...

0 views

ಸಾಹಿತ್ಯಕ್ಷೇತ್ರ
ಸಾಹಿತ್ಯಕ್ಷೇತ್ರ - ನವೆಂಬರ್ ೦೧ ಕನ್ನಡ ರಾಜ್ಯೋತ್ಸವ.
******************************
ಬರಹಲೋಕದಲ್ಲಿರುವ ‌ನಮಗೆ ನವೆಂಬರ್ ೦೧ ಮಾತ್ರವೇ ಕನ್ನಡ ರಾಜ್ಯೋತ್ಸವವಲ್ಲ ಎಂದರೂ ತಪ್ಪಾಗಲಾರದು. ಅಲ್ಲದೇ ಅದನ್ನು ಒಪ್ಪುವುದೂ ಸರಿಯಲ್ಲ. ನಮ್ಮ ಬರಹ, ನಮ್ಮ ಆಲೋಚನೆ, ಮಾತುಕತೆ ವಿಚಾರಧಾರೆ ಎಲ್ಲವೂ ಕ‌ನ್ನಡ ಭಾಷೆಯಿಂದಲೇ ಮೊದಲ್ಗೊಳ್ಳುವ ಕಾರಣ ನಮಗೆ ಯಾವಾಗಾಲೂ ಸಂಭ್ರಮವೇ.. ಒಂದು ಸಣ್ಣ ಚುಟುಕು ಬರೆದರೂ ಆಗುವ ಖುಷಿ ಅಷ್ಟಿಷ್ಟಲ್ಲ. ಅಲ್ಲಲ್ಲಿ ಸಾಹಿತ್ಯ ಬಳಗಗಳನ್ನು ಕಟ್ಟಿಕೊಂಡು ಪ್ರತಿದಿನ ಸ್ಪರ್ಧೆಗಳ ನಡೆಸುವ ಮೂಲಕ ಬರಹಗಾರರಿಗೂ ತಮ್ಮ ಬರವಣಿಗೆಯಲ್ಲಿ ಪಕ್ವವಾಗುವಂತೆ ಪ್ರೋತ್ಸಾಹ ನೀಡುತ್ತ ಬಂದಿರುವ ಅನೇಕ ನಿರ್ವಾಹಕರ ಕಾರ್ಯವೂ ಶ್ಲಾಘನೀಯ.

ಆದರೆ ಕವನ, ಲೇಖನ ಕತೆಗಳಲ್ಲಿ ಆಂಗ್ಲಪದಗಳ ಬಳಕೆಯನ್ನು ಆದಷ್ಟು ಕಡಿಮೆಮಾಡಬೇಕು ಎಂಬುದು ನನ್ನ ಭಾವನೆ. ಥಟ್ಟೆಂದು ಆಂಗ್ಲಪದ ನೆನಪಾದರೂ ಅದರ ಪೂರಕ ಸಮಾನಾರ್ಥಕ ಕನ್ನಡ ಪದವನ್ನು ಹುಡುಕಿ ಬರೆಯುವುದೇ ಸೂಕ್ತ. ಅಕ್ಷರ ದೋಷ, ಹಕಾರ ಳಕಾರ ದೋಷಗಳನ್ನು ಸರಿಪಡಿಸಿಕೊಳ್ಳಲೇಬೇಕು. ಬರೆಯುವಾಗ ಗಡಿಬಿಡಿ ಮಾಡದೇ ಎರಡು ಮೂರು ಬಾರಿ ಯೋಚಿಸಿ ಓದಿ ಬರೆದರೆ ಒಳ್ಳೆಯದು. ಸೂಕ್ತ ಕನ್ನಡ ಪದಗಳು ಮೆರುಗು ಹೆಚ್ಚಿಸುವುದೇ ವಿನಃ ಕುಂದಿಸುವುದಿಲ್ಲ.

ನಮ್ಮ ಬಳಗದಲ್ಲಿ ಹಿರಿಯರಿಂದ ಹಿಡಿದು ಕಿರಿಯರಾದಿಯಾಗಿ ಅನೇಕ ಕವಿಗಳು, ಲೇಖಕರು, ಯುವ ಕವಿಗಳು ಈ ವರುಷದಲ್ಲಿ ಸಾಹಿತ್ಯಲೋಕಕ್ಕೆ ಪಾದಾರ್ಪಣೆ ಮಾಡಿರುವಿರಿ. ಸರ್ವರಿಗೂ ಶುಭಹಾರೈಕೆಗಳು💐.

ಇನ್ನಷ್ಟು ಓದಿರಿ, ಅಧ್ಯಯನಶೀಲರಾಗಿ. ಹೊಸಹೊಸ ಪ್ರಯೋಗಗಳನ್ನು ಮಾಡಿ. ಕೇವಲ ಕವನ ಬರೆಯುವುದಲ್ಲದೇ ಅನುವಾದಕರು, ಮಕ್ಕಳ ಸಾಹಿತಿಗಳು, ಲೇಖಕರು, ಸಾಹಿತಿಗಳ ಅವಶ್ಯಕತೆಯಿದೆ. ಕವಿಗಳಾಗುವುದು, "ಕವಿಗಳು" ಎಂದು ಕರೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಕೃತಿ ಬಿಡುಗಡೆಯಾದ ಮೇಲೆ ಕವಿಗಳಿಗೆ ಜವಾಬ್ದಾರಿ ಹೆಚ್ಚಾಗುತ್ತದೆ. ಕನ್ನಡಾಭಿಮಾನವನ್ನು ತನುಮನದಲ್ಲಿ ತುಂಬಿಸಿಕೊಂಡು ನಡೆದಂತೆ ನುಡಿಯುವುದು, ಬರಹದಂತೆ ಬದುಕುವುದು ಅಷ್ಟು ಸುಲಭದ ಮಾತಲ್ಲ, ಮೈತುಂಬಾ ಜಾತಿ ಮತದ ತಾರತಮ್ಯ ಭೂತವನ್ನು ತುಂಬಿಸಿಕೊಂಡು ಅದರ ವಿರುದ್ಧವಾಗಿ ಲೇಖನವನ್ನು ಬರೆದು ಭೇಷ್ ಎಂದು ಒಂದಷ್ಟು ಮೆಚ್ಚುಗೆ ಹಂಚಿಕೆ ಪಡೆಯುವುದಲ್ಲ. ನಮ್ಮ‌ ನಾಡು ನುಡಿ‌ ಉದ್ಯೋಗ, ನೀರಿನ ಸಮಸ್ಯೆ ಯಾವಾಗ ಎದುರಾದರೂ ಚಳುವಳಿಯಲ್ಲಿ ಪಾಲ್ಗೊಳ್ಳುವ ಸಮಾಜದಲ್ಲಿ ಬದಲಾವಣೆ ತರುವಲ್ಲಿ ಮುಂದಡಿಯಿಡುವ, ಅನ್ಯಾಯದ ವಿರುದ್ಧ ದನಿ ಎತ್ತುವ ಕೆಲಸವಾಗಬೇಕು. ಆ ಎದೆಗಾರಿಕೆಯಿರಬೇಕು. ನಿಮ್ಮ ಬರಹಗಳನ್ನು ಎಲ್ಲರೂ ಒಪ್ಪಬೇಕೆಂದೇನು ಇಲ್ಲವಲ್ಲ, ತಪ್ಪುಗಳನ್ನು ಹುಡುಕಬಹುದು, ಕೆಲವರು ವಿರೋಧಿಸಬಹುದು, ಅಂತಹ ಸಂಧರ್ಭದಲ್ಲಿ ಮಾತಿನಿಂದ ದಾಳಿ ಮಾಡಿದರೂ, ವಿರೋಧಿಸಿದರೂ ಟೀಕಿಸಿದರೂ ಹೆದರದೇ ನಿಮ್ಮ ನಿಲುವಿಗೆ ಸಂಪೂರ್ಣವಾಗಿ ಬದ್ಧರಾಗಿರಬೇಕು. ನಮ್ಮ ಬರಹದ ಉದ್ದೇಶ, ಇನ್ನೊಬ್ಬರ ತಪ್ಪು ಹೇಳಿಕೆಗಳನ್ನು ವಿರೋಧಿಸಬೇಕು. ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಬರಹಗಾರರಾಗಲಿ ಕವಿಗಳಾಗಲಿ ತಮ್ಮತನವನ್ನು ಯಾರಿಗೂ ಮಾರಿಕೊಳ್ಳದೇ ಸ್ವತಂತ್ರವಾಗಿರಬೇಕು.

ಎಲ್ಲರಿಗೂ ಶುಭವಾಗಲಿ.

ಮತ್ತೊಮ್ಮೆ ಮಗದೊಮ್ಮೆ ನಾಡಿನ ಸಮಸ್ತ ಜನತೆಗೂ ನಮ್ಮ ಬಳಗದ ಕವಿ ಮಿತ್ರರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

- ತುಳಸಿ ( ಲೇಖಕಿ ಸಿಂಧು ಭಾರ್ಗವ ಬೆಂಗಳೂರು)


ನಿರ್ವಾಹಕರು, ಸಂಪಾದಕರು, ಮಕ್ಕಳ ಕತೆಗಾರರು.