...

11 views

ನಗು....
ಪ್ರತೀದಿನ ನಕ್ಕರೇನು ನಷ್ಟ?
ಹೌದಲ್ವಾ?ದಿನ ಏನು?ಕ್ಷಣ ,ಕ್ಷಣ ನಕ್ಕರೂ ನಮ್ಮ ಆರೋಗ್ಯಕ್ಕೇ ಒಳ್ಳೆಯದು.. "ನಗು",ಎನ್ನುವುದು ಜೀವನಕ್ಕೆ ಟಾಣಿಕ್ ಇದ್ದಂತೆ.. ಮನಸಾರೆ ನಗುವ ಮನಸ್ಸಿಗೆ ಎಷ್ಟೇ ನೋವಿದ್ದರೂ ಕೂಡ ತಡೆದಕೊಳ್ಳುವ ಶಕ್ತಿ ತಾನಾಗೇ ಬರುತ್ತದೆ.. ನಿಜ.ನಗುವಿಗೆ ಅಂತಹ ದೊಡ್ಡ ಶಕ್ತಿ ಇದೆ.ನೋಡಿ, ಪುಟ್ಟ ಮಗು ನಗುನಗುತ್ತಾ ಇದ್ದರೆ, ನೋಡುವ ನಮ್ಮ ಕಣ್ಣಿಗೆ ಒಂದು ಹಬ್ಬ. ಹಾಗೇ ನಮ್ಮ ಮುಖದಲ್ಲೂ ಒಂದು ಚಂದದ ಮುಗುಳ್ನಗೆ ಇದ್ದರೆ, ನೋಡುವ ಕಣ್ಣಿಗೆ ಹಬ್ಬ ಜೊತೆಗೆ ನಮ್ಮ ಆರೋಗ್ಯಕೂ ಹಿತ.ಹಾಗಂತ ನಗು ಒಳ್ಳೆಯದು ಎಂದು,ಸಾವಿನ ಮನೆಯಲ್ಲಿ ನಕ್ಕರೆ ಹುಚ್ಚು ಎಂದು ಉಗಿಯುತ್ತಾರೆ ಮಂದಿ..ಹುಷಾರು.

ನಗುವಿನಿಂದ ತುಂಬಾ ಪ್ರಯೋಜನವಂತೂ ಉಂಟು. ನೀವು ಅಂಗಡಿಕಾರರಾದರೆ,ಮುಗುಳ್ನಗೆ ಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಬರುವ ಗ್ರಾಹಕರಿಗೂ ಒಂದು ರೀತಿ ಖುಷಿ... ಸಿಡುಕು ಮೂತಿಯಲ್ಲಿ ಇದ್ದರೆ ಖಂಡಿತ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರರು...ಮನೆಯಲ್ಲಿ ಗೃಹಿಣಿ ನಗುನಗುತ್ತಾ ಇದ್ದರೆ, ಆ ಮನೆ ನಿಜಕ್ಕೂ ನಂದಗೋಕುಲ..ಪಾಠ ಮಾಡುವ ಶಿಕ್ಷಕರು ಗಂಟು ಮುಖ ಮಾಡಿ ಪಾಠ ಮಾಡುವ ಬದಲು,ನಗು ಮುಖದಿಂದ ಪಾಠ ಮಾಡಿದರೆ,ಮಕ್ಕಳು ಮಂತ್ರ ಮುಗ್ಧರಾಗಿ ಆಲಿಸುತ್ತಾರೆ..ನಗುವಿಗೆ ಮೋಡಿ ಮಾಡುವ ಅದ್ಭುತವಾದ ಶಕ್ತಿ ಇದೆ.
ಸಾಮಾನ್ಯವಾಗಿ ನಾನು ನಗುನಗುತ್ತಲೇ ಇರ್ತೀನಿ ಯಾವಾಗಲೂ.. ನನ್ನ ಅಂಗಡಿಯ ಗ್ರಾಹಕರು ಹೇಳ್ತಾರೆ.ಅಕ್ಕ, ನಿಮ್ಮ ನಗುವಿನ ತರಹದ ಚಂದ ಸ್ಪೇಷಲ್ ಟೀ ಹಾಕಿ ಅಂತ😁..ನನ್ನ ನೋವುಗಳು ಏನೇ ಇರಲಿ.ಅದು ತಾತ್ಕಾಲಿಕ ಕಂಬನಿ ಮಿಡಿಯುತ್ತದೆ ಅಷ್ಟೇ. ಆಮೇಲೆ ನನ್ನ ನಗುವಿನ ಖುಷಿಯೊಳಗೆ ಮರೆತೇ ಹೋಗುತ್ತದೆ.. ಮೊದಲಿನಿಂದಲೂ ನಗು ಎಂದರೆ ತುಂಬಾ ಇಷ್ಟ. ನಗು,ನನ್ನ ಸಖನಾದುದರಿಂದಲೇ ಇಂದಿಗೂ ಸ್ವಲ್ಪ ಮಗುವಿನ ಮುಗ್ಧತೆ ನನ್ನೊಳಗೆ ಇದೆ ಎಂದರೆ ತಪ್ಪಾಗಲಾರದೇನೋ..ಎಷ್ಟೋ ಸಲ ಹಲವು ಆಪ್ತೇಷ್ಟರು ಹೇಳುವುದುಂಟು..ಮನಸ್ಸಿಗೆ ನೋವಾದಾಗೆಲ್ಲ ನಿಮ್ಮ ನಗುಮುಖದ ಪೋಟೋ ನೋಡಿದರೆ ಏನೋ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು...ಹಾಗಾಗಿ ನಗು ಎನ್ನುವುದು ನಗುವವರ ಆರೋಗ್ಯ ಕಾಪಾಡುವುದಲ್ಲದೆಯೇ,ನಗುವವರ ನೋಡಿ,ನೊಂದವರ ಮನದ ನೆಮ್ಮದಿ ಕೂಡ ತಕ್ಕ ಮಟ್ಟಿಗೆ ಕಾಪಾಡಬಲ್ಲದು..ಇಂದಿನ ಧಾವಂತದ ಬದುಕಿನಲ್ಲಿ ನಗು ಮಾಯ ಆಗ್ತಿದೆ ಮಂದಿಯ ಮುಖದಿಂದ.. ಯಾಕೆಂದರೆ ತಾಳ್ಮೆ ಕಳೆದುಕೊಂಡು ಬದುಕುತ್ತಿದ್ದೇವೆ ಇಂದು..ಯಾಂತ್ರಿಕ ಬದುಕಿನಲ್ಲಿ ಎಲ್ಲವೂ ಯಾಂತ್ರಿಕ..
ಏನೇ ಇರಲಿ..ನೋವು,ಕಷ್ಟ, ದುಃಖ ಮನುಜನಿಗೆ ಬಾರದೇ,ಮರ ,ಗಿಡಗಳಿಗೆ ಬಾರದು..ಎಂತಹ ಕ್ಲಿಷ್ಟ ಪರಿಸ್ಥಿತಿ ಎದುರಾದರೂ ನಗುನಗುತ್ತಾ ಬಾಳಬೇಕು. ನಗು ಜೀವನಕ್ಕೆ ಸ್ಫೂರ್ತಿ ತುಂಬುವುದಲ್ಲದೆಯೇ,ನಮ್ಮಿಂದ ಬೇರೆಯವರ ದುಗುಡವನ್ನೂ ಕೂಡ ದೂರ ಮಾಡಬಲ್ಲದು...ಪ್ರತೀ ದಿನ ಏನು,ಪ್ರತೀ ಕ್ಷಣ ನಗುತಿರೋಣ..ಮನಸಾರೆ ನಕ್ಕು ಆರೋಗ್ಯ ಕಾಪಾಡಿಕೊಳ್ಳೋಣ..ನಮ್ಮವರನ್ನೂ ಖುಷಿ ಪಡಿಸೋಣ..ನಗು ಜೀವನಕ್ಕೆ ಸ್ಫೂರ್ತಿ ತುಂಬುವ ಟಾಣಿಕ್ ಎನ್ನುವುದು ಮರೆಯದಿರೋಣ...
✍️ಪೂರ್ವವಾಹಿನಿ.