...

8 views

ಮನಸು,ಮನಸುಗಳ ವಿಷಯ..
ಮನಸು ಮನಸುಗಳ ವಿಷಯ....

ನೋವು ತುಂಬಿದ ಮನಕೆ ಚೂರು ಸ್ಫೂರ್ತಿ ನುಡಿ ತುಂಬಿ,ಅವರಿಗೆ ಬದುಕಿನ ಉತ್ಸಾಹ ಮತ್ತೆ ಮರಳುವಂತೆ ಮಾಡುವ ಕೆಲಸ ಅಷ್ಟು ಸುಲಭದಾಯಕವಲ್ಲ.ತುಂಬಾ ಸಮಯ ಅಂತಹ ಮನಸುಗಳ ನಡುವೆ ಬೆರೆಯಬೇಕು..ಸದಾ, ಅವರ ಜೊತೆಯಲ್ಲಿ ನಾವಿದೀವಿ ಎಂಬ ಭಾವ ಅವರಿಗೆ ಮನದಟ್ಟು ಆಗುವಂತೆ ಜೊತೆಯಲ್ಲಿ ಸಾಗಬೇಕು... ಯಾರೂ ಇಲ್ಲ ತನಗೆ, ಎಂದು ಯೋಚಿಸಿ ಖಿನ್ನತೆಗೆ ಒಳಗಾದ ಮನಸ್ಸು, ಏಕಾಂತತೆಯನ್ನು ಬಯಸಿ ನಡೆಯಲು ಹೊರಡುತ್ತದೆ..ಅಂತಹ ಸುಪ್ತ ಮನಸನ್ನು ಮತ್ತೆ ಮರಳಿ,ಅದೇ ಸೃಷ್ಟಿಸಿಕೊಂಡ ನೋವಿನ ಭ್ರಮೆಯ ಲೋಕದಿಂದ ಹೊರ ತರುವುದು ಕೂಡ ಶ್ರಮದಾಯಕದ ಕೆಲಸ.
ಇಂದಿನ ದಿನಗಳಲ್ಲಿ ಸಮಯ ಮೀಸಲಿಡುವುದು ಎಂದರೆ,ಅದು ಹಣಕಿಂತಲೂ ದೊಡ್ಡ ವಿಷಯವೇ ಸರಿ. ಅವರವರ ಕೆಲಸ ಬದಿಗೊತ್ತಿ, ಅಂತಹ ಮನಸುಗಳ ಜೊತೆಯಲ್ಲಿ ಆಪ್ತವಾಗಿ ಮಮತೆಯ ಸಂಹವನದಿಂದ ಅವರ ಮುಖದಲ್ಲಿ ನಗು ಅರಳಿಸುವ ಕಾಯಕ, ಕಷ್ಟ ಆದರೂ ಸರಿ,ಇಷ್ಟ ಪಟ್ಟು ಮಾಡ ಹೊರಟರೆ ಅಷ್ಟೇನೂ ಕ್ಲಿಷ್ಟಕರ ವಿಷಯ ಅಲ್ಲ.. ಆದರೆ ಮುಂದಿನ ಪರಿಣಾಮ ತುಂಬಾ ದುರಂತಮಯ...
ದುಃಖದಲ್ಲಿ ಇರುವಾಗ ಬಾರದ ಮಂದಿ,ಖುಷಿಯಲ್ಲಿ ಇರುವಾಗ ಧುತ್ತನೆ ಪ್ರತ್ಯಕ್ಷ ಆಗುತ್ತಾರೆ..ಎಲ್ಲಿಂದಲೋ ಉದುರಿ ಬಂದವರಂತೆ..ತಾವೇ ಎಲ್ಲಾ ಎಂಬ ಮುಖವಾಡ ಧರಿಸಿ, ಈಗಾಗಲೇ ಆತುಕೊಂಡ ಬಂಧಕ್ಕೆ ಹುಳಿಯ ಹಿಂಡಲು ತವಕಿಸುತ್ತಾರೆ.ಹಾಲಿನಂತಹ ಶುದ್ಧ ಭಾವದ ಮನ ,ಹುಳಿ ಮೊಸರಾಗುವಂತೆ ಅದ್ಯಾವುದೋ ಮಾಯದಲ್ಲಿ ಮ್ಯಾಜಿಕ್ ಮಾಡಿ ಬಿಡುತ್ತಾರೆ.ನಿಮಗೆ ಅರಿವಿಗೇ ಬಾರದಷ್ಟು..‌ ಒಟ್ಟಿನಲ್ಲಿ ಹತ್ತಿರ ಆದವರು ದೂರ ಆಗಬೇಕಷ್ಟೇ...
ಅಲ್ಲಿಗೆ, ಅಂತವರ ಬೇಳೆ ಬೇಯಿತಷ್ಟೇ...
ಉಪಯೋಗ ಏನು ಇದರಿಂದ ?.ಹಚ್ಚಿಕೊಳ್ಳುವ ಪ್ರಕ್ರಿಯೆ ಅಷ್ಟು ಸುಲಭ ಅಲ್ಲ.. ಮನದಾಳಕ್ಕೆ ಇಳಿಯಬೇಕು ಬಂಧಗಳು.ಋಣದ ಎಳೆಯ ಕೃಪೆಯೂ ಇರಬೇಕು..ಅಗಲಿಸುವ ಮುನ್ನ ಒಮ್ಮೆ ಯೋಚಿಸಿದರೆ ಅದೆಷ್ಟು ಒಳ್ಳೆಯದಾಗುತ್ತದೆ ಅಲ್ವೇ? ನಿಜಕ್ಕೂ ನಿಶ್ಕಲ್ಮಶ ಮನಸ್ಸು ಹೊಂದಿದವರು,ಹೇಗಾದರೂ ಸರಿ,ಮತ್ತೆ ಮೊದಲಿನಂತೆ ಆಗಲಿ ಎಂದೇ ಬಯಸುತ್ತಾರೆ.. ಆದರೆ ಕಲ್ಮಶ ತುಂಬಿದ ಮನಗಳಿಗೆ ಅವರ ಸ್ವಾರ್ಥವೇ ಹೆಚ್ಚು ಆಗಿ ಬಿಡುತ್ತದೆಯೇ ಹೊರತು,ನೋವಿನಿಂದ ಕುಗ್ಗಿದ ಮನಸ್ಸು ಚೆನ್ನಾಗಿ ಚೇತರಿಸಿಕೊಳ್ಳಲಿ ಎಂಬ ಬಯಕೆಯಿಂದ ಯೋಚನೆ ಮಾಡೋದಿಲ್ಲ....
ಈಗೀಗ ನೊಂದ ಬರಹಗಳು ಕಣ್ಣಿಗೆ ಬಿದ್ದರೂ ನೋಡಿಯೂ ನೋಡದಂತೆ ಸಾಗಿ ಹೋಗುತ್ತದೆ ಮನಸ್ಸು. ಬೇಕಾದಷ್ಟು ಪಾಠ ಕಲಿತಿದೆ ಮನಸ್ಸು...ಇದು ,ಪರಿಚಯದವರೊಬ್ಬರು ಹಂಚಿಕೊಂಡ ಅಳಲು..ಯಾಕೆಂದರೆ ಸಾಂತ್ವನ ಹೇಳುತ್ತಾ,ಹೇಳುತ್ತಾ,ಹಚ್ಚಿಕೊಂಡು ಬಿಡುತ್ತದೆ ಮನಸ್ಸು.. ನಂತರದ ದಿನಗಳಲ್ಲಿ ,ಅರಿಯದೆಯೇ ಕೊಂಡಿ ಕಳಚಿ ಹೋಗುವ ದಿನಗಳ ನೋವಿನ ಬುತ್ತಿ ಸಹಿಸಲಾರದ ಕಹಿಯದು.ಚೂರು ಪಾರು,ಬುದ್ದಿ ಮಾತು ಕೇಳಿ ಚಂದನೆಯ ಬದುಕು ಕಟ್ಟಿಕೊಂಡ ಮುದ್ದು ಮನಸುಗಳು ಜೊತೆಯಲ್ಲಿ ..ಆಪ್ತವಾಗಿಯೇ ಇವೆ...ಹೌದು..ಇದು ಅವರೊಬ್ಬರ ಅನಿಸಿಕೆ ಮಾತ್ರ ಅಲ್ಲ..ಹೆಗಲಿಗೆ ಹೆಗಲಾಗಿ, ಆಮೇಲೆ ಕಾಲ್ಕಲಸವಾಗಿ ಹೋಗುವ ದಯನೀಯ ಮನಸುಗಳ ಮಾತು ಕೂಡ ಹೌದು...ಯಾರಿಗೆ ಯಾರುಂಟು ?ಹೇಳುವ ಮುನ್ನ...ಯಾರಿಗೆ ಯಾರೂ ಇಲ್ಲ... ಆದರೂ... ಯಾರಿಗಾದರೂ ಯಾರಾದರೂ ಆದಾಗ ದಯವಿಟ್ಟು ನೋವು ನೀಡದಿದ್ದರೆ ಸಾಕು...ಹಣವೇ ಮುಖ್ಯ ಅಲ್ಲ.ಹಣಕಿಂತಲೂ ಮಿಗಿಲು ಸಮಯ ಮತ್ತೆ ನಮ್ಮದು,ಎಂಬ ಭಾವ..ಪರಿಶುದ್ಧ ಸ್ನೇಹ, ಪರಿಶುದ್ಧ ಬಂಧಗಳು ದೊರೆಯುವುದು ತುಂಬಾ ವಿರಳ..ಸಿಕ್ಕರೂ ಚಿರಕಾಲ ಉಳಿಯಲು ಬಿಡರು ಅತೃಪ್ತ ಮನಗಳು ಹಲವು...
ಜಾತಿ,ಧರ್ಮ, ಪಂಗಡ,ರಕ್ತ ಸಂಬಂಧ, ಮಾನಸಿಕ ಸಂಬಧ ಯಾವ ಅಡೆತಡೆಯ ಗೋಡೆಯೂ ನಿಜವಾಗಿಯೂ ಹಚ್ಚಿ ಕೊಂಡ ಆಪ್ತತೆಗೆ ಮಾರಕ ಆಗಲಾರದು...ಮನಸ್ಸು ಯಾವ ಪರಿಧಿಗೂ ನಿಲುಕದ್ದು..ಅದಕ್ಕೆ ಯಾವ ಗಡಿಯ ಹಂಗೂ ಇಲ್ಲ.. ಹುಟ್ಟಿದ ಮಧುರ ಅನುಬಂಧ ಮಾತ್ರ ಅದರ ಜನುಮದ ರಹಸ್ಯ..
ಆದರೂ ಖುಷಿಯಿಂದಲೇ....ಚಾಚೂತಪ್ಪದೆಯೇ ತಮ್ಮ ಕರ್ತವ್ಯ ಪಾಲಿಸುವ ಹಿನ್ನೆಲೆಯಲ್ಲಿ...ಯಾವ ನಿರೀಕ್ಷೆಯನ್ನೂ ಬಯಸೆದೆಯೇ,ಅಥವಾ ಆಶಿಸದೇ,ಕೇವಲ ಬಂಧಗಳ ಬೆಳವಣಿಗೆ ಕಂಡು ಸಂಭ್ರಮಿಸುವ ಪುಟ್ಟ ಮನಸಿನ ಔದಾರ್ಯತೆಯ ಮೆರೆದು,ಸಂಭ್ರಮ ಪಡುವ ಮುದ್ದು ಮನಸುಗಳು ಇಂದು ಬೆರಳೆಣಿಕೆಯಷ್ಟು ಮಾತ್ರ.......ಗೊತ್ತಿದೆ ಅವಕ್ಕೂ ,ಶುದ್ಧ ಮನಕೆ ನೋವು ಕಟ್ಟಿಟ್ಟ ಬುತ್ತಿಯೇ ಎಂದು ..,ಅರಿತರೂ ಕೂಡ ಕೈಹಿಡಿದು ನಡೆಸಿದಷ್ಟು ಸಮಯ ,ಸ್ವಾರ್ಥ ಇಲ್ಲದೇ,ಕರ್ತವ್ಯ ಪಾಲಿಸಿದ ಸಂತೃಪ್ತ ಭಾವ ಅಂತಹ ಪವಿತ್ರ ಮನಸ್ಸುಗಳಿಗೆ ಸಿಗುತ್ತದೆ...
ನಂಬಿಕೆ ಗಳಿಸುವುದು ಸುಲಭ...ಉಳಿಸಿಕೊಂಡು ನಡೆಯುವುದು ಕ್ಲಿಷ್ಟಕರ...ಮನಸು ,ಮನಸಿನ ನಡುವೆ..ಮನಸುಗಳು ನುಸುಳಿ ಬಾರದೇ ಇದ್ದರೆ....?ಎಲ್ಲವೂ ಹಿತವಾಗಿ,ಬಂಧಗಳೂ ಹಳಸದೆಯೇ ಬದುಕಿಗೆ ಸ್ಫೂರ್ತಿದಾಯಕ ಖುಷಿ ಕ್ಷಣಗಳನ್ನು ತುಂಬಿಕೊಡುವಲ್ಲಿ ಯಶಸ್ವಿಯಾಗುತ್ತವೆ...ಇಲ್ಲ ಎಂದರೆ,...?ನೋವಿನ ಮಡಿಲೊಳಗೇ ಬಿಕ್ಕುತ್ತಿರಬೇಕು ಅಷ್ಟೇ.
✍️ಪೂರ್ವವಾಹಿನಿ.