...

1 views

ಕುಟುಂಬದ ಜೊತೆ ನವೆಂಬರ್‌ ತಿಂಗಳಿನಲ್ಲಿ ಪ್ರವಾಸ ಮಾಡಲು ಕರ್ನಾಟಕದ ಈ ಸ್ಥಳಗಳು ಬೆಸ್ಟ್…!
ಕರ್ನಾಟಕದ ಪ್ರವಾಸ ಭಾರತೀಯರಿಗೆ ಅಲ್ಲದೆ, ವಿದೇಶಿಗರಿಗೂ ಅಚ್ಚುಮೆಚ್ಚು. ಇಲ್ಲಿ ತಂಪಾದ ಗಿರಿಧಾಮಗಳು, ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳು, ಘರ್ಜಿಸುವ ಕಡಲತೀರಗಳು, ಭವ್ಯವಾದ ಪುರಾತನ ಆಲಯಗಳು ಸೇರಿದಂತೆ ಇನ್ನು ಸಾಕಷ್ಟು ಪ್ರವಾಸಿ ಆಕರ್ಷಣೆಗಳಿವೆ.

ನವೆಂಬರ್‌ ತಿಂಗಳು ಪ್ರವಾಸಕ್ಕೆ ಬಹಳ ಯೋಗ್ಯವಾದ ತಿಂಗಳು ಎಂದೇ ಪರಿಗಣಿಸಲಾಗಿದೆ. ಫ್ಯಾಮಿಲಿ ಟ್ರಿಪ್‌ ಮಾಡಲು ನೀವು ಯೋಜಿಸುತ್ತಿದ್ದರೆ ಲೇಖನದಲ್ಲಿ ನೀಡಲಾಗಿರುವ ಸ್ಥಳಗಳನ್ನು ಆಯ್ಕೆಮ ಮಾಡಿಕೊಳ್ಳಿ.



ಗೋಕರ್ಣ
ಕರ್ನಾಟಕದ ಪ್ರವಾಸೋದ್ಯಮದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿರುವ ಗೋಕರ್ಣ, ತನ್ನ ಅದ್ಭುತವಾದ ಕಡಲತೀರಗಳಿಗೆ ಮಾತ್ರ ಫೇಮಸ್‌ ಆಗಿಲ್ಲ ಬದಲಾಗಿ ಅಲ್ಲಿನ ಮಹಾಶಿವನ ಆಲಯವು ಅಷ್ಟೇ ಪ್ರಖ್ಯಾತವಾಗಿದೆ.

ಜನರು ಇಲ್ಲಿ ಪ್ರಾಚೀನ ಕಡಲತೀರಗಳು ಮತ್ತು ಉಸಿರುಕಟ್ಟುವ ಭೂದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ವರ್ಷದ ಯಾವುದೇ ಸಮಯದಲ್ಲಿಯು ಗೋಕರ್ಣ ಪ್ರವಾಸ ಯೋಜಿಸಬಹುದಾದರೂ, ನವೆಂಬರ್‌ ತಿಂಗಳು ಆಹ್ಲಾದಕರ ಎನ್ನಬಹುದು. ಕುಡ್ಲೆ ಬೀಚ್ ಮತ್ತು ಓಂ ಬೀಚ್‌ಗಳಿಗೆ ಹೋಗುವುದು ತಪ್ಪಿಸದಿರಿ.



ಚಿಕ್ಕಮಗಳೂರು

ಕರ್ನಾಟಕದ ಕಾಫಿ ನಾಡು' ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಚಿಕ್ಕಮಗಳೂರು ವರ್ಷದ ಯಾವುದೇ ಸಮಯದಲ್ಲಿ ಪ್ರವಾಸ ಯೋಜಿಸಬಹುದು. ಕರ್ನಾಟಕದ ಅತ್ಯಂತ ಸುಂದರವಾದ ಗಿರಿಧಾಮಗಳಲ್ಲಿ ಇದು ಒಂದಾಗಿದೆ.

ಎತ್ತರದ ಪರ್ವತಗಳು, ಹಚ್ಚ ಹಸಿರಿನ ಕಾಡುಗಳು ಮತ್ತು ಅದರ ಪ್ರಶಾಂತ ಪರಿಸರಕ್ಕೆ ನೀವು ಮರುಳಾಗದೇ ಇರಲಾರಿರಿ. ಕಾಫಿ ಉತ್ಸಾಹಿ ಹಾಗೂ ಪ್ರಕೃತಿ ಪ್ರಿಯರಿಗೆ ಚಿಕ್ಕಮಗಳೂರು ವಿಶೇಷವಾಗಿ ಇಷ್ಟವಾಗುತ್ತದೆ. ಇಲ್ಲಿ ನೋಡಲು ಹಾಗು ಸಾಹಸ ಮಾಡಲು ಸಾಕಷ್ಟು ಆಯ್ಕೆಗಳಿವೆ.




ಜೋಗ ಜಲಪಾತ
ಜೋಗ್ ಫಾಲ್ಸ್ ಅಥವಾ ಜೋಗ ಜಲಪಾತವನ್ನು ನೀವು ಜುಲೈ ತಿಂಗಳಿನಿಂದ ಡಿಸೆಂಬರ್‌ ತಿಂಗಳ ಒಳಗೆ ಕಣ್ತುಂಬಿಕೊಳ್ಳಲು ಉತ್ತಮ ಸಮಯವಾಗಿದೆ. ಕುಟುಂಬದ ಜೊತೆ ಭಾರತದ ಎರಡನೇ ಅತಿ ಎತ್ತರದ ಧುಮ್ಮಿಕ್ಕುವ ಜಲಪಾತವನ್ನು ನೋಡಲು ಬಯಸಿದರೆ ಇಲ್ಲಿಗೆ ಭೇಟಿ ನೀಡಿ.

ಈ ಜಲಪಾತವು ಕರ್ನಾಟಕದ ಹೆಗ್ಗುರುತುಗಳಲ್ಲಿ ಒಂದು ಕೂಡ ಆಗಿದೆ. ಮಾನ್ಸೂನ್‌ ಸಮಯದಲ್ಲಿ ಜಲಪಾತದ ಸೊಬಗು ನೋಡಲು ಎರಡು ಕಣ್ಣುಗಳು ಸಾಲವು.



ಮೈಸೂರು

ಅರಮನೆಗಳ ನಗರ, ಸಾಂಸ್ಕೃತಿಕ ನಗರಿ ಎಂದೆಲ್ಲಾ ಕರೆಸಿಕೊಳ್ಳುವ ಮೈಸೂರು, ಬೆರಗುಗೊಳಿಸುವ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಶ್ರೀಮಂತ ರಾಜಮನೆತನದ ಪರಂಪರೆ, ಸಂಕೀರ್ಣವಾದ ವಾಸ್ತುಶಿಲ್ಪ, ಅದರ ಪ್ರಸಿದ್ಧ ರೇಷ್ಮೆ ಸೀರೆಗಳು, ಯೋಗ ಮತ್ತು ಶ್ರೀಗಂಧದ ಚಕ್ಕೆಗಳು ಸೇರಿದಂತೆ ಸಾಕಷ್ಟು ವಿಷಯಗಳಿಗೆ ಮೈಸೂರು ಹೆಸರುವಾಸಿಯಾಗಿದೆ.

ಅಲ್ಲದೆ, ಈ ಶ್ರೀಮಂತ ಪರಂಪರೆಯನ್ನು ನೋಡಲು ವರ್ಷಪೂರ್ತಿ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಮೃಗಾಲಯ, ಅರಮನೆಗಳು, ದೇವಾಲಯಗಳು, ಮ್ಯೂಸಿಯಂಗಳು, ಬೃಂದಾವನ ಗಾರ್ಡನ್‌ ಇನ್ನು ಅನೇಕ ಪ್ರವಾಸಿ ಆಕರ್ಷಣೆಗಳಿವೆ.