆಂತರ್ಯವೇ ಅವಳನ್ನು ಪ್ರಶ್ನಿಸಿತು. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂದು ತವರು ಮನೆ ಅಂತೂ ಕೈ ಬಿಟ್ಟಾಗಿತ್ತು. ಆದರೆ ಕೊಟ್ಟ ಮನೆಯವರು ಕೈ ಬಿಟ್ಟರೇ? ಜೊತೆಗೆ ಕಂಕುಳದಲ್ಲಿ ಮಲಗಿದ್ದ ಪುಟ್ಟ ಕಂದಮ್ಮ ಬೇರೆ. ಬಹುಷಃ ಆ ಮಗುವಿನ ಅಳುವೇ ನನಗೆ ಬದುಕಲು ಅಂದು ಧೈರ್ಯ ತುಂಬಿತ್ತೇನೋ? ತಳ್ಳಿದವರ ಮುಂದೆ ಎದ್ದು ಸ್ವಾಭಿಮಾನದಿಂದ ನಡೆಯಲು ನಾನು ಮಾಡಿದ ಹೋರಾಟ ಪಟ್ಟ ಪಾಡು ಎಲ್ಲಾ ಕಣ್ಣ ಮುಂದೆ ಬಂದು ನಿಂತಾಗ ಏನೋ ಒಂದು ತರಹದ ಆತ್ಮ ತೃಪ್ತಿ. ಅಂತೂ ಕಂಕುಳದಲ್ಲಿದ್ದ ಮಗ ಹೆಗಲೆತ್ತರಕ್ಕೆ ಬಂದು ನಿಂತಾಗ ಅವನಿಗೂ ನಾನು ಬೇಡವಾಗಿದ್ದೆ. ಅವನ ಸ್ವೇಚ್ಛೆಯ ಬದುಕಿಗೆ ನಾನು ಅಡ್ಡಿಯಾಗಿದ್ದೆ. ಬದುಕಿನ ಪ್ರತಿ ತಿರುವನ್ನು ಸ್ವೀಕರಿಸಿದ ನನಗೆ ಇದೇನೂ ಹೊಸತು ಎನಿಸಿರಲಿಲ್ಲ. ಅಂತೂ ಮಗನಿಂದಲೂ ದೂರವಾಗಿ ಮುಪ್ಪಿನಲ್ಲಿ ನನ್ನ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಹೊರಟಿದ್ದೆ. ಆಗ ಕಂಡ ದಾರಿಯೇ ಈ ಅನಾಥಶ್ರಮ. ನನಗೂ ಪ್ರೀತಿಯ ಅವಶ್ಯಕತೆ ಬಿಟ್ಟು ಬೇರಾವದು ಇರಲಿಲ್ಲ. ಇನ್ನು ಈ ಪುಟ್ಟ ಮಕ್ಕಳಿಗೂ ತಾಯಿ ಪ್ರೀತಿ ಬಿಟ್ಟು ಬೇರೆ ಅವಶ್ಯಕತೆ ಗೋಚರಿಸಲಿಲ್ಲ. ಮುಂದಿನ ಜೀವನ ಇಲ್ಲೇ ಎಂದು ನಿರ್ಧರಿಸಿ ಇಲ್ಲೇ ಉಳಿದುಬಿಟ್ಟೆ. ಆ ಪುಟ್ಟ ಮಕ್ಕಳ ನಗು ತೊದಲ ನುಡಿ ಏನೋ ಆತ್ಮ ತೃಪ್ತಿಯ ಅನುಭೂತಿ. ಎಷ್ಟೋ ಬಾರಿ ಹಲವರು ಕೇಳಿದ್ದಿದೆ ಇಷ್ಟೆಲ್ಲ ಆದರೂ ಒಂದು ಬಾರಿ ನೀನು ಅತ್ತದಂತು ಕಂಡಿಲ್ಲ ನಿನ್ನ ಬದುಕಿನ ಬಗ್ಗೆ ನಿನಗೆ ಬೇಸರವಿಲ್ಲವೇ ಎಂದು?.. ಅತ್ತು ಅತ್ತು ಕಂಬನಿ ಬತ್ತಿರುವಾಗ ಏನೆಂದು ಕಣ್ಣೀರು ಹಾಕಲಿ? ಆದರೆ ಇಂದೇಕೋ ಜೀವನದ ಹಾದಿ ನೆನಪಾಗಿ ಬಿಟ್ಟಿತು. ಈ ಎಲ್ಲಾ ನೆನಪಿಗೂ ಇತಿಶ್ರೀ ಹಾಡಿ ಕಂಬನಿ ವರೆಸಿಕೊಂಡು ಮುಂದೆ ಸಾಗುವಾಗ ಪುಟ್ಟ ಮಗುವೊಂದು ರಾಧಾ ಆಯಿ ಎಂದು ನಗುತ್ತಾ ಓಡಿ ಬಂದು ತಬ್ಬಿದಾಗ ಲೋಕವನ್ನೇ ಮರೆತು ಮಗುವೊಂದಿಗೆ ಮಗುವಾದಳು ರಾಧಾ.
© Shreeprabha