...

9 views

ವರುಣನ ಆರ್ಭಟ
ಕವನ : ವರುಣನಾರ್ಭಟ

ಹಕ್ಕಿಗಳು ಹೈರಾಣಾಗಿವೆ, ಗೂಡುಗಳ ಕಾಣದೇ
ಮಕ್ಕಳ ಮೈದಾನ ಮಾಯವಾಗಿದೆ, ನೀರಿನೊಳಗೆ.

ಮಣ್ಣಿನ ಮನೆಗಳು ಕಣ್ಣೀದುರೇ ಕುಸಿದಿವೆ.
ಗುಡ್ಡ ಕುಸಿದು ಮರಗಳು ಮಣ್ಣು ತಿಂದಿವೆ.

ವರುಣನ ರೌದ್ರಾವತಾರ ಶುರುವಾಗಿದೆ
ನಟಭಯಂಕರನ ಶಿವತಾಂಡವ ಜೋರಾಗಿದೆ‌

ಜನರು ಜಲದೊಳಗೆ ಸಿಲುಕಿ ಗಡಗಡ ನಡುಗುವಂತಾಗಿದೆ.
ಜಾನುವಾರುಗಳಿಗೆ ಹಸಿರು ಇಲ್ಲದೇ ಕಂಗಾಲಾಗಿವೆ.

ವರುಣನು ಬಂದಿಹನು, ಆಪತ್ತನ್ನೇ ತಂದಿಹನು.
ಅತೀವೃಷ್ಠಿಯ ಜೊತೆಗೆ ಸೃಷ್ಟಿಯ ತಲೆಕೆಳಗೆ ಮಾಡಿಹನು.

ಕೊಂಚ ಕೋಪಗೊಂಡಿಹನು, ತಣ್ಣೀರಿನ‌ ಮಳೆಗೆರೆದು ಕಣ್ಣೀರು ಹಾಕಿಸಿಹನು.

ಬಸುರಿ, ಎಳೆ ಹಸುಗೂಸು, ಮನೆಯ ಹಿರಿಕರು
ಬಿಸಿಲಿಗಾಗಿ, ಬೆಚ್ಚನೆಯ ಹೊದಿಕೆಗಾಗಿ ಅಂಗಾಲಚುತಿರುವರು

ಸಹಾಯಕೆ ನಿಂತರು ಸ್ನೇಹಿತರು ಕೇಳಿ,
ಎಲ್ಲರೂ ನಮ್ಮವರು,
ಮಾನವೀಯತೆಯ ಮೆರೆದಿಹರು ಕೇಳಿ,
ಅವರೂ ನಮ್ಮಂತೇ ಮನುಜರು.

ನಿಲ್ಲಲೀ ಪ್ರವಾಹ, ಮಳೆಗಾಲದ ಜಲಪ್ರವಾಹ
ನಿಲ್ಲಲ್ಲೀ ಆಕ್ರಂದನ, ಬದುಕಲೀ ಜನಜೀವನ.
ಅರಳಲಿ ನಗುವಿನ ಹೂಬನ, ನಿಲ್ಲಲಿ ಭಯದ ವಾತಾವರಣ!!
೨)
ಕವನ: ಮಳೆಬಂದಿದೆ...

ಬಿಂದುಬಿಂದುವಿನಲ್ಲಿ ಈಗ ನಿಂದೇ ನೆನಪು
ಮಳೆಯು ಬಂದು ಹೋಯಿತೀಗ ನಿಂದೆ ನೆನಪು
ನೊಂದುಕೊಳ್ಳಲಾರೆ, ನೀ ನನ್ನ ಜೀವವು
ಮೌನವಾಗಿ ಕುಳಿತರೂ ನಾ ನಿನ್ನ ಒಲವು

ಹೊಳೆವ ಮಳೆಯ ಹನಿಯಂತೆ ನೀ ಅನುದಿನವು
ನಗುವ ಕೊಡುವ ಸೊಗಸುಗಾರ ನೀ ಪ್ರತಿ ಕ್ಷಣವು
ಹಿಡಿದ ಕೈಯ ಕೊಡವಿಕೊಂಡು ಹೋಗಬೇಡವೋ
ಕೆಲಸದ ನೆಪವನೆಂದು ಹೇಳಬೇಡವೋ..

ಹಸನಾಗಿ ಮಾತನಾಡಿ ಲೋಕ ಮರೆಸುವೆ
ಹೊಸತು ಹೊಸತು ಕನಸ ಕಂಡು ಮೈಮರೆಯುವ
ಬೇಗ ಬಾ ಕಾಯುತಿರುವೆ ಮಳೆಯು ಸುರಿದಿದೆ.
ನಿಂತುಹೋಗೋ ಮೊದಲು ಬಳಿಗೆ ನೀ ಬರಬಾರದೇ..

ಬಿಂದುಬಿಂದುವಿನಲ್ಲಿ ಈಗ ನಿಂದೇ ನೆನಪು
ಮಳೆಯು ಬಂದು ಹೋಯಿತೀಗ ನಿಂದೆ ನೆನಪು

೩)
ಕಾಡು ಬೆಳೆಸಿರಿ

ಮಳೆಯಲ್ಲಿ ಮರುಗಟ್ಟಿದ ಜನರಿಗೆ ಮತ್ತೆ ಮಳೆರಾಯನ ಕಾಟ
ಧೋ ಎಂದು ಸುರಿಯುತಿದೆ ಇದೆಂತಹ ವರುಣನ ಆಟ?

ಗುಡ್ಡಗಳು ಕಣ್ಣೆದುರೇ ಕುಸಿದು ಬೀಳುತಿವೆ
ನೆಲವೀಗ ನೆನೆದು ಮೆದುವಾಗಿ ಬಾಯ್ಬಿರಿದಿದೆ

ಭೂಮಿತಾಯಿ ಆಪೋಷಣೆ ಗೇಯುತಿಹಳು
ಕರಗಿ ಹೋಗುತಿಹ ಮೃಗ ಜನರು, ಮರಗಿಡಗಳು

ಮರಗಳ ಕಡಿದರೆ ಹೆಚ್ಚುವುದು ಮಣ್ಣಿನ ಸವಕಳಿ
ಸಸಿಗಳ ಬೆಳೆಸಿದರೆ ಬೇರು ಊರುವುದು ಮಣ್ಣಿನಲಿ

ನಗರೀಕರಣ, ಆಧುನೀಕರಣದ ಶೋಕಿಗೆ ಬಿದ್ದ ಜನರು
ಅಭಿವೃದ್ಧಿಯ ನೆಪಮಾಡಿ ಪ್ರಕೃತಿಯ ನಾಶ ಮಾಡುತಿಹರು

ಬಿದ್ದ ಮಳೆಯ ಭುವಿಯು ನುಂಗಿಕೊಳ್ಳುತ್ತಿಲ್ಲ
ಮೇಲ್ಮೈಯಿಂದಲೇ ಹರಿದು ಪ್ರವಾಹ ಹೆಚ್ಚಿದೆಯಲ್ಲ

ಕಾರ್ಮೋಡ ಕವಿದಿದೆ ಹಗಲು ಇರುಳಿನ ಪರಿಯಿಲ್ಲದೇ
ಗಡಗಡ ನಡುಗುವಂತಾಗಿದೆ ಮನೆಮಂದಿ ಮಕ್ಕಳೆನ್ನದೇ

ಪ್ರಕೃತಿಯ ವಿಕೋಪಕ್ಕೆ ಜೀವನವೇ ನಲುಗಿದೆ
ಸಾವು ನೋವುಗಳ ನೋಡಿ ಮನವು ಕಂಗಾಲಾದೆ

ಭೂಕಂಪ ಚಂಡಮಾರುತದ ಹಾವಳಿಯು ಜೊತೆಗೆ
ಸುಟ್ಟ ಗಾಯದ ಮೇಲೆ ಬರೆ ಎಳೆವ ಹಾಗೆ

ಪರಿಹಾರಕೆ ಮೊರೆಯಿಡುತಿಹರು, ಅಳುವಿನಲೇ ದಿನ ಕಳೆಯುತಿಹರು
ಅಸ್ತವ್ಯಸ್ತವಾಗಿಹ ಜೀವನಕೆ ಮುದುರಿ ಕೂತಿಹರು

ನಷ್ಟವ ಭರಿಸಲು ಯಾರು ಮುಂದೆ ಬರುವರು
ಹೆಂಗಳೆಯರು ಕಣ್ಣೀರಿನಲೇ ಅಂಗಲಾಚಿ ಬೇಡುತಿಹರು

ಧನಸಹಾಯ ಮಾಡಿ ಕೈತೊಳೆದುಕೊಳ್ಳದಿರೀಗ
ಕಾಡು ಬೆಳೆಸುವ ಪರಿಹಾರವೊಂದೇ ನಮಗೀಗ

ರಚನೆ: ಸಿಂಧು ಭಾರ್ಗವ್. ಬೆಂಗಳೂರು

© Writer Sindhu Bhargava