...

10 views

ನೀನು ನನ್ನವನು
ಹಲೋ... ಹೇಗಿದ್ದೀ.. ರಾತ್ರಿ ನಿದ್ದೆ ಬಂದಿತಾ?

ಇಲ್ಲ. ನಾನು ನಿನ್ನ ಜೊತೆಗೆ ಮಲಗಿದ್ದೆನಲ್ಲ. ನೀನು ಮಲಗಲು ಬಿಡಲಿಲ್ಲ.

ವಾಟ್!?
ನನ್ನ ಜೊತೆಗಾ?

ಮತ್ತೆ ನಿನ್ನ ಕ‌ನವರಿಕೆ ಅತಿಯಾಗಿದೆ ಕಣೆ.. ಊಟವೂ ಸೇರುತ್ತಿಲ್ಲ. ನಿದ್ದೆಯಂತೂ ದೂರದ‌ ಮಾತು.

ಹಾಗಾಗದರೆ ಒಮ್ಮೆ ಬಂದು ಮುಟ್ಟಿ ಹೋಗು. ಆ ಸ್ವರ್ಶದಿಂದಾದರೂ ನಿನ್ನ ಜ್ವರ ಕಡಿಮೆಯಾಗಬಹುದು.

ಇದು ಪ್ರೇಮ ರೋಗ. ಮದ್ದಿಲ್ಲ. ನಿನ್ನ ಜೊತೆಗೇ ಇರುವ ಆಸೆ.

ಓ ಹೋ. ಇದೆಲ್ಲ‌ ಮದುವೆಯಾಗುವ ತನಕ‌ ಮಾತ್ರ. ನಂತರದ ಜೀವನವೇ ಬೇರೆಯಾಗಿರುತ್ತದೆ. ಒತ್ತಡದ ಬದುಕು, ಕೆಲಸ , ಹಣಕಾಸಿನ ಸಮಸ್ಯೆ ಮಾತನಾಡಿಸಲೂ ಪುರಸೊತ್ತು ಇಲ್ಲದೇ ಹತ್ತಿರವಿದ್ದರೂ ದೂರವಿದ್ದಂತೆ ಭಾಸವಾಗುತ್ತದೆ.

ನೀನು ಎಂದಿಗೂ ನನ್ನವಳು. ನಿನ್ನ ಭೇಟಿಯಾಗದೆ ಸಾಯಲು ಆಗದು. ಹಾಗೆಂದು ನಿನ್ನ ಜೊತೆಗೆ ಜೀವನ ನಡೆಸಲೂ ಆಗದು. ಈ ಪ್ರೀತಿಯ ಒರತೆ ಎಂದಿಗೂ ಬತ್ತದು. ಮಳೆಗಾಲಕ್ಕೆ ಕಾರಂಜಿಯಂತೆ, ಚಳಿಗಾಲಕ್ಕೆ ಬಿಸಿಯ ಅಪ್ಪುಗೆಯಂತೆ, ಸೆಖೆಗಾಲಕ್ಕೆ ಸಂಜೆಯಲ್ಲಿ ಹಿತವಾಗಿ ಬೀಸುವ ಹಿಮಗಾಳಿಯಂತೆ..

ಹೌದು ಸಖನೇ.. ನಿನ್ನೊಳಗೆ ಬೆರೆತು ಹೋಗುವ ಹಂಬಲ ಹೆಚ್ಚಾಗುತ್ತಿದೆ. ಹೊಸ ಆಸೆಗಳು ದಿನೇ ದಿನೇ ಕುಡಿಯೊಡೆಯುತ್ತಿವೆ. ಮರವಾಗಿ ಬೆಳೆಯುತ್ತಿರುವ ಈ ಪ್ರೀತಿಭಾವಕ್ಕೆ ನೀನೇ ಒಲವ ಧಾರೆ ಎರೆಯಬೇಕು. ಎಂದೂ ಬಾಡಿಹೋಗದ ಸುಮಗಳು ಅರಳಿ ‌ನಿಲ್ಲಬೇಕು.

ನಿನ್ನಿಷ್ಟದಂತಾಗಲಿ ಸಖಿ. ಎಂದೂ ನೋಡದ ಲೋಕವನ್ನು ಸೃಷ್ಟಿಸಿ ಕೊಡುವೆ. ರತಿ ಮನ್ಮಥ ಲೀಲೆಯನ್ನೂ ಮೀರಿಸುವಂತೆ ರಮಿಸುವೆ. ನಿನ್ನೊಳಗೆ ಕರಗಿ ಹೋಗಿ ನದಿಯಾಗಿ ಹರಿಯುವೆ.

ನಿಜ. ಈ ಆಸೆಗೆ ಕೊನೆಯೆಂಬುದಿಲ್ಲ. ಹುಣ್ಣಿಮೆಗೆ ಉಕ್ಕಿ ಹರಿಯುವ ಅಲೆಗಳಂತೆ ತಟವ ಬಂದು ಬಡಿದು ಕೆಣಕುತ್ತದೆ. ಮನವ ಕಲಕಿ ರೋಮಾಂಚನ ನೀಡುತ್ತದೆ. ಹುಚ್ಚು ಹಿಡಿಸುತ್ತದೆ.

ಯಾರೂ ಕಾಣದ ಊರೊಂದಿರಬೇಕು. ಅಲ್ಲಿ ನಾನು‌-ನೀನು ಮಾತ್ರವೇ ಜೀವಿಸಬೇಕು. ಲೋಕದ ಯಾವ ಕಟ್ಟುಪಾಡುಗಳು ಇರಕೂಡದು. ಅದೇ ಬೇಡಿಕೆ.


© Sindhu_Bhargava