...

10 views

ಅವಳು...
ದಿನಕರ ಎದ್ದು ಬೆಳಕು ಹರಿಸುವ
ಮುಂಚೆಯೇ ಎದ್ದು ಮನೆ ಮುಂದೆ
ರಂಗವಲ್ಲಿ ಚಿತ್ತಾರ ಮೂಡಿಸಿರುವೆ..
ಅವ ಬಾನಲ್ಲಿ ತುಸು ಆಕಳಿಸಿ ರಂಗು
ಚೆಲ್ಲುತ ಭುವಿಯೊಲಿಸಲು ಕಸರತ್ತು
ಮಾಡುತಿರುವಾಗಲೇ
ಒಲೆ ಹಚ್ಚಿ ಟೀ ಕಾಯಿಸಿ ಕೊಟ್ಟಿರುತ್ತೇನೆ
ಮನೆ ಮಂದಿಗೆ..
ಭುವಿಯ ಕೊಸರಾಟದಲ್ಲಿ ಹುಸಿ ಮುನಿಸುಗೊಂಡು ಹೆಚ್ಚೇ ತಾಪಗೊಂಡು
ಬೆದರಿಸಲವ ಸಜ್ಜಾಗಿ ನಿಂತ ಹೊತ್ತಿನಲ್ಲಿ
ನಾನೂ ಬೇಯುತ್ತಿರುತ್ತೇನೆ ದೋಸೆ ಕಾವಲಿಯ ಹಬೆಯಲ್ಲಿ...
ಕೈಗೆ ಸಿಗದ ಪ್ರೇಮವ ದೂರದಿಂದ ನೋಡಿ
ಶಪಿಸುತ್ತಾ ಅವ ಸಿಟ್ಟಾಗಿ ನಿಂತ ಘಳಿಗೆಯಲಿ
ಅನ್ನಪೂರ್ಣೆಯಂತೆ ಹಸಿದ ಹೊಟ್ಟೆಯ ಹಿಂಗಿಸಲು ಅಗುಳು ಬೆಂದಿದೆಯೋ ಎಂದು ಪರೀಕ್ಷಿಸುತ್ತಿರುತ್ತೇನೆ...
ಕಾಯ್ದು ಕಾಯ್ದು ಬಸವಳಿದು ತಂಪಾಗಿ ಅವ ಕರಗುವ ಹೊತ್ತಲ್ಲಿ ನಿರತಳಾಗಿರುತ್ತೇನೆ
ಹಸು ,ಕರುಗಳ ಮೈದಡವಿ,
ಮತ್ತೆ ಸಂಜೆಯ ಹಸುವ ನೀಗಿಸಲು ಸೆರಗ ಕಟ್ಟಿ..
ಇನ್ನೇನು ಇಂದಿನ ಕಾಯಕ ಮುಗಿಯಿತು ತನ್ನದೆಂದು ಅವ ಕರಗಿಯೇ ಹೋಗುತ್ತಾನೆ
ಸದ್ದಿಲ್ಲದೇ.. ಚಂದಿರ ಬಂದು ತಂಪು ನೀಡುವ
ಕಾಯಕದಿ ಮಗ್ನನಾಗಿರುವ ಸಮಯದಲ್ಲಿ
ಆಕಳಿಕೆಯನ್ನೂ ಹಿಮ್ಮೆಟ್ಟಿ,ನಾಳೆಯ ಕಾಯಕದ ಚಿಂತೆಯ ಬಗೆಹರಿಸಿ
ತಲೆಯೂರುತ್ತೇನೆ ದಣಿದ ದೇಹವ ಭುವಿಗೊಪ್ಪಿಸಿ...
ಎದೆಗೊಪ್ಪಿ ಹೆಮ್ಮೆ ಪಡುತ್ತಾಳವಳು..ಹೆಣ್ಣು ಜನುಮ ಸಾರ್ಥಕ ಎಂಬಂತೆ..
ನೀನಲ್ಲವೇ ಇವಳಿಗೆ ಸ್ಫೂರ್ತಿ ..ಕರಗದೇ ಸೋಲದೇ ಸಂಸಾರ ನೌಕೆ ಸಾಗಿಸುವ ಈ ಚೈತನ್ಯಕೆ ಎಂದು ಅವನ ನೆನಪಿಸಿಕೊಂಡು
ನಕ್ಕು ಸುಮ್ಮನೆ ಆಗುತ್ತಾಳವಳು....
👀🌱ಶೋಭಾ ನಾರಾಯಣ🌱
© All Rights Reserved