...

3 views

ಒಂದು ಸುಮದ ಕತೆ
ಸುಂದರವಾಗಿ ಅರಳಲು ಹೊರಟ ಸುಮವೊಂದು ಮೊಗ್ಗು ಬಿರಿಯುವಾಗಲೇ ದುಂಬಿ ಕೀಟಗಳ ಹಾವಳಿ ಜಾಸ್ತಿಯಾಗುವುದು. ಯಾರ ಮೇಲೂ ಲಕ್ಷ್ಯ ಕೊಡದೇ ತನ್ನ ಪಾಡಿಗೆ ತಾನಿರುವ ಸುಮಕ್ಕೆ ಎಲ್ಲ ದುಂಬಿಗಳು ಗಮನ ಅವುಗಳತ್ತ ಹರಿಸುವಂತೆ ವಿವಿಧ ರೀತಿಯಲ್ಲಿ ನಾಟಕವಾಡುತ್ತಲೇ ಇರುವವು. ಕೊಂಚ ಮನಸ್ಸು ಸಡಲಿಸಿಕೊಂಡು ನನಗೂ ಪ್ರೀತಿಯ ಅನುಭಾವ ಬೇಕೆನಿಸಿ ಅತ್ತ ಕಡೆ ಮುಖ ಮಾಡುವಾಗ ಯಾರನ್ನು ಆರಿಸಲಿ, ಯಾರಿಗೆ ಮನ ಸೋಲಲಿ ಎಂಬ ಗೊಂದಲದಲ್ಲೇ ಅದು ಮುಳುಗುವುದು.

ಆದರೆ ವಸ್ತುಸ್ಥಿತಿ ಕೇವಲ ಮಧುವ ಹೀರಲು ಬಣ್ಣಬಣ್ಣದ ಮಾತನ್ನಾಡಿ ತನ್ನವನೆಂಬ ಭರವಸೆಯ ನೀಡುವ ಮೋಡಿಗಾರ ದುಂಬಿಗಳದ್ದೇ ಹಾವಳಿ. ಅದೇನೋ ಪೂರ್ವ ಜನ್ಮದಲ್ಲಿ ಕೂಡ ಬೆರೆತು ಹೋದ ಜೀವಗಳಂತೆ ಕತೆ ಕಟ್ಟಿ ಸುಮವ ರೋಮಾಂಚ‌ಗೊಳಿಸಿ ಅಪ್ಪಿಕೊಳ್ಳುವ ಬಯಕೆ. ಅವಳ ಒಂದು (ಹೂ) ಅಪ್ಪುಗೆಗೆ ಸಿಹಿ ಚುಂಬನಕ್ಕಾಗಿ ದುಂಬಿ ತನ್ನೆಲ್ಲ ಉಸಿರನ್ನು ಬಿಗಿಹಿಡಿದು ಕಾಯುತ್ತಿರುತ್ತದೆ. ಏನೇನೋ ಕನಸ ಕಾಣುತ್ತದೆ‌ ಮನಸಾರೆ ಪ್ರೀತಿಸುವುದೋ, ಸುಖ ಪಡೆಯಲು ಅವಕಾಶ ಪಡೆಯುವುದೋ ನಂಬಲು ಹೇಗೆ ಸಾಧ್ಯ. ಆ ಸುಮವು ಒಪ್ಪಿಗೆ ನೀಡಿದರೆ ಸಂಪೂರ್ಣವಾಗಿ ಅರ್ಪಿಸಿಕೊಂಡು ಸುಖಿಸುತ್ತದೆ. ಸುಖಕೊಡುತ್ತದೆ ಕೂಡ.

ಎಲ್ಲೂ ಯಾರಿಗೂ ಅಂಟಿಕೊಳ್ಳದ ಸುಮಕ್ಕೆ ತನ್ನವನು ಎಂದು ಯಾರೂ ಇಲ್ಲ. ಸಂಜೆಯಾಡೊದೆ ಬಿದ್ದು ಹೋಗುವ ಅದಕ್ಕೆ ಅದೆಷ್ಟು ಜನ ಸಂಗಾತಿಗಳು. ಎಲ್ಲರೂ ಕೊಂಗಾಟ ಮಾಡುವವರೇ. ಒಬ್ಬರಿಗಾಗಿ ಇಲ್ಲದ ಸುಮದ ಹುಟ್ಟು ರೋಚಕವೆನಿಸುತ್ತದೆ.

ಅದೆಷ್ಟೋ ಹೆಣ್ಮಕ್ಕಳ ಬದುಕು ಕೂಡ ಹೀಗೆಯೇ. ಆಕೆಯ ತಾರುಣ್ಯ ಅದೆಷ್ಟೋ ಗಂಡಸರಿಗೆ ಕಣ್ಣು ಕುಕ್ಕುತ್ತಿರುತ್ತದೆ. ಅವಳ ಅಂದ ಚಂದ ಹೊಗಳಿ ಮೈ ಮುಟ್ಟಲು ಹವಣಿಸುತ್ತ ಇರುತ್ತಾರೆ. ಅದರ ಅರಿವಾದರೂ ಕೂಡ ಸುಮ್ಮನೆ ಇರುತ್ತಾಳೆ. ಏಕೆ?? ವಿರೋಧಿಸಲು ಬಾಯಿ ಬರುವುದಿಲ್ಲವೇ? ಅಥವಾ ಆಕೆಗೂ ಬೇಕಿತ್ತೇ?? ಕ್ಷಣಿಕ ಸುಖ, ಹೊಗಳಿಕೆಯ ಮಾತುಗಳು ಆಕೆಗೆ ಏಕೆ ಬೇಕು?? ಆದರೂ ನನಗೂ ಒಬ್ಬ ಗೆಳೆಯ ಬೇಕು ಎಂದು ಆಶಿಸುವುದು ತಪ್ಪಲ್ಲ ತಾನೆ..

ನಾಳೆ ಎಂದರೆ ಸಾಯುವ ಸುಮಕ್ಕೆ ಆಯುರ್ ಕಡಿಮೆ. ಅದೇ ದುಂಬಿಗೆ ಸುಖ ಪಟ್ಟಿದ್ದೇ ಬಂತು. ಎಲ್ಲರನ್ನೂ ನಿರಾಶೆಗೊಳಿಸದ ಸುಮವು ಸಂಜೆಯಾದಾಗ ಮುದುಡಿಹೋಗುತ್ತದೆ. ಪ್ರೀತಿಸಿದವರು, ಭರವಸೆ ನೀಡಿದವರು, ಆಣೆ ಪ್ರಮಾಣ ಮಾಡಿದವರು ಏನೂ ಮಾಡಲಾಗದೇ ಕೈಚೆಲ್ಲಿ ಬಿಡುತ್ತಾರೆ. ಸುಮವು ಕೊನೆತುಸಿರೆಳೆವಾಗ ದುಂಬಿಗಳ ಕಣ್ಣಲ್ಲಿ ಕಣ್ಣೀರು.

ಅದೇ ಹುಡುಗಿಯ ಗತಿ ಏನು? ಅವಳನ್ನು ಸಂಪೂರ್ಣವಾಗಿ ಹೊಗಳುತ್ತಾ ಅವಳನ್ನೇ ಅನುಭವಿಸಿ ಕೊನೆಗೆ ಅವಳನ್ನೇ ಅವಮಾನ ಮಾಡುವವರು ಎಷ್ಟು ಜನರಿಲ್ಲ. ಇದು ಬೇಕೇ?

ಹೆಣ್ಣಿಗೂ ಸುಮಕ್ಕೂ ಸಾಮದಯತೆ ಇರಬಹುದು. ಆದರೆ ಇದು ಬದುಕು. ಸುಮದಂತೆ ಒಂದು ದಿನದ ಬಾಳಲ್ಲ. ಸಾಯುವ ತನಕ ಆತ್ಮಾಭಿಮಾನದಿಂದ ಬದುಕಬೇಕು. ಹೆಣ್ಮಕ್ಕಳೇ ಕೊಂಚ ಯೋಚಿಸಿ.

ಗಂಡಿಗೆ ಸ್ನೇಹ ಎಂದರೆ ಕೇವಲ ಸ್ನೇಹವಲ್ಲ‌ ಬಿಸಿಯಪ್ಪುಗೆ, ಮಧುಚಂದ್ರ, ಮಿಲನ ಮಹೋತ್ಸವ.

ಅದೇ ಹೆಣ್ಣಿಗೆ ಸ್ನೇಹವೆಂದರೆ ಆಪ್ತತೆ, ಆಲಿಂಗನ, ಮನಸ್ಸಿನ ಮಾತನ್ನು ಕಷ್ಟ ನೋವು ಸಂತೋಷ ವನ್ನು ಹಂಚಿಕೊಳ್ಳಲು ಬೇಕೆನಿಸುವ ಒಂದು ಜೀವ. ಎಲ್ಲವನ್ನೂ ಅವನೆದುರು ಹಂಚಿಕೊಂಡು ಮನಸ್ಸು ಹಗುರಾಗಿಸಿಕೊಳ್ಳುವ ಆಸೆ. ಗಂಡಿಗೂ ಹಾಗೇ ಅನಿಸುತ್ತದೆ. ಆದರೆ ಅದಕ್ಕೆ ಏನಾದರೂ ತಿರುಗಿ ಕೊಡಬೇಕಲ್ಲ..


- ಸಿಂಧು ಭಾರ್ಗವ ಬೆಂಗಳೂರು.
© Writer Sindhu Bhargava