...

3 views

ಶವಾಗಾರದಲ್ಲಿ ಕಳೆದ ಕ್ಷಣಗಳು.
ಈಗ ನಾ ಹೇಳುವ ಘಟನೆ ನಡೆದದ್ದು ನವೆಂಬರ್ 2009 ನೇ ಇಸವಿಯಲ್ಲಿ.
ನಮ್ಮ ಸಂಬಂಧಿಕರೊಬ್ರಿಗೆ H1 N1 ಬಂದು ಸೀರಿಯಸ್ ಆಗಿತ್ತು ಅಂತ,
ಬೆಂಗಳೂರಿನ KIMS ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ರು.

ನಾವಿದ್ದದ್ದು ಬೆಂಗಳೂರಿನಲ್ಲೆ  ಆಗಿದ್ರಿಂದ, ಅವರನ್ನ ನೋಡಿಕೊಳ್ಳುವ ಜವಾಬ್ದಾರಿ ನನ್ನದಾಗಿತ್ತು.

ನಮ್ಮ ಬಹಳಷ್ಟು ಸಂಬಂಧಿಕರು ಬೆಂಗಳೂರಿನಲ್ಲೆ ಇರೋದ್ರಿಂದ, ದಿನ ಒಬ್ಬೊಬ್ರು ಮನೆಯಿಂದ ಊಟ ಬರೋದು, ಆಸ್ಪತ್ರೆಯಲ್ಲಿ ಪೇಷಂಟ್ ಜೊತೆ ಇರೋದು ನನಗೇನು ಹೊಸತಲ್ಲ.
ನಮ್ಮ ಹತ್ತಿರದ ಸಂಬಂಧಿಕರ್ಯಾರಾದ್ರು ಅಡ್ಮಿಟ್ ಆದ್ರೆ ಒಂದಿನ ಆದ್ರು ಆಸ್ಪತ್ರೆಯಲ್ಲಿ ನಾನು ಇದ್ದೇ ಇರ್ತೀನಿ, ಅಷ್ಟರ ಮಟ್ಟಿಗೆ ಆಸ್ಪತ್ರೆಗೂ ನನಗೂ ನಂಟಿದೆ, ಕಾರಣ. 

ನಾನು ಎಂದು ಮೆರೆದವರೆಲ್ಲ, ದೇವರೆ ನೀನೆ ಗತಿ ಅಂತ ಬೆಡ್ ಮೇಲೆ ಮಲಗಿ, ಆರ್ತರಾಗಿ ಮೊರೆ ಇಡುವ ಸ್ಥಳ ಈ ಆಸ್ಪತ್ರೆ.

ಪ್ರತಿಸಲ ಆಸ್ಪತ್ರೆಯಲ್ಲಿ ಇದ್ದಾಗ್ಲೂ ಒಂದೊಂದು ಹೊಸ ಅನುಭವ, ಜೀವನದ ಪಾಠ ಕಲಿಯಲು ಅವಕಾಶ ಸಿಕ್ತಿರುತ್ತೆ.
ಅದೇ ರೀತಿಯ ಒಂದು ಅನುಭವವನ್ನ ನಿಮ್ಮ ಮುಂದೆ ಇಡ್ತಿದಿನಿ.

KIMS ಆಸ್ಪತ್ರೆಗೆ ಹೊಂದಿಕೊಂಡಂತೆ ಇರುವ VV Puram ಕಾಲೇಜು, ರಸ್ತೆಯಲ್ಲಿ ಈಗ Food Street ಎಲ್ಲ ಶುರುವಾಗಿದೆ, 10-11 ವರ್ಷದ ಮೊದಲು ಇಷ್ಟು ಅಭಿವೃದ್ಧಿ ಹೊಂದಿರಲಿಲ್ಲ.
ಆಗ ಕಿಮ್ಸ್ ಆಸ್ಪತ್ರೆಯ ಹಿಂದಿನ ಕಾಂಪೌಂಡ್ ಹೊಡೆದು ರಸ್ತೆಯ ಅಗಲೀಕರಣದ ಕಾರ್ಯ ನಡೀತಿತ್ತು.
ಕಾಂಪೌಂಡ್ ಇಲ್ಲದ  ಕಾರಣ ತಾತ್ಕಾಲಿಕ ತಗಡು ಶೀಟ್ ಕಟ್ಟಿದ್ರು, ನಮ್ಮ ಜನ ಕೇಳ್ಬೇಕಲ್ಲ ಮುಖ್ಯ ರಸ್ತೆಗೆ ಬರಲು ಯಾರು ಬಳಸ್ಕೊಂಡು ಬರ್ತಾರೆ ಅಂತ, ಆ ತಗಡನ್ನೆ ಕೊರೆದು ಒಂದು ಕಳ್ಳ (ರಾಜ) ಮಾರ್ಗ ಮಾಡ್ಕೊಂಡಿದ್ರು, ಆಸ್ಪತ್ರೆಯ ಹೊರಗೆ ಹೋಗೋಕೆ ಮುಂದಿನ ಮುಖ್ಯ ಧ್ವಾರಕ್ಕಿಂತ ಹೆಚ್ಚು ಬಳಕೆಯಾಗ್ತಿದ್ದದ್ದೆ ಈ ರಾಜ ಮಾರ್ಗ.

ಆ ರಾಜ ಮಾರ್ಗದಿಂದ ಒಳ ಬಂದ್ರೆ 30 ಅಡಿ ಅಂತರದಲ್ಲಿ ಆಸ್ಪತ್ರೆಯ ಒಳ ಹೋಗಲು ಹಿಂದಿನ ಧ್ವಾರ ಒಂದಿತ್ತು, ಅದು ಶವಾಗಾರಕ್ಕೆ ಹೊಂದಿಕೊಂಡಂತೆ ಇದ್ದಿದ್ರಿಂದ ಜನ ಹೆಚ್ಚು ಉಪಯೋಗಿಸುತ್ತಿರಲಿಲ್ಲ ಮತ್ತು ಜನರ ಓಡಾಟಕ್ಕೆ ನಿರ್ಬಂಧ ಇತ್ತು.

ಅಮಾವಾಸ್ಯೆಯ  ರಾತ್ರಿ 8-30ರ ಸಮಯ ಊಟ ಮಾಡಿ, ಪೇಷಂಟ್ ಗೂ ಊಟ ಕೊಟ್ಟು, ಒಂದು ರೌಂಡ್ ಓಡಾಡ್ಕೊಂಡು ಬರ್ತೀನಿ ಅಂತ ಮುಂದಿನ ಧ್ವಾರದಿಂದ ಹೊರ ಬಂದವನು, ವಾಪಸ್ ಹೋಗುವಾಗ ಹಿಂದಿನ ರಾಜ ಮಾರ್ಗದಿಂದ ಒಳ ಬಂದೆ, ಅಮಾವಾಸ್ಯೆಯ ಕತ್ತಲು ಒಂದ್ಕಡೆ ಆದ್ರೆ, ಕರೆಂಟ್ ಬೇರೆ ಇರ್ಲಿಲ್ಲ.

ರಾತ್ರಿ ವೇಳೆ ಹಿಂದಿನ ಗೇಟ್ ಮುಚ್ಚಿರ್ತಾರೆ, ಆದ್ರೆ ಅವತ್ತು ಓಪನ್ ಇತ್ತು, ಸೆಕ್ಯೂರಿಟಿ ಬೇರೆ ಇರ್ಲಿಲ್ಲ.
ಮುಂದಿನ ಗೇಟ್ ಗೆ ಮತ್ತೆ ಅಷ್ಟು ದೂರ ನಡೆಯೋರ್ಯಾರು ಅಂತ, ಹೆಂಗು ಹಿಂದಿನ ಧ್ವಾರದಿಂದ ಬೆಳಗಿನ ಸಮಯದಲ್ಲಿ ಓಡಾಡಿ ರೂಢಿ ಇದ್ದಿದ್ರಿಂದ, ನನ್ನ ಬಳಿ ಇದ್ದ ಕೀ ಪ್ಯಾಡ್ ಮೊಬೈಲ್ ಟಾರ್ಚ್ ಆನ್ ಮಾಡ್ಕೊಂಡು ಬಂಢ ಧೈರ್ಯ ಮಾಡಿ ಹೊರಟೇ ಬಿಟ್ಟೆ!!

ಗೇಟ್ ಒಳಗೆ ನೇರ ಹೋಗ್ಬೇಕಿದ್ದವನು ಕತ್ತಲಲ್ಲಿ, ಶವಾಗಾರದ ಒಳಗೆ ಹೋಗಿದ್ದೆ☠️💀.

ಯಾವಗಲೂ ಮುಚ್ಚಿರುತ್ತಿದ್ದ ಶವಾಗಾರದ ಬಾಗಿಲು.
ನಾನು ಒಳ ಹೋಗುವ 10 ನಿಮಿಷದ ಮೊದಲು ಶವಾಗಾರದಲ್ಲಿದ್ದ ಅನಾಥ ಶವದ ವಾರಸುದಾರರು ಬಂದಿದಾರೆ ಅಂತ, ಹೆಣ ತಗೊಂಡು ಹೋಗುವಾಗ ಸೆಕ್ಯೂರಿಟಿ ಕೂಡ ಅದರ ಜೊತೆ ಹೋಗಿದ್ದ.

ಕರೆಂಟ್ ಇಲ್ಲ, ಅಮಾವಾಸ್ಯೆ, ಗಂಟೆ ಬೇರೆ 9 ಆಗ್ತಿದೆ ಇಷ್ಟೊತ್ತಲ್ಲಿ ಇಲ್ಲಿ ಯಾರು ಬರ್ತಾರೆ ಅನ್ನೋ ಅಸಡ್ಡೆಯೋ, ಇಲ್ಲ ಮರೆತು ಹಾಗೆ ಹೋದನೊ ಗೊತ್ತಿಲ್ಲ. ಶವಾಗಾರದ ಬಾಗಿಲು ತೆರೆದು ಹೋಗಿದ್ದ. 

ನಾನು ಶವಾಗಾರದ ಒಳಗೆ ಬಂದಿರುವೆ ಅಂತ ಅರಿವಿಗೆ ಬರೋ ಅಷ್ಟ್ರಲ್ಲಿ  ತುಂಬ ಒಳಗೆ ಹೋಗಿದ್ದೆ.
ವಾಪಸ್ ಹೋಗ್ಬೇಕು ಅಂತ ಬಾಗಿಲ ಕಡೆ ಹೊರಟವನಿಗೆ, ಸದ್ದಿನ ಜೊತೆ ಬಂದ ಬೆಳಕನ್ನು ಕಂಡು ಎದೆ ದಸಕ್ಕೆಂದಿತ್ತು. 

ಹೆಣದ ಜೊತೆ ಹೋಗಿದ್ದ ಸೆಕ್ಯೂರಿಟಿ ಗಾರ್ಡ್,  ಬಾಗಿಲು ಮುಚ್ಚಲು ಬಂದಿದ್ದ. 
ಬಾಗಿಲು ಮುಚ್ಚಿ ಬಿಡ್ತಾನೆ, ಎನ್ನುವ ಭಯದಲ್ಲಿ ಬಾಗಿಲ ಕಡೆ ಓಡಿ ಬರುವಾಗ, ಮಂಚಕ್ಕೆ ಕಾಲು ತಾಗಿ ಬಿದ್ದಿದ್ದೆ. 
ಬಾಗಿಲು ಮುಚ್ಚಲು ಬಂದವನು ಶವಾಗಾರದಲ್ಲಾದ ಸದ್ದು ಮತ್ತು ಬೆಳಕಿಗೆ, ಆ ಚಳಿಯ ರಾತ್ರಿಯಲ್ಲು, ಬೆವೆತು ಹೋಗಿದ್ದ. 

ಯಾರು ಯಾರದು ಎಂದವನ ಧ್ವನಿಯಲ್ಲಿದ್ದ ನಡುಕವನ್ನು ನೋಡಿ , ನಗು ಬಂದ್ರು ಮನಸಲ್ಲೆ ನಕ್ಕು, ಏನ್ ಬೈತಾನೊ ಅನ್ನೋ ಭಯದಲ್ಲಿ, ಅಂಕಲ್ ಹಾಸ್ಪಿಟಲ್ ಒಳಗೆ ಹೋಗೋಕೆ ಬಂದವನು ದಾರಿತಪ್ಪಿ ಕತ್ಲಲ್ಲಿ, ಇಲ್ಲಿ ಬಂದ್ಬಿಟ್ಟೆ ಸಾರಿ ಅಂದೆ. 

ಏಯ್ ಯಾರೊ ನೀನು, ಈ ಅಮಾವಾಸ್ಯೆ ರಾತ್ರಿಯಲ್ಲಿ 
ಇಷ್ಟು ಧೈರ್ಯವಾಗಿ ಈ ಕಡೆ ಬಂದಿದ್ಯಲ್ಲ, ನನ್ನ ಜೀವ ಬಾಯಿಗೆ ಬಂದಿತ್ತು, ಹೋಗೋ ಮತ್ತೆ ಈ ಕಡೆ ಬರ್ಬೇಡ, ಮತ್ತೆ ಈ ಕಡೆ ಕಾಣ್ಸಿದ್ರೆ ಈ ರೂಮಲ್ಲಿ ಕೂಡಿ ಹಾಕ್ತೀನಿ ಅಂತ ಬೈದು ಕಳ್ಸಿದ್ದ. 

ಆ ರಾತ್ರಿ ಅವನ ತಪ್ಪಿಂದ ಪೇಚಿಗೆ ಸಿಲುಕಿದವನು ನಾನಾದ್ರು, ಭಯದಲ್ಲಿ ನಡುಗುವ ಸರದಿ ಅವನದಾಗಿತ್ತು.

ಶವಾಗಾರ ಅಂದಾಗ್ಲೆಲ್ಲ ನನಗೆ ಈ ಘಟನೆ ನೆನಪಾಗುತ್ತೆ.


© ಮಂಜುನಾಥ್.ಕೆ.ಆರ್