...

17 views

ಭಿನ್ನಳಲ್ಲ
ಭಾವ _ವರ್ಷ

ಬಿಂದು ~ ೩
ಭಿನ್ನಳಲ್ಲ

ಪ್ರೀತಿಯನೆ ಮೊಗೆದುಕೊಟ್ಟು
ಸ್ನೇಹದಲಿ ಮೀಯಿಸಿಬಿಟ್ಟು
ಮಮತೆ ವಾತ್ಸಲ್ಯ ದಯೆಯಿಟ್ಟು
ಎಲ್ಲರನ್ನು ಸಮಭಾವಿಸುವವಳು
ಭಿನ್ನಳಲ್ಲ ಸ್ವಲ್ಪಮಾತ್ರ ವಿಭಿನ್ನ

ಲೋಕವೆಸೆದ ಕೊಂಕಿನಂಬಿಗೆ
ಜಗವಾಡುವ ನೂರುಮಾತಿಗೆ
ತಲೆಗೊಡುತಲಿ ಸಂಕಟದೊಂದಿಗೆ
ನರಳಿದರೂ ಎದುರುಬೀಳದವಳು
ಭಿನ್ನಳಲ್ಲ ನಾನಾಗೆನೆಂದೂ ಖಿನ್ನ

ಯಾರೇನೇ ನಂಜುಣಿಸಿದರೂ
ಮನಸಾರೆ ಕೇಡು ಬಗೆದರೂ
ವಿಶ್ವಾಸಕೆ ದ್ರೋಹವೆಸಗಿದರೂ
ಶಪಿಸದೆ ಸುಮ್ಮನಾಗುವವಳು
ಭಿನ್ನಳಲ್ಲವೆನ್ನ ಸಹನೆ ಅವಿಚ್ಛಿನ್ನ

ಮೇಲೊಬ್ಬನೆಲ್ಲವ ನೋಡುತಿಹನು
ಅರ್ಹತೆಗೆ ತಕ್ಕುದ ನೀಡುವನವನು
ಕರ್ಮಾನುಸಾರ ಫಲವುಣಿಸುವನು
ಹಣೆಬರಹವನೇ ನಂಬಿರುವವಳು
ಭಿನ್ನಳಲ್ಲವೆನ್ನುವೆ ಪಡೆದುದೇ ಪರಮಾನ್ನ

ಸುಜಾತಾ ರವೀಶ್
ಮೈಸೂರು
೧೩.೧೧.೨೦೨೨