...

5 views

ಆಷಾಢ ಮಾಸದಲ್ಲಿ..
ಈ ಆಷಾಢ ಮಾಸ ಬಂದರೇನೆ ಭಯ. ಕಗ್ಗತ್ತಲೆ ಕವಿದು ಬಿಡದೆ ಸುರಿವ ಮಳೆ, ನೆರೆ ಬಂದು ಜಲಾವೃತಗೊಳ್ಳುವಾಗ ಮನೆಯೊಳಗಿನ ಜನರು, ಸಾಕುಪ್ರಾಣಿಗಳು, ಜಾನುವಾರುಗಳ ದೇಹ ತಂಡಿಗಟ್ಟಿ ಹೋಗಿರುತ್ತದೆ. ಹೊರಗೆ ದುಡಿಮೆಗೆ ಹೋಗಲು ಕಷ್ಟ. ದಿನ ಕಳೆಯುವುದೂ ಕಷ್ಟ.
ಕೂಡಿಟ್ಟ ಹಣ, ಶೇಖರಿಸಿಟ್ಟ ಆಹಾರದಲ್ಲೇ ದಿನ ದೂಡಬೇಕಾದ ಪರಿಸ್ಥಿತಿ. ಹೀಗೆ ಒಂದಷ್ಟು ಕಷ್ಟ-ನಷ್ಟ ಪ್ರಾಣಹಾನಿ ಆಸ್ತಿಪಾಸ್ತಿ ಹಾನಿ ಎಲ್ಲವೂ ಸಂಭವಿಸುತ್ತದೆ.

ಆಷಾಢ ಮಾಸ ಎಂದರೆ ಏನು?
ಜುಲೈ ಮಾಸವೇ ಆಷಾಢ ಮಾಸ. ಕಾರ ತಿಂಗಳು ಕಾರ ಅಮವಾಸ್ಯೆ ಮುಗಿದ ತಕ್ಷಣ ಆಷಾಢ ಮಾಸ ಪ್ರಾರಂಭ. ಈ ಮಾಸದಲ್ಲಿ ವಿಪರೀತವೆಂದರೆ ವಿಪರೀತ ಮಳೆಯಾಗುತ್ತದೆ . ಗುಡುಗು ಮಿಂಚು ಮಾರುತಕ್ಕೆ ಸಿಲುಕಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಶಾಲಾ ಕಾಲೇಜಿಗೆ ರಜೆ ಘೋಷಿಸುವ ಪರಿಸ್ಥಿತಿ ಎದುರಾಗುತ್ತದೆ. ನೆರೆ ಹಾವಳಿ ಬಂದು ತಾವು ಇರುವ ಜಾಗ ಜಲಾವೃತವಾದರಂತೂ ಅಲ್ಲಿಂದ ಒಕ್ಕಲೆಬ್ಬಿಸಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇತ್ತೀಚೆಗೆ ಹತ್ತು ವರುಷಗಳಿಂದ ಪ್ರಕೃತಿ, ವಾತಾವರಣ ಬದಲಾದಂತೆ ಕಾಣುತ್ತದೆ. ಒಂದೋ ವಿಪರೀತ ಮಳೆ, ಅಕಾಲಿಕ ಮಳೆ, ಗುಡ್ಡ ಕುಸಿತ, ಪ್ರವಾಹ, ಅಥವಾ ಬರಗಾಲ. ನೀರಿನ ಕೊರತೆ. ಹೀಗೆ ಅನಾಹುತಗಳು ಸಂಭವಿಸುತ್ತಲೇ ಬಂದಿವೆ. ದೇಶವಲ್ಲದೇ ವಿದೇಶಗಳಲ್ಲಿಯೂ ಅಂದರೆ ಪ್ರಪಂಚದಾದ್ಯಂತ ಪ್ರಕೃತಿ ವಿಕೋಪಗಳು ಸಂಭವಿಸಿದೆ.

ಆಷಾಢ ಮಾಸ ಒಳ್ಳೆಯದೇ ಎಂದು ಯೋಚಿಸಿದರೆ ಇದೇ ಮಾಸದಲ್ಲಿ ಚಾತುರ್ಮಾಸದಂತಹ ವೃತಗಳ ಆಚರಣೆ ನಡೆಸಲಾಗುತ್ತದೆ. ದೇವಾಲಯಗಳಲ್ಲಿ ಪೂಜೆಗಳು ಮಾಮೂಲಿಯಾಗಿ ನಡೆಯುತ್ತದೆ. ವಿಶೇಷ ಸೇವೆಗಳು ಇರುವುದಿಲ್ಲ. ಕಾಳುಮೆಣಸು, ಕಾಳುಜೀರಿಗೆ, ಹೆಸರು ಕಾಳು, ಹೆಸರುಬೇಳೆ, ಹುರುಳಿಯಂತಹ ಆಹಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಕಾರಣ, ಅಜೀರ್ಣವಾಗಬಾರದು ಎಂದು. ಆಷಾಢದ ಮಳೆಗಾಲದಲ್ಲಿ ತಂಡಿಗಟ್ಟಿದ ವಾತಾವರಣವಿರುವ ಕಾರಣ ದೇಹವನ್ನು ಬೆಚ್ಚಗಿರಿಸುವುದು ಅತೀಮುಖ್ಯ. ಅಲ್ಲದೇ ಅತಿವೇಗವಾಗಿ ಜೀರ್ಣವಾಗುವ ಆಹಾರ ಸೇವನೆ ಕೂಡ ಮುಖ್ಯವಾಗುತ್ತದೆ. ಹಾಗಾಗಿ ನಾವು ಅತ್ತಕಡೆಗೆ ಗಮನ ಹರಿಸಬೇಕಾಗುತ್ತದೆ.

ಆಷಾಢ ಮಾಸದಲ್ಲಿ ಚಂದ್ರನು ಎರಡು ನಕ್ಷತ್ರಗಳ ನಡುವೆ ಇರುತ್ತಾನೆ. ಪೂರ್ವಾಷಾಢ ಹಾಗೂ ಉತ್ತರಾಷಾಢ ನಕ್ಷತ್ರಗಳ ನಡುವೆ ಚಂದಿರನಿರುತ್ತಾನೆ. ಆಷಾಢದಲ್ಲಿ ಕರ್ಕಾಟಕರಾಶಿಯಲ್ಲಿ ಸೂರ್ಯನಿರುವ ಕಾಲವನ್ನು ಶೂನ್ಯಮಾಸವೆಂದು ಪರಿಗಣಿಸುತ್ತಾರೆ. ಈ ತಿಂಗಳಿನ ಶುಕ್ಲಪಕ್ಷದ ಏಕಾದಶಿಯಂದು ದಕ್ಷಿಣಾಯನ ಪ್ರಾರಂಭದ ಕುರುಹಾಗಿ ದೇವಾಲಯಗಳಲ್ಲಿ ಡೋಲೋತ್ಸವ ನಡೆಯುತ್ತದೆ. ತೀರ್ಥಯಾತ್ರೆ ದೇವರ ಪ್ರಾರ್ಥನೆ, ಜಪತಪ ಮಾಡಲು ಯೋಗ್ಯವಾದ ಮಾಸ‌. ಚಾತುರ್ಮಾಸ್ಯವ್ರತ ಪ್ರಾರಂಭ. ಭಗವಾನ್ ವಿಷ್ಣು ದೀರ್ಘಕಾಲದ ವಿಶ್ರಾಂತಿಯನ್ನು ಬಯಸುತ್ತಾನೆ. ಎಂಬುದು ಪ್ರತೀತಿ. ಹಾಗಾಗಿ ಯಾವುದೇ ಶುಭಕಾರ್ಯಗಳು ನಡೆಯುವುದಿಲ್ಲ. ಪ್ರವಚನಗಳನ್ನು ನಡೆಸುತ್ತಾರೆ‌. ಕೆಲವು ಕಡೆ ಎಪ್ರಿಲ್ ಮೇ ತಿಂಗಳಿನಲ್ಲಿ ಮದುವೆಯಾದ ನವ ವಿವಾಹಿತೆ ಆಷಾಢದಲ್ಲಿ ಪತಿಯ ಗೃಹದಲ್ಲಿರದೆ ತವರು ಮನೆಯಲ್ಲಿರುತ್ತಾರೆ. ಅತ್ತೆ ಸೊಸೆ ಜೊತೆಗಿರಬಾರದೆಂಬ ಸಂಪ್ರದಾಯವಿದೆ. ಅಲ್ಲದೇ ಆಷಾಢ ಮಾಸದ ಪ್ರತಿ ಶುಕ್ರವಾರವೂ ವಿಶೇಷ ಪೂಜೆಗಳು ನಡೆಯುತ್ತವೆ.

ಈ ಮಾಸದಲ್ಲಿ ಪಿತೃಗಳ ಪೂಜೆ ಮಾಡುವುದು ವಿಶೇಷ. ಭಗವಾನ್ ವಿಷ್ಣುವಿನ ಆರಾಧನೆ ಅತೀ ಪ್ರಮುಖವಾಗಿದೆ. ಕೃಷಿಕರಿಗೆ ಈ ಮಾಸವು ಬಹಳ ಮುಖ್ಯವಾದ ಮಾಸ. ಬೇಸಿಗೆಯ ಬಿರುಬಿಸಿಲು ಕಳೆದು ಮಳೆ ಸುರಿದು ಬಾವಿ, ಕೆರೆ, ಹೊಳೆ ನಾಲೆ, ನದಿಗಳೆಲ್ಲವೂಹರಿಯುವ ಕಾಲ. ರೈತರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವರು.

ಅಲ್ಲದೇ ಈ ಮಾಸದಲ್ಲಿ ಮಾರಕ ಕಾಯಿಲೆಗಳು ಎದುರಾಗುತ್ತವೆ. ವಿಪರೀತ ಮಳೆ, ನೆರೆ ಬಂದು ನೀರು ನಿಲ್ಲುವುದು, ಸೊಳ್ಳೆ ಇತರೆ ಕೀಟಾಣುಗಳ ಹಾವಳಿಯಿಂದ, ಶೀತ ಮಾತುರದಿಂದ ಅನಾರೋಗ್ಯ ಸಂಭವಿಸುತ್ತದೆ. ಹಾಗಾಗಿ ಮನೆ‌ ಸುತ್ತ ಬೆಂಕಿ ಹಚ್ಚಿ ಬೆಚ್ಚಗಿರಿಸುವಂತೆ ನೋಡಿಕೊಳ್ಳುವುದು ಒಳಿತು.

© Writer Sindhu Bhargava