...

10 views

ಮಕ್ಕಳಿಗೆ ಕೆಲಸ ಹೇಳಿ ಕೊಡಬೇಕು..
ಏನು ಮಾಡ್ತಾ ಇದೀವಿ ನಾವಿವತ್ತು ಎಂದರೆ, ಅಯ್ಯೋ..ನಮ್ಮ ಮಕ್ಕಳು ಆರಾಂ ಆಗಿರಬೇಕು. ನಮ್ಮ ತರಹ ಕಷ್ಟ ಪಡಬಾರದು ಅಂತ ತುಂಬಾ ಕಾಳಜಿ ವಹಿಸಿಯೇ,ಅವರ ಮುಂದಿನ ಭವಿಷ್ಯವನ್ನು ಚಿವುಟಿ ಹಾಕ್ತಾ ಇದೀವಿ..ನಿಜಕ್ಕೂ ಮಕ್ಕಳಿಗೆ ಕೆಲಸ ಹೇಳಿಕೊಡಬೇಕು..ಆಗಲೇ ಮಕ್ಕಳಿಗೆ ಕಷ್ಟ, ನಷ್ಟದ ಅರಿವು ಮೂಡುವುದು.. ಹಾಗೇ ಜೀವನದಲ್ಲಿ ತುಂಬಾ ತಾಳ್ಮೆಯುತವಾದ ಬದುಕನ್ನು ಅವರು ಬಾಳೋದು ಕೂಡ..

ಹಿಂದೆಲ್ಲಾ, ನಾವು ಶಾಲೆಗೆ ಹೋಗ್ತಾ ಇದ್ದ ಕಾಲದಲ್ಲಿ, ಒಂದು ಮೂರನೇ,ನಾಲ್ಕನೇ ತರಗತಿಯಲ್ಲಿ ಇದ್ದಾಗಲೇ,ಅನ್ನ ,ಸಾಂಬಾರ್ ಮಾಡುವುದನ್ನು ತಾಯಂದಿರು ತರಬೇತಿ ಕೊಡ್ತಾ ಇದ್ರು..ಅಥವಾ ಅನಿವಾರ್ಯ ಪರಿಸ್ಥಿತಿಗಳು ಅಂದರೆ, ಅಮ್ಮ ,ಒಂದೆರಡು ದಿನದ ಮಟ್ಟಿಗೆ ,ನೆಂಟರ ಮನೆಗೆ ಹೋಗುವ ಅನಿವಾರ್ಯತೆಯೋ,ಅಥವಾ ಮುಟ್ಟು ಎಂಬ ಕಾರಣಕ್ಕೆ ಮೂರು ದಿನ ಹೊರಗೆ ಕೂರುವ ಪ್ರಕ್ರಿಯೆಯಿಂದಲೋ,ಮಕ್ಕಳಿಗೆ ,ಅದು ಗಂಡಾಗಲೀ,ಹೆಣ್ಣಾಗಲೀ,ಅಡುಗೆ ಮಾಡುವ ಪಾಳಿ ತುಂಬಾ ಸಲ ಎದುರಾಗುತ್ತಿತ್ತು..ಅಮ್ಮಂದಿರ ಹತ್ತಿರ ಬೈಸಿಕೊಳ್ಳುತ್ತಾ,ಪ್ರಮಾಣ, ಅಳತೆ ಕೇಳುತ್ತಾ,ಅಡುಗೆ ಮಾಡುತ್ತಿದ್ದೆವು.ಜೊತೆಗೆ ಮನೆ ಕೆಲಸ ಕೂಡ.. ಕಸ,ಮುಸುರೆ,ದನಕರುಗಳ ಮೇಲ್ವಿಚಾರಣೆ, ಹೀಗೇ,ಅಮ್ಮನ ಅನುಪಸ್ಥಿತಿಯಲ್ಲಿ ಅವಳು ಮಾಡುವ ಪ್ರತೀ ಕೆಲಸ ಮಕ್ಕಳ ಹೆಗಲೇರುತ್ತಿತ್ತು... ಹಾಗಾಗಿ ಅಂದಿನ ಮಕ್ಕಳು, ಪರಿಸ್ಥಿತಿ ಯಾವ ತರಹ ಅಕಟಾಯಿಸಿದರೂ,ಭಯ ಬೀಳುತ್ತಿರಲಿಲ್ಲ...ಎದುರಿಸಲು ಸಜ್ಜಾಗಿರುತ್ತಿದ್ರು..ಆದರೆ, ಕಾಲ ಬದಲಾದಂತೆ, ಅವಿಭಕ್ತ ಕುಟುಂಬ ವಿಭಕ್ತ ಆಗುತ್ತಾ ಹೋದಂತೆ, ಒಂದೊಂದು ಮಕ್ಕಳ ಭಾಗ್ಯ ದೊರಕುತ್ತಾ ಹೋದಂತೆ, ಮಕ್ಕಳು ಎಂದರೆ ಅತೀ ಕಾಳಜಿ ಪಡುವಷ್ಟು ಹೆತ್ತವರು ಬದಲಾದಂತೆ ಇಂದಿನ ಮಕ್ಕಳ ಬದುಕು ಕೂಡ ತುಂಬಾ ನಾಜೂಕಿನ ಅವಸ್ಥೆ ಆಗಿ ಮಾರ್ಪಟ್ಟಿದೆ.. ಎಷ್ಟರ ಮಟ್ಟಿಗೆ ಎಂದರೆ, ಶಾಲೆಗೆ ಹೋಗುವ ಮಕ್ಕಳು ಮನೆಯಲ್ಲಿ ಇರುವರೆಂದರೆ,ಅಮ್ಮ ಆದವಳು,ಮಕ್ಕಳನ್ನು ಬಿಟ್ಟು, ಎಲ್ಲೂ ಹೋಗದೇ ಇರುವುದು.. ಹಾಗೇ ಏನೊಂದೂ ಜವಾಬ್ದಾರಿ ಹೊರಿಸದೆಯೇ ಮಕ್ಕಳಿಗೆ, ಎಲ್ಲದಕ್ಕೂ ತಾಯಿ,ತಂದೆಯನ್ನೇ ಅವಲಂಬಿಸಿ ಜೀವಿಸೋದು ಸರ್ವೇಸಾಮಾನ್ಯ ಆಗಿದೆ..
ಇಂದು ಡಿಗ್ರಿ ಓದುವ ಹೆಣ್ಣು ಮಗಳಿಗೆ, ಅನ್ನದ ಅಗುಳು ಬೆಂದದ್ದು ಗೊತ್ತೇ ಆಗದು,ಅಥವಾ ಚಹಾ ಮಾಡಲೂ ಬಾರದು ಅಂದರೆ, ನಾವು ಮಕ್ಕಳನ್ನು ಎಷ್ಟು ಮುತುವರ್ಜಿ ವಹಿಸಿ ಬೆಳೆಸುತ್ತಿದ್ದೇವೆ ಎಂದು ನಾವೇ ಅರಿಯಬೇಕು..
ನಿಜ...ಮಕ್ಕಳ ವಯಸ್ಸಿಗೆ ಕೆಲವೊಂದು ತಿಳುವಳಿಕೆ ಅತ್ಯವಶ್ಯಕ... ಮಕ್ಕಳ ದೃಷ್ಟಿಯಲ್ಲಿ,ಅಮ್ಮ ಎನ್ನುವವಳು ತಮ್ಮ ಸೇವೆಗೇ ಮೀಸಲು ಎಂಬ ಮನಸ್ಥಿತಿ ಬೆಳೆಯಬಾರದು..ಎಲ್ಲಾ ತರಹದ ಪರಿಸ್ಥಿತಿ ಗೆ ಹೊಂದಿ ನಡೃವಂತೆ ಮಕ್ಕಳನ್ನು ಬೆಳೆಸಬೇಕು.‌ಇದು ಮುಂದಿನ ಅವರ ಬದುಕಿನ ಉನ್ನತಿಗೆ ದಾರಿದೀಪ ಆಗುವುದು..

ಕಷ್ಟ, ನಷ್ಟದ ಅರಿವು ಬಾಲ್ಯಾವಸ್ಥೆಯಲ್ಲೇ ಮಕ್ಕಳಿಗೆ ಅರಿವು ಮೂಡಿದರೆ,ಯೌವನಾವಸ್ಥೆಯಲ್ಲಿ ದಾರಿ ತಪ್ಪಲಾರರು ಮಕ್ಕಳು.. ಮನೆಯ ಆಗು ಹೋಗುಗಳ ಅರಿವನ್ನು ಮೂಡಿಸಬೇಕು.. ಹೆತ್ತವರ ಕಷ್ಟ, ನೋವಿನ ಪರಿಚಯ ಮಕ್ಕಳಿಗೆ ಇರಬೇಕು..ಅಂದರೆ ಮಾತ್ರ, ಹೆತ್ತವರೆಂದರೆ ಗೌರವ,ಭಯ,ಭಕ್ತಿ ಎಲ್ಲವೂ ಇರುತ್ತದೆ ಮಕ್ಕಳಲ್ಲಿ.. ಹಾಗೇ ಸ್ನೇಹಿತರ ಸಹವಾಸ ಮಾಡುವಾಗ, ಯೋಚನೆ ಮಾಡಿ ಗೆಳೆತನ ಸಂಪಾದನೆ ಮಾಡ್ತವೆ ಮಕ್ಕಳು..
ಯಾಕೆಂದರೆ, "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ"?ಎಂಬ ನಾಣ್ಣುಡಿಯೇ ಇದೆ..ಹಾಗಾಗಿ "ಬೆಳೆಯುವ ಸಿರಿ ಮೊಳಕೆಯಲ್ಲೇ "ಎಂಬಂತೆ ಆದಷ್ಟು, ಎಳವೆಯ ವಯಸ್ಸಿನಲ್ಲಿ ಎಷ್ಟರ ಮಟ್ಟಿಗೆ ನಾವು ತಿದ್ದಿ ತೀಡಿ, ಸಂಸ್ಕಾರ ನೀಡುತ್ತೇವೆ ಎಂಬುದರ ಮೇಲೆ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ ಆಗುತ್ತದೆ.. ಯಾವಾಗಲೂ " ಕೈ ಕೆಸರಾದರೆ ,ಬಾಯಿ ಮೊಸರು "ಆಗುತ್ತದೆ ಎಂಬ ಸತ್ಯವನ್ನು ಮಕ್ಕಳಿಗೆ ನಾವು ಮನನ ಮಾಡಿಸಲೇಬೇಕು..ಆಗಲೇ ಅವರೂ ಕೂಡ ಪರಿಶ್ರಮದಿಂದ ತಮ್ಮ ಬದುಕನ್ನು ಹಸನಾಗಿಸಿಕೊಳ್ಳುತ್ತವೆ..ಅವರ ಕಾಲ ಮೇಲೆ ಅವರು ನಿಂತ ಮೇಲೆ, ಹೇಗಾದರೂ ಖುಷಿ ಪಡಲಿ,ಸಂಭ್ರಮ ಪಡಲಿ,ಎಂಜಾಯ್ ಮಾಡಲಿ..ಆಗವರಿಗೆ ಬದುಕೆಂಬ ರಹಸ್ಯದ ಒಳ,ಹೊರ ಹರಿವಿನ ಅರ್ಥ ತಕ್ಕ ಮಟ್ಟಿಗೆ ಅರಿವಾಗಿರುವುದರಿಂದ...ಯಾವುದು ಕೆಟ್ಟದ್ದು?ಯಾವುದು ಒಳ್ಳೆಯದು?ಯಾವುದು ಸರಿ?ತಪ್ಪು?ಎನ್ನುವುದನ್ನು ಆಲೋಚಿಸಿ, ಬಾಳಲ್ಲಿ ಸರಿಯಾದ ಹೆಜ್ಜೆ ಇಟ್ಟು ನಡೆಯುವುದನ್ನು ಕಲಿಯುತ್ತಾರೆ.. ಎಲ್ಲೂ ಎಡವಿ ಬೀಳದ ಹಾಗೇ ಮುನ್ನೆಚ್ಚರಿಕೆ ವಹಿಸಿ....
ಪೂರ್ವವಾಹಿನಿ