...

6 views

ಉಳುಮೆಯ ಉರಿ
ಉಳುವವನೀತ, ಉಳ್ಳವನಲ್ಲ.
ಉದಕ, ಊಟ, ಉತ್ತರೀಯಗಳಿಲ್ಲ.

ಉರ್ವರೆಯಿದ್ದರೂ ಉಪಜೀವಿಯಾದ,
ಉಪಕರಣವಿಲ್ಲ, ಉತ್ಪನ್ನವಿಲ್ಲ,
ಉದ್ದರಿಯ ಊಟವು ಉದರದಲ್ಲಿ.
ಉರ್ವಿಯು ಉಪೇಕ್ಷಿಸಿತೆ ಉರ್ವೀಜವ?!

ಉಗಿಬಂಡಿಗೆ ಉದಕವಿಲ್ಲದಿರೆಂತು?
ಉತ್ಪಾದಕನಿಗೆ ಉಪವಾಸವೇ?!
ಉಳುಕು ಉಲ್ಬಣಿಸಿ ಉರುಳಾಯಿತೆ?
ಉಗ್ರಕರನಿಗಾಯಿತೆ ಉರಗಸ್ಪರ್ಶ?!

ಊರಿಗೆಲ್ಲ ಉಪ್ಪೇರಿ, ಉಳುವವಗೆ ಉಚ್ಚಿಷ್ಟ.
ಊರುಗಂಬಕೆ ಊರುಗೋಲಿನ ಉಪಕಾರವೆ?
ಉಂಚುವವರಾರೋ? ಉದ್ಧಾರವೆಂತೋ?
ಉಳುವಾತನು ಉಳ್ಳಾತನಾಗುವೆದೆಂದೋ?!

ಉರ್ವರೆ - ಫಲವತ್ತಾದ ಭೂಮಿ
ಉಪಜೀವಿ - ಪರಾವಲಂಬಿ
ಉದ್ದರಿ - ಸಾಲ
ಉರ್ವಿ - ಭೂಮಿ
ಉರ್ವೀಜ - ಗಿಡ, ಮರ
ಉಗ್ರಕರ - ಸೂರ್ಯ
ಉರಗಸ್ಪರ್ಶ - ಗ್ರಹಣ
ಉಚ್ಚಿಷ್ಟ - ತಿಂದು ಮಿಕ್ಕಿದ್ದು, ಎಂಜಲು
ಊರುಗಂಬ - ಆಧಾರಕ್ಕಾಗಿ ನೆಟ್ಟ ಕಂಬ
ಉಂಚು - ಕಾಪಾಡು

© ಕೃಷ್ಣಕವಿ
#ಕೃಷ್ಣಕವಿ #ಏಕಾಕ್ಷರ_ಕವನ #ಉಳುಮೆಯ_ಉರಿ