...

11 views

ಗಝಲ್
ಅಹಮಹಮಿಕೆಗೆ ತಮಂಗವಾಗುತಿದೆ ಬದುಕು
ಮೆರೆದಾಡಿ ಮಣ್ಣಲ್ಲಿ ಮರೆಯಾಗುತಿದೆ ಬದುಕು

ಜಂಜಾಟದಲ್ಲಿ ಮುಗಿಯುತ್ತಿದೆ ಜೀವನದ ಗಡು
ಕಿಂಕೃತಿಯಲ್ಲಿ ಕೃಶವಾಗುತ ಸಾಗುತಿದೆ ಬದುಕು

ದ್ವಿಷತೆಯ ಪಡಿಕೆಯು ಹೊರಸೂಸುತ್ತಿದೆ ಗದಡು
ಕೆಡುಕು ಬಯಸುತಲಿ ಕೊನೆಯಾಗುತಿದೆ ಬದುಕು

ಹಸಿದವನ ಬಟ್ಟಲೊಳಗೆ ಮೆದ್ದವನ ಹದ್ದಿನ ಕಣ್ಣು
ಹರಕೆ ಹುಸಿಯಾಗಿರಲು ನರಕವಾಗುತಿದೆ ಬದುಕು

ಗುರಿಯಿಲ್ಲದೆ ನಡೆದಾಡಿ ಕ್ಷೀಣಿಸಿರುವನು ವಿಜಯ
ಅಂಡಲೆದು ಅಂದಗೆಟ್ಟು ಜರಡಾಗುತಿದೆ ಬದುಕು
•••••••••••••••••••••••••••••
ಅಹಮಹಮಿಕೆ: ಅಹಂಕಾರ
ತಮಂಗ: ವೇದಿಕೆ
ಕಿಂಕೃತಿ: ಚಿಂತೆ
ದ್ವಿಷತೆ: ಹಗೆತನ
ಪಡಿಕೆ: ಹೊಲಸು
ಗದಡು: ಕಮಟು ವಾಸನೆ
ಅಂಡಲೆ: ಕಷ್ಟಕ್ಕೆ ಒಳಗಾಗು, ಅಲೆದಾಡು
ಜರಡು: ಜೊಳ್ಳು, ಕೃಶ
•••••••••••••••••••••••••••••
© ವಿಜಯ್ 💫