...

2 views

ಬನ್ನಿ ದೀಪ ಹಚ್ಚೋಣ ಗೆಳೆಯರೇ
ಬನ್ನಿ ದೀಪ ಹಚ್ಚೋಣ ಗೆಳೆಯರೇ

ಹಬ್ಬಗಳಲ್ಲಿಯೇ ದೊಡ್ಡ ಹಬ್ಬ ಎಂದರೆ ಅದು ದೀಪಾವಳಿ. ಯಾವುದೇ ಜಿಲ್ಲೆ ಮತ್ತು ರಾಜ್ಯಗಳ ಭೇದವಿಲ್ಲದೆ, ಪ್ರಾಂತೀಯತೆಯ ಪ್ರಭಾವವಿಲ್ಲದೆ ಎಲ್ಲರೂ ಆಚರಿಸುವ ಹಬ್ಬ. ಭಾರತದ ಉತ್ತರದಿಂದ ಹಿಡಿದು ದಕ್ಷಿಣದವರೆಗೂ ಸಡಗರವೋ ಸಡಗರ. ಮತ್ತೊಂದು ದೀಪಾವಳಿ ಬಂದಾಯ್ತು. ಆದರೆ ಈ ವರ್ಷದ ದೀಪಾವಳಿ ಹಬ್ಬ ಯುಗಾದಿ ಹಬ್ಬದ ಸಿಹಿ-ಕಹಿಗಳ ಸಮ್ಮಿಲನದಂತೆ ಆಗಿದೆ. ಹೆಚ್ಚಾನೆಚ್ಚು ಕಹಿ ಅಂತಾನೇ ಹೇಳಬಹುದು. ಯಾಕಂದ್ರೆ ಕೈ ಕೊಟ್ಟ ಮಳೆರಾಯ. ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದ ಮಳೆ ಇಲ್ಲದೆ ಈ ವರ್ಷ ಜನರ ಆರ್ಥಿಕ ಪರಿಸ್ಥಿತಿಗೆ ಬರ ಹಾಕಿದಂತಾಗಿದೆ. ಮಾರುಕಟ್ಟೆಯಲ್ಲಿ ಪ್ರತಿಯೊಂದು ಕೂಡ ದುಬಾರಿಯಾಗಿದೆ. ಅದು ಏನೇ ಆದರೂ ಕೂಡ ಖರ್ಚುಗಳನ್ನು ಕಡಿಮೆ ಮಾಡಿಕೊಂಡಾದರೂ ಅನಿವಾರ್ಯವಾಗಿ ಎಲ್ಲರೂ ದೀಪಾವಳಿ ಆಚರಿಸಲೇಬೇಕು. ಆಚರಿಸೋಣ. ಯಾಕಂದ್ರೆ ಮುಖ್ಯವಾಗಿ ಅದು ಲಕ್ಷ್ಮೀ ಪೂಜೆಯ ಹಬ್ಬವಾಗಿರುವುದರಿಂದ ಮುಂದಿನ ದಿನಗಳಲ್ಲಾದರೂ ಲಕ್ಷ್ಮೀಯ ಕೃಪಾಕಟಾಕ್ಷ ನಮ್ಮ ಮನೆಯ ಮೇಲೆ ಹಾಗೂ ನಮ್ಮೆಲ್ಲರ ಮೇಲೆ ಇರಲಿ ಎನ್ನುವ ಬಲವಾದ ನಂಬಿಕೆ ಮತ್ತು ಆಸೆ.
ಹಬ್ಬವೆಂದರೆ ಸಾಕು. ಮನೆಯ ಸಿಂಗಾರದಿಂದ ಹಿಡಿದು ರುಚಿಕರ ಭೋಜನದವರೆಗೂ ಎಲ್ಲವೂ ವಿಶೇಷ. ತಳಿರು-ತೋರಣಗಳು, ತರತರ ಹೂಮಾಲೆಗಳು, ಮನೆಗಾಗಿ-ವಾಹನಗಳಿಗಾಗಿ ಅಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳು, ಅಡುಗೆ ಸಾಮಾನುಗಳು, ತರಕಾರಿ, ದಿನಸಿಗಳು, ಹೊಸ ಬಟ್ಟೆಗಳು..... ಹೀಗೆ ಉದ್ದನೆಯ ಪಟ್ಟಿಯನ್ನು ಹಿಡಿದುಕೊಂಡು ಹೊರಟರೆ ಇವುಗಳನ್ನೆಲ್ಲ ಖರೀದಿಸಲು ಒಂದು ದಿನ ಪೂರ್ತಿ ಬೇಕು. ಇವೆಲ್ಲ ಸಿಗುವ ಒಂದೊಂದು ಅಂಗಡಿಯು ಒಂದೊಂದು ಕಡೆ ಇರುವುದರಿಂದ ನಗರದ ಜನರೆಲ್ಲ ಶ್ರಮ ಮತ್ತು ಸಮಯವನ್ನು ಉಳಿಸುವುದಕ್ಕೋಸ್ಕರ ನೇರವಾಗಿ ಮಾಲ್ ಗಳ ದಾರಿಯನ್ನು ಹಿಡಿಯುತ್ತಾರೆ. ಆಧುನಿಕ ಜೀವನ ಶೈಲಿಗೆ ಇದೇನೋ ಸರಿ. ಆದರೆ ಕೇವಲ ನಮ್ಮ ಬದುಕಿನ ಸಂತೋಷವನ್ನು ನೋಡಿಕೊಂಡರೆ ನಮ್ಮವರಿಗಾಗಿ ಬದುಕುವವರು ಯಾರು? ಅವರ ಒಳಿತನ್ನು ಬಯಸುವವರು ಯಾರು?
ಇಲ್ಲಿ ನಮ್ಮವರೆಂದರೆ ಬೀದಿ ಬೀದಿಯಲ್ಲಿ ಬಿಸಿಲು-ನೆರಳು ಎನ್ನದೆ ಹೊಟ್ಟೆಪಾಡಿಗಾಗಿ ಕೆಲಸ ಮಾಡುವವರು. ಬುಟ್ಟಿ ಬುಟ್ಟಿ ಹೂಗಳನ್ನು ಮುಂದೆ ಇಟ್ಟುಕೊಂಡು ಮಾರುವವರು, ಬೆನ್ನಿಗೆ, ಕೈಗೆ ಅಲಂಕಾರಿಕ ವಸ್ತುಗಳನ್ನು ಜೋತು ಬೀಳಿಸಿಕೊಂಡು ಊರೆಲ್ಲ ತಿರುಗಿ ಮಾರುವವರು, ಊದಿನ ಕಡ್ಡಿ ವ್ಯಾಪಾರಿಗಳು, ತಳ್ಳುಗಾಡಿಯಲ್ಲಿ ತರಕಾರಿ ಮಾರುವವರು, ಹಣ್ಣು ಮಾರುವವರು.... ಹೀಗೆ ಒಬ್ಬರೇ ಇಬ್ಬರೇ. ಮಾಲ್ ನಲ್ಲಿ ಸಿಗುವ ವಸ್ತುಗಳೆಲ್ಲ ಸಣ್ಣಪುಟ್ಟ ಅಂಗಡಿಗಳಲ್ಲೂ ಸಿಗುತ್ತವೆ. ಅಂಗಡಿಗಳಿಗೆ ಬಾಡಿಗೆ ಕೊಡುವ ಶಕ್ತಿ ಇಲ್ಲದವರಿಗೆ ರೋಡ್ ಸೈಡ್ ಜಾಗಗಳೇ ಅವರ ಬಿಡಾರಗಳು. ಇನ್ನು ದೀಪಾವಳಿ ಬಂತೆಂದರೆ ಸಾಕು, ಎಲ್ಲರ ಮನೆ ಮನೆಗಳಲ್ಲೂ ಸಾಲು ಸಾಲು ದೀಪಗಳು. ಮಣ್ಣಿನ ಹಣತೆಯೇ ಶ್ರೇಷ್ಠ, ಪರಿಸರ ಉಳಿಸಿ ಅಂತೆಲ್ಲ ಹೇಳಿಕೊಂಡು ತಿರುಗಾಡುವ ಜನ ಮಾಲ್ ಗೆ ಹೋಗಿ ಬಣ್ಣ ಬಣ್ಣದ ದೀಪಗಳನ್ನು ಹೆಚ್ಚೆಚ್ಚು ದುಡ್ಡನ್ನು ಕೊಟ್ಟು ಮನೆಯಲ್ಲಿ ಹಚ್ಚಿರುವುದನ್ನು ಕೂಡ ನಾನು ನೋಡಿದ್ದೇನೆ.
ಆದರೆ ನಮ್ಮೆಲ್ಲರ ದೀಪಾವಳಿ ಹೀಗಾಗಬಾರದು ಅಲ್ಲವೇ? ನಾವೆಲ್ಲ ಅನುಕೂಲಸ್ಥರು. ಆದರೇನು ಬಂತು ಭಾಗ್ಯ? ಬೇರೊಬ್ಬರಿಗೆ ಕಷ್ಟದಲ್ಲಿ ಅನುಕೂಲವಾಗದಿದ್ದರೆ. ರೋಡ್ ಸೈಡ್ ವ್ಯಾಪಾರಿಗಳು ನಿಮ್ಮಿಂದ ದೊಡ್ಡ ಮಟ್ಟದ ಹಣವನ್ನು ನಿರೀಕ್ಷೆ ಮಾಡುವುದಿಲ್ಲ. ಅವರ ವ್ಯಾಪಾರದ ಉದ್ದೇಶ ಎಂದರೆ ಒಂದೇ. ತಮ್ಮ ಮತ್ತು ತಮ್ಮನ್ನು ನಂಬಿದವರ ಜೀವನ ಸಾಗಿದರೆ ಸಾಕು ಎಂಬುವುದು. ಹಬ್ಬದ ದಿನ ಮನೆತುಂಬ ಸಾಲು ಸಾಲುಗಳ ದೀಪಗಳ ಅನಾವರಣವಾದರೆ, ಒಂದು ವಾರದ ಮುಂಚೆ ರೋಡಿನ ಇಕ್ಕೆಲಗಳಲ್ಲಿ ರಾಶಿ ರಾಶಿ ಮಣ್ಣಿನ ದೀಪಗಳು ತಮ್ಮ ಬೆಳಕಿನ ಪ್ರಯಾಣಕ್ಕೆ ಸಿದ್ಧವಾಗಿರುತ್ತವೆ. ಐದು ರೂಪಾಯಿಗೋ ಅಥವಾ ಹತ್ತು ರೂಪಾಯಿಗೋ ಒಂದು ಹಣತೆ ಸಿಗುತ್ತದೆ. ಆದರೆ ಆ ಹಣತೆಯ ಬೆಳಕಿನ ಮೌಲ್ಯ ದೊಡ್ಡದು. ಸೂರ್ಯ ಉದಯಿಸುವುದಷ್ಟೇ ತಡ, ದೀಪ ಮಾರುವವರು ದೀಪಗಳನ್ನು ಹೊತ್ತುಕೊಂಡು ತಮ್ಮ ಜಾಗದಲ್ಲಿ ಬಂದು ಭದ್ರವಾಗಿ ಕೂರುತ್ತಾರೆ. ಮನೆಗೆ ವಾಪಸ್ ಹೋಗುವುದು ರಾತ್ರಿಯೇ. ಹೋಗೋರನ್ನ ಬರೋರನ್ನ ಕೂಗಿ ಕೂಗಿ ಕರೆಯುತ್ತಾರೆ ತಮ್ಮ ದೀಪಗಳಿಂದ ಬೇರೆಯವರ ಮನೆ ಬೆಳಗಲು. ಅದರಲ್ಲಂತೂ ಕೆಲವರದು ಬಹಳಾನೇ ಚೌಕಾಸಿ ವ್ಯಾಪಾರ. ಎಲ್ಲ ತರಹದ ಜನರನ್ನು ಸಹಿಸಿಕೊಂಡು ವ್ಯಾಪಾರ ಮಾಡುವುದು ಅವರಿಗೆ ಅನಿವಾರ್ಯ. ಒಂದು ಊರಿಂದ ಮತ್ತೊಂದು ಊರಿಗೆ ತರುವಾಗಲೇ ಅದೆಷ್ಟೋ ದೀಪಗಳು ಸೀಳಿ ಬಿಟ್ಟಿರುತ್ತವೆ. ಕೆಲವೊಂದು ಒಡೆದು ಹೋಗಿರುತ್ತವೆ. ಹೀಗೆ ಏನೇನೋ ನೆಪಕ್ಕಾಗಿ ಕೆಲವು ದೀಪಗಳು ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳುವುದೇ ಇಲ್ಲ.
ನಾವೆಲ್ಲ ಸಾಧ್ಯವಾದಷ್ಟು ಮಟ್ಟಿಗೆ ಬೀದಿ ಬದಿಯ ವ್ಯಾಪಾರಿಗಳ ಹತ್ತಿರ ಸಾಮಗ್ರಿಗಳನ್ನು ಖರೀದಿಸೋಣ. ಇಲ್ಲಿ 5 ರೂಪಾಯಿ, 10 ರೂಪಾಯಿ, 20 ರೂಪಾಯಿಗೆ ಸಿಗುವ ವಸ್ತುಗಳನ್ನು ಮಾಲ್ ಗೆ ಹೋಗಿ ಒಂದು ನೂರು ರೂಪಾಯಿ ಕೊಟ್ಟು ತೆಗೆದುಕೊಳ್ಳುವ ಅವಶ್ಯಕತೆ ಏನಿದೆ? ಬನ್ನಿ, ನಾವು ನೀವು ದೀಪ ಹಚ್ಚೋಣ. ಮುಖ್ಯವಾಗಿ ನಮಗಾಗಿ ಅಲ್ಲ, ನಮ್ಮವರಿಗಾಗಿ. ನಮ್ಮ ದೀಪಾವಳಿಗೆ ಅವರು ಹೇಗೆ ದೀಪಗಳನ್ನು, ಹೂಗಳನ್ನು ಕೊಟ್ಟು ಬೆಳಕು ನೀಡುತ್ತಾರೋ ಹಾಗೆಯೇ ಅವರ ಮನೆಯ ದೀಪಾವಳಿಗೆ ನಾವು ದೀಪ ಉರಿಸಲು ಎಣ್ಣೆಯನ್ನು ಕೊಡೋಣ. ಅವರನ್ನು ನಾವು ನೆನೆಯುವುದು ಕಮ್ಮಿ. ಆದರೆ ಅವರು ಪ್ರತಿ ತುತ್ತಿಗೂ ನಮ್ಮನ್ನು ನೆನೆಯುತ್ತಾರೆ. ದೀಪಾವಳಿ ಹಬ್ಬದ ಶುಭಾಶಯಗಳು. ಹೊಸ ಆಶಯಗಳನ್ನು ಹೊತ್ತು ಸಾಗಿ. ಮತ್ತೊಬ್ಬರ ಜೀವನದ ಪೂರ್ತಿ ಭಾರವನ್ನು ಹೊರಲು ಇಲ್ಲಿ ಯಾರಿಗೂ ಆಗುವುದಿಲ್ಲ. ಆದರೆ ಭಾರವನ್ನು ಹಂಚಿಕೊಂಡಾಗಲೂ ಕೂಡ ಬದುಕು ಸುಂದರ ಅಲ್ಲವೇ ಗೆಳೆಯರೇ ದಯವಿಟ್ಟು ಅಂಧಕಾರದ ಮನಸ್ಸಿನ ಚಿಂತನೆಗಳನ್ನು ಹೋಗಲಾಡಿಸಿ ಬದುಕಿನ ಜೀವನಕ್ಕೆ ಬೆಳಕಾಗುವ ಸುಂದರ ಆಲೋಚನೆಗಳ ಜೊತೆಗೆ ಮನಸು ಮನಸುಗಳಲಿರುವ ಉತ್ತಮ ಅಂಶಗಳನ್ನು ಘೋಷಿಸಿ ಜೀವನವೆಂಬ ಜ್ಯೋತಿಗೆ ಪ್ರೀತಿಯಂಬ ಎಣ್ಣೆ ಬೆರೆಸಿ ಸುಂದರ ನಗು ಎಂಬ ಹಣತೆಯನ್ನು ಬೆಳಗಿಸೋಣ ಗೆಳೆಯರೇ.......

ಚಂದು ವಾಗೀಶ ದಾವಣಗೆರೆ