...

6 views

ತೊಟ್ಟಿಲು
ತೊಟ್ಟಿಲ ನೆನಪು

ನವಮಾಸಗಳು ಅಮ್ಮನ ಬೆಚ್ಚನೆಯ ಒಡಲು
ಆಮೇಲೆ ಅವಳ ಹಚ್ಚನೆಯ ಮಡಿಲು
ಜೀವದಾಯಕ ಅಮೃತ ಸದೃಶ ತಾಯಿ ಹಾಲು
ನೆಲೆಯ ನೀಡಿತ್ತು ಸಮಾಧಾನದಲ್ಲಿ ತೊಟ್ಟಿಲು

ತೊಟ್ಟಿಲಲ್ಲಿ ಮಲಗಿದ್ದ ದಿನಗಳು ನೆನಪಿಲ್ಲ
ಮಧುರ ಅನುಭವದ ಮೆಲುಕು ಕಾಡಿಹುದಲ್ಲ
ತೊಟ್ಟಿಲೆಂದರೆ ಅಮ್ಮನ ಮಡಿಲ ನೆನಪಿಸುವ ಭಾವ
ವರ್ಣಿಸಲು ಹೊರಟಾಗ ಕಾಡುವುದು ಪದಗಳಭಾವ

ಹಿಂದೆ ಅವಿಭಕ್ತ ಕುಟುಂಬಗಳು! ಇತ್ತು ದೊಡ್ಡ ತೊಟ್ಟಿಲು
ಮಕ್ಕಳಿದ್ದವಮ್ಮ ಮನೆ ತುಂಬಾ ಬಿಡುವಿರದೆ ತೂಗಲು
ತೇಗದ್ದಾಗಲಿ ಕರಿ ಮರದ್ದಾಗಲಿ ಶ್ರೀಗಂಧದ್ದೇ ಇರಲು
ಬಿದಿರಿನದಾಗಲಿ ಸೀರೆಯ ಜೋಲಿ ಅವೂ ತೊಟ್ಟಿಲು

ತೊಟ್ಟಿಲೆಂದರೆ ಹಿತವಾಗಿ ತೂಗುವ ಉಯ್ಯಾಲೆ
ಅಮ್ಮನ ಮೆಲ್ಲುಲಿಯ ಜೋಗುಳದ ಲಾಲಿಯೇ
ಅಮ್ಮನ ತೋಳಿನ ಆ ಬಿಗಿ ಭದ್ರತೆಯ ರಕ್ಷೆ
ನೀಡುತ ಕಂದಗೆ ಒದಗಿಸಿತ್ತು ನೆಮ್ಮದಿ ಸುರಕ್ಷೆ

ಮದುವೆಯಾದ ಪ್ರತಿ ಹೆಣ್ಣು ಬೇಡುವಳು ದೇವರ
ಮನೆಯಲ್ಲಿ ತೊಟ್ಟಿಲು ತೂಗಬೇಕೆಂಬ ಆ ವರ
ಮಕ್ಕಳ ಭಾಗ್ಯಕ್ಕಾಗಿಯೇ ಎಲ್ಲಾ ನೇಮ ಪೂಜೆಗಳು
ಕೃಷ್ಣ ದೇಗುಲದಲ್ಲಿ ಕಟ್ಟುವರು ಹರಿಸಿಕೊಂಡು ತೊಟ್ಟಿಲು

ಕೆಳಗೆ ಮೆತ್ತಗಿನ ಹತ್ತಿಯ ಪುಟ್ಟ ಹಾಸಿಗೆ
ತೇವ ಕೆಳಗಿಳಿಯದಿರಲು ಮೇಲೆ ರಬ್ಬರಿನ ಹಾಳೆ
ತುಪ್ಪಳದ ನವಿರಿನ ಹಾಸು, ಬಟ್ಟೆ ಸಿಂಬಿಯ ದಿಂಬೆ
ರಂಜಿಸಲು ಮೇಲೆ ಕಟ್ಟಿದ ಬಣ್ಣ ಬಣ್ಣದ ಗೊಂಬೆ

ಹೆರಿಗೆಯ ಮೈಲಿಗೆ ಪುರುಡುಗಳು ಅವು ಹತ್ತು ದಿನ
ಕಳೆದ ನಂತರ ಬಾಣಂತಿ ಮಗುವಿನ ಮಂಗಳ ಸ್ನಾನ
ಅಂದೇ ಆಗುವುದು ಕಂದನಿಗೆ ತೊಟ್ಟಿಲ ದರ್ಶನ
ಭಜಬೆಣ್ಣೆ ಇಟ್ಟು ಮುತ್ತೈದೆಯರಿಂದ ಆಶೀರ್ವಚನ

ತೊಟ್ಟಿಲೆಂದರೆ ಅಲ್ಲ ಅದು ಬರೀ ಮಲಗುವ ರಚನೆ
ಹೆಣ್ತನಕ್ಕೆ ತಾಯ್ತನದ ಸಾರ್ಥಕ್ಯ ತಂದ ಭಾವನೆ
ಮನೆಯೆಂಬ ಆಲಯದ ಪುಟ್ಟ ದೇವರ ಮನೆ
ಕಂದನಿರುವಿಕೆಯ ಸಾರುವ ಮಂಗಳಕರ ಸೂಚನೆ

ತಾಯೊಡಲ ಮುಂದುವರಿದ ಭಾಗವದು ತೊಟ್ಟಿಲು
ಅಮ್ಮನಕ್ಕರೆಯ ಸಿಹಿ ಸವಿ ತುಂಬಿದ ಸಕ್ಕರೆ ಬಟ್ಟಲು
ಆ ಆತ್ಮೀಯ ಆಪ್ಯಾಯತೆ ಭಾವ ಮನಮುಟ್ಟಲು ಹಸುಗೂಸ ಮಗುವಾಗಿಸುವ ಪ್ರಕ್ರಿಯೆಯ ಮೆಟ್ಟಿಲು.
ಸುಜಾತ ರವೀಶ್