...

5 views

ಫೇಸ್ಬುಕ್ ಲವ್ ಸ್ಟೋರಿ.
2012 ಡಿಸಂಬರ್ 21 ಕ್ಕೆ ಪ್ರಳಯವಾಗುತ್ತದೆ, ಎಂದು ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದವರಿಗೆ. ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿ ಕಮೆಂಟ್ ಮಾಡುವಾಗ ಪರಿಚಯವಾದ ನನ್ನ ಫೇಸ್ ಬುಕ್ ಗೆಳತಿ "ಅಶ್ವಿನಿ". ಮೊದ ಮೊದಲು ನಮ್ಮ ಚಾಟ್ ಹಾಯ್ Good morning, Good night. ಇಷ್ಟಕ್ಕೆ ಮುಗಿಯುತ್ತಿತ್ತು, ದಿನ ಕಳೆದಂತೆ ಅರ್ಧ ರಾತ್ರಿಯವರೆಗು ಚಾಟ್ ಮಾಡುತ್ತಿದ್ದೆವು.

ಆದರೆ ಎಂದಿಗೂ ನಾವು ಚಾಟ್ ನಲ್ಲಿಯೂ ಸಹ ಎಲ್ಲೆ ಮೀರಲಿಲ್ಲ, ಹವ್ಯಾಸ, ಪ್ರವೃತ್ತಿ, ಓದು, ಭವಿಷ್ಯ, ಆಸೆ, ಕನಸುಗಳ ಬಗ್ಗೆ ಮಾತ್ರ , ನಮ್ಮ ನಡುವಿನ ಚಾಟ್ನ ವಿಷಯಗಳಾಗಿರುತ್ತಿತ್ತು.

ಏಕೆಂದರೆ ಇಬ್ಬರು ಸಹ ಒಂದೇ ದೋಣಿಯ ಪಯಣಿಗರಂತಹ ಮನಃ ಸ್ಥಿತಿಯವರಾಗಿದ್ದೆವು, ಬಡತನ, ಅದರ ವಿರುದ್ದದ ಹೋರಾಟ ನಮ್ಮನ್ನು ಉತ್ತಮ ಸ್ನೇಹಿತರನ್ನಾಗಿಸಿತ್ತು. ಏನಿದ್ದರು ನೇರವಾಗಿ ಹೇಳುವ ಅವಳ ಗುಣ ನನಗೆ ತುಂಬ ಇಷ್ಟವಾಗಿತ್ತು.

ಅವಳ ಬಡತನದ ಬಗ್ಗೆ ಅವಳಿಗೆ ಬೇಸರವಿತ್ತೇ ವಿನಃ ಅದರ ವಿರುದ್ದ ಹೋರಾಡಿ ಜಯಿಸ ಬೇಕೆಂಬ ಹಟವಿತ್ತೇ ವಿನಃ, ಅದನ್ನು ಮರೆಮಾಚುವ, ಮನಃ ಸ್ಥಿತಿ ಅವಳದ್ದಾಗಿರಲಿಲ್ಲ. (ಹುಡುಗರಿಗೆ ಹೋಲಿಸಿದರೆ ಕೆಲ ಹುಡಿಗಿಯರು ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರು, ಮನೆಯಲ್ಲಿ ತಂಗಳು ತಿಂದರು ಹೊರಗೆ ಮಹಾರಾಣಿಯರಂತೆ ಶೋಕಿ ತೋರಿಸುತ್ತಾರೆ. ಅದು ಅವರ ಸ್ವಾಭಿಮಾನ ಮತ್ತು ಅವರ ಇಚ್ಚೆ, ಆದರೆ ನನ್ನದೊಂದು ವಿನಂತಿ. ಹೊರಗೆ ನಿಮಗೆ ಬಿಸಿ ಬಿಸಿ ಮೃಷ್ಟಾನ್ನ ಸಿಕ್ಕಾಗ ದೊಡ್ಡಸ್ತಿಕೆ ತೋರಿಸಲು ದಯವಿಟ್ಟು ಅನ್ನವನ್ನು ವ್ಯರ್ಥ ಮಾಡ ಬೇಡಿ.)ಅವಳ ತಂದೆ ಒಂದು ಸಣ್ಣ ಬೇಕರಿ ಮತ್ತು ಸ್ವೀಟ್ ಅಂಗಡಿ ನಡೆಸುತ್ತಿದ್ದರು, ಸಂಜೆ ಕಾಲೇಜು ಮುಗಿದ ನಂತರ ಇವಳು ಅಂಗಡಿಯಲ್ಲಿ ಅವರ ತಂದೆಗೆ ಸಹಾಯ ಮಾಡುತ್ತಿದ್ದಳು. ತಂದೆ, ತಾಯಿಯ ಬಗ್ಗೆ ಅಪಾರ ಪ್ರೀತಿ, ಗೌರವವಿದ್ದ ಹುಡುಗಿ ಆಕೆ.

ನಾವು ದಿನ ಒಂದಲ್ಲ ಒಂದು ವಿಚಾರವಾಗಿ ಚಾಟ್ ಮಾಡುತ್ತಿದ್ದೆವು, ಚರ್ಚಿಸಲು ಒಂದು ವಿಷಯ ಬೇಕಿತ್ತಷ್ಟೆ.

ಹೀಗೆ ಒಂದು ದಿನ ನಮ್ಮ ಚಾಟ್ ಮದುವೆ ವಿಚಾರದತ್ತ ತಿರುಗಿತ್ತು. ಲವ್ ಮ್ಯಾರೆಜ್, ಅರೇಂಜ್ ಮ್ಯಾರೇಜ್ ವಿಚಾರವಾಗಿ ಚರ್ಚಿಸುತ್ತ ಅವಳ ನನ್ನ ಅಭಿಪ್ರಾಯಗಳು ವಿನಿಮಯವಾಗುತ್ತಿದ್ದವು. ಅವಳು ಅವಳ ತಂದೆ, ತಾಯಿಯನ್ನು ಗೌರವಿಸುವ, ಎಲ್ಲರ ಬಗ್ಗೆ ಕೇರ್ ತೆಗೆದು ಕೊಳ್ಳುವ ಒಳ್ಳೆಯ ಹುಡುಗನನ್ನು ಲವ್ ಮಾಡಿ ಮದುವೆ ಆಗುವುದು ಅವಳ ಇಚ್ಚೆಯಾಗಿತ್ತು.

ಹೀಗೆ ಸಾಗುತ್ತಿದ್ದ ನಮ್ಮ ಚಾಟ್ನಲ್ಲಿ ಅವಳು Indirect ಆಗಿ ಪ್ರೀತಿಯ ನಿವೇದನೆ ಮಾಡುತ್ತಿದ್ದಳು. ಅದು ಅರ್ಥವಾದರು ಏನು ಪ್ರತಿಕ್ರಿಯಿಸ ಬೇಕು ಎನ್ನುವ ಗೊಂದಲದಲ್ಲಿ ನಾನಿದ್ದೆ. ನನಗೆ ಒಳ್ಳೆಯ ಗೆಳತಿಯ ಅವಶ್ಯಕತೆ ಇತ್ತು, ನನ್ನ ಕಷ್ಟ, ಸುಖ, ಸಂತೋಷ, ದುಃಖವನ್ನು ಅಂಚಿಕೊಳ್ಳಲು, ಮತ್ತು ಅವರ ಕಷ್ಟ, ಸುಖಗಳಲ್ಲಿ ಭಾಗಿಯಾಗಲು. ಪ್ರೀತಿಸ ಬೇಕೆಂಬ ಮನಸ್ಸಿದ್ದರು ನಮ್ಮ ಬಡತನ, ಉದ್ಯೋಗದ ಅಭದ್ರತೆ, ಜೀವನದ ನಮ್ಮ ಕನಸುಗಳು ನಾನಿದ್ದ ಪರಿಸ್ಥಿತಿಯಲ್ಲಿ ಅವಳ ಪ್ರೀತಿಯನ್ನು ನಿರಾಕರಿಸುವಂತೆ ಮಾಡಿತು. ನಾನೊಬ್ಬ ಉತ್ತಮ ಗೆಳೆಯ ಮಾತ್ರ ಆಗಿರುತ್ತೇನೆಂದೆ. ನಮ್ಮ ಪರಿಸ್ಥಿತಿಯ ಅರಿವನ್ನು ಅವಳಿಗೆ ತಿಳಿಸಲು ಪ್ರಯತ್ನಿಸಿದೆ, ಒಬ್ಬರನ್ನೊಬ್ಬರು ಫೋಟೋದಲ್ಲಿಯು ಸಹ ನೋಡಿರಲಿಲ್ಲ. ನಮ್ಮ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯದ ನಿಷ್ಕಲ್ಮಷ ಗೆಳೆತನ, ಪ್ರೇಮ ಲೇಪನ ಬಳಿದು ಕೊಳ್ಳಲು ಹೋಗಿ ಅಂದಿಗೆ, ಅಂತ್ಯವಾಯಿತು. ಅವಳ ಮನಸ್ಸಿನಲ್ಲೇನಿತ್ತು ತಿಳಿಯಲೇ ಇಲ್ಲ????.....

ಕೆಲ ತಿಂಗಳುಗಳ ನಂತರ ನಾನು ಫೇಸ್ ಬುಕ್ ಮೆಸೇಜ್ ಗಳನ್ನು ಚೆಕ್ ಮಾಡುವಾಗ, ಅವಳಿಗೆ ಮತ್ತೆ ಮೆಸೇಜ್ ಮಾಡಿದೆ, ಆಗ ತಿಳಿಯಿತು ಅವಳು ಕಾಲೇಜ್ ನ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಪ್ರತಿಷ್ಟಿತ ಬಹುರಾಷ್ಟ್ರಿಯ ಕಂಪನಿಗೆ ಆಯ್ಕೆ ಆಗಿದ್ದಾಳೆ ಎಂಬುದು. ತರಬೇತಿಗಾಗಿ ಹೊರ ರಾಜ್ಯದ ವಿಭಾಗಕ್ಕೆ ಹೋಗುತ್ತಿದ್ದಾಳೆ ಎಂಬುದು. ಅಂದು ಅವಳಿಗೆ "All The Best " ಹೇಳಿದ್ದೇ ಕೊನೆ. ಇಂದಿನವರೆಗು ಅವಳ ವಿಚಾರ ತಿಳಿದಿಲ್ಲ. ಅವಳ ಫೇಸ್ ಬುಕ್ ಅಕೌಂಟ್ ಡೀ ಆ್ಯಕ್ಟಿವೇಟ್ ಆಗಿದೆ. ಅವಳ ಬಗ್ಗೆ ಈ "ಪ್ರೇಮಾನುರಾಗ ಕಥನ" ಸ್ಪರ್ಧೆಗೆ ಬರೆಯ ಬೇಕು ಎಂದಾಗಲೂ

ಸಹ ಒಬ್ಬ ಒಳ್ಳೆಯ ಗೆಳತಿಯನ್ನು ಕಳೆದುಕೊಂಡ ಭಾವನೆ ಮನದಲ್ಲಿ ಮೂಡಿತ್ತು..... ನಿಜ ಪ್ರೀತಿ, ಗೆಳೆತನ ಅಂದ್ರೇನೆ ಹೀಗೆ ಅಲ್ವ. ಸಾವಿನ ನಂತರವು ಕಾಡುವ ಬಂಧನ.. ಬಾಹ್ಯ ಸೌಂದರ್ಯ, ಆಕರ್ಷಣೆ, ಕಾಮ. ಇಂದಿನ ಪ್ರೀತಿಯ ದುರದೃಷ್ಟಕರ ಬೆಳವಣಿಗೆ... 

  ಒಂದು ನಿಷ್ಕಲ್ಮಶ ಗೆಳೆತನ, ನಿಸ್ವಾರ್ಥ ಪ್ರೇಮಕ್ಕೆ ಯಾರು ಬೆಲೆ ಕೊಡುವುದೆ ಇಲ್ಲ.  ಈ ಫೇಸ್ ಬುಕ್, ವಾಟ್ಸ್ಯಾಪ್, ಇನ್ನೂ ಹಲವಾರು ಸಾಮಾಜಿಕ ಜಾಲ ತಾಣಗಳಲ್ಲಿ ಹೆಣ್ಣು ಮಕ್ಕಳ ಬಗ್ಗೆ ಅಸಹ್ಯಕರ ಕಮೆಂಟ್ ಗಳು, ನಂಬಿಕೆ ದ್ರೋಹದ ಪ್ರಕರಣಗಳ ಬಗ್ಗೆ  ನಾವು ದಿನ ಕೇಳುತ್ತೇವೆ, ಓದುತ್ತೇವೆ, ಆದರೂ ಈ ಜಾಲದಲ್ಲಿ ಸಿಲುಕುವವರ ಸಂಖ್ಯೆಯಲ್ಲೇನು ಕಡಿಮೆಯಾಗಿಲ್ಲ...ನಂಬಿಕೆ, ಹದಿ-ಹರೆಯದ ಸೆಳೆತ ಇದಕ್ಕೆಲ್ಲ ಕಾರಣವ ಗೊತ್ತಿಲ್ಲ..   ನಮ್ಮ ಮನೆಯಲ್ಲಿರುವ, ನಮ್ಮ ಅಕ್ಕ-ತಂಗಿ, ಅಣ್ಣ- ತಮ್ಮ ಒಳ್ಳೆಯವರಾಗಿದ್ದರೆ ಸಾಕು. ನಮ್ಮ ಅಕ್ಕ - ತಂಗಿಯರು ಯಾವ ಪರಿಚಿತನೊಂದಿಗೂ, ಅಪರಿಚಿತನೊಂದಿಗೂ. ಹೆಚ್ಚು ಮಾತನಾಡಬಾರದು , ಸಲುಗೆಯಿಂದ ಇರಬಾರದು ಎಂದು ನಿರ್ಬಂಧ ಹೇರುವ ನಾವು, ಮತ್ತೊಬ್ಬನ ಅಕ್ಕ-ತಂಗಿಯರ ಜೊತೆ ಆ ಸಲುಗೆಯಿಂದ  ಇರಲು ಬಯಸುತ್ತೇವೆ. ಇದು ಎಷ್ಟರ ಮಟ್ಟಿಗೆ  ಸರಿ,
ಹೆಣ್ಣುಮಕ್ಕಳು ಅಷ್ಟೆ, ಮನೆಯಲ್ಲಿರುವ ಅಣ್ಣ, ತಮ್ಮ, ತಂದೆಯ ಬಗ್ಗೆ ಇರುವ ಪ್ರೀತಿ ಗೌರವ, ಹೊರಗಿನ ಹುಡುಗರ ಬಗ್ಗೆಯು ಇರಲಿ, ಹುಡುಗರನ್ನು ಬಕ್ರಗಳು ಅಂತ ನೀವು ನೋಡಿದರೆ, ನಿಮ್ಮ ಅಣ್ಣ-ಅಥವಾ ತಮ್ಮನನ್ನು ಇನ್ಯಾರೊ ಅದೆ ರೀತಿ ನೋಡ್ತಿರ್ತಾರೆ ಅನ್ನೋದು ನೆನಪಿರಲಿ.
ಸ್ನೇಹ - ಪ್ರೀತಿ ಸಂಬಂಧ ಯಾವುದೇ ಇರಲಿ ಪರಸ್ಪರ ಗೌರವ, ನಂಬಿಕೆ ಇರಲಿ... ಬದಲಾಗಿ, ಮನಃಸ್ಥಿತಿ ಬದಲಾಯಿಸಿಕೊಳ್ಳಿ.. ಎಲ್ಲರನ್ನು ಗೌರವಿಸಿ.....


© ಮಂಜುನಾಥ್.ಕೆ.ಆರ್