...

5 views

ಧೂಮಪಾನದ ಕಪಿ ಮುಷ್ಠಿಯೊಳಗೆ...
😢 ಧೂಮಪಾನದ
ಕಪಿ ಮುಷ್ಟಿಯೊಳೀಜಗ 😢

ಎಲ್ಲ ಕಲಬೆರಕೆ ನೋಡ್ರಿ ..ಬಾಳೆ ಹಣ್ಣು ತಿನ್ನೋಕೆ ಹೋಗಿ .ಎಳೆಯ ಕಾಯಿಗೆ ಪೌಡರಿನಂಥ ಔಷಧ ಹಾಕಿ ಹಣ್ಣು ಮಾಡುತ್ತಾರೆ..ನಾವು ತಿನ್ನುವ , ಉಣ್ಣುವ ಎಲ್ಲ ವಸ್ತುಗಳೂ ಕೂಡ ಕಲಬೆರಕೆ ವಸ್ತುವೇ ..ಈಗ ಸರ್ವೆ ಸಾಮಾನ್ಯ ಬಿಡಿ ..

ಆದರೆ ಇನ್ನು ಮುಂದಿನ ತಲೆಮಾರು ಅಂದರೆ ಇನ್ನು ನಮ್ಮ ಮುಂದಿನ ಪೀಳಿಗೆಯವರಿಗೆ , ಮದುವೆ ಆಗಿ ಅವರಿಗೆ ಮಕ್ಕಳು ಹುಟ್ಟುತ್ತಾರಲ್ಲ.ಅವರೂ ಕಲಬೆರಕೆ ಆಗಿ ಮೈಮನವೆಲ್ಲ ವಿಷಮಯವಾಗಿ ಹುಟ್ಟುತ್ತಾರೆ....
ಇವರಿಗೆ ಏನೋ ಆಗಿದೆ ಅಂತ ನನ್ನ ಬೈಕೊಬೇಡಿ .ನಿಜಾ ಕಣ್ರೀ ..ಗಂಡುಮಕ್ಕಳು ಧೂಮಪಾನ ಮಾಡುವುದು ಹೊಸತಲ್ಲ ..ಆದರೆ ಇವರಿಗೆ ಸರಿಸಮಾನವಾಗಿ ಇಂದು ಬಹುತೇಕ ಮಂದಿ ಹೆಣ್ಣುಮಕ್ಕಳೂ ಧೂಮಪಾನ ಮಾಡುತ್ತಿದ್ದಾರಲ್ಲ.ತಾಯಿ ಗರ್ಭವೇ ವಿಷದ ಹೊಗೆಯ ಗೂಡಾದರೆ , ಹುಟ್ಟೋ ಮಕ್ಕಳ ಗತಿ ಏನು ಹೇಳಿ ?ಕೂಸು ಹುಟ್ಟುವ ಮುನ್ನವೇ ಸಿಗರೇಟಿನ ಧಮ್ಮಿನ ಕಿಕ್ಕು ,ಸಾರಾಯಿಯ ನಿಶೆಯಮಲನ್ನು ಆಸ್ವಾದಿಸುತ್ತಾ ಬಂದರೆ ,ಸದೃಢತೆಯ ಭಾವೀ ಪ್ರಜೆಗಳ ಹುಟ್ಟು ಕನಸಿನ ಮಾತಲ್ಲವೇ ?

ಹೆಣ್ಣು ಮಕ್ಕಳು ಮನೆಯ ನಂದಾದೀಪ .ಮನೆಯ ಮಹಾಲಕ್ಷ್ಮೀ , ಮನೆ ಬೆಳಕು ಎಲ್ಲವೂ ಹೌದು .ಆದರೆ ಇಂದಿನ ಕಾಲ ಬದಲಾಗಿದೆಯೋ ಅಥವ ನಾವೇ ಬದಲಾಗಿದ್ದೇವೋ ತಿಳಿಯದು .ನಾವು ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಕಲಿಸುವಲ್ಲಿ ಎಡವಿದ್ದೇಯೋ ಅರಿಯದು.ನಾನೂ ಒಬ್ಬ ಹೆಣ್ಣು ಮಗಳಾಗಿ , ಹೆಣ್ಣುಮಕ್ಕಳ ಬಗ್ಗೆ ಬರೆಯೋದು ತುಂಬ ನೋವಿನ ಸಂಗತಿ ..ತಪ್ಪು ಯಾರು ಮಾಡಿದರೇನು ?ತಪ್ಪು ತಪ್ಪೇ ಅಲ್ಲವೇ ?ಅದರಲ್ಲೂ ಗಂಡು ಹೆಣ್ಣಿನ ಬೇಧಭಾವ ಏತಕ್ಕೆ ಅಲ್ಲವೇ ?

ನಿಜಾ ..ಹೆಣ್ಣು ಅಂದರೆ ದೇವತೆ ..ಗಂಡಿನ ಒರಟು ತನವನ್ನು ತಿದ್ದಿ ತೀಡುವವಳು ಎಲ್ಲವೂ ನಿಜ.ಆದರೆ ಹೆಣ್ಣೇ ತಪ್ಪು ಮಾಡಲು ತಾ ಮುಂದೆ ಎಂದು ನಿಂತರೆ ಏನಾಗಬಹುದು ಹೇಳಿ ?ಜನರು ಓಡಾಡುವ ರಸ್ತೆಯಲ್ಲಿ ನಿರ್ಭಯವಾಗಿ ನಿಂತು ಸಿಗರೇಟಿನ ಹೊಗೆ ಉಗುಳುವ ಹೆಣ್ಣುಮಕ್ಕಳ ನೋಡಿ ಏನೆನ್ನುವುದು ಹೇಳಿ ?ಪ್ಯಾಕ್ ಗಟ್ಟಲೇ ಸಿಗರೇಟ್ ತೆಗೆದುಕೊಳ್ಳುವ ಲಲನಾಮಣಿಗಳ ಹೇಗೆ ಹೊಗಳಲಿ ? ಗಂಡಿನ ಸರಿಸಮವಾಗಿ ನಿಲ್ಲುವುದು ಎಂದರೆ ಗಂಡುಮಕ್ಕಳು ಮಾಡುವ ಎಲ್ಲ ತಪ್ಪುಗಳನ್ನೂ ಹೆಣ್ಣುಮಕ್ಕಳು ಮಾಡುವುದು ಎಂದರ್ಥವೇ ತಿಳಿಯದು .ಹೆಣ್ಣಿಗೆ ಲಜ್ಜೆಯೇ ಭೂಷಣ ಅನ್ನುವರು.ನಾಚಿಕೆಯೇ ಅವಳಿಗೆ ಆಭರಣ ಎನ್ನುವರು.ಆದರೆ ಇಂದಿನ ದಿನಗಳನ್ನು ಅವಲೋಕಿಸಿದರೆ...ಮೋಜು ,ಮಸ್ತಿಗೆ ಹೆಣ್ಣು ಮಕ್ಕಳೂ ಹಿಂದೆ ಬಿದ್ದಿಲ್ಲವೇನೋ ಅನ್ನಿಸುವಂತಿದೆ..(ಎಲ್ಲರಿಗೂ ಅನ್ವಯಿಸದು).ಇಂತ ಹೆಣ್ಣು ಮಕ್ಕಳನ್ನು ನೋಡಿದಾಗ ಕರುಳು ಕಿತ್ತು ಬಂದ ಹಾಗೇ ಆಗುತ್ತದೆ.. ಆಧುನಿಕತೆಯ ಸೋಗಿನ ತೆರೆಯಲ್ಲಿ ನಮ್ಮ ಭವ್ಯ ಸುಸಂಸ್ಕ್ರತಿ ಕೊಚ್ಚಿ ಹೋಗುತ್ತಿದೆ ಎಂಬುದೇ ವಿಷಾದದ ಸಂಗತಿ .

ಓದು ವಿನಯವನ್ನು ಕಲಿಸುತ್ತದೆ ಅಂತಾರೆ .ಸಜ್ಜನಿಕೆಯ ವ್ಯಕ್ತಿತ್ವ ಕಲಿಸುತ್ತದೆ ಅಂತಾರೆ ..ಆದರೆ ಸಾಕಷ್ಟು ಓದಿದ ಹೆಣ್ಣುಮಕ್ಕಳು ಏಕೆ ದಾರಿ ತಪ್ಪುತ್ತಿದ್ದಾರೆ ಅನ್ನುವುದು ರಹಸ್ಯವೇ ಆಗಿದೇ .ತಪ್ಪು ತಿದ್ದುವ ಕೈಯ್ಯೇ ತಪ್ಪು ಮಾಡಿದರೆ ತಿದ್ದುವವರ್ಯಾರು ?ಊಹಾ ಪೋಹದ ಸಂಗತಿಯಲ್ಲವಿದು...ದಿನನಿತ್ಯ ಕಣ್ಣಾರೆ ಕಾಣುವ ವಿಷಯವಿದು. .ಗಾಂಧೀಜಿ ರಾಮರಾಜ್ಯದ ಕನಸು ಕಂಡರು ..ಅವರ ಕನಸು ನನಸಾಗುವ ಬದಲು ಅದು ಕನಸಾಗೇ ಉಳಿಯುವಂತಿದೆ .ಹೀಗೇ ಮುಂದುವರೆದರೆ ಮನೆ ಮನವೆಲ್ಲ ಧೂಮಪಾನದ ಹೊಗೆಯೇ ತುಂಬಿ ತುಳುಕಿ,ವಿಷದ ಹೊಗೆಯ ಜಗವೇ ಸೃಷ್ಟಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ ..........😢😢ಇಷ್ಟೂ ಸಾಲದು ಎಂಬಂತೆ, ಗಂಡ,ಹೆಂಡತಿ ಇಬ್ಬರೂ ನಶೆಯೊಳಗೇ ಮುಳುಗಿ ಹೋದರೆ,ಸದಾ ಒಂದಿಲ್ಲೊಂದು ಕಿರಿಕಿರಿ, ಜಗಳ ಸಾಮಾನ್ಯ. ಯಾಕೆಂದರೆ ಯಾರಾದರೂ ಒಬ್ಬರು ತಗ್ಗಿ ನಡೆಯಲು ಅವರಿಗೆ ಆಗದು.ಅಪ್ಪ, ಅಮ್ಮನ ಜಗಳದಲ್ಲಿ ಮಕ್ಕಳು ಬಡವಾಗುತ್ತಾ ಇದ್ದಾರೆ..ಹಿಂದಿನ ತಲೆಮಾರಿನವರ ಜಗಳವೇ ಬೇರೆ ರೀತಿ.. ಅಲ್ಲಿ ಅಪ್ಪ ಒಂದೇ ದುಶ್ಚಟಗಳ ದಾಸನಾಗಿ ಇರುತ್ತಿದ್ದ...ಅಮ್ಮ ದೇವತೆಯಾಗಿ ಸಂಸಾರ ಜತನ ಮಾಡ್ತಾ ಇದ್ಲು..ಆಗ ಮಕ್ಕಳಿಗೆ ತುಸು ಭಯ ಆದರೂ ಇರ್ತಾ ಇತ್ತು. ಹಾಗೇ ಅಪ್ಪ ಅಮ್ಮ ನ ನಡುವಿನ ಜಗಳ ಸಹಜ ಎಂಬಂತೆ ಅವು ವರ್ತಿಸುತ್ತಿದ್ದವು..ಆದರೆ ಇಂದಿನ ಈ ಆಧುನಿಕತೆಯಲ್ಲಿ ಹೆಚ್ಚಿನ ಅಪ್ಪ ಅಮ್ಮ ಇಬ್ಬರೂ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ.ಮಕ್ಕಳಿಗೆ ಸಮಯ ನೀಡಲೂ ಸಮಯ ಇಲ್ಲ. ಹಾಗಾಗಿ ಅಪ್ಪ ಅಮ್ಮನ ಜಗಳ ಉಂಡು ಮಲಗೋತನಕ ಇಲ್ಲದೇ ಡೈರೆಕ್ಟ್ ಡಿವೋರ್ಸ್ ತನಕ ಸಾಗಿ ಬಿಡುತ್ತದೆ..ಮಕ್ಕಳು ಅಬ್ಬೇಪಾರಿಗಳಂತೆ,ಲಂಗು ಲಗಾಮು ಇಲ್ಲದೇ ಸಹವಾಸ ದೋಷದಿಂದ ತಾವೂ ಕೆಟ್ಟುಹೋಗ್ತಾ ಇದಾರೆ..
ಒಟ್ಟಾರೆ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಗೋದಂತೂ ಅಂದಿನಿಂದ ಇಂದಿನ ತನಕವೂ ಕಟು ಸತ್ಯ.
✍️ಪೂರ್ವವಾಹಿನಿ.