...

2 views

ಹಿಂಸೆ ನೀಡುವುದು
ಹೌದು ಕೆಲವೊಮ್ಮೆ ನಮ್ಮ ಸುತ್ತಮುತ್ತಲಿರುವವರೇ ಕಿತ್ತು ತಿನ್ನುವ ರಣಹದ್ದುಗಳಂತೆ ಕಾಣುವರು. ಸ್ವಾರ್ಥಿಗಳಾಗಿ ಬಿಡುತ್ತಾರೆ. ಝಣಝಣ ಕಾಂಚಾಣದ ಪ್ರಭಾವ ಜನರ ಮನಸ್ಸು ತಲೆಕೆಡಿಸಿ ನಿಷ್ಟೂರಿಗಳನ್ನಾಗಿ ಮಾಡಿಬಿಡುತ್ತದೆ. ಎದುರಿಗಿದ್ದರಿಗೆ, ಜೊತೆಗಿದ್ದವರಿಗೇನೆ ಅಹಂಕಾರದಿಂದ ಮಾತನಾಡುವುದು, ಹಂಗಿಸುವುದು, ಸಸಾರಮಾಡಲು ದಂಡಿಸಲು ಶುರುಮಾಡುತ್ತಾರೆ.

ಶರ್ಮಿಳಾ ಬಹಳ ಚಿಕ್ಕ ವಯಸ್ಸಿನಿಂದಲೂ ಹಟಹಿಡಿದು ಓದಿ ತರಗತಿಯಲ್ಲಿ ಮೊದಲಿಗೆ ಬರುತ್ತಿದ್ದವಳು. ಅವಳಿಗೆ ಯಾವುದು ಕೂಡ ಆಗುವುದಿಲ್ಲವೆಂದೇ ಇರಲಿಲ್ಲ. ಏಕೆ ಸಾಧ್ಯವಿಲ್ಲ ಎಂದು ಹಟಹಿಡಿದು ಸಾಧಿಸಿ ತೋರಿಸುತ್ತಿದ್ದಳು. ಓದಿನಲ್ಲಿ ,ರಸಪ್ರಶ್ನೆ ಸ್ಪರ್ಧೆ, ಭಾಷಣ, ತರಗತಿಯಲ್ಲಿ ‌ಲೀಡರ್ ಎಂದು ಹೀಗೆ ಅವಳ ತರಗತಿಯಲ್ಲಿ ಅವಳೇ ಮೊದಲಿರುತ್ತಿದ್ದಳು. ಅದಕ್ಕೆ ತಾಯಿ ಸಂಪೂರ್ಣ ಬಮಬಲ ನೀಡುತ್ತಿದ್ದರು. ಎಲ್ಲಿಯ ತನಕವೆಂದರೆ ಕಾಫಿ ತಿಂಡಿ ಊಟ ಎಲ್ಲವೂ ಅವಳುನೋದುವ ಕೋಣೆಗೆ ಅವಳ‌ಕೈಗೆ ಕೊಟ್ಟು ಬರುವಷ್ಟು. ಅವಳ ಡಿಗ್ರಿ ಕಾಲೇಜಿಗೆ‌ ಹೋಗುವ ಹುಡುಗಿಯಾದರೂ ಸಹ ಅವಳ ಬಟ್ಟೆಯನ್ನೂ ಒಗೆದು ಹಾಕುವಷ್ಟು ಅವಳಿಗೆ ಬೆಂಬಲ ನೀಡುತ್ತಿದ್ದರು. ಅದರರ್ಥ ಮನೆಯ ತಾವ ಕೆಲಸವನ್ನೂ ಮಾಡಲು ಬಿಡದೇ ತಾನೇ ಮಾಡಿಕೊಂಡು ಹೋಗುತ್ತಿದ್ದರು. ಇದರಿಂದ ಅವಳು‌ ಓದಿನಲ್ಲಿ ರ್ಯಾಂಕ್ ಪಡೆದಳು.

ಉದ್ಯೋಗ ಅರಸಿ ಬೆಂಗಳೂರಿನಂತಹ‌ನಗರಕ್ಕೆ ಬಂದಾಗ ಯಾರ ಮನೆಯಲ್ಲಿ ಇರುವುದು ಎಂಬುದೇ ದೊಡ್ಡ ‌ಸಮಸ್ಯೆಯಾಯಿತು.  ಆಗ ಅಣ್ಣನ ಮನೆಯಲ್ಲಿರಲಿ ಎಂದು ಮಾತನಾಡಿಕೊಂಡರು. ಅಣ್ಣನ ಮನೆಯಲ್ಲಿ ಅತ್ತಿಗೆ ಅವರಿಗೊಂದು ಪುಟ್ಟ ಎರಡು ವರುಷದ ಮಗುವಿತ್ತು. ಅದರ ಆರೈಕೆ ಮಾಡುವುದು , ಅದರ ತುಂಟಾಟಗಳನ್ನು ಸಹಿಸಿಕೊಂಡು ಸಂಬಾಳಿಸಿಕೊಂಡು ಹೋಗುವುದೇ ದೊಡ್ಡ ಕೆಲಸವಾಗಿತ್ತು. ಅಂತದ್ದರಲ್ಲಿ ಈಕೆಗೆ ಏನೂ ಕೆಲಸ ಗೊತ್ತಿಲ್ಲ. ಎಲ್ಲವೂ ಕೈಬುಡಕ್ಕೆ ತಂದು ಕೊಟ್ಟು ಅಭ್ಯಾಸ. ಅತ್ತಿಗೆಗೆ ಮಗು ಚಿಕ್ಕದು, ಪಾಪ! ವರೊಬ್ಬರಿಗೆ ಕೆಲಸವೆಲ್ಲ ಮಾಡಲು ಆಗದು, ನಾನು ಸಹಾಯ ಮಾಡುವೆ ಎಂಬ ಭಾವನೆಯೂ ಇಲ್ಲ. ಯಾವ ಕೆಲಸವೂ ಮಾಡದೆ ಸೋಫಾದಿಂದ ಇಳಿಯುತ್ತಲೇ‌ ಇರಲಿಲ್ಲ. ಕೆಲಸ‌ಬಹುಡುಕುವ ಚಿಂತೆಯಲ್ಲಿ ಆರು ತಿಂಗಳೇ ಕಳೆಯಿತು. ನಂತರ ಸಿಕ್ಕ ಕೆಲಸವೂ ಸಂಬಳ ಚೆನ್ನಾಗಿಲ್ಲ ಎಂಬ ಚಿಂತೆ. ಬೆಂಗಳೂರಿನಲ್ಲಿ ಹೊಂದಿಕೊಳ್ಳಲು ಕಷ್ಟಪಡುವಂತಾಯಿತು. ಕೂಡಲೇ ಕಿರಿಕಿರಿ ಎನಿಸುವುದು, ಸಿಡಿಮಿಡಿಗೊಳ್ಳುವುದು, ತಾಯಿಗೆ‌ ಕರೆ ಮಾಡಿ ದೂರು ಹಾಕುವುದು ಅಭ್ಯಾಸಮಾಡಿಕೊಂಡಳು.‌ ಇವಳು ಅಲ್ಲಿರುವುದು ಸರಿಯಲ್ಲ ಎಂದು ಹಾಸ್ಟೆಲ್ ಗೆ ಸೇರಲು ಹೇಳಿದರು. ಬೆಂಗಳೂರಿಗೆ ಹೋಗಿ ಐದು ವರುಷಗಳೇ‌ ಕಳೆದವು. ‌ತಾಯಿಗೆ ಮದುವೆ ಕೂಡ ಆಗಲಿಲ್ಲ ಎಂಬ ಚಿಂತೆ. ಆಮೇಲೆ ಮದುವೆಯಾಯಿತು. ಮೂರು ವರುಷ ಕಳೆದ ಮೇಲೆ ಒಂದು ಮಗುವು ಜನಿಸಿತು.
ನಂತರದಲ್ಲಿ ಬಾಣಂತನ ಸಾಕಿದ ಮೇಲೆ ತಾಯಿಯನ್ನು ಬೆಂಗಳೂರಿಗೆ ತನ್ನ ಮನೆಗೆ ಕರೆದುಕೊಂಡು ಹೋದಳು. ಎಪ್ಪತ್ತು ವರುಷದ ಹಿರಿಯ ಜೀವ. ಇವಳೀಗ ತಿಂಗಳಿಗೆ‌‌ ಒಂದು ಲಕ್ಷ ಸಂಪಾದಿಸುವ ಕಾರ್ಪರೇಟ್ ಮಹಿಳೆ. ಉಪ್ಪು ಯಾವುದು ಜೀರಿಗೆ ಯಾವುದು ತಿಳಿದಿಲ್ಲ. ಮನೆಯ ಕೆಲಸ ಒಂದೂ ಮಾಡುತ್ತಿರಲಿಲ್ಲ. ಗಂಡನ ಕೈಲಿ ಅಡುಗೆ ಮಾಡಿಸುವುದು ಪಾತ್ರೆ ತೊಳೆಸುವುದು ಕೇಳಿದರೆ ಸಮಾನತೆಯ ಗಟ್ಟಿ ಧ್ವನಿ, ಜಗಳ ಮಾಡುವುದು. ಮನೆ ಹೀಗೆ ನಡೆದುಕೊಂಡು ಹೋದಾಗ ತಾಯಿಯು ಮಗುವನ್ನು ನೋಡಿಕೊಳ್ಳಲು ಬಂದರು. ಎಲ್ಲ ಕೆಲಸವೂ ಅವರ‌ ಮೆಲೆ ಹೇರಿದಳು. ಗಂಡನಿಗೂ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಮಗುವನ್ನೂ ನೋಡಿಕೊಂಡು ಮನೆಕೆಲಸವನ್ನೂ ಮಾಡಬೇಕಿತ್ತು. ಇಪ್ಪತ್ತ‌ನಾಲ್ಕು ಗಂಟೆಯೂ ಕಡಿಮೆ‌ ಎಂಬಂತೆ ಹೆತ್ತ ತಾಯಿಗೆ ಗೋಳು ಹೊಯ್ದು ಕೊಳ್ಳುತ್ತಿದ್ದಳು. ಆಫೀಸು ಕೆಲಸ ಮುಗಿಸಿ ಮನೆಗೆ ಬಂದರೆ ಮಗುವಿಗೆ ಹಾಲೂಡಿಸುತ್ತಲೂ ಇರಲಿಲ್ಲ. ತಿನ್ನಲು ಮಣ್ಣಿ ಮಾಡುವುದು, ಮುದ್ದಾಡುವುದು, ಆಟಿಕೆಗಳನ್ನು ಅದರೆದುರು ಹಾಕಿ ಆಡಿಸುವುದು , ಅಮ್ಮಾ ನೀನು ಸ್ವಲ್ಪ ವಿಶ್ರಾಂತಿ ತಗೋ, ನಾನು ಮಗುವನ್ನು ನೋಡಿಕೊಳ್ಳುವೆ ಎಂದು ಹೇಳುವುದಾಗಲಿ ಏನೂ ಮಾಡುತ್ತಿರಲಿಲ್ಲ. ಅಯ್ಯೋ! ನನಗೆ ರೆಸ್ಟ್ ಮಾಡಿದರೆ ಸಾಕು ಎನಿಸುತ್ತದೆ.  ನಾನು ಎಷ್ಟು ಕಷ್ಟ ಪಡುತ್ತೇನೆ. ಎಷ್ಡು ಹಟಮಾರಿ ಅದು. ಕರ್ಕೊಂಡು ಹೋಗು ಹೊರಗಡೆ. ಎಲ್ಲಿಯಾದ್ರು ಬಿಟ್ಟು ಬಾ..  ಆ ಮಗುವು ಹಾಲು ಬೇಕೆಂದು ಸನಿಹ ಬಂದರೆ ಡೋಂಟ್ ಟಚ್ ಎಂದು  ಮಗುವನ್ನು ಹೊರಗಿರಿಸಿ ಕೋಣೆಗೆ ಬಾಗಿಲು ಹಾಕಿಕೊಂಡು ಮಲಗುತ್ತಿದ್ದಳು.

ಅವಳ ಮಗುವನ್ನು ನೋಡಿಕೊಳ್ಳಲು ಹೋದ ತಾಯಿ ಎಪ್ಪತ್ತರ ವೃದ್ಧೆ. ಗಂಡನ ಕಳೆದುಕೊಂಡವರು. ವಯೋ ಸಹಜ ಸುಸ್ತು ಆಯಾಸ, ಅನಾರೋಗ್ಯ ಬಾರದೇ ಇರದು. ಹೊತ್ತಿಗೆ ಸರಿಯಾಗಿ ಊಟ ಇಲ್ಲ. ಕಣ್ತುಂಬಾ ನಿದ್ದೆ ನಿಲ್ಲ. ಹಗಲು ರಾತ್ರಿ ಆ ಮಗುವನ್ನು ನೋಡಿಕೊಳ್ಳಬೇಕು. ಆದರೆ ಈಕೆ ಸ್ವಂತ ಮಗಳಾಗಿ ಕರುಣೆಯಿಲ್ಲದವಳ ಹಾಗೆ ಅಮ್ಮನಿಗೆ ಕಷ್ಟವಾಗುತ್ತದೆ ಎಂದು ಅನಿಸದೇ ದಂಡಿಸುತ್ತಿದ್ದಳು. ನನ್ನ ಕೈಲಿ ಆಗುತ್ತಿಲ್ಲ.‌ಕಷ್ಟವಾಗುತ್ತಿದೆ. ಆ ಮಗುವನ್ನು ಎಷ್ಟು ಎಂದು ಹಿಡಿದುಕೊಳ್ಳುವುದು...ಎಂದು ಅನುದಿನ ತಾಯಿ ಕಣ್ಣೀರು ಸುರಿಸುತ್ತಿದ್ದರು. ಕೆಲಸದಾಕೆಗು ಸಹ ಸಮಯವೆಂದಿರುತ್ತದೆ. ಮತ್ತೆ ಮನೆಗೆ ಹೋಗುತ್ತಾರೆ ತಾನೆ. ಆದರೆ ಸ್ವಂತ ತಾಯಿಗೆ ೨೪ ಗಂಟೆಯೂ ಕೆಲಸ ಕೊಡುವಳು.

ಹೆತ್ತ ತಾಯಿಗೆ ಕಣ್ಣೀರು ಹಾಕಿಸುವ ಮಗಳಿಗೆ ಏನನ್ನಬೇಕು. ಹಣದ ಮದ, ತಾನು ದುಡಿಯುವೆ, ಸ್ವಾವಲಂಬಿ ಎನ್ನುವ ಅಹಂಕಾರ ಅತಿಯಾಗಿ ತಾಯಿಯನ್ನೇ ಕೆಲಸದವಳಂತೆ ಮಾಡಿಕೊಂಡಿರುವಳು. ಆ ಮಗುವನ್ನು ಮುಟ್ಟುವುದಿಲ್ಲ, ಹಚ್ಚಿಕೊಳ್ಳುತ್ತದೆ ಎಂದು ದೂರವಿರಿಸುವುದು, ಎದೆಹಾಲು ಕೊಡುವುದಿಲ್ಲ, ಮಣ್ಣಿ ತಿನ್ನಿಸುವುದಾಗಲಿ, ಸ್ನಾನ ಮಾಡಿಸುವುದಾಗಲಿ, ಬಟ್ಟೆ ಹಾಕುವುದಾಗಲಿ, ಡೈಪರ್ ಬದಲಿಸುವುದಾಗಲಿ ಇಲ್ಲ. ಜನಿಸಿದ ದಿನದಿಂದ ಇಂದಿನವರೆಗೂ ತನ್ನ ಕೋಣೆಯಿಂದಲೇ ಹೊರ ಮಲಗಿಸುತ್ತಿರುವಳು. ಅಜ್ಜಿ ಜೊತೆಗೆ ಮಲಗಿಸುವಳು. ನಡುವೆ ಎಚ್ಚರವಾದರೆ ಅಜ್ಜಿಯೇ ಹೆಗಲಿಗೆ ಹಾಕಿಕೊಂಡು ತಟ್ಟಿ ಮಲಗಿಸಬೇಕು. ಸರಿಯಾಗಿ ಹಾಲು ಕುಡಿಸುವುದೂ ಇಲ್ಲ. ಅಂತೂ ಅವಳ ನಿದ್ದೆಗೆ ಭಂಗಬರಬಾರದು.

ಯಾರ ಕಷ್ಟವೂ ಅರ್ಥವಾಗದೇ ಸ್ವಾರ್ಥಿಯಾಗಿ ಬದುಕುವ ಇಂತವರಿಗೆ ಏನನ್ನಬೇಕು. ಅಮ್ಮನಿಗೆ ಸಂಕಟ ಕೊಟ್ಟು ಇಳಿವಯಸ್ಸಿನಲ್ಲಿಯೂ ಕೆಲಸ ಮಾಡಿಸಿಕೊಳ್ಳುವವರು ಕಿತ್ತು ತಿನ್ನುವ ರಣಹದ್ದುಗಳಂತೆ ಕಾಣುವುದಿಲ್ಲವೇ??

ಸಿಂಧು ಭಾರ್ಗವ ಬೆಂಗಳೂರು.




© Writer Sindhu Bhargava