...

5 views

Dear Zindagi... ಬದುಕೇ ಒಂದು ಹೋರಾಟ...
ಬದುಕೇ ಒಂದು ಹೋರಾಟ...

ಯೌವನದ ಬಿಸಿರಕ್ತ ದೇಹದ ನರನಾಡಿಯಲ್ಲಿ ಸಂಚರಿಸುತ್ತಿರುವಾಗ ಬದುಕೇ‌ ಒಂದು ಹೋರಾಟ ಎನ್ನುವರು. ಇಲ್ಲಿ ಯಾವುದೂ ಸುಲಭದಲ್ಲಿ ಸಿಗುವುದಿಲ್ಲ, ಹೋರಾಡಿದರಷ್ಟೇ ಗೆಲುವು ಸಾಧಿಸಬಹುದು. ಕುಳಿತು ತಿನ್ನುವುದರಿಂದ ಏನು ಸಾರ್ಥಕತೆ ಇದೆ?? ಸ್ವಪ್ರಯತ್ನವಿಲ್ಲದೇ ಎಲ್ಲವೂ ಕೈಗೆ ಎಟುಕಿದರೆ ಅದರ ಬೆಲೆ ತಿಳಿಯುವುದಿಲ್ಲ. ಕೊನೆತನಕವೂ ಹೋರಾಡಲೇಬೇಕು ಎನ್ನುವರು. ದುಡಿಯುವವರ ಈ ಮಾತು ದುಡಿಮೆಗೆ ಹೋಗದೇ ಮನೆಯಲ್ಲಿ ಇರುವವರ ಮನಸ್ಸಿಗೆ ಚುಚ್ಚಬಹುದು. ಕೆಲವರ ಮಾತು ಕೇಳಿರಬಹುದು, ಅವಳಿಗೇನು? ಗಂಡ ದುಡಿದು ತರುತ್ತಾನೆ. ಬೇಕು ಬೇಕಾದ್ದು ಕುಳಿತಲ್ಲೇ ಸಿಗುತ್ತದೆ. ಹೊರಗೆ ಹೋಗಿ ದುಡಿದರೇನೆ ಅದರ ಕಷ್ಟ ಅರ್ಥವಾಗುವುದು. ಅವಳಿಗೇನು ದುಡಿಮೆಯ ಕಷ್ಟ ತಿಳಿದಿದೆಯೇ? ಎನ್ನುವರು.

ನಿಜ. ನಾನು ದುಡಿಮೆಗೆ ಹೋಗಬೇಕು, ನಾನು ಹಣ ಸಂಪಾದಿಸಬೇಕು, ನಾನು ಒಡವೆ ವಸ್ತ್ರ ಆಸ್ತಿ ಅಂತಸ್ತು ಹೆಚ್ಚಿಸಿಕೊಂಡು ಹೆಸರು ಗಳಿಸಬೇಕು. ಶ್ರೀಮಂತನೆನಿಸಿಕೊಳ್ಳಬೇಕು. ಒಂದಷ್ಟು ಹೆಸರು ಪ್ರಶಸ್ತಿ ಸನ್ಮಾನ ಎಲ್ಲವೂ ನನಗೇ ಸಿಗಬೇಕು ಎಂಬ ಸ್ವಾರ್ಥ. ಅದರಿಂದಲೇ ಹಿತಶತ್ರುಗಳು, ಪ್ರತಿಸ್ಪರ್ಧಿಗಳು, ಮತ್ಸರ ಪಡುವವರು ಹುಟ್ಟಿಕೊಳ್ಳುತ್ತಾರೆ. ಅವರೆಲ್ಲರ ಪಕ್ಕಕ್ಕೆ ಸರಿದು ಗುರಿ ಎಡೆಗೆ ಸಾಗುವುದು ಸಾಧನೆಯೇ ಸರಿ.
ಇದೆಲ್ಲವೂ ನಿವೃತ್ತಿ ಜೀವನಕ್ಕೆ ಕಾಲಿಡುವ ಹಿಂದಿನ ದಿನದ ತನಕ ನಡೆಯುತ್ತಲೇ‌ ಇರುತ್ತದೆ. ನಡೆಯಬೇಕು ಕೂಡ.


ಉಸಿರು ನಿಲ್ಲಲೂ ಹೋರಾಡಬೇಕು?!

ನಿಮಗನಿಸಿದೆಯಾ? ಇಲ್ಲಾ ಸಮೀಪದಿಂದ ಯಾರನ್ನಾದರೂ ನೋಡಿದ್ದೀರಾ. ಇಲ್ಲಿ ಉಸಿರು ನಿಲ್ಲಲು ಕೂಡ ಹೋರಾಡಬೇಕು. ತಮ್ಮ ಮುಪ್ಪಿನ ಕೊನೆ ಗಳಿಗೆಯಲ್ಲಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿ ಕೈಗೆ ಡ್ರಿಪ್ಸ್ ಚುಚ್ಚಿಸಿಕೊಳ್ಳುವಾಗ ಆಗುವ ನೋವು, ಆಗಾಗ್ಗೆ ಕಾಡುವ ಉಸಿರಾಟದ ಸಮಸ್ಯೆ, ಕಿಡ್ಮಿ ಸರಿಯಾಗಿ ಕಾರ್ಯ ಮಾಡದೇ ಇರುವುದು, ಹೃದಯ ಬಡಿತ ಕ್ಷೀಣಿಸುವುದು, ಮಧುಮೇಹ, ಬಿಪಿ ಕಾಡುವುದು, ಹೊಟ್ಟೆಯಲ್ಲಿ ಅಲ್ಸರ್ ಹೊಟ್ಟೆ ನೋವು, ಆ ಹಿಂಸೆ ಸಜೀವಸದೃಶ ನರಕ ಅನುಭವಿಸುವ ಬದಲು ಡಾಕ್ಟ್ರೇ ನನ್ನ ಸಾಯಿಸಿ ಬಿಡಿ. ಈ ನೋವು ತಡೆಯೋಕ್ ಆಗಲ್ಲ ಎಂದು ಹೇಳುವವರೂ ಇದ್ದಾರೆ. ಹಾಗೆಂದು ವೈದ್ಯರು ಸಾಯಿಸುವರೇ? ಅದು ಕೊಲೆಯಾಗುತ್ತದೆ. ಅಥವಾ ರೋಗಿಯೇ ಏನಾದರು ಅಚಾತುರ್ಯ ಮಾಡಿಕೊಂಡು ಸಾಯಲು ಪ್ರಯತ್ನಿಸಿದರೆ ಆತ್ಮಹತ್ಯಾ ಪ್ರಯತ್ನವೆನಿಸಿಕೊಳ್ಳುತ್ತದೆ.

ಹೌದು!!
ಅದಕ್ಕೆ ಹೇಳಿದೆ ಸಾವು ಬರಬೇಕು ಎಂದರೂ ಬರುವುದಿಲ್ಲ. ಆ ಒಂದುಎಳೆ ಉಸಿರು ನಿಲ್ಲಲು ಹೋರಾಡಲೇ ಬೇಕು. ಎಲ್ಲೋ ಹತ್ತರಲ್ಲಿ ಒಬ್ಬರೊ ಇಬ್ಬರೋ ಕುಳಿತಲ್ಲೇ ತೀರಿಹೋದರು. ರಾತ್ರಿ ಮಲಗಿದವರು ಮುಂಜಾನೆ ಎದ್ದೇಳಲೇ ಇಲ್ಲ‌. ನಿಂತಲ್ಲೇ ಕುಸಿದುಬಿದ್ದು ಮರಣ, ರಸ್ತೆ ಅಪಘಾತ ಸ್ಥಳದಲ್ಲೇ ದುರ್ಮರಣ. ಎಂದು ಕೇಳಿಸಿಕೊಂಡಿರಬಹುದು. ಆದರೆ ಉಸಿರು ಅಷ್ಟು ಸುಲಭದಲ್ಲಿ ನಿಲ್ಲುವುದಿಲ್ಲ. ಗುಂಡಿಗೆ ಗಟ್ಟಿ ಇರುತ್ತದೆ‌. ದೇಹದ ಎಲ್ಲ ಅಂಗಾಂಗಗಳು ತಮ್ಮ ಕೆಲಸ ಒಂದೊಂದಾಗಿ ನಿಲ್ಲಿಸುತ್ತಾ ಬಂದ ಮೇಲೆ ಹೃದಯ ತನ್ನ ಕೆಲಸ ನಿಲ್ಲಿಸುತ್ತದೆ. ರೋಗಿಯು ಇನ್ನೇನು ಹೆಚ್ಚು ದಿವಸ ಬದುಕುವುದಿಲ್ಲ ಎಂಬ ಕಟುಸತ್ಯ ವೈದ್ಯರಿಗೆ ತಿಳಿದರೂ ಆತನ ಮನೆಯವರ ಜೊತೆ ಹೇಳದೆ ಕಾಯುತ್ತಲೇ ಇರುವರು.

ಅದನ್ನು ಸಮೀಪದಿಂದ ನೋಡಿದವರಿಗೆ ಮಾತ್ರವೇ ತಿಳಿಯುವುದು, ಕಣ್ಣಾರೆ ಕಂಡಾಗಲೇ ಮನುಷ್ಯನ ಬದುಕು ಎಂದರೆ ಎಂತದ್ದು?? ಇಲ್ಲಿ ಹುಟ್ಟಿಗೂ ಹೋರಾಟ, ಮರಣಕ್ಕೂ ಹೋರಾಟ ನಡೆಸಲೇ ಬೇಕು. ನಡುವಿನ ಜೀವಿತದಲ್ಲಿ ಎಷ್ಟು ಶ್ರೀಮಂತರಾದರೂ ಅಹಮಿಕೆ ತೋರದೇ ಊರಿಗೆ ಗಣ್ಯವ್ಯಕ್ತಿಯಾಗಿ, ಮಾನವೀಯತೆ, ಸ್ನೇಹಪರವಾಗಿ ಸಹಾಯ ಪರಸ್ಪರ ಸಹಕಾರ, ಕರುಣೆ ದಯೆ ಕಾಳಜಿ ವಹಿಸುತ್ತಾ ಪ್ರೀತಿಯಿಂದ ಕೂಡಿದ ಬದುಕು ಬದುಕಬೇಕು. ಯಾವುದಕ್ಕೂ ಅತಿಯಾಗಿ ಒತ್ತಡಕ್ಕೆ ಒಳಗಾಗದೆ ತಿಳಿ ಹಾಸ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಹೃದಯ ಮೆದುಳಿಗೆ ಒತ್ತಡ ಕೊಡದೇ ಸನ್ನಿವೇಶ ಸಂಧರ್ಭಗಳನ್ನು ನಿಭಾಯಿಸುವ ಕಲೆ ಬೆಳೆಸಿಕೊಳ್ಳಬೇಕು. ಜೊತೆಗೆ ಬಾಲ್ಯದಿಂದಲೆ ಕಲೆ ಸಾಹಿತ್ಯ ಸಂಗೀತ ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕು. ಅದರಿಂದ ಸತ್ತ ಮೇಲೂ ಜನ ನಮ್ಮ ನೆನಪಿನಲ್ಲಿಟ್ಟುಕೊಳ್ಳುವರು.

ಸಿಂಧು ಭಾರ್ಗವ ಬೆಂಗಳೂರು
#ಸಿಂಧುಚಿಂತ‌ನೆ
#ಸಿಂಧುಲೇಖ‌ನ
#ಆಲದನೆರಳು_ಕನ್ನಡಮ್ಯಾಗಜೀನ್

© Writer Sindhu Bhargava