...

8 views

ಆಪ್ತತೆ
#ಆಪ್ತತೆ



ಎಷ್ಟೊಂದು ಬದಲಾವಣೆ ,ತಾಂತ್ರಿಕತೆಯಿಂದ. ಕೂತಲ್ಲೇ ಇಡೀ 
ಜಗತ್ತನ್ನು ವೀಕ್ಷಿಸುವ ಸೌಭಾಗ್ಯ. ಎಲ್ಲವೂ ನಿಜ.ಆದರೆ ನಾವೆಲ್ಲ 
ನಮ್ಮ ಮುಗ್ಧತೆಯನ್ನು ಕಳೆದುಕೊಂಡಿದ್ದೇವೆ.ನಮ್ಮೊಳಗಿನ ಆಪ್ತತೆಯನ್ನು ಕಳೆದುಕೊಂಡಿದ್ದೇವೆ.ನಿಜಾರೀ..ಅಂದು ಪೋನ್ ಇರಲಿಲ್ಲ... ಟಿವಿ ತುಂಬಾ ಅಪರೂಪ... ಅಂಚೆಕಛೇರಿಯದೇ 
ದರ್ಬಾರು...ನಮ್ಮ ಭಾವನೆಗಳನ್ನು ಅಕ್ಷರ ಮುಖೇನ ಭಟ್ಟಿ ಇಳಿಸಿ,ತುಂಬಾ ದೂರದಲ್ಲಿ ಇದ್ದರೂ ಅತೀ ಹತ್ತಿರವಾಗಿ ಬಿಡುತ್ತಾ ಇದ್ವಿ ಮಾನಸಿಕವಾಗಿ..
ನಾನಾಗ ಐದನೇ ಕ್ಲಾಸು...ನನ್ನ ದೊಡ್ಡಮ್ಮನ ಮನೆಯಲ್ಲಿ ಉಳಿದು ಶಾಲೆಗೆ ಹೋಗ್ತಿದ್ದೆ.ಅಪ್ಪ, ಅಮ್ಮನ ಬಿಟ್ಟಿರುವುದು ತುಂಬಾ ಕಷ್ಟವಾಗಿತ್ತು. ಎಷ್ಟೋ ಸಲ ನಾನೊಬ್ಬಳೇ ಅಳುತ್ತಾ ಕೂತು ಬಿಡುತ್ತಿದ್ದೆ..ಅಂತ ಸಮಯದಲ್ಲಿ ನನಗೆ ಅಂಚೆಕಛೇರಿ ತುಂಬಾ ಆಪ್ತ ಎನಿಸಿತು..ಅಪ್ಪ ಬರೆದ ಪತ್ರ ಓದುತ್ತಾ ಸಮಾಧಾನ ಪಟ್ಟು ಕೊಳ್ಳುತ್ತಿದ್ದೆ...
ಆಗೆಲ್ಲ ಭಿಕ್ಷುಕರು ತುಂಬಾ ಬರುತ್ತಿದ್ದರು.ಅಂತವರಲ್ಲಿ ತಾಯಿ,ಮಗಳಿಬ್ಬರು ಪರಿಚಯ ಆಗಿದ್ದು.ಮಗಳು ಬಾಣಂತಿ,ಅಮ್ಮ ..ಹಸಿ ಬಾಣಂತಿ ಮಗಳು.ಚೂರು ಬೆಲ್ಲ, ಕೊಬ್ಬರಿ ಕೊಡು ತಾಯಿ ಅಂದಾಗ ಆ ಅರಿಯದ ವಯಸ್ಸಿನಲ್ಲೂ ನನಗೆ ಅಚ್ಚರಿ. ಬಾಣಂತಿ ಅಂದರೆ ಬಾಣಂತಿ ಕೋಣೆಯಲ್ಲಿ ಇಡಬೇಕು.ನೀ ಯಾಕೆ ಇವಳನ್ನು ಇಂತ ಬಿಸಿಲಿಗೆ 
ಕರ್ಕೊಂಡು ಬರ್ತೀಯಾ ಅನ್ನುವ ನನ್ನ ಪ್ರಶ್ನೆಗೆ ಆ ತಾಯಿ ,ಅಮ್ಮ ನಾವು ಏನೂ ಇಲ್ಲದವರು,ಬೇಡಿದರೆ ಮಾತ್ರ ನಮಗೆ ಒಂದು ಹೊತ್ತು ಊಟ ಅಂದಾಗ ನನ್ನ ಪುಟ್ಟ ಮನಸ್ಸಿಗೆ ತುಂಬಾ ಸಂಕಟ ಆಗಿದ್ದು ಸುಳ್ಳಲ್ಲ... ಯಾಕೆಂದರೆ ಆ ಸಂದರ್ಭದಲ್ಲಿ ನನ್ನ ಅಕ್ಕ ಬಾಣಂತಿ ಆಗಿದ್ದಳು..ಅವಳಿಗೆ ಮಾಡುವ ಆರೈಕೆ ನೋಡಿದ್ದೆ ನಾನು.ಅಲ್ಲಿಂದ ಆ ಭಿಕ್ಷುಕ ತಾಯಿ ,ಮಗಳು ಆಪ್ತರಾದರು...ಅವರಿಗೆ ನನ್ನ ಕೈಲಾದದ್ದು ನೀಡುತ್ತಿದ್ದೆ.ಊರಿಗೆ ಹೋದಾಗ ಅಮ್ಮನಿಂದ ನನ್ನ ಬಟ್ಟೆ ಮತ್ತು ಅಮ್ಮ ನ ಸೀರೆಯನ್ನು ಕಾಡಿ ಬೇಡಿ ಅವರಿಗೆ ತಂದುಕೊಡುತ್ತಲಿದ್ದೆ..ನಾನು ಊರಿಗೆ ಹೋದಾಗ ಅವರು ಅಲ್ಲಿಗೂ ಬೇಡಲು ಬಂದಾಗ ನನ್ನ ಸಂಭ್ರಮ ಹೇಳತೀರದು.ಊರು ಸುತ್ತಿ ಬೇಡಿಕೊಂಡು ಬಂದು ,ಕೊನೆಯಲ್ಲಿ ನಮ್ಮ ಮನೆಯಲ್ಲಿ ಊಟ ಅವರಿಗೆ... ನಾನು ಮತ್ತೆ ಶಾಲೆಗೆ ದೊಡ್ಡಮ್ಮನ ಮನೆಗೆ ಮರಳಿದ ಮೇಲೆ ,ಈ ಭಿಕ್ಷುಕ ತಾಯಿ ,ಮಗಳು ನಿಮ್ಮ ಊರಿಗೆ ಹೋಗಿದ್ದೆ 
ತಾಯಿ.ಅಪ್ಪ, ಅಮ್ಮ ಎಲ್ಲ ಚಂದಾಕವ್ರೇ ಅಂದಾಗ ಆಗಿದ್ದ ಖುಷಿಗೆ ಪಾರವೇ ಇರಲಿಲ್ಲ ನನಗೆ. ನಮ್ಮ ಮನೆ ಕಡೆ ಹೋದಾಗ ಅಮ್ಮನ ಬಳಿ..ತಾಯಿ ನಿಮ್ಮ ಮಗಳು ಇದ್ದ ಊರಿಗೆ ಹೋಗಿದ್ದೆ.ಚಂದಾಕವ್ಳೇ ಮಗಳು ಅಂತ ಸಂದೇಶ ತಲುಪಿಸುತ್ತಲಿದ್ದರು.
ಇನ್ನೊಬ್ಬ ಕಂಚೀ ಮಳ್ಳು ಅಂತಿದ್ದ..ಮದ್ಯ ವಯಸ್ಸಿನ ವ್ಯಕ್ತಿ. ಚೂರು ಮಾನಸಿಕ ಅಸ್ವಸ್ಥ..‌ಸರೀ ಇದ್ದರೆ ಬಂಗಾರದಂತ ಮನುಷ್ಯ... ಅಲೆಯದ ಊರಿಲ್ಲ.ಎಲ್ಲ ಊರಲ್ಲೂ ಮನೆ ಮನೆಗೆ ತೆರಳಿ ಅಡಿಕೆ ಸಂಗ್ರಹಿಸುತ್ತಿದ್ದ.ಇವನೂ ಕೂಡ ನನಗೆ ಮೇಘಸಂದೇಶ ಧೂತನಿದ್ದಂತೆ ಆಗಿದ್ದ...
ಹಾಗೇ ಕೊಪ್ಪೇಸರದ ಪಾರಿ ಅನ್ನುವ ವಯಸ್ಸಾದ ಅಜ್ಜಿ.. ಅವಳ ಕಂಡರೆ ತುಂಬಾ ಕನಿಕರ ನನಗೆ.ಮನೆಯವರು ಹೊರಗಟ್ಟಿದ್ದರು..ಅವಳೂ ಕೂಡ ಊರೂರು ಸುತ್ತುತಲಿದ್ದಳು.ಈ ಅಜ್ಜಿ ಕೂಡ ನಿಮ್ಮ ಮನಿಗೆ ಹೋಗಿದ್ದಿ.ಹಲಸಿನ ಹಣ್ಣಿನ ಕಡ್ಬು ಮಾಡಿತ್ತು ಆಯೀ..ತಿನ್ಕಂಡು ಬಂದಿ.ಎಲ್ಲ ಆರಾಂ ಇದ್ದ.ಹೀಗೆ ಅಲ್ಲಿಯ ಎಲ್ಲ ಪ್ರವರಗಳನ್ನು ಒಪ್ಪಿಸುತ್ತಿದ್ಲು.ಇನ್ನೂ ಇದೆ ಲೀಸ್ಟ್... ಈಗಲೇ ಹನುಮಂತನ ಬಾಲ ಆಗಿದೆ😂.
ಇದೆಲ್ಲ ಯಾಕೆ ಬರೆದೆ ಎಂದರೆ.... ಅಂದಿಗೂ ಇಂದಿಗೂ ನಮ್ಮಲ್ಲಾದ ಬದಲಾವಣೆ. ಮೊನ್ನೆ ಊರಿಗೆ ಹೋದಾಗ ಇವರೆಲ್ಲ ನೆನಪಾದರು.ಅಂದು ನಮ್ಮ ಅನಿವಾರ್ಯತೆಯ ಆ ಸಂದರ್ಭದಲ್ಲಿ ಅವರು ಭಿಕ್ಷುಕರು,ಅವನು ಹುಚ್ಚ,ಅವಳು ಊರು ಸುತ್ತುವವಳು ಅನ್ನುವ ಬೇಧವಾಗಲಿ,ಅಸಡ್ಡೆಯಾಗಲೀ ನಮ್ಮ ಮನಸ್ಸಿಗೆ ಬರಲೇ ಇಲ್ಲ. ಒಂತರಾ ಆಪ್ತರಾಗಿಬಿಟ್ಟರು.ಅವರ ವ್ಯಕ್ತಿತ್ವ ಬೇಕಾಗೇ ಇರಲಿಲ್ಲ.. ಅವರು ನೀಡುವ ಆ ಖುಷಿ ಸಂದೇಶಕ್ಕೆ ಅವರೂ ನಮ್ಮಂತೆ ಒಬ್ಬರು ಎನ್ನುವ ಭಾವ ಉದಯಿಸಿಬಿಟ್ಟಿತ್ತು...
ಕಾಲ ಬದಲಾದಂತೆ ,ತಾಂತ್ರಿಕತೆ ಹೆಚ್ಚಿದಂತೆ,ನಮ್ಮ ಒಳಗೂ ಅಹಂ ಎನ್ನುವ ತಡೆಗೋಡೆ ನಿರ್ಮಾಣವಾಯಿತೋ ನಾನರಿಯೇ...ಮೊಬೈಲ್ ಕೂತಲ್ಲೇ ಸಂದೇಶ ನೀಡುತ್ತದೆ.ಆದರೆ ಅಂದಿನ ಆಪ್ತತೆ ಇಂದು ಉಳಿದಿಲ್ಲ.ಅವಸರ,ಪ್ರೆಸ್ಟೀಜ್, ವ್ಯಕ್ತಿತ್ವದ ಮಾಪನ,ಹಣ,ಅಂತಸ್ತಿನ ಏರುಪೇರು ಈ ಎಲ್ಲವೂ ಇಂದಿನ ಸಂಬಂಧಗಳ ಹಳಸುವಿಕೆಗೆ ಕಾರಣವಾಗಿವೆ.ಯಾಕೆಂದರೆ ಇಂದು ಎಲ್ಲವೂ ನಮ್ಮ ಅಂಗೈ ಒಳಗೇ ಇವೆ.ಯಾರ ಅವಶ್ಯಕತೆಯೂ ಇಲ್ಲ.ಅವಶ್ಯಕತೆ ತೀರುತ್ತಾ ಹೋದಂತೆ ಮನುಷ್ಯ ಹೆಚ್ಚು ಸ್ವಾರ್ಥಿ ಆಗುತ್ತಾ ಹೋಗುತ್ತಾನೆ.ನಮಗೆ ಬೇಕಾದದ್ದೆಲ್ಲ ಸಿಗುತ್ತಾ ಹೋದಂತೆ ನಾವೇ ದೇವರಾಗುತ್ತಾ ಹೋಗುತ್ತೇವೆ..ಇದೇ ಅಲ್ಲವೇ ಅಹಂನ ಬಧ್ರ ಕೋಟೆ.ಎಷ್ಟೊಂದು ಬದಲಾವಣೆ ಆಗಿದ್ದೇವೆ ಎಂದರೆ ,ನಮ್ಮ
ಬದುಕನ್ನು ಮಾತ್ರ ನಾವು ನೋಡಿಕೊಳ್ಳುತ್ತಿದ್ದೇವೆ.ಎಷ್ಟರ ಮಟ್ಟದಲ್ಲಿ ಅಂದರೆ ,ಹೆತ್ತ ಅಪ್ಪ, ಅಮ್ಮ ಕೂಡಾ ನಮಗಿಂದು ಭಾರ........#ಆಪ್ತತೆ ಅನ್ನುವ ಶಬ್ಧವನ್ನು ಶಬ್ಧಕೋಶದಲ್ಲಿ ಹುಡುಕಬೇಕಾಗಿದೆ...ಆದರೆ ಒಂದು ಮಾತ್ರ ಮರೆಯಬಾರದು.
ನಾವು ಎಷ್ಟೇ ಗಳಿಸಲಿ,ಎಷ್ಟೇ ದುಡಿಯಲಿ.ಎಷ್ಟೇ ಸ್ಥಿತಿವಂತರಾಗಲಿ...#ಹಣ ಸಂಪಾದನೆಗಿಂತ #ಜನಸಂಪಾದನೆ 
ಅತೀ ಮುಖ್ಯ.. ನಾವು ಸತ್ತಾಗ ,ಹೊರಲು,ಗುಂಡಿ ತೋಡಿ ಹುಗಿಯಲು ಕಡಿಮೆ ಅಂದರೂ ಒಂದು ಐದಾರು ಜನರಾದರೂ ಬೇಕು....ಗಳಿಸಿದಷ್ಟು ಹಣ ಪೆಟ್ಟಿಗೆಯಲ್ಲಿಟ್ಟು ಒಂದೆಳೆಯ ನೂಲೂ ಇಲ್ಲದೆ ಮಸಣಕ್ಕೆ ನಡೆಯಬೇಕು....ಗಳಿಸಿದ್ದು ಜನರನ್ನಾದರೆ ಗೋವಿಂದಾ ಎನ್ನುತ್ತಾ ಹೊತ್ತು ಒಯ್ಯುತ್ತಾರೆ ಮಸಣಕ್ಕೆ.........
ನಮ್ಮೊಳಗಿನ #ಆಪ್ತತೆಯನ್ನು ಕಾಪಿಟ್ಟುಕೊಳ್ಳೋಣ....ನಾವೂ ಬದುಕುತ್ತ ,ಬದುಕಲ್ಲಿ ನಾಲ್ಕು ಜನರಿಗೆ ನೆರಳಾಗಿ ಬಾಳೋಣ....ಮನಸ್ಸು ಸ್ವಚ್ಛ ಇದ್ದರೆ ,ಆಸ್ತಿ ಇಲ್ಲದಿದ್ದರೂ ಯಾವುದೋ ದಾರಿ ನಮಗಾಗಿ ತೆರೆಯುತ್ತದೆ.. ಅಲ್ಲೊಂದಿಷ್ಟು ಆಪ್ತ ಮನಗಳು ಗೋಚರಿಸುತ್ತವೆ.ನಮ್ಮವರೇ ಆಗಿ ಬಿಡುತ್ತಾರೆ..ಇದು ಸತ್ಯ ಆದರೂ ಬೆರಳೆಣಿಕೆಯಷ್ಟು ಮಾತ್ರ. ಇಂದಿನ ಜನತೆ,ಶುದ್ಧ ಮನಕಿಂತ ಆಸ್ತಿ ಪಾಸ್ತಿಗೇ ಜಾಸ್ತಿ ಬೆಲೆ ಕೊಡೋದು.ಹಾಗಾಗಿಯೇ ಇಂದು ಅಕ್ಷರಸ್ಥರು ಆದರೂ ಕೂಡ ಆಪತ್ತಿಗೆ ಆಗುವ ಬಂಧುಗಳು ಕಡಿಮೆ. ಕಾರಣ ನಮ್ಮ ಒಳಗಿನ ಸಂಕುಚಿತ ಭಾವವೇ ಹೊಣೆ.
✍️ಪೂರ್ವವಾಹಿನಿ.