...

10 views

ನೆರಳಿಗಂಟಿದ ಭಾವ ಕವನ ಸಂಕಲನ ಪರಿಚಯ
ನೆರಳಿಗಂಟಿದ ಭಾವ ಕವನ ಸಂಕಲನ ಪರಿಚಯ
Kannada Book Review.. m
ಸಿಂಧು ಭಾರ್ಗವ, ಬೆಂಗಳೂರು

ಶ್ರೀಮತಿ ಸವಿತಾ ಮುದ್ಗಲ್ ಅವರ ಚೊಚ್ಚಲ ಕವನ ಸಂಕಲನ "ನೆರಳಿಗಂಟಿದ ಭಾವ" ಸುಮಾರು 84 ಕವಿತೆಗಳನ್ನು ಒಳಗೊಂಡಿದೆ. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುವ ಇವರು ಸಹೃದಯಿ, ಸ್ನೇಹಿತೆ, ಉತ್ತಮ ಬರಹಗಾರ್ತಿಯಾಗಿ ಗುರುತಿಸಿಕೊಂಡವರು. ನೆರಳಿಗಂಟಿದ ಭಾವ ಕವನ ಸಂಕಲನದಲ್ಲಿ ನಾನಾ ತರಹದ ಕವನಗಳನ್ನು ರಚಿಸಿರುತ್ತಾರೆ. ಭಾವನೆ ,ಕಲ್ಪನೆ ಪ್ರಕೃತಿ, ಹೆಣ್ಣು, ಹೆತ್ತ ತಾಯಿ, ಗೃಹಿಣಿಯ ಬಗೆಗೆ, ಸಾಮಾಜಿಕವಾಗಿ ಬೆಳಕು ಚೆಲ್ಲಿರುತ್ತಾರೆ. ಭೂಮಿ, ಗಾದೆಮಾತಿಗೊಂದು ಕವನ, ಬುದ್ಧಿಮಾತು, ಗೃಹಿಣಿಯರಿಗಾಗಿ ಸ್ಪೂರ್ತಿದಾಯಕ ಕವನಗಳನ್ನು ರಚಿಸಿರುತ್ತಾರೆ.

ಕವನದ ಮೊದಲಿಗೆ ಸರಸ್ವತಿ ಮಾತೆಗೆ ನಮಿಸಿ ಅಜ್ಞಾನವ ಅಳಿಸು ಎಂದು ಪ್ರಾರ್ಥಿಸುತ್ತಾ ತಮ್ಮ ಮನದ ಭಾವಗಳನ್ನು ಕವಿತೆಯನ್ನಾಗಿಸಹೊರಟರು.

ಭುವನೇಶ್ವರಿ ಕೈತೋಳಲಿ ನಾ ಬೆಳೆದೆ
ಕನ್ನಡ ಭಾಷೆಯಲ್ಲಿ ಶಾಲಾಶಿಕ್ಷಣ ಪಡೆದೆ
ಅಕ್ಷರ ಮಾಲೆಯ ಕಾಗುಣಿತ ವ್ಯಾಕರಣವು
ತಂದಿದೆ ಪದಗಳ ಬರೆಯಲು ಕವನವು
ಈ ಪುಣ್ಯಭೂಮಿ, ಕರುನಾಡಿನಲ್ಲಿ ಜನಿಸಿದ್ದು ಪುಣ್ಯವೆನಿಸುತ್ತದೆ, ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಸಾರ್ಥಕ ಭಾವ ಮೂಡುತ್ತದೆ ಎಂದು ಪುನರ್ಜನ್ಮ ಕವಿತೆಯಲ್ಲಿ ನಾಡು ನುಡಿಗೆ ಕೃತಜ್ಞತೆಯನ್ನು ತಿಳಿಸಿರುತ್ತಾರೆ. ಪ್ರತಿ ಮನೆಗೂ ಮನೆ ಬೆಳಗುವ ಹೆಣ್ಣಿರಬೇಕು , ಹೆಣ್ಣಿನ ಮನಸ್ಸನ್ನು ಅರಿಯುವ ಪತಿಯಿರಬೇಕು ಸರಿಸಮದ ಚಿಂತೆಬಿಟ್ಟು ಸಮನಾಗಿ‌ ಬಾಳಬೇಕು ಎಂದು ತಮ್ಮ ನಂದಾದೀಪ ಕವಿತೆಯಲ್ಲಿ ವರ್ಣಿಸಿರುವರು. ನಂದಾದೀಪವು  ಸದಾ ಬೆಳಗುವಂತೆ ಮನಸ್ಸಿನ ದೀಪವು ಆತ್ಮಕ್ಕೆ ಬೆಳಕು ಕೊಡುತ್ತದೆ ಎನ್ನುವರು.

ದೇಶ ಕಾಯುವ ಯೋಧ , ಕವಿಯಾದವರು ಅನ್ನಕೊಡುವ ರೈತರನ್ನು, ಗಡಿಕಾಯುವ ಯೋಧರನ್ನು ಮರೆತರೆ ಹೇಗೆ? ಸಾವಿರಾರು ಜೀವ ಪಣವಿಟ್ಟು ಸೇವೆಗೆ ತಮ್ಮನ್ನು ತಾವು ಮುಡಿಪಾಗಿಸಿಕೊಂಡುರುತ್ತಾರೆ. ಪ್ರತಿ ಮನೆಯಲ್ಲೂ ಒಬ್ಬ ಯೋಧ ಹುಟ್ಟಿ ಬರಲಿ ಎನ್ನುವರು.  ತುಂಬಾ ಇಷ್ಟವಾದ ಕವನ, ಜೋಳದ ರೊಟ್ಟಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ದೊಡ್ಡ ಕಣದಾಗ ರಾಶಿಮಾಡಿರಲು ಬಂಡಿ ತುಂಬೆಲ್ಲ ಜೋಳದ ಚೀಲಗಳು , ರೊಟ್ಟಿ ತಿಂದಷ್ಟು ಗಟ್ಟಿ ಈ ದೇಹ ಎನ್ನುತ್ತಾರೆ. ಅನೇಕ ಗಾದೆಮಾತುಗಳ ಬೆರೆಸಿ ಕವನ ರಚಿಸಿದ್ದು ಮನಸ್ಸಿನ ಮುದ ನೀಡುತ್ತದೆ. ಭುವಿಯೊಳು ಬಾಳೊಂದು ಸುಂದರ ಭಂಡಾರ, ಅರಿತು ನಡೆದರೆ ಆನಂದ ತುಂಬಿದ ಸಾಗರ... ಎನ್ನುವ ಕವಯಿತ್ರಿ ನೋವನ್ನು ಅರೆಗಳಿಗೆಯಲ್ಲಿ ಮರೆಯಬೇಕು ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು, ಎಲ್ಲರಿಂದ ನಿಷ್ಕಲ್ಮಲ ಪ್ರೀತಿಯ ಪಡೆದುಕೊಳ್ಳಬೇಕು ಎನ್ನುವ ಮೂಲಕ ಒಬ್ಬ ಗೃಹಿಣಿಯಾಗಿ ಹೇಗಿರಬೇಕು ಎಂಬುದನ್ನು ಸುಂದರವಾಗಿ ತಿಳಿಹೇಳಿರುವರು.ಶಕುನಿ ಕುರಿತು ರಚಿಸಿದ ಕವಿತೆಯು ವಿಭಿನ್ನವಾಗಿ ಆಲೋಚಿಸುವಂತೆ ಮಾಡುತ್ತದೆ. ಒಂಟಿಕಣ್ಣಲಿ ಸಂಚು ಹಾಕುತ ಬಂದನಿವನು, ಗಾಳವ ಹಾಕುತ ಪಾಂಡವರನ್ನು ಸೋಲಿಸಿದವನು, ಎಷ್ಟೇ ಮೋಸ ವಂಚನೆ ಮಾಡಿದರೂ ಕೊನೆಗೆ ಸತ್ಯವೇ ಗೆಲ್ಲುವುದು, ಮಹಾಭಾರತದ ಪ್ರಮುಖ ಪಾತ್ರ ಶಕುನಿಯದೇ ಎಂದು ಕವಿತೆಯ ಸಾರವಾಗಿದೆ.ಕವಿ ಕುವೆಂಪು ಅವೆ ಕುರಿತಾಗಿ ಬರೆದ ಕವಿತೆ ಮನಮುಟ್ಟುವಂತಿದೆ.

ಮ ಅಕ್ಷರದಿಂದ ರಚಿಸಿದ ಕಾಗುಣಿತ ಕವಿತೆಯಲ್ಲಿ ಮನೆಯ ಮುದ್ದು ಮಗಳ ಬಗೆಗಿನ ವರ್ಣನೆ ಸುಂದರವಾಗಿದೆ. ಮನದ ಭಾವ ಕವನದಲ್ಲಿ ತಾಯಿಯ ಪ್ರೀತಿ ಕಾಳಜಿ ತ್ಯಾಗದ ಕುರಿತು ಬರೆದಿರುವರು. ಹಸಿವು ನೀಗಲು ಎದೆಹಾಲು ಕುಡಿಸಿದವಳು, ಹೆಣ್ಣಿನ ಜನ್ಮಬಸಾರ್ಥಕ ವಾಗುವುದು ಮಕ್ಕಳಾದ ಮೇಲೆಯೇ , ಆದರೆ ಮಕ್ಕಳಿಂದಲೇ ಎಷ್ಟೋ ತಾಯಿಯಂದಿರ ಬಾಳಿನಲ್ಲಿ ನೋವನ್ನು ಕಂಡಿರುವರು ಎನ್ನುವರು. ಸಂಗಾತಿಯ ಬಗೆಗೆ ಹೊಗಳಿದ ಒಂದು ರಚನೆ - ಬಾಳ ಕವಿತೆ ನೀನಾದಾಗ ಮಿನುಗುವ ಪ್ರತಿ ನಕ್ಷತ್ರಗಳು ಬಾನಿನಲ್ಲಿ ಸಾರಿಸಾರಿ ಹೇಳುತ್ತಿದ್ದವಂತೆ ಅವರಿಬ್ಬರೇ ಮಾಯಾಲೋಕದ ಕಣ್ಸೆಳೆಯುವ ಜೋಡಿಗಳೆಂದು.
ಕಣ್ಣುರೆಪ್ಪೆಯ ಸುಳಿಯಲಿ
ಸಿಲುಕಿದ ಕಂಬನಿಯ
ದಿನದ ವ್ಯಥೆಯು ನೀನು

ದುಮ್ಮಾನ ಅಳಿಸಲು
ಸಂಬಂಧಿಯಾಗಿರಲು
ಕಣ್ಣೀರ ಆತ್ಮೀಯತೆ ನೀನು...

ಕಣ್ಣೀರಿನ ಆತ್ಮೀಯತೆ ಎಂಬ ಕವಿತೆಯಿಂದ ಕವಯಿತ್ರಿಯ ಮನಸ್ಸು ತುಂಬಾ ಸೂಕ್ಷ್ಮವೆನ್ನಬಹುದು. ಕವಯಿತ್ರಿಯ ತಮ್ಮ ಚೊಚ್ಚಲ ಕವನ ಸಂಕಲವು ಇನ್ನಷ್ಟು ಓದುಗರ ಮನ ಗೆಲ್ಲಲಿ. ಉತ್ತಮ ರಚನೆಗಳು ಮೂಡಿಬರಲಿ. ಎಂದು ಹಾರೈಸುವೆನು.


© Writer Sindhu Bhargava