...

7 views

ನಿಶ್ಯಬ್ದ ರಾತ್ರಿಯ ಆ..ಶಬ್ದ..!!
ಯಾಕೋ ಗೊತ್ತಿಲ್ಲ ಈ ದಿನ ಎಷ್ಟೇ ಹೊರಳಾಡಿ ಒದ್ದಾಡಿದರೂ ಕಣ್ಣಿಗೆ ನಿದ್ರೆ ಹತ್ತಲೊಲ್ಲದು, ಮನಸಲಿ
ಏನೇನೋ ಆಲೋಚನೆಗಳು, ಕಳೆದು ಹೋದ ನೆನಪುಗಳ ಜೊತೆಗೆ ಯಾರೂ ಇಲ್ಲದೇ ಒಬ್ಬಳೇ ಇರಬೇಕಾದುದರ ಬಗೆಗಿನ ಬೇಸರಿಕೆ.
ಹೀಗೆಯೇ ರಾತ್ರಿಯಿಡೀ ಒದ್ದಾಟ ನಡೆದೆ ಇತ್ತು
ಮೊಬೈಲ್ ತೆಗೆದು ಸಮಯ ನೋಡಿದರೆ ನಾಲ್ಕಾಗಿತ್ತು, ಇನ್ನೇನು ಒಂದು ಗಂಟೆ ಕಳೆದರೆ ಬೆಳಕಾಗೇ ಬಿಡುವುದು, ಒಂದೇ ಒಂದು ನಿಮಿಷವೂ ನಿದ್ರೆಯ ಗಮ್ಮತ್ತನ್ನು ಕಳೆದುಕೊಳಲು ಇಷ್ಟಪಡದ ನಾನು ಇವತ್ತು ಹೀಗೆ ಒದ್ದಾಡುವಂತಾಯಿತಲ್ಲ ಎಂದು ಮನದಲೇ ಶಪಿಸಿಕೊಳುತಿರುವಾಗಲೇ ನೋಡಿ ಕತ್ತಲೆಯ ನೀರವತೆಯನ್ನು ಸೀಳಿಕೊಂಡು ಬಂತೊಂದು ಶಬ್ದ,
ಏನೋ ವಸ್ತು ಮೇಲಿಂದ ಕೆಳಕ್ಕೆ ಬಿದ್ದ ಶಬ್ದ ಶುರುವಾಯಿತಾಗಲೇ ಮನದಲೊಂತರಾ ಭಯ..!!
ಮೊದಲೇ ನಿದ್ರೆ ಬರದೆ ಚಿತ್ರವಿಚಿತ್ರ ಆಲೋಚನೆಗಳು ಆದರೂ ನನ್ನ ನಾನೇ ಸಮಾಧಾನ ತಂದುಕೊಂಡು ನಿಧಾನಕ್ಕೆ ಎದ್ದು ಲೈಟ್ ಹಾಕಿ ಮೊದಲು ನಾ ಮಲಗಿದ್ದ ರೂಮ್ ನೋಡಿದೆ ಇಲ್ಲ ಏನೂ ಬಿದ್ದಿಲ್ಲ ಅಂದರೆ ಅಡುಗೆ ಕೋಣೆಯಲ್ಲೇನೋ ಬಿದ್ದಿರಬಹುದೆಂದು ಹೋಗಿ ನೋಡಿದರೆ ಏನೂ ಇಲ್ಲ, ಮನದ ಮೂಲೆಯಲ್ಲಿ ಅಳುಕು ಆದರೂ ಬಿಡದೆ ಇದ್ದ ಎರಡು ರೂಮ್ ಹಾಗೂ ಅಡುಗೆ ಕೋಣೆಯನ್ನು ಎಡಬಿಡದೆ ಜಾಲಾಡಿಯಾಯಿತಾದರೂ ಬಿದ್ದ ವಸ್ತು ಏನೆಂದು ತಿಳಿಯಲಿಲ್ಲ.
ಭಯಮಿಶ್ರಿತ ಧೈರ್ಯದ ಜೊತೆಗೆ ಲೈಟ್ ಆಫ್ ಮಾಡದೆ ಕುಳಿತಿರುವಾಗಲೆ ನೋಡಿ ನನ್ನ ಹೊಟ್ಟೆ ಚುರುಗುಟ್ಟಲು ಶುರು ಕೊನೆಗೆ ಪ್ಲಾಸ್ಕ್ ನಲ್ಲಿನ ಕಾಫಿ ಕುಡಿದದ್ದಾಯಿತು, ಮೊದಲೆ ನಿದ್ರೆ ಇಲ್ಲ ಕಾಫಿ ಕುಡಿದ ನೆಪಕ್ಕೆ ನಿದ್ರೆ ಹತ್ತಿರ ಸುಳಿಯದ ಕಾರಣ ಬಿದ್ದ ವಸ್ತು ಏನು ಎಲ್ಲಿ ಎಂಬ ಯೋಚನೆಯಲ್ಲೇ ಸುಮ್ಮನೆ ಕುಳಿತು ಇದನ್ನು ಗೀಚಲು ಶುರುಮಾಡಿದೆ..!!
ಈ ರೀತಿಯಾದಾಗ ಒಮ್ಮೊಮ್ಮೆ ಅನ್ಸತ್ತೆ ಮನುಷ್ಯನ ಮನಸು ಎಷ್ಟು ವಿಚಿತ್ರ ಅಲ್ವ,, ಅದುವರೆಗೂ ನಾವು ನಂಗೇನು ಭಯ ಆಗಲ್ಲ ಒಬ್ಬರೇ ಇರ್ತೀವಿ ನಾವ್ಯಾಕೆ ಹೆದರ್ಕೋಬೇಕು ಅಂತೆಲ್ಲ ಬಿಲ್ಡಪ್ ಕೊಟ್ಟು ಕೋತ ಇರ್ತೀವಿ,,ಆದರೆ ಕೆಲವೊಂದು ಸಮಯ ಸಂದರ್ಭ ಬಂದಾಗ ಸಣ್ಣಪುಟ್ಟ ಶಬ್ದಕ್ಕೂ ಬೆಚ್ಚಿಬೀಳೋ ತರಹನು ಆಗತ್ತೆ ಅಲ್ವಾ.??
ಯಾಕೆಂದರೆ ಕಾಲ ಒಂದೇ ತರಹ ಇರಲ್ಲ ಎಷ್ಟೇ ಧೈರ್ಯ ವಂತನಾದರೂ ಜೀವನದ ಪಯಣದಲ್ಲಿ ಸಣ್ಣಪುಟ್ಟ ವಿಷಯಕ್ಕೂ ಅಧೈರ್ಯ ಗೆಡುವಲೇ ಬೇಕಾಗುತ್ತದೆ, ಪ್ರತಿಯೊಬ್ಬರಿಗೂ ಈ ತರಹ ಅನುಭವವನ್ನು ಕಾಲನೇ ಕೊಡುತ್ತೆ ಏನಂತಿರಾ...??

© ಮಧುಶ್ರೀ S ಭಾಗವತ್