...

15 views

ಬದುಕು ಬದಲಿಸುವ ಮಾಯೆ
ಒಂದು ಮಹಾ ಮೋಸ, ಯಾರೋ ಮಾಡಿದ ವಂಚನೆ, ಇಟ್ಟ ನಂಬಿಕೆ ಕಳಚಿ ಬಿದ್ದಾಗ ಕಾಣುವ ಮುಖವಾಡಗಳು, ಕೈ ಹಿಡಿದು ಜೊತೆ ನಡೆದು ಬರಬೇಕಾದವರು ಮಧ್ಯದಲ್ಲೇ ಎದ್ದು ತಿರುಗಿಯೂ ನೋಡದೆ ಹೋದದ್ದು, ಎಷ್ಟೋ ಕನಸುಗಳ ಹೆಣೆದು ನಿದ್ರೆಯಿಲ್ಲದ ರಾತ್ರಿಗಳಾಗಿ ಕಳೆದು ಹೋದಂತವು ಹೀಗೆ ವಿಭಿನ್ನ ಸನ್ನಿವೇಶಗಳು ನಮ್ಮ ನಿಮ್ಮ ನಡುವಿನ ಸಾಕಷ್ಟು ಜನರ ಬದುಕಲ್ಲಿ ಒಂದಲ್ಲಾ ಒಂದು ಬಾರಿ ಘಟಿಸಿರುತ್ತವೆ. ಸಣ್ಣ ಸಣ್ಣ ಸಂಗತಿಗಳಿಗೂ, 'ಎಲ್ಲ ಮುಗಿದೇ ಹೋಯ್ತು, ಇನ್ನೇನಿದೆ ಇಲ್ಲಿ' ಅನ್ನುವ ಭಾವ ಹೊತ್ತು ನೋವು ತಿನ್ನುತ್ತಿರುತ್ತೇವೆ. " ಈ ನೋವುಗಳು ಯಾಕೆ ನಮ್ಮನ್ನೇ ಹುಡುಕಿ ಬಂದು ಕಾಡುತ್ತವೆ ? " ಎಂದು ಗೊಣಗಿಕೊಂಡಿರುತ್ತೇವೆ. ಬೇಡದ ಗೊಂದಲ ಒತ್ತಡಗಳನ್ನೆಲ್ಲ ಮೈಮೇಲೆ ಎಳೆದುಕೊಂಡು ಬದುಕಿದ್ದೂ ಸತ್ತವರಂತೆ ಜೀವಿಸುತ್ತಿರುತ್ತೇವೆ. ಇದೊಂದು ರೀತಿ ನಾವೇ ಬಯಸಿ ಪಡೆಯುವಂತ ಡಿಪ್ರೆಷನ್ ಅಥವಾ ಖಿನ್ನತೆ !!

ಆ ಸಮಯದಲ್ಲಿ ತಾನು ಒಂಟಿ ಎನ್ನುವ ಖಾಲಿ ಭಾವ ಅತಿಯಾಗಿ ಕಾಡುತ್ತದೆ. ಮುಖದಿಂದ ಮಂದಹಾಸ ದೂರ ಓಡಿರುತ್ತದೆ. ಎಲ್ಲವೂ ಸ್ವೀಕೃತ..! ಸ್ವೀಕರಿಸಬೇಕು..! ಆದರೆ ಎಷ್ಟರವರೆಗೆ ಎನ್ನುವುದರ ಅರಿವಿರಬೇಕು. ಯಾವುದೇ ವ್ಯಕ್ತಿ, ವಸ್ತು ಅಥವಾ ಭಾವಗಳಿಗೆ ವಿಪರೀತ ಎನ್ನಿಸುವಷ್ಟು ಅಂಟಿಕೊಳ್ಳದಿದ್ದರೆ, ಬೇಸರಗಳು ಕೆಲವೇ ಕ್ಷಣ ಅಥವಾ ದಿನಗಳ ಅತಿಥಿಯಾಗಿ ಮುಗಿದು ಹೋಗುತ್ತವೆ. ಅತಿಯಾಗಿ ಹತ್ತಿರ ಬಿಟ್ಟುಕೊಂಡರೆ ನಮ್ಮ ತಿಥಿ ಮಾಡಿ ಹೋಗುತ್ತವೆ ಅಷ್ಟೇ! ಎನ್ನುವ ಪ್ರಜ್ಞೆ ಬೆಳೆಸಿಕೊಳ್ಳುವುದು ಈಗಿನ ಕಾಲಮಾನಕ್ಕಿರುವ ಜರೂರತ್ತು. ಸರಿಯಾಗಿ ಬಳಸಿಕೊಳ್ಳುವ ಕಲೆ ಇದ್ದರೆ ಪ್ರತಿಯೊಂದು ಘಟನೆಗಳು, ನೋವುಗಳು ಕೂಡ ವರ !!

ಹೌದು..! ನಾವು ಯಾವುದೇ ಒಂದು ತಪ್ಪು, ಅಥವಾ ಕೆಟ್ಟ ಪರಿಸ್ಥಿತಿಗಳಿಂದ ಪಾಠ ಕಲಿಯಲ್ಲಿಲ್ಲವಾದರೆ, ಆ ಪಾಠ ಕಲಿಯುವವರೆಗೆ ಬೇರೆ ಬೇರೆ ರೂಪದಲ್ಲಿ ಬಂದು, ಬದುಕು ನಮಗೆ ಪಾಠ ಕಲಿಸುವ ಪ್ರಯತ್ನ ಮಾಡುತ್ತಲೇ ಇರುತ್ತದೆ. ಮಾಯೆಯ ಆಟವಿದು. ನಮ್ಮನ್ನು ಓರೆಗೆ ಹಚ್ಚಿ ಮತ್ತಷ್ಟು ಶುದ್ಧ ಮಾಡಲೆಂದೇ ಬಂದು ಕಾಡುವ ಮಾಯೆ..! ಇದು ಇಷ್ಟೇ, ಮತ್ತಿನ್ನು ನನಗೀ ಭಾವ ಕಾಡಲಾರದು. ತೊರೆದು ಹೋದವರಿಗೆ ನಮ್ಮ ಜೊತೆ ಇರುವ ಯೋಗ್ಯತೆ ಅಥವಾ ನಮ್ಮ ಅವಶ್ಯಕತೆ ಇಲ್ಲ ಬಿಡು. ಖಾಲಿತನವೊಂದು ಹಗುರ ಭಾವ. ಮೋಸ ಮಾಡಿದರು ಎನ್ನುವುದಕ್ಕಿಂದ ಅರ್ಹರಲ್ಲದವರನ್ನು ನಂಬಿದ್ದು ನಮ್ಮದೇ ತಪ್ಪು. Let it be and move on. ಎದ್ದು ಹೋದವರು ಚೆನ್ನಾಗಿಯೇ ಇರಲಿ. ಉಳಿದು ಹೋದ ನಾವು ಅವರಿಗಿಂತ ಚೆಂದವಾಗಿ ಜೀವಿಸಬೇಕು. ಸುತ್ತಲಿನ ಬಂಧನಗಳ ಗಂಟು ಸಡಿಲವಾದಷ್ಟು ಬದುಕಿನ ಹಾದಿ ಸಲೀಸು ಅಂದುಕೊಂಡುಬಿಡಿ..! ನಿಜಕ್ಕೂ ಒಂದು ಹೊಸ ಬದುಕಿನ ಆರಂಭ ನಮ್ಮೆದುರು ತೆರೆದುಕೊಳ್ಳುವುದೇ ಆಗ.

ಪಾಠ ಕಲಿಸಿ ಅಂತಹ ನಮ್ಮ ನಿರಾಳ, ನಿರಾತಂಕ, ನೂತನ ಬದುಕಿನ ಯೋಚನೆಗೆ ಕಾರಣವಾದ ಎಲ್ಲ ಸಂಧರ್ಭ ಮತ್ತು ವ್ಯಕ್ತಿಗಳಿಗೊಂದು ಥ್ಯಾಂಕ್ಸ್ ಅಥವಾ ಚೆನ್ನಾದ ಧನ್ಯವಾದ ಹೇಳುವುದು ಬೇಡವೇ ನಾವು !? So... ಬದುಕಿನಲ್ಲಿ ಬರುವ ಎಲ್ಲಾದಕ್ಕೂ ಕೃತಜ್ಞರಾಗಿರೋಣ.