...

6 views

ಕಾಡುವಂತಹದ್ದು
!!!...ಕಾಡುವಂತಹದ್ದು....!!!

ಏನೋ ಒಂದು ಕಾಡುತ್ತದೆ,ಏನೋ ಒಂದು ನೆನಪಾಗುತ್ತದೆ
ಅದರ ತರ್ಕಗಳೇ ಬೇರೆ, ಅದರ ಪರಿಭಾಷೆಯೇ ಬೇರೇ ಆದರೆ ಎಲ್ಲರಂತಲ್ಲಾ,ಎಲ್ಲದರಂತಲ್ಲಾ ಕಾಡೋ ಅದರ ಭಾವಗಳೇ ವಿಭಿನ್ನ ,ಮನವನ್ನಾವರಿಸೋ ಆ ಪಾತ್ರಗಳೇ ನನಗೊಂತರ ವಿಶೇಷ.ಸುಲಭಕ್ಕೆ ಅದು ಯಾರಿಗೂ ಇಷ್ಟವಾಗುವಂತದಲ್ಲಾ,ಎಲ್ಲರಿಗೂ ಇಷ್ಟವಾಗಬೇಕಂತೆನಿಲ್ಲಾ
ಅದರ ಮೇಲ್ನೋಟವೇ ಬೇರೆ ಅಂತರಂಗವೇ ಬೇರೆ ಯಾರಿಗೂ ಇಷ್ಟವಾಗದ್ದೇ ಯಾಕೋ ನನಗೆ ತುಂಬಾ ಇಷ್ಟವಾಗಿ ಬಿಡುತ್ತದೆ,ಹಲವರಿಗೆ ಲೆಕ್ಕಕಿಲ್ಲದಂತ ಚಿಕ್ಕ ಪಾತ್ರಗಳೇ ನನಗೆ ಇಂದಿಗೂ ಅತಿಯಾಗಿ ಇನ್ನಿಲ್ಲದಂತೆ ಕಾಡಿ ಬಿಡುತ್ತದೆ.

ಎಲ್ಲೊ ಬೇಲಿ ಗುಟ್ಟಕ್ಕೋ,ಕಾಡ ಹಾದಿಯಲ್ಲೊ ತನ್ನಷ್ಟಕ್ಕೆ ತಾನೇ ಅರಳಿ ನಿಂತು ನಾಕಾರು ದುಂಬಿ,ಚಿಟ್ಟೆಗಳ ಹೊಟ್ಟೆ ತುಂಬಿಸಿ ಜೇನ ಮಧುವಾಗಿ ಬಾಡುವ ಕಾಡ ಹೂವುಗಳು ನನ್ನ ಕಾಡಿದಷ್ಟು ರಂಗು ರಂಗಿನ ಗುಲಾಬಿ,ಜಾಜಿ ಮಲ್ಲೆಗಳು ನನ್ನೆಂದಿಗೂ ಅತಿಯಾಗಿ ಆಕರ್ಷಿಸಲೇ ಇಲ್ಲಾ. ಮುಡಿಗಿಲ್ಲಾ ದೇವರ ಪಾದಕಿಲ್ಲಾ ಕೊನೆಗೆ ಸತ್ತ ಹೆಣಕ್ಕೂ ಹೆಕ್ಕಿ ಕಟ್ಟಲಾರರು ಅದನ್ನು,ಆದರು ನಾಲ್ಕು ಜೀವಗಳ ಕಣ್ಣು ತಣಿಸಿದ ಸಾರ್ಥಕತೆ ಅದರದ್ದು.

ಜಗತ್ತಿನ ಬೆಳಕು "ಬುದ್ಧ" ಆದರೆ ಯಶೋಧರೆ ನನ್ನ ಕಾಡುವಷ್ಟು ಬುದ್ಧ ಕಾಡಲಿಲ್ಲ ಆ ಬೆಳಕು ಇಂದಿಗೂ ಆರದಂತೆ ಉರಿಸುತ್ತಿರುವುದು ಬಹುಶಃ ಯಶೋಧರೆಯ ನಿಟ್ಟುಸಿರೇ ಇರಬೇಕು ಅದೇನನ್ನು ತಂದು ಸುರಿದಿರಬೇಡ ಅವಳು ಅದಕ್ಕೆ.., ಆರದಂತೆ ತನ್ನ ಬದುಕು, ಆಸೆ,ಕನಸು,ಗಂಡನೆಂಬ ಬಂಧ,ಹಳಹಳಿಕೆ,ತೊಳಲಾಟ ತನ್ನದೆಲ್ಲವನ್ನು ಅಗ್ಗಿಷ್ಟಿಕೆಯಂತೆ ಉರಿಸಿ ಬಿಟ್ಟಳು.ಅವನೇನೋ ಎದ್ದು ನಡೆದು ಬಿಟ್ಟ ಎಲ್ಲ ತೊರೆದು ಹೆತ್ತ ತಾಯಿಗಷ್ಟು ಸುಲಭಲ್ಲ ನೋಡಿ ತನ್ನ ಮಗುವನ್ನು ಬಿಟ್ಟು ನಡೆವುದು,ಜವಬ್ದಾರಿ ಪಕ್ಕಕ್ಕಿಟ್ಟು ಹೊರಡುವುದು,ಜಗತ್ತನ್ನೇ ಬೆಳಗಿ ಬಿಟ್ಟ ಯಶೋಧರೆಯೊಬ್ಬಳನ್ನು ಬಿಟ್ಟು ದೀಪದ ಬುಡ ಇಂದಿಗೂ ಎಂದಿಗೂ ಬರಿ ಕತ್ತಲೇ.

ಸೀತೆ ರಾಮ ಲಕ್ಷ್ಮಣ,ಹನುಮರ ಹೊರತಾಗಿ ಇನ್ನಿಲ್ಲದಂತೆ ಕಾಡುವ ತೆರೆ ಮರೆಯ ಪಾತ್ರವದು ಊರ್ಮಿಳಾ..,
ಅಣ್ಣನೇ ದೇವರೆಂದು ಹೊರಟು ಬಿಟ್ಟ ವನವಾಸಕ್ಕೆ. ಒಬ್ಬಂಟಿಯಾಗಿ ನಿಂತ ಊರ್ಮಿಳೆಯದಿಲ್ಲಿ ನಿಜವಾಗಿಯೂ ವನವಾಸ,ಸೀತೆಯ ಪಕ್ಕಕ್ಕೆ ರಾಮನಿದ್ದ ಕಾಡು ಅರಮನೆಯೆ ಆಯಿತು ಆಕೆಗೆ ಆದರೆ ಊರ್ಮಿಳಾಗಿಲ್ಲಿ ಅರಮನೆ ..‌‌?????
ವೃದ್ದ ಅತ್ತೆಯಂದಿರದೊಂದಿಷ್ಟು ಜವಾಬ್ದಾರಿಗಳಿತ್ತು ಆಕೆಗೆ,ಅರಮನೆಯ ವೈಭೋಗ ಮೃಷ್ಟಾನ್ನಗಳು ಕೂಡ ಅವಳ ಪರಿಸ್ಥಿತಿಗೆ ಹಳಸಿತ್ತು,ನೆಮ್ಮದಿಯ ನಿದ್ದೆ ಇನ್ನೆಲ್ಲೋ ಗುಳೆ ಹೋಗಿತ್ತು. ಕ್ಷಣ ಕ್ಷಣಕ್ಕೂ ಕಾಡುವ ಲಕ್ಷಣನ ನೆನಪುಗಳೊಂದಿಗೆ ಮೂಟೆ ಕಟ್ಟಿ ಎಸೆದ ಅವಳ ಕನಸು,ದುಃಖದ ಹಳಹಳಿಕೆಗಳೆಲ್ಲಾ ಅರಮನೆಯ ನಾಲ್ಕು ಗೋಡೆಗಳಿಗಷ್ಟೇ ಗೊತ್ತಿರಬಹುದೇನೊ ಬಹುಶಃ.
ಸೇತುವೆ ಕಟ್ಟಿದ್ದ ವಾನರರಿಗಿಂತ ಮುಳುಗೆದ್ದು ಬಂದು ಮಳಲ ಉದುರಿಸಿದ ಅಳಿಲಿನ ಭಾವವೇಕೋ ಮತ್ತೆ ಮತ್ತೆ ಕಾಡುತ್ತದೆ.ಸಾಗರ ಜಿಗಿದ ಹನುಮಂತನಿಗಿಂತ ಅವನ ಶಕ್ತಿ ಸಾಮರ್ಥ್ಯವ ತಿಳಿಸಿ ನೀ ಮಾಡಬಲ್ಲೇ ಎಂದು ಪ್ರೇರೆಪಿಸಿದ ಜಾಂಬವಂತ ಯಾಕೋ ಮತ್ತೆ ಮತ್ತೆ ನೆನಪಾಗುತ್ತಾನೆ ನನಗೆ.

ಒಮ್ಮೊಮ್ಮೆ ರಾಧೆಗಿಂತ ಅತಿಯಾಗಿ ಮನವ ಕದಡಿ ಬಿಡುತ್ತಾಳೆ ಈ ರುಕ್ಮಿಣಿ ನನಗೆ.ರಾಧೆಗೆ ಕೃಷ್ಣನ ತುಂಬು ಒಲವಾದರು ದಕ್ಕಿತ್ತು ಮನಸ್ಸು ಹೃದಯಗಳ ಮಿಳಿತವಾಗಿತ್ತು ಆದರೆ ರುಕ್ಮಿಣಿ..?? ಕೃಷ್ಣನೇನೊ ಸಿಕ್ಕಿ ಬಿಟ್ಟ ಹೆಂಡತಿ ಸ್ಥಾನವೊಂದನ್ನು ಬಿಟ್ಟು ಅವನ ಒಲವೆಂದಿಗೂ ಅವಳಿಗೆ ದಕ್ಕಲೇ ಇಲ್ಲಾ.ಸಿಗದಿರುವುದಕ್ಕಿಂತಲ್ಲೂ ಸಿಕ್ಕು ಕೂಡ ಸಿಗದಿರುವ ನೋವೇ ಒಂಥರಾ ಹಿಂಸೆ ಬದುಕಿನುದ್ದಕ್ಕೂ‌‌. ಜಗವೆಲ್ಲಾ ಪ್ರೇಯಸಿಯೊಂದಿಗೆ ಗುರುತಿಸಿ ಪೂಜಿಸುವಾಗ ಅವಳ ಹೃದಯವೆಷ್ಟು ಒಡೆದಿರಬೇಡ ಯಾವ ಹೆಣ್ಣಾದರು ಸಹಿಸಬಲ್ಲಳೇ.....???
ರಾಧೆ ನೋವ ಪ್ರತಿಯೊಬ್ಬರು ಬಲ್ಲರು ರುಕ್ಮಿಣಿಯ ಅಂತರಾಳಕ್ಕೆ ಇಳಿದವರೆಷ್ಟು...???

ಜಿಗಿವ ಜಲಪಾತಗಳಿಗಿಂತ ಕಾಲ ನೆನೆಸಿ ಓಡುವ ತೊರೆಗಳ ಭಾವ ಅವರ್ಣನೀಯ,ಜಿಗಿದಾಡಿ ಭೋರ್ಗರೆದು ನೆನೆಸುವ ಅಲೆಗಳಿಗಿಂತ ಸುಮ್ಮನೆ ಮೌನದಿ ಅವಕೆಲ್ಲಾ ಕಿವಿಯಾಗುವ ತೀರವೊಂತರ ಮನಸ್ಸಿಗೆ ಹಿತ.ಕಡಲಾಳದ ಮುತ್ತುಗಳಿಗಿಂತ ಬೊರಲು ಬಿದ್ದ ಕಪ್ಪೆಚಿಪ್ಪುಗಳಲ್ಲಿ ಬಗೆ ಬಗೆಯ ಕತೆಗಳಿವೆ. ಒಂದಿಷ್ಟು ಅಮೃತದ ನುಡಿಗಳಿದ್ದರು ಕೂಡ ಮನಸ್ಸು ಸೆಳೆವುದು ಮೌನಕ್ಕೆ ಹೊರತು ಮಾತಿಗಲ್ಲಾ,ಕೈಗೆಟುಕುವ ಚಂದಿರನ ಚಂದಕ್ಕಿಂತ ಕಾಲ ಪಾದದಡಿ ನುಸುಳಿ ಬಳಸುವ ಬೆಳದಿಂಗಳೇ ಯಾಕೋ ಅತೀವ ಸುಂದರ ನನಗೆ.., ಯಾವ ತಾಳ ಮೇಳ ಸಂಗೀತಗಳು ಕಾನನದ ನೀರವ ಮೌನದ ಆ ರಾಗವ ಮೀರಿಸಲಾರದು ಅದರಂತೆ ಹಾಡಲಾಗದು.., ರಹದಾರಿಗಿಂತ ಕೆಲವೊಮ್ಮೆ ಕಿರುದಾರಿಗಳೇ ಅದ್ಬುತ ಅನುಭವಗಳನ್ನು ನೀಡುತ್ತದೆ ಬದುಕಿಗೆ.ಮಣ್ಣ ಹಣತೆಗಳು ಬಿತ್ತುವಷ್ಟು ಚಂದದ ಭಾವಗಳನ್ನು ಸೂರ್ಯ ಬಿತ್ತಲಾರ.ಸೂರ್ಯನ ಪಾತ್ರ ಅತಿಮುಖ್ಯ ಭೂಮಿಗೆ ಹಣತೆಗಿಂತ ಸೂರ್ಯನೇ ಮೇಲು..,ನಿಜ ಇದಕ್ಕಿಂತಲೂ ಮುಖ್ಯ ಪಾತ್ರಗಳು ಹಲವಾರಿವೆ ಅದರದ್ದೇ ಆದರ್ಶಗಳಿವೇ.
ಯಾಕೋ ಸುಮ್ಮನೆ ಕುಳಿತಾಗ ಬಂದು ಮನಸ್ಸು ಹೊಕ್ಕಿ ಇವು ಕಾಡುವಷ್ಟು ನನಗೆ ಮುಖ್ಯ ಪಾತ್ರಗಳು ಕಾಡುವುದಿಲ್ಲ ಇಂತಹವೇ ಹಲವಾರಿದೆ ಮತ್ತೆ ಮತ್ತೆ ಕಾಡುವ ಚಂದದ ಭಾವವಳು..,ಕೆಲವೊಮ್ಮೆ ತೀರಾ ಈ ಬದುಕನ್ನೇ ಓರೆಗೆ ಹಚ್ಚಿ ಬಿಡುತ್ತವೆ.
ಹಾ‌..!! ಮಣ್ಣಿನ ಹಾದಿಗಳು ಮೂಡಿಸಿದ ಹೆಜ್ಜೆ ಗುರುತಿನ ನೆನಪುಗಳಷ್ಟು ದಾಂಬರು ರಸ್ತೆ ಮೂಡಿಸುವುದಿಲ್ಲಾ...!!!

-ಮೌನ ಹೃದಯ