...

12 views

ಬಂದದ್ದು ಬರಲಿ...ಗೋವಿಂದನ ದಯೆಯಿರಲಿ.
#ಬಂದಿದ್ದು_ಬರಲಿ_ಗೋವಿಂದನ_ದಯೆವೊಂದಿರಲಿ.

ಬದುಕು,ಏನೇನೋ ಕಲಿಸಿ ಬಿಡುತ್ತದೆ..ಎಂತೆಂತದೋ ಅನುಭವ..ಮಹಾ ವಿಶ್ವ ವಿದ್ಯಾಲಯದಲ್ಲಿ ಸಿಗದಂತಹ ಜ್ಞಾನಾಮೃತ ಬದುಕಿನ ಅನುಭವ ಮಂಟಪದಲ್ಲಿ ಸಿಕ್ಕಿ ಬಿಡುತ್ತದೆ...ಏನೂ ಇಲ್ಲದಿದ್ದರೆ ಬದುಕೇ ಸಾಗದು ಅಂತೀವಿ..ಆದರೆ ಏನಿಲ್ಲದಿದ್ದರೂ ಬದುಕು ಕಳೆದೇ ಹೋಗುತ್ತದೆ...

ಜೀವನವೇ ಹಾಗೇ ಅಲ್ವೇ?ಯಾರಿರಲಿ,ಇಲ್ಲದಿರಲಿ,ಏನಿರಲಿ,ಇಲ್ಲದಿರಲಿ ಜೀವ ಎಂಬ ಗಾಡಿಗೆ ಉಸಿರೆಂಬ ಪೆಟ್ರೋಲ್ ಮುಗಿಯೋತನಕ ಯಾವ ಅಡೆತಡೆಗೂ ಜಗ್ಗದೇ ಜೀವನದ ಗಾಡಿ ಓಡುತ್ತಾ ಇರುತ್ತದೆ...

ದುಡಿಯೋದು ಮಕ್ಕಳಿಗಾಗಿ,ಸಂಪಾದನೆ ಮಕ್ಕಳಿಗೆ,ಹೆತ್ತವರ ಆಯುಷ್ಯ ಪೂರ್ಣ ಮಕ್ಕಳು ಚೆನ್ನಾಗಿ ಇರಲಿ ಎಂಬ ಮಹದಾಸೆಗೆ ಸೀಮಿತ.ಆದರೂ ಮಕ್ಕಳು ನೆಮ್ಮದಿಯಲಿರಲಾರರು.ಇನ್ನೂ ಬೇಕು,ಏನೋ ಬೇಕು ಎಂಬ ಅಸಂತೃಪ್ತಿಯ ಭಾವ‌..ಯಾಕೆಂದರೆ ಕಷ್ಟದ ರಸದೌತಣದ ರುಚಿ ಅರಿಯರು ಮಕ್ಕಳು.. ಬೇಕು ಎಂದಿದ್ದೆಲ್ಲಾ ಅವರ ಬಳಿಯೇ ಪ್ರತ್ಯಕ್ಷವಾಗಿ ಬಿಡುತ್ತಲ್ಲ ಅದಕ್ಕೆ... ಅನು,ತನು,ಪಶ್ಚಾತ್ತಾಪ,ಕರುಣೆಯ ಮೌಲ್ಯಗಳನ್ನು ಹೇಳಿಕೊಡುವಷ್ಟು ತಾಳ್ಮೆ ಪೋಷಕರಿಗಿಲ್ಲ.ಮಕ್ಕಳು ಕೇಳಿದವು,ಅವಕೆ ಕಷ್ಟ ಆಗಬಾರದು.ನಾವು ಬಾಲ್ಯದಲ್ಲಿ ಕಷ್ಟ ಪಟ್ಟಿದ್ದೇ ಸಾಕು ಎಂಬ ನಮಗೆ ಸಿಗದ ಸೌಕರ್ಯಗಳ ಬಗ್ಗೆ ನಿರಾಸೆಯ ಗೊಣಗು.

ನಿಜ,ಅದರಲ್ಲೂ ಇಂದಿನ ಖಾಸಗಿ ಶಾಲೆಗಳು ಮಕ್ಕಳ ಮುಗ್ಧತೆಯನ್ನು ಕಿತ್ತುಕೊಂಡಿವೆಯೇನೋ ಅನಿಸಿ ಬಿಡುತ್ತದೆ ಒಮ್ಮೊಮ್ಮೆ...ಸರಕಾರಿ ಶಾಲೆಯ ಮಕ್ಕಳು ಹೆತ್ತವರ ಕೆಲಸದಲ್ಲಿ ಕೈ ಸಹಾಯ ಮಾಡುವಷ್ಟು, ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಆಗದು.ಅವರಿಗೆ ಪುಸ್ತಕದಿಂದ ತಲೆ ಎತ್ತಿ ನೋಡಲಾರದಷ್ಟು ಕರ್ತವ್ಯಗಳು..ಶಾಲಾ ದಿನಚರಿಗಳು.

ಒಮ್ಮೊಮ್ಮೆ ಅನಿಸಿಬಿಡುತ್ತದೆ.ಇಂದಿನ ಶಿಕ್ಷಣ ನೋಡಿದಾಗ.ನಾವು ಹೆತ್ತವರು ನಮ್ಮ ಮುಂದಿನ ಇಳಿ ಸಂಜೆಗಾಗಿ,ಅಥವಾ, ಅವರ ಭವಿಷ್ಯದ ದೃಷ್ಟಿಯಿಂದ,ನಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ,ಕೇವಲ ಮನಿಗಾಗಿ ಎಟಿಎಂ ಕಾರ್ಡ್ ನಂತೆ ಮಾಡುತ್ತಿದ್ದೆವೇನೋ ಎಂದು.ಯಾಕೆಂದರೆ ಅವುಗಳಿಗೆ ಬಾಲ್ಯದ ಖುಷಿ ತುಂಬಲಾರೆವು.ಮೂರು ವರ್ಷದ ಕಂದಮ್ಮ ಅಮ್ಮ, ಅಜ್ಜಿ, ಕಾಕ ಅಂತ ತೊಡೆ ಏರಿ ಆಡುವ ಬದಲು,ಯಾವುದೋ ಪ್ರೀ ನರ್ಸರಿಯಲ್ಲಿ ಎ,ಬಿ ,ಸಿ,ಡಿ ಹೇಳುತ್ತಿರುತ್ತದೆ....

ಬೀದಿಗೆ ಬಿದ್ದ ಮಕ್ಕಳು ಬದುಕಿನಲ್ಲಿ ಎಂದೂ ಸೋಲಲಾರವು.ಆ ಎಳೆಯ ಮಕ್ಕಳನ್ನು ನೋಡಿದಾಗ ,ಕರುಳು ಚುರುಕ್ ಎನ್ನಬಹುದು.ಆದರೆ ಅವು ಅತೀ ಬುದ್ಧಿ ಶಾಲಿಗಳು.ಯಾಕೆ ಗೊತ್ತಾ, ಜೀವನದಲ್ಲಿ ಏನೂ ಆಗದಿದ್ದರೂ ಅಮ್ಮ,ಅಪ್ಪನನ್ನು ಭಿಕ್ಷೆ ಬೇಡಿಯಾದರೂ ಸಾಕುತ್ತವೆ...ವೃದ್ಧಾಶ್ರಮಕ್ಕೆ ಸೇರಿಸಲಾರವು....ಆದರೆ ಕೋಟಿ ಕೋಟಿ ಸುರಿದು ಶಿಕ್ಷಣ ಪಡೆದ ಮಕ್ಕಳು ಕೋಟಿ,ಬಿಲಿಯನ್ ಸಂಪಾದಿಸಬಹುದು.ಆದರೆ ಹೆತ್ತವರಿಗೆ ಖುಷಿ ನೀಡಲು ಎಡವಬಹುದು...ಆದರೆ ಅದಕ್ಕೆ ಕಾರಣ ಮಾತ್ರ ನಾವೇ ಹೆತ್ತವರೇ ಆಗಿರುತ್ತೇವೆ.ಕಷ್ಟದ ದಿನಗಳ ಮರೆಮಾಚಿ,ಕೇವಲ ಸಖದ ಪರಿಚಯ ಮಾಡಿಸಿದ ತಪ್ಪಿದು.

ಮೊನ್ನೆ ದೇವಸ್ಥಾನಕ್ಕೆ ಹೋದಾಗ ಒಬ್ಬ ಬಾಲಕನ ನೋಡಿ ಮನಕೆ ಇಷ್ಟು ಅನಿಸಿದ್ದು.ದೇವರ ದರ್ಶನಕೆ ಸರತಿ ಸಾಲಿನಲ್ಲಿ ನಿಂತಾಗ,ಆ ಬಾಲಕ ಬಂದು ಆಂಟಿ ತಗೋರಿ,ಬರೀ ಇಪ್ಪತ್ತು ರೂಪಾಯಿ ಅಂದಾಗ ,ಅವನನ್ನು ನೋಡಿ ನನ್ನ ಕಂಗಳಲ್ಲಿ ನೀರು ತುಂಬಿದ್ದು ಸುಳ್ಳಲ್ಲ.. ಕಾಲಿಗೆ ಚಪ್ಪಲಿ ಇಲ್ಲದೇ,ಬನಿಯನ್ ಧರಿಸಿದ ಆ ಹುಡುಗನ ಪರಿಸ್ಥಿತಿಯನ್ನು ಪರಿಚಯಿಸಿತ್ತು...ಶಾಲೆಗೆ ಹೋಗಲ್ವಾ ಅಂತ ಕೇಳಿದ್ದಕ್ಕೆ, ಹೋಗ್ತೀನಿ ಆಂಟಿ,ರಜಾ ಇದ್ದಾಗ ವ್ಯಾಪಾರ ಮಾಡ್ತೀನಿ.ಅಪ್ಪಂಗೆ ಹೆಲ್ಪ್ ಆಗುತ್ತಲ್ಲಾ ಅಂತ ನುಡಿದಾಗ ಐದು ಸ್ಟಿಕ್ಕರ್ ಕರೀದಿಸಿದೆ.ಥ್ಯಾಂಕ್ಸ್ ಆಂಟಿ ..ಆ ಕಣ್ಣಿನಲ್ಲಿ ಸಂತಸದ ಹೊಳಪು.

ಬೀದಿ ಬದಿಯ ಮಕ್ಕಳನ್ನು ನೋಡಿದಾಗ,ನಾವು ನಮ್ಮ
ಮಕ್ಕಳಿಗೆ ಹೋಲಿಸಿ ಅವರನ್ನು ಅನುಂಕಪದಲ್ಲಿ ನೋಡುತ್ತೇವೆ.ಆದರೆ ಬದುಕಿನಲ್ಲಿ ಅವು ಎಂದೂ ಎಡವಿ ಬೀಳವು.ಯಾಕೆಂದರೆ ಅವರಿಗೆ ಅವರೇ ಎಲ್ಲಾ ಆಗಿರುತ್ತಾರೆ.ಬದುಕನ್ನು ಹೇಗೆ ಬಂತೋ ಹಾಗೇ ಸ್ವೀಕರಿಸುವ ಮನೋಭಾವ ಹೊಂದಿರುತ್ತಾರೆ.ನೆಮ್ಮದಿ, ಖುಷಿ, ಸಂತೃಪ್ತಿ, ಎಲ್ಲವೂ ಅವರೊಳಗಿರುತ್ತದೆ.ಕಾರಣ ಯಾವ ನಿರೀಕ್ಷೆಯ ಮನೋಭಾವವವೂ ಅವರನ್ನು ಸೆಳೆಯದು.ಯಾವ ಕಾಂಪಿಟೇಷನ್ ಜಗತ್ತು ಅವರನ್ನು ಮಾನಸಿಕವಾಗಿ ಹಿಂಸೆ ಮಾಡದು...ಉಪವಾಸವೋ,ವನವಾಸವೋ,ಹೆತ್ತವರೊಂದಿಗೆ,ಸಂತೃಪ್ತ ಖುಷಿಯ ಜೀವನ ನಡೆಸುತ್ತಾರೆ.ಬಹುಶಃ ಭಗವಂತ ಕರುಣಿಸಿದ ವರವೇ ಈ ಸಂತೋಷ ಇರಬೇಕು ಅವರಿಗೆ....ತುಂಬಾ ಹೆಮ್ಮೆಯಾಗುತ್ತೆ ಅಂತ ಮಕ್ಕಳನ್ನು ನೋಡಿದಾಗ.ಅವರೆದೆಯ ಗೂಡು ಸಂತೃಪ್ತಿಯ ಹೊನಲು ತುಂಬಿ ಕಂಗೊಳಿಸುವಾಗ.......
✍️ಶೋಭಾ ನಾರಾಯಣ
© All Rights Reserved