...

2 views

ಬಾಲ್ಯ ಎಂದಾಗ ನೆನಪಾಗುವುದು
ಬಾಲ್ಯ ಎಂದಾಗ ನೆನಪಾಗುವುದು

ಉಡುಪಿ ಜಿಲ್ಲೆ - ಕರಾವಳಿಯ ಪುಟ್ಟ ಹಳ್ಳಿಯಲ್ಲಿ ಜನಿಸಿದ ನಮಗೆ ಎಲ್ಲೆಲ್ಲೂ ಹಚ್ಚ ಹಸಿರಿನ ಸಿರಿ, ಬತ್ತದ ಗದ್ದೆ , ಉದ್ದು, ಹೆಸರು ,ಅವಡೆ , ಹರಿವೆ, ಬಸಳೆ, ಬದನೆ, ಬೆಂಡೆ, ತೊಂಡೆ ಚಪ್ಪರ, ಪಪ್ಪಾಯ ಗಿಡ, ತಿಂಗಳಿಗೊಂದು ಹಬ್ಬದ ಆಚರಣೆ, ಕೆಸುವಿನ ಎಲೆ ಪತ್ರೊಡೆ, ತಂಬುಳಿ, ಗೊಜ್ಜು. ಮಕರ ಸಂಕ್ರಾಂತಿ ಅಮ್ಮಮ್ಮನ ಮನೆ ನಾಗರಡಿ, ಮಂದಾರ್ಥಿ ದುರ್ಗಾಪರಮೇಶ್ವರಿ ದೇವಸ್ಥಾನ ಕ್ಕೆ ಹೋಗುವುದು, ನೀಲಾವರ, ಮಾರಣಕಟ್ಟೆ, ಕೊಲ್ಲೂರು, ಗುಡ್ಡಟ್ಟು, ಆನೇಗುಡ್ಡೆ ದೇವಸ್ಥಾನ, ಮಲ್ಪೇ ಬೀಚು, ಮರವಂತೆ,
ಯುಗಾದಿ, ಹೊಸ್ತು ಹಬ್ಬ, ಕೇದಿಗೆ ಹೂವು, ಸಂಪಿಗೆ ಹೂವು ನಾಗರ ಪಂಚಮಿ, ಬಾಗಳ ಹೂವು, ಕಿಸ್ಕರ ಹೂವು ನೆಲ್ಲಿಕಾಯಿ ಒಟ್ಟು ಮಾಡಿ ದೀಪಾವಳಿಯ ಗದ್ದೆ ಪೂಜೆ, ಮಣ್ಣಿನಿಂದ ಬಲೀಂದ್ರ ಕಟ್ಟೆ ಮಾಡುವುದು, ನೆಣೆಕೋಲು ದೀಪ, ತುಳಸಿ ಪೂಜೆ.
ನವಿಲು ಗರಿ ಹುಡುಕಲು, ಚಪ್ಪು ಸೌದಿ ಒಟ್ಟುಮಾಡಲು, ಕೆಲವು ಔಷಧೀಯ ಗುಣವುಳ್ಳ ಸಸ್ಯಗಳ ಹುಡುಕಲು ಹಾಡಿಗೆ ಹೋಗುವುದು,
ತೆಂಗು, ಅಡಿಕೆ, ಕಾಳುಮೆಣಸು ತೋಟ ಅಲ್ಲೆ ಪಕ್ಕದಲ್ಲಿ ಝುಳು ಝುಳು ಹರಿಯುವ ತೋಡು.

ಬಾಲ್ಯ ಎಂದರೆ ನೆನಪಾಗುವುದು ಮಿಡಿ ಫ್ರಾಕು, ನೀಲಿ ಬಿಳಿ ಬಾಟಾ ಸ್ಲಿಪ್ಪರು, ಎರಡು ಜಡೆ, ಬಣ್ಣಬಣ್ಣದ ರಿಬ್ಬನ್ ಆ ಜಡೆಗೆ ಮಲ್ಲಿಗೆ ಅಬ್ಬಲಿಗೆ ಗೊರಟೆ ಹೂವಿನ ಮಾಲೆ, ಮುತ್ತಿನ ಸರ, ಜುಮುಕಿ, ಕಾಲ್ಗೆಜ್ಜೆ.

ಬಾಲ್ಯ ಎಂದರೆ ನೆನಪಾಗುವುದು ಹಸು ಸಾಕಾಣಿಕೆ, ಸಾಕುನಾಯಿ ಬೆಕ್ಕು, ಹಟ್ಟಿ ತೊಳೆಯುವುದು, ದನ ಮೇಯಿಸುವುದು ಸಗಣಿ ಕರಡುವುದು 😀 ಡೈರಿಗೆ ಹಾಲು ಕೊಟ್ಟು ಬರುವುದು....
ಅಂಗಳ ಗುಡಿಸುವುದು, ಸಗಣಿ ಸಾರ್ಸುವುದು. ಅಪ್ಪಯ್ಯನ ಸೈಕಲ್, ಅದು ಹೋಗಿ ಟಿ.ವಿ.ಎಸ್ ಹೇವಿ ಡ್ಯೂಟಿ..

ಬಾಲ್ಯ ಎಂದರೆ ನೆನಪಾಗುವುದು ಬೇಸಿಗೆ ರಜೆ ಬಂದರೂ ನೆಂಟರ ಮನೆಗೆ ಹೋಗದೇ ಗೇರುಬೀಜ ಒಟ್ಟು ಮಾಡುವುದು, ಅದನ್ನು ಮಾರಿ ಬಂದ ಹಣದಿಂದಲೇ ಶಾಲಾ ಶುಲ್ಕ ಕಟ್ಟಬೇಕಿತ್ತು. ಪುಸ್ತಕಗಳನ್ನು ಖರೀದಿಸಬೇಕಿತ್ತು. ಮಾವಿನ ಹಣ್ಣು, ಹಲಸಿನ ಹಣ್ಣು ತಿಂದಿದ್ದು, ಹಪ್ಪಳ ಸೆಂಡಿಗೆ ಮಾಡಿದ್ದು, ಪುನರ್ಪುಳಿ ಸಿಪ್ಪೆ ಒಣಗಿಸುವುದು ಮಳೆಗಾಲಕ್ಕೆ ಒಂದಷ್ಟು ತಯಾರಿ...

ಬಾಲ್ಯ ಎಂದರೆ ನೆನಪಾಗುವುದು ಸ್ನೇಹಿತೆಯರ ಮನೆಗೆಲ್ಲ ಹೋಗಿದ್ದು ಊರೂರು ಸುತ್ತಿದ್ದು, ಎರಡು ಸಲಿ ಯಕ್ಷಗಾನಕ್ಕೆ, ಕೋಲಕ್ಕೆ ಹೋದ ನೆನಪು..
ತುಂಬಾ ಇಷ್ಟಪಟ್ಟು ಬಟಾಣಿ, ಚಿಕ್ಕಿ ಕಾರದಕಡ್ಡಿ ತಿನ್ನುವುದು.

ಬಾಲ್ಯ ಎಂದರೆ ಕಪ್ಪು ಬಿಳುಪು ಟಿವಿ. ದೂರದರ್ಶನ , ಚಿತ್ರಮಂಜರಿ, ಶಕ್ತಿಮಾನ್ ,ಜೈ ಶ್ರೀಕೃಷ್ಣ ಮಹಾಭಾರತ, BSNL ಲ್ಯಾಂಡ್ ಲೈನ್ ಫೋನು, ಸ್ಯಾಟಲೈಟ್ ಕನೆಕ್ಷನ್, ದೊಡ್ಡ ಕೊಡೆ, ಆಮೇಲೆ Sun HD Direct connection.


ಬಾಲ್ಯ ಎಂದರೆ ತವರುಮನೆ- ತಾಯಿಯ ಸಹನೆ ತಾಳ್ಮೆಯ ಗುಣ, ಅವರೊಳಗಿನ ದೈವೀ ಭಕ್ತಿ, ಹಾಡು, ಭಜನೆ, ಸ್ತೋತ್ರಗಳನ್ನು ಪಠಿಸುವುದು, ಜೀವನ ಪಾಠ ಕಲಿಸಿಕೊಡುವ ಬಗೆ.. ಅಮ್ಮನ ನೂರಾರು ತ್ಯಾಗ. ಕಷ್ಟಕರ ಬಡತನದ ಜೀವನ. ಒಡಹುಟ್ಟಿದವರ ಜೊತೆ ಆಟಪಾಠ...ಕೊಂಗಾಟ.


ತಂದೆಯ ಬೆಲೆ ಗೊತ್ತಾಗಲು ನೀವು ತಂದೆಯಾಗಬೇಕು (ಮದುವೆಯಾಗಿ ಮಕ್ಕಳಾಗಲಿ) ಎನ್ನುವವರೇ ಜಾಸ್ತಿ. ಅದು ಕೂಡ ನಿಜ. ಆದರೆ ನಿಜವಾಗಿಯೂ ನಿಮಗೆ ತಂದೆಯ ಮೇಲೆ‌ ಪ್ರೀತಿ ಇದ್ದರೆ ಅವರು ನಮಗಾಗಿ ಪಡುವ ಕಷ್ಟ ಅವರ ವೃತ್ತಿ, ವೃತ್ತಿ ಕ್ಷೇತ್ರ, ಅಲ್ಲಿ ಆಗುವ ಅವಮಾನ, ಸನ್ಮಾನ, ಹೊಗಳಿಕೆ, ತೆಗಳಿಕೆ, ಕೆಲವು ಕಷ್ಟಕರ ಸನ್ನಿವೇಶಗಳನ್ನು ಅವರು ಎದುರಿಸಿ ನಿಭಾಯಿಸುವ ಕಲೆ, ಕಾಸಿಗೆ ಕಾಸು ಕೂಡಿಸಿ ಬೇಕುಗಳ ಪೂರೈಸುವ ಕಲೆ, ಈ ಸಮಾಜದ (ಜನರ) ಗುಣಾವಗುಣಗಳು ಎಲ್ಲವನ್ನೂ ತಿಳಿಸುತ್ತಾ ಬರುತ್ತಾರೆ. ತಂದೆಯನ್ನು ಅರ್ಥಮಾಡಿಕೊಳ್ಳುವ ಹೊತ್ತಿಗೆ ಇವೆಲ್ಲವೂ ಅರ್ಥವಾಗುತ್ತ ಹೋಗುತ್ತದೆ. ಬದುಕು ಅಷ್ಟು ಸುಲಭವಿಲ್ಲ ಎಂದು ತಿಳಿದಾಗಲೇ ಹೋರಾಡುವ ಹುಮ್ಮಸ್ಸು ಇಮ್ಮಡಿಗೊಳ್ಳುತ್ತದೆ.


ಧನ್ಯವಾದಗಳು😊
ಬಾಲ್ಯ ಎಂದರೆ ತವರುಮನೆ. ತವರುಮನೆ ತವರೂರಿನ ರಾಧಿಕಾ.!
© Writer Sindhu Bhargava