...

7 views

ದಿನಧಾರೆ
ದಿನದಿನವೂ ಧುಮ್ಮಿಕ್ಕುತ್ತಿದೆ ದಿನಧಾರೆ,
ಧೂಮಶಟಕದಂತೆ, ದಭದಭೆಯಂತೆ.

ಧುಮುಕಿ ಧಾವಿಸುತಿದೆ ದಾಪುಗಾಲಿಟ್ಟು,
ದಣಿವಾರಿಸಿಕೊಳಲು ದಾರಿಗೊಡದೆ.
ದುಮ್ಮಳವೇಕೆ? ದುಮ್ಮಾನವೇಕೆ?
ದುರ್ದಾನವಲ್ಲವಿದು, ದಿವ್ಯ ಧಾನ್ಯವು.

ದ್ರವಿಣದಂತೆ ದಿವಾಣದಲ್ಲಿರದು,
ದಿನದಿನವೂ ದೊರೆವ ದಿನಭತ್ಯವು.
ದಿನಚರಿಯ ದಾರಿಗರಿಗೆ ದಾರಿದೀವಿಗೆ,
ದಾರಿತೋರುವ ದಾರಿಗಲ್ಲು.

ದಾರಿಗಲ್ಲುಗಳ ದಾಟಿ, ದಾಟಿ,
ದಿನದ ಧನವನು ಧ್ವಂಸಗೊಳಿಸದೆ,
ದೀನಾರ ದರವು ದೊರಕುವಂತೆ,
ದಾರಿ ದಾಟಿಸು ದೈವವೆ.

ದಿನಧಾರೆ - ದಿನಗಳ ಪ್ರವಾಹ
ಧೂಮಶಟಕ - ಉಗಿಬಂಡಿ
ದಭೆದಭೆ - ಜಲಪಾತ
ದುಮ್ಮಳ - ಕಳವಳ
ದುಮ್ಮಾನ - ದುಗುಡ
ದುರ್ದಾನ - ಸ್ವೀಕರಿಸಲು ಹಿತವಲ್ಲದ ದಾನ
ದ್ರವಿಣ - ಸಂಪತ್ತು
ದಿವಾಣ - ಬೊಕ್ಕಸ
ದೀನಾರ - ಪ್ರಾಚೀನ ಕಾಲದಲ್ಲಿದ್ದ ಚಿನ್ನದ ನಾಣ್ಯ
© ಕೃಷ್ಣಕವಿ
#ಕೃಷ್ಣಕವಿ #ಏಕಾಕ್ಷರ_ಕವನ #ಸಮಯ